ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಡಿಪಿಯೊಂದಿಗೆ ಚುನಾವಣೋತ್ತರ ಮೈತ್ರಿ: ಫಾರೂಕ್ ಅಬ್ದುಲ್ಲ ಹೇಳಿದ್ದೇನು?

Published : 7 ಅಕ್ಟೋಬರ್ 2024, 13:35 IST
Last Updated : 7 ಅಕ್ಟೋಬರ್ 2024, 13:35 IST
ಫಾಲೋ ಮಾಡಿ
Comments

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪಿಡಿಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧವಿದ್ದೇವೆ’ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಅವರು ಹೇಳಿದ್ದಾರೆ.

ಅಗತ್ಯಬಿದ್ದರೆ ಎನ್‌ಸಿ–ಕಾಂಗ್ರೆಸ್ ಮೈತ್ರಿಕೂಟ ಪಿಡಿಪಿಯ ಬೆಂಬಲವನ್ನು ಪಡೆದುಕೊಳ್ಳುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಫಾರೂಕ್‌, ‘ಯಾಕೆ ಬೆಂಬಲ ಪಡೆಯಬಾರದು? ನಾವೆಲ್ಲರೂ ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಚುನಾವಣೆಯಲ್ಲಿ ನಾವು ಪ್ರತಿಸ್ಪರ್ಧಿಗಳಾಗಿರಬಹುದು ಆದರೆ ಬೆಂಬಲ ಪಡೆಯುವುದಕ್ಕೆ ನನಗೆ ಯಾವುದೇ ಅಡ್ಡಿಯಿಲ್ಲ. ಕಾಂಗ್ರೆಸ್‌ಗೂ ಆ ಬಗ್ಗೆ ತಕರಾರು ಇಲ್ಲವೆಂದು ಭಾವಿಸುತ್ತೇನೆ’ ಎಂದರು.

ಮುಖ್ಯಮಂತ್ರಿಯ ಹುದ್ದೆಯ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ‘ನಾನು ಮುಖ್ಯಮಂತ್ರಿಯಾಗುವುದಿಲ್ಲ. ಇದನ್ನು ಇಲ್ಲಿಯೇ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಭದ್ರವಾದ ಸರ್ಕಾರವನ್ನು ಹೇಗೆ ರಚಿಸಬಹುದು ಎನ್ನುವ ಬಗ್ಗೆ ನಾನು ಚಿಂತಿಸುತ್ತಿದ್ದೇನೆ’ ಎಂದು ಹೇಳಿದರು.

‘ಪಕ್ಷೇತರ ಶಾಸಕರ ಬೆಂಬಲ ಪಡೆಯುವಲ್ಲಿಯೂ ನನಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ನಾನು ಅವರ ಮುಂದೆ ಬೇಡುವ ಪ್ರಸಂಗವಿಲ್ಲ. ಅವರಾಗಿಯೇ ಬಂದರೆ ಸ್ವಾಗತ’ ಎಂದರು.

ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಮೂರು ಹಂತದಲ್ಲಿ ಚುನಾವಣೆ ನಡೆದಿದೆ. ಕಾಂಗ್ರೆಸ್ ಮತ್ತು ಎನ್‌ಸಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಸೀಟು ಹಂಚಿಕೆ ವಿಚಾರವಾಗಿ ಪಿಡಿಪಿ ಮೈತ್ರಿಯಿಂದ ಹೊರ ನಡೆದು ಸ್ವತಂತ್ರವಾಗಿ ಸ್ಪರ್ಧಿಸಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದರೂ, ಕಾಂಗ್ರೆಸ್–ಎನ್‌ಸಿ ಮೈತ್ರಿಕೂಟ ಮುನ್ನೆಡೆ ಸಾಧಿಸಲಿವೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಪಿಡಿಪಿ ‘ಕಿಂಗ್ ಮೇಕರ್’ ಆಗಿ ಹೊರಹೊಮ್ಮುವ ಎಲ್ಲ ಸಾಧ್ಯತೆಯಿದೆ ಎಂದೂ ಹೇಳಿವೆ.

ನಾಳೆ(ಅಕ್ಟೋಬರ್ 08) ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT