ಮುಂಬೈ: ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಆಗ್ರಹ ಈಡೇರಿಸುವುದಾಗಿ ಮಹಾರಾಷ್ಟ್ರ ಸರ್ಕಾರದಿಂದ ಭರವಸೆ ದೊರೆತ ಬಳಿಕ ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಾಂಗೆ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಶನಿವಾರ ಕೈಬಿಟ್ಟರು.

ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ‘ಮರಾಠ ಸಮುದಾಯಕ್ಕೆ ಮೀಸಲಾತಿ ದೊರಕುವವರೆಗೆ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಲಭ್ಯವಿರುವ ಎಲ್ಲ ಸೌಲಭ್ಯ ಮತ್ತು ಹಕ್ಕುಗಳನ್ನು ಪಡೆಯಲು ಅವರು ಅರ್ಹರು’ ಎಂದು ಘೋಷಿಸಿದ ನಂತರ ಚಳವಳಿಯನ್ನು ಅಂತ್ಯಗೊಳಿಸಿದರು.

‘ಸರ್ಕಾರ ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಿರುವ ಕಾರಣ ಪ್ರತಿಭಟನೆ ಹಿಂಪಡೆಯುತ್ತಿದ್ದೇನೆ’ ಎಂದು ಜಾರಾಂಗೆ ತಿಳಿಸಿದರು.

ಜಾರಾಂಗೆ ಅವರು ಕಳೆದ ಶನಿವಾರದಿಂದಲೇ ತಮ್ಮ ಹುಟ್ಟೂರು ಅಂತರವಾಲಿ ಸಾರಥಿ ಗ್ರಾಮದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದರು. ಜ.26ರಂದು ದಕ್ಷಿಣ ಮುಂಬೈನ ಆಜಾದ್ ಮೈದಾನ ತಲುಪಿ ಅಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಯೋಜನೆ ರೂಪಿಸಿದ್ದರು. ಆದರೆ ಬೃಹತ್ ಸಂಖ್ಯೆಯ ಪ್ರತಿಭಟನಕಾರರಿಗೆ ದಕ್ಷಿಣ ಮುಂಬೈನಲ್ಲಿ ಸ್ಥಳಾವಕಾಶ ಇಲ್ಲ ಎಂದು ಪೊಲೀಸರು ಸೂಚಿಸಿದ್ದ ಕಾರಣ ವಾಶಿಯಲ್ಲಿಯೇ ಶುಕ್ರವಾರ ಸತ್ಯಾಗ್ರಹ ಆರಂಭಿಸಿದ್ದರು.

ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಜಾರಾಂಗೆ, ಬೇಡಿಕೆಗಳು ಈಡೇರದಿದ್ದರೆ ಬೆಂಬಲಿಗರೊಂದಿಗೆ ಶನಿವಾರ ಮುಂಬೈ ಪ್ರವೇಶಿಸುವುದಾಗಿ ಎಚ್ಚರಿಸಿದ್ದರು.

ಈ ಬೆನ್ನಲ್ಲೇ ಸರ್ಕಾರ ಅವರ ಮನವೊಲಿಕೆಗೆ ಯತ್ನಿಸಿತ್ತು. ಅವರೊಂದಿಗೆ ಮಾತುಕತೆ ನಡೆಸಲು ನಿಯೋಗವನ್ನೂ ಕಳುಹಿಸಿತ್ತು. ಬೇಡಿಕೆಗಳನ್ನು ಕುರಿತ ಸುಗ್ರೀವಾಜ್ಞೆಯ ಕರಡು ಪ್ರತಿಯನ್ನೂ ನಿಯೋಗದೊಂದಿಗೆ ಕಳುಹಿಸಿತ್ತು.

ರಕ್ತಸಂಬಂಧಿಗಳು: ಕುಣಬಿ ಜಾತಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರುವ ಮರಾಠ ಸಮುದಾಯದ ಎಲ್ಲಾ ಸದಸ್ಯರನ್ನು ಕುಣಬಿಗಳ ರಕ್ತ ಸಂಬಂಧಿಗಳು ಎಂದು ಪರಿಗಣಿಸುವುದಾಗಿ ಸರ್ಕಾರ ಅಧಿಸೂಚನೆ ಹೊರಡಿಸಿತು. ಕುಣಬಿ ಎನ್ನುವುದು ರೈತಾಪಿ ಸಮುದಾಯವಾಗಿದ್ದು, ಇತರೆ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಸೇರುತ್ತದೆ. ಮರಾಠ ಸಮುದಾಯಕ್ಕೂ ಕುಣಬಿ ಜಾತಿ ಪ್ರಮಾಣಪತ್ರವನ್ನು ನೀಡಬೇಕೆಂದು ಆಗ್ರಹಿಸಿ ಜಾರಾಂಗೆ ಅವರು ಪ್ರತಿಭಟನೆ ನಡೆಸುತ್ತಿದ್ದರು.

ಈ ಬೆಳವಣಿಗೆಗಳ ಬಳಿಕ ಮುಖ್ಯಮಂತ್ರಿ ಶಿಂದೆ ಶನಿವಾರ ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಜಾರಾಂಗೆ ಅವರಿಗೆ ಹಣ್ಣಿನ ರಸ ನೀಡಿದರು. ಜಾರಾಂಗೆ ಅದನ್ನು ಕುಡಿದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

‘ಹಿಂಬಾಗಿಲ ಪ್ರವೇಶ’

ಮುಂಬೈ: ಮರಾಠ ಮೀಸಲು ವಿಚಾರವಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಸಚಿವ ಸಂಪುಟದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಚಿವ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣದ ಸದಸ್ಯ ಛಗನ್ ಭುಜಬಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಮರಾಠ ಸಮುದಾಯಕ್ಕೆ ಹಿಂಬಾಗಿಲ ಮೂಲಕ ಒಬಿಸಿ ವರ್ಗಕ್ಕೆ ಪ್ರವೇಶ ನೀಡಿದಂತಾಗಿದೆ. ಇದೊಂದು ಕಣ್ಣೊರೆಸುವ ತಂತ್ರ’ ಎಂದು ಅವರು ಆರೋಪಿಸಿದ್ದಾರೆ.

‘ಜಾತಿ ಎನ್ನುವುದು ಹುಟ್ಟಿನಿಂದ ನಿರ್ಧಾರವಾಗುವಂಥದ್ದು, ಅಫಿಡವಿಟ್ಗಳಿಂದ ಅಲ್ಲ. ಯಾವುದೇ ನಿರ್ಧಾರಗಳನ್ನು ಪಕ್ಷಪಾತ ಅಥವಾ ಭಯ ಇಲ್ಲದೆ ತೆಗೆದುಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

‘ದಲಿತರು ಮತ್ತು ಆದಿವಾಸಿಗಳೂ ಇದೇ ರೀತಿ ರಕ್ತಸಂಬಂಧಿಗಳಿಗೆಲ್ಲ ತಮ್ಮ ಜಾತಿ ಪ್ರಮಾಣಪತ್ರ ನೀಡಬೇಕೆಂದು ಒತ್ತಾಯಿಸಿದರೆ ಏನು ಗತಿ’ ಎಂದು ಪ್ರಶ್ನಿಸಿದ್ದಾರೆ.

ಒಬಿಸಿಗಳು ಆತಂಕ ಪಡುವ ಅಗತ್ಯವಿಲ್ಲ: ಫಡಣವೀಸ್

ಮರಾಠ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯದಿಂದ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಆತಂಕ ಪಡುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಒಬಿಸಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಕುಣಬಿ ದಾಖಲೆ ಇರುವ ಅಫಿಡವಿಟ್ ಸಲ್ಲಿಸದವರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ಮೀಸಲಾತಿ ಹೋರಾಟದ ವೇಳೆ ಸಾರ್ವಜನಿಕ ಆಸ್ತಿ–ಪಾಸ್ತಿ ಹಾನಿ ಮಾಡಿದವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಿಂಪಡೆಯುವುದಿಲ್ಲ. ಅಂಥ ಬೇಡಿಕೆಯೂ ಬಂದಿಲ್ಲ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.