ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಬಕಾರಿ ನೀತಿ ಹಗರಣ | ಅರವಿಂದ ಕೇಜ್ರಿವಾಲ್‌ಗೆ ಸಿಹಿ–ಕಹಿ

ಅಬಕಾರಿ ನೀತಿ ಹಗರಣದಲ್ಲಿ ಮಧ್ಯಂತರ ಜಾಮೀನು
Published : 13 ಜುಲೈ 2024, 0:31 IST
Last Updated : 13 ಜುಲೈ 2024, 0:31 IST
ಫಾಲೋ ಮಾಡಿ
Comments

ನವದೆಹಲಿ: ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ಇದೇ ಹಗರಣದ ಪ್ರತ್ಯೇಕ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು. ಈ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ನ್ಯಾಯಾಲಯ ಜುಲೈ 25ರವರೆಗೆ ವಿಸ್ತರಿಸಿದೆ. ಹೀಗಾಗಿ, ಅವರು ಜೈಲಿನಲ್ಲಿಯೇ ಉಳಿಯಲಿದ್ದಾರೆ. 

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ‘ಬಂಧಿಸುವ ಅಗತ್ಯತೆ’ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. 

‘ಈ ಅರ್ಜಿಯಲ್ಲಿ ಎತ್ತಿರುವ ಕೆಲವು ಕಾನೂನು ಪ್ರಶ್ನೆಗಳನ್ನು ವಿಸ್ತೃತ ಪೀಠವು ಪರಿಶೀಲಿಸುವುದು ಸೂಕ್ತ’ ಎಂದು ಪೀಠ ಅಭಿ‍ಪ್ರಾಯಪಟ್ಟಿದೆ. ‘ನಾವು ಈ ವಿಷಯವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸುತ್ತಿದ್ದೇವೆ. ಕೇಜ್ರಿವಾಲ್‌ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನಾವು ನಿರ್ದೇಶಿಸುತ್ತೇವೆ’ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು. 

‘ಜೀವಿಸುವ ಹಾಗೂ ಸ್ವಾತಂತ್ರ್ಯದ ಹಕ್ಕು ಪವಿತ್ರವಾದುದು. ಕೇಜ್ರಿವಾಲ್ ಅವರು 90 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದಾರೆ. ಅವರು ಚುನಾಯಿತ ನಾಯಕ ಹಾಗೂ ದೆಹಲಿಯ ಮುಖ್ಯಮಂತ್ರಿ. ಇದು ಪಾವಿತ್ರ್ಯ ಹಾಗೂ ಪ್ರಾಮುಖ್ಯ ಹೊಂದಿರುವ ಹುದ್ದೆ. ನಾವು ಆರೋಪಗಳ ಬಗ್ಗೆಯೂ ಉಲ್ಲೇಖಿಸಿದ್ದೇವೆ. ಚುನಾಯಿತ ನಾಯಕನನ್ನು ಕೆಳಗಿಳಿಯುವಂತೆ ಅಥವಾ ಮುಖ್ಯಮಂತ್ರಿಯಾಗಿ ಅಥವಾ ಮಂತ್ರಿಯಾಗಿ ಕಾರ್ಯನಿರ್ವಹಿಸದಂತೆ ನ್ಯಾಯಾಲಯವು ನಿರ್ದೇಶಿಸಬಹುದೇ ಎಂಬ ಬಗ್ಗೆ ಸಂದೇಹವಿದೆ. ಹಾಗಾಗಿ, ನಾವು ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ. ತಮ್ಮ ಹುದ್ದೆಯಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ಕೇಜ್ರಿವಾಲ್ ಅವರ ವಿವೇಚನೆಗೆ ಬಿಟ್ಟ ವಿಷಯ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ‘ವಿಸ್ತೃತ ಪೀಠವು ಮಧ್ಯಂತರ ಜಾಮೀನಿನ ಕುರಿತ ತೀರ್ಪನ್ನು ಪರಿಷ್ಕರಿಸಬಹುದು ಅಥವಾ ಅಂತಹ ಸಂದರ್ಭಗಳಲ್ಲಿ ವಿಧಿಸಬಹುದಾದ ಷರತ್ತುಗಳನ್ನು ನಿರ್ಧರಿಸಬಹುದು’ ಎಂದು ಪೀಠ ಹೇಳಿತು. 

ಜತೆಗೆ, ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಕೇಜ್ರಿವಾಲ್‌ ಬಿಡುಗಡೆಯಾದ ಮೇ 10ರಂದು ವಿಧಿಸಿದ ಅದೇ ನಿಯಮಗಳು ಹಾಗೂ ಷರತ್ತುಗಳನ್ನು ನ್ಯಾಯಪೀಠ ನಿಗದಿಪಡಿಸಿತು. ಅದರ ಪ್ರಕಾರ, ಅವರು ಮುಖ್ಯಮಂತ್ರಿ ಕಚೇರಿ ಹಾಗೂ ದೆಹಲಿ ಸಚಿವಾಲಯದ ಕಚೇರಿಗೆ ಹೋಗುವಂತಿಲ್ಲ. 

‘ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ/ಅನುಮೋದನೆ ಪಡೆಯಲು ಅಗತ್ಯವಿರುವ ಅಧಿಕೃತ ಕಡತಗಳಿಗೆ ಸಹಿ ಹಾಕುವುದಿಲ್ಲ ಎಂಬ ಹೇಳಿಕೆಗೆ ಅವರು ಬದ್ಧರಾಗಿರುತ್ತಾರೆ’ ಎಂದು ಪೀಠ ಹೇಳಿತು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 19(1)ರ ಅಡಿಯಲ್ಲಿ ಆರೋಪಿಯು ತನ್ನ ಬಂಧನವನ್ನು ಪ್ರಶ್ನಿಸಲು ಅರ್ಹನಾಗಿದ್ದಾನೆ ಎಂದು ಪೀಠವು ಅಭಿಪ್ರಾಯಪಟ್ಟಿತು.

‘ಜಾರಿ ನಿರ್ದೇಶನಾಲಯವು ಏಕರೂಪವಾಗಿ ಕಾರ್ಯನಿರ್ವಹಿಸಬೇಕು. ತನ್ನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಎಲ್ಲರಿಗೂ ಒಂದೇ ನಿಯಮವನ್ನು ಅನ್ವಯಿಸಬೇಕು’ ಎಂದು ಪೀಠ ಹೇಳಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT