ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಜ್ಜರ್‌ ಹತ್ಯೆ | ಪುರಾವೆಗಳನ್ನು ಭಾರತದ ಜೊತೆ ಹಂಚಿಕೊಳ್ಳಲಾಗಿತ್ತು: ಟ್ರುಡೊ

ಸತ್ಯಾಂಶಗಳನ್ನು ಹೊರತರಲು ಕೆನಡಾಕ್ಕೆ ಭಾರತ ಸಹಕಾರ ನೀಡಬೇಕು
Published : 23 ಸೆಪ್ಟೆಂಬರ್ 2023, 16:14 IST
Last Updated : 23 ಸೆಪ್ಟೆಂಬರ್ 2023, 16:14 IST
ಫಾಲೋ ಮಾಡಿ
Comments
Quote - ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪ ಮಾಡಲು ‘ಫೈವ್‌ ಐಸ್‌ ಇಟೆಲಿಜೆನ್ಸ್‌ ನೆಟ್‌ವರ್ಕ್‌’ ಸಂಸ್ಥೆ ನೀಡಿದ್ದ ಗುಪ್ತಚರ ಮಾಹಿತಿಯೇ ಕಾರಣ 
– ಡೇವಿಡ್‌ ಕೋಹೆನ್‌, ಕೆನಡಾದ ಅಮೆರಿಕ ರಾಯಭಾರಿ
ಮೊದಲು ಸತ್ಯ ಹೊರ ಬರಲಿ
 ‘ಆರೋಪ ಸಾಬೀತಾಗುವವರೆಗೆ ಪ್ರತಿಯೊಬ್ಬರೂ ಅಮಾಯಕರೇ ಮೊದಲು ಸತ್ಯ ಹೊರ ಬರಲಿ’ ಎಂದು ಕೆನಡಾಕ್ಕೆ ಈ ಹಿಂದೆ ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿದ್ದ ವಿಕಾಸ್‌ ಸ್ವರೂಪ್‌ ಹೇಳಿದ್ದಾರೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಕ್ಕೆ ಕಾರಣರಾದ ಪ್ರಧಾನಿ ಟುಡ್ರೊ ಅವರ ಅಜಾಗರೂಕ ಹೇಳಿಕೆಯನ್ನು ಟೀಕಿಸಿದ ಅವರು ವಿವಾದವನ್ನು ತಣಿಸಲು ಕೆನಡಾ ಕ್ರಮ ಕೈಗೊಳ್ಳಬೇಕು ಮತ್ತು ಸತ್ಯ ಹೊರಬರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸ್ವರೂಪ್‌ ಅವರು 2017ರಿಂದ 2019ರವರೆಗೆ ಕೆನಡಾದಲ್ಲಿ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿದ್ದರು. ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸುರಕ್ಷಿತ ತಾಣ ಒದಗಿಸುವುದಕ್ಕೆ ಕೆನಡಾ ಮುಂಬರುವ ದಿನಗಳಲ್ಲಿ ವಿಷಾದಿಸಬೇಕಾಗುತ್ತದೆ ಎಂದರು.
ಆನ್‌ಲೈನ್‌ ದ್ವೇಷಪೂರಿತ ವಿಡಿಯೊ
ಖಂಡಿಸಿದ ಕೆನಡಾ ಅಧಿಕಾರಿಗಳು ಕೆನಡಾದ ಸಾರ್ವಜನಿಕ ಭದ್ರತೆ ಇಲಾಖೆಯ ಉನ್ನತಾಧಿಕಾರಿಗಳು ಮತ್ತು ರಾಜಕಾರಣಿಗಳು ‘ಆನ್‌ಲೈನ್‌ ದ್ವೇಷಪೂರಿತ ವಿಡಿಯೊ’ವನ್ನು ಖಂಡಿಸಿದ್ದಾರೆ. ಜೊತೆಗೆ ಕೆನಡಾದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ. ‘ಕೆನಡಾದಲ್ಲಿ ನೆಲೆಸಿರುವ ಭಾರತೀಯ ಹಿಂದೂಗಳು ಸ್ವದೇಶಕ್ಕೆ ಮರಳಿ’ ಎಂದು ಬೆದರಿಕೆಯೊಡ್ಡಿ ಖಾಲಿಸ್ತಾನಿ ಪರ ಸಂಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ವಿಡಿಯೊ ಭಾರಿ ಸದ್ದುಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಆದರೆ ಅಧಿಕಾರಿಗಳಾಗಲೀ ಅಥವಾ ರಾಜಕಾರಣಿಗಳಾಗಲೀ ವಿಡಿಯೊ ಕುರಿತ ನಿರ್ದಿಷ್ಟ ಗುರುತನ್ನು ಬಿಟ್ಟುಕೊಟ್ಟಿಲ್ಲ ಎಂದು ಈ ಕುರಿತು ವರದಿ ಮಾಡಿರುವ ಕೆನಡಾದ ಕೆನಡಿಯನ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (ಸಿಬಿಸಿ) ಹೇಳಿದೆ.
ವಿವಾದ ಕೈಬಿಡಲು ಉಭಯದೇಶಗಳಿಗೆ ತಜ್ಞರ ಸಲಹೆ
ವಾಷಿಂಗ್ಟನ್‌: ಭಾರತ ಮತ್ತು ಕೆನಡಾ ನಡುವಣ ವ್ಯಾಪಾರ ಸಂಬಂಧ ಹದಗೆಡದಂತೆ ಕಾಪಾಡುವ ನಿಟ್ಟಿನಲ್ಲಿ ಉಭಯ ದೇಶಗಳು ಈ ವಿವಾದವನ್ನು ಇಲ್ಲಿಗೇ ಕೈಬಿಡಬೇಕು ಎಂದು ತಜ್ಞ ಕೆನಡಾ ಇನ್‌ಸ್ಟಿಟ್ಯೂಟ್‌ನ ವಿಶ್ಲೇಷಕ ಝವೇರ್‌ ಡೆಲ್ಗಾಡೊ ಅವರು ಸಲಹೆ ನೀಡಿದ್ದಾರೆ.   ಈ ಕುರಿತ ಇವರ ಬರಹವನ್ನು ವಿಲ್ಸನ್‌ ಇನ್ಸ್ಟಿಟ್ಯೂಟ್‌ ಪೋಸ್ಟ್‌ ಶುಕ್ರವಾರ ಮಾಡಿದೆ. ಈ ದ್ವಿಪಕ್ಷೀಯ ಕಲಹದಿಂದ ಬಹುವಾಗಿ ಹೊಡೆತ ಬೀಳುವುದು ವ್ಯಾಪಾರ ವ್ಯವಹಾರಕ್ಕೆ. ಉಭಯ ದೇಶಗಳ ನಡುವಿನ ‘ಅರ್ಲಿ ಪ್ರೋಗ್ರೆಸ್‌ ಟ್ರೇಡ್‌ ಅಗ್ರಿಮೆಂಟ್‌’ಗೆ (ಎರಡು ದೇಶಗಳ ನಡುವೆ ನಡೆವ ಸರಕು ವಹಿವಾಟಿಗೆ ಸುಂಕ ಕಡಿತಗೊಳಿಸುವ ಅಥವಾ ರದ್ದುಪಡಿಸುವ ಒಪ್ಪಂದ) ಈಗಾಗಲೇ ತಡೆ ನೀಡಲಾಗಿದೆ. ವಾಣಿಜ್ಯಕ್ಕೆ ಸಂಬಂಧಿಸಿದ ಮಾತುಕತೆಗಳು ಮುರಿದುಬಿದ್ದಿರುವುದರಿಂದ  ವಾಣಿಜ್ಯ ವಹಿವಾಟು ಸಂಕಷ್ಟದಲ್ಲಿದೆ ಎಂದು ಹೇಳಿದ್ದಾರೆ. ವಾಣಿಜ್ಯ ಸಂಬಂಧ ಹದಗೆಟ್ಟರೆ ಭಾರತದಿಂದ ಕೆನಡಾಕ್ಕೆ ವಲಸೆ ಬರುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಇದಲ್ಲದೇ ಭಾರತದ ಪ್ರಭಾವ ಹೆಚ್ಚಿರುವ ಇಂಡೋ–ಪೆಸಿಫಿಕ್‌ ಕಾರ್ಯತಂತ್ರದ ಭಾಗವಾಗುವ ಅವಕಾಶವೂ ಕೆನಡಾದ ಕೈತಪ್ಪಿ ಹೋಗಬಹುದು ಎಂದು ಹೇಳಿದ್ದಾರೆ. ಈಗಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಕೆನಡಾಕ್ಕೆ ಮಾತ್ರ ನಷ್ಟವಾಗುವುದಿಲ್ಲ. ‘ಪ್ರಜಾಪ್ರಭುತ್ವವಾದಿ ರಾಷ್ಟ್ರ’ ಎಂಬ ಭಾರತದ ಹೆಗ್ಗಳಿಕೆಗೆ ಈ ವಿವಾದದಿಂದ ಹಾನಿಯಾಗಬಹುದು. ಅಲ್ಲದೇ ಚೀನಾ ವಿರುದ್ಧದ ಸ್ಪರ್ಧೆಯಲ್ಲಿ ಭಾರತವು ‘ನಂಬಿಕಸ್ಥ ಮಿತ್ರರಾಷ್ಟ್ರ’ ಎಂಬ ವಿಶ್ವಾಸ ಗಳಿಸಿದೆ. ಈ ವಿಶ್ವಾಸಕ್ಕೆ ಧಕ್ಕೆ ಆಗಬಹುದು ಎಂದೂ ಡೆಲ್ಗಾಡೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT