ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ | IAS​ ತರಬೇತಿ​ ಕೇಂದ್ರಕ್ಕೆ ನುಗ್ಗಿದ ನೀರು; ಮೂವರು ಸಾವು, ಮಾಲೀಕನ ಬಂಧನ

Published : 28 ಜುಲೈ 2024, 5:49 IST
Last Updated : 28 ಜುಲೈ 2024, 5:49 IST
ಫಾಲೋ ಮಾಡಿ
Comments

ನವದೆಹಲಿ: ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ನೀರು ನುಗ್ಗಿದ ಪರಿಣಾಮ ತಗ್ಗು ಪ್ರದೇಶದ ಮನೆಗಳು ಜಲಾವೃತಗೊಂಡಿವೆ. ಇದರ ಬೆನ್ನಲ್ಲೇ ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದಲ್ಲಿರುವ ಐಎಎಸ್​ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿದ್ದು ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಪ್ರಕರಣ ಸಂಬಂಧ ತರಬೇತಿ ಕೇಂದ್ರದ ಮಾಲೀಕ ಮತ್ತು ಸಮನ್ವಯಕಾರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.

ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಮೇಯರ್‌ ಶೆಲ್ಲಿ ಒಬೆರಾಯ್ ಅವರು ದೆಹಲಿಯಾದ್ಯಂತ ಪಾಲಿಕೆ ವ್ಯಾಪ್ತಿಯಲ್ಲಿ ನೆಲಮಾಳಿಗೆಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಕಮಿಷನರ್‌ಗೆ ನಿರ್ದೇಶನ ನೀಡಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ: ಘಟನೆ ನಡೆದ ಕೂಡಲೇ ಐಎಎಸ್​ ತರಬೇತಿ ಪಡೆಯುತ್ತಿದ್ದ ಆಕಾಂಕ್ಷಿಗಳ ಸಾವು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ.

ತನಿಖೆಗೆ ಆದೇಶ: ಘಟನೆಯ ಕುರಿತು ತನಿಖೆ ಆರಂಭಿಸಿ 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸಚಿವೆ ಅತಿಶಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ. ಈ ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಅತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಎಪಿ– ಬಿಜೆಪಿ ಕೆಸರೆರಚಾಟ: ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಮತ್ತು ದೆಹಲಿ ಸಂಸದ ಬಾನ್ಸುರಿ ಸ್ವರಾಜ್ ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ಆಮ್‌ ಆದ್ಮಿ ಪಕ್ಷದ (ಎಎಪಿ) ಆಡಳಿತವೇ ಕಾರಣ ಎಂದು ಅರೋಪಿಸಿದರು. ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದರೂ ಸ್ಥಳೀಯ ಶಾಸಕರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಘಟನೆಯ ಹೊಣೆಹೊತ್ತು ಸಚಿವೆ ಅತಿಶಿ ಮತ್ತು ಸ್ಥಳೀಯ ಶಾಸಕ ದುರ್ಗೇಶ್ ಪಾಠಕ್ ರಾಜೀನಾಮೆ ನೀಡಬೇಕು ಎಂದು ಸಚ್‌ದೇವ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT