ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿರುಪತಿ ಲಾಡು ಗುಣಮಟ್ಟದ ಬಗ್ಗೆ ಭಕ್ತರ ಶ್ಲಾಘನೆ: ಚಂದ್ರಬಾಬು ನಾಯ್ಡು

Published : 5 ಅಕ್ಟೋಬರ್ 2024, 16:09 IST
Last Updated : 5 ಅಕ್ಟೋಬರ್ 2024, 16:09 IST
ಫಾಲೋ ಮಾಡಿ
Comments

ತಿರುಮಲ: ತಿರುಪತಿ ವೆಂಕಟೇಶ್ವರ ದೇವಸ್ಥಾನದ ಲಾಡು ಪ್ರಸಾದದ ಗುಣಮಟ್ಟ ಚೆನ್ನಾಗಿದೆ ಎಂದು  ಭಕ್ತರು ಶ್ಲಾಘಿಸುತ್ತಿದ್ದು, ಇದು ಹೀಗೆಯೇ ಮುಂದುವರಿಯಬೇಕು ಎಂದು ಆಶಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಶನಿವಾರ ಹೇಳಿದರು.

ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ 9 ದಿನಗಳ ಬ್ರಹ್ಮೋತ್ಸವವು ಶುಕ್ರವಾರದಿಂದ ಆರಂಭವಾಗಿದ್ದು, ಹೀಗಾಗಿ ನಾಯ್ಡು ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 

ಈ ವೇಳೆ  ‘ತಿರುಮಲ ತಿರುಪತಿ ದೇವಸ್ಥಾನಂ’ (ಟಿಟಿಡಿ) ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ‘ದೇವಸ್ಥಾನದಲ್ಲಿ ಪ್ರಸಾದ ತಯಾರಿಕೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾತ್ರವೇ ಬಳಸಬೇಕು. ತಿರುಮಲದಲ್ಲಿ ವಿಐಪಿ ಸಂಸ್ಕೃತಿ ಕಡಿಮೆಯಾಗಬೇಕು. ಗಣ್ಯರು ದೇವಸ್ಥಾನಕ್ಕೆ ಬಂದಾಗ ಗದ್ದಲ ಇರಬಾರದು. ದೇವಸ್ಥಾನದ ಅಲಂಕಾರವು ಯಾವುದೇ ಅತಿರೇಕ ಮತ್ತು ಅನಗತ್ಯ ವೆಚ್ಚವಿಲ್ಲದೆ ಸರಳ ಹಾಗೂ ಆಧ್ಯಾತ್ಮಿಕವಾಗಿರಬೇಕು’ ಎಂದು ಸೂಚಿಸಿದರು. 

ಅಲ್ಲದೇ ‘ತಿರುಮಲದಲ್ಲಿರುವ ಅರಣ್ಯ ಪ್ರದೇಶದ ಪ್ರಮಾಣವ‌ನ್ನು ಶೇ72ರಿಂದ 80ಕ್ಕೆ ಹೆಚ್ಚಿಸಬೇಕು’ ಎಂದೂ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು. 

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ನಾಯ್ಡು ಅವರು ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಅತ್ಯಾಧುನಿಕ ಅಡುಗೆ ಕೋಣೆಯನ್ನು ಉದ್ಘಾಟಿಸಿದರು. ಇದೇ ವೇಳೆ ಅವರು ಟಿಟಿಡಿಯ 2025ರ ಕ್ಯಾಲೆಂಡರ್‌ ಹಾಗೂ ಡೈರಿಯನ್ನು ಬಿಡುಗಡೆ ಮಾಡಿದರು. 

ಬ್ರಹ್ಮೋತ್ಸವದ ಮೊದಲ ದಿನವಾದ ಶುಕ್ರವಾರ ವಾಡಿಕೆಯಂತೆ ಅವರು ಸರ್ಕಾರದ ಪರವಾಗಿ ದೇವರಿಗೆ ರೇಷ್ಮೆ ವಸ್ತ್ರವನ್ನು ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT