ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕರಣ ವಿಚಾರಣೆ ಮುಂಬೈನಿಂದ ಶಿಮ್ಲಾಕ್ಕೆ ವರ್ಗಾಯಿಸಲು ಕಂಗನಾ ಕೋರಿಕೆ

ಸುಪ್ರೀಂಕೋರ್ಟ್‌ ಕದತಟ್ಟಿದ ಬಾಲಿವುಡ್‌ ನಟಿ ಮತ್ತು ಆಕೆಯ ಸಹೋದರಿ
Published : 2 ಮಾರ್ಚ್ 2021, 14:06 IST
ಫಾಲೋ ಮಾಡಿ
Comments

ನವದೆಹಲಿ: ಮುಂಬೈ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಶಿಮ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿಕೊಡುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರನೌತ್‌ ಮತ್ತು ಅವರ ಸಹೋದರಿ ರಂಗೋಲಿ ಚಾಂದೆಲ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಆಡಳಿತರೂಢ ಶಿವಸೇನೆಯ ನಾಯಕರು ತಮ್ಮ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳನ್ನು ದಾಖಲಿಸಿದ್ದು, ಮುಂಬೈನಲ್ಲಿ ವಿಚಾರಣೆ ಮುಂದುವರಿದರೆ ತಮ್ಮ ಜೀವಕ್ಕೆ ಮತ್ತು ಆಸ್ತಿಗೆ ಅಪಾಯವಿದೆ ಎಂದು ವಕೀಲರಾದ ನೀರಜ್ ಶೇಖರ್ ಅವರ ಮೂಲಕ ಇತ್ತೀಚೆಗೆ ಸಲ್ಲಿಸಿರುವ ಮನವಿಯಲ್ಲಿ ದೂರಿದ್ದಾರೆ.

ಮಾನಹಾನಿ ಆರೋಪ ಸಂಬಂಧ ಕಂಗನಾ ವಿರುದ್ಧ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿದ್ದ ದೂರಿನ ಪ್ರಕರಣ ಸೇರಿದಂತೆ, ಅವರ ವಿರುದ್ಧ ದಾಖಲಾದ ವಿವಿಧ ‍ಪ್ರಕರಣಗಳ ವಿಚಾರಣೆಯನ್ನು ಮುಂಬೈನಿಂದ ಶಿಮ್ಲಾದ ನ್ಯಾಯಾಲಯಕ್ಕೆ ವರ್ಗಾಯಿಸಲು ಅರ್ಜಿಯಲ್ಲಿ ಕೋರಿದ್ದಾರೆ. ಕಂಗನಾ ಮತ್ತು ಅವರ ಸಹೋದರಿ ಚಾಂದೆಲ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಮತ್ತು ಕೋಮುದ್ವೇಷದ ಹೇಳಿಕೆಗಳನ್ನು ಹಂಚಿಕೊಂಡಿರುವುದನ್ನು ಉಲ್ಲೇಖಿಸಿಅಲಿ ಕಾಶೀಫ್‌ ಖಾನ್‌ ದೇಶ್‌ಮುಖ್‌ ಮತ್ತು ಮುನಾವರ್ ಅಲಿ ಎಂಬುವವರು ದೂರು ದಾಖಲಿಸಿದ್ದರು.

ಅಕ್ರಮವಾಗಿ ನಿರ್ಮಿಸಲಾಗಿರುವ ಕಾರಣಕ್ಕೆ ಕಂಗನಾ ಅವರ ಪಾಲಿ ಹಿಲ್ ಬಂಗಲೆಯ ಒಂದು ಭಾಗವನ್ನು ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನೆಲಸಮಗೊಳಿಸಿದ ಘಟನೆಯನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ನಟಿಗೆ ಜೀವ ಬೆದರಿಕೆ ಇರುವ ಕಾರಣಕ್ಕೆ ಕೇಂದ್ರ ಗೃಹ ಸಚಿವಾಲಯ ವೈ-ಪ್ಲಸ್ ಭದ್ರತೆಯನ್ನು ಒದಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT