‘ಅಯ್ಯರ್ ಕುರಿತ ಹೇಳಿಕೆ ಅನಪೇಕ್ಷಿತ’
ತೀರ್ಪು ಪ್ರಕಟಿಸುವ ವೇಳೆ ಹಿಂದಿನ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಕುರಿತು ಸಿಜೆಐ ಚಂದ್ರಚೂಡ್ ನೀಡಿದ ಹೇಳಿಕೆಗೆ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಹಾಗೂ ಸುಧಾಂಶು ಧುಲಿಯಾ ಅವರು ಆಕ್ಷೇಪ ವ್ಯಕ್ತಪಡಿಸಿದರು. ‘ಸಿಜೆಐ ಅವರ ಅಭಿಪ್ರಾಯಗಳು ಅನಪೇಕ್ಷಿತ ಹಾಗೂ ಸಮರ್ಥನೀಯವಲ್ಲ’ ಎಂದು ನ್ಯಾಯಮೂರ್ತಿ ನಾಗರತ್ನಾ ಹೇಳಿದರೆ ‘ಸಿಜೆಐ ಅವರ ಹೇಳಿಕೆಗಳು ಕಟುವಾದ ಟೀಕೆಯಾಗಿತ್ತು. ಇಂತಹ ಹೇಳಿಕೆಯನ್ನು ತಪ್ಪಿಸಬಹುದಿತ್ತು’ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು. ‘ಖಾಸಗಿ ಸ್ವತ್ತುಗಳ ಪ್ರಕರಣ ಕುರಿತು ಆಗ ತೀರ್ಪು ನೀಡಿದ್ದ ನ್ಯಾಯಮೂರ್ತಿ ಅಯ್ಯರ್ ಅವರ ಸಿದ್ಧಾಂತವು ವಿಶಾಲವಾದ ಮತ್ತು ಹೊಂದಿಕೊಳ್ಳಬಲ್ಲ ಗುಣಲಕ್ಷಣ ಹೊಂದಿರುವ ಸಂವಿಧಾನಕ್ಕೆ ಅನ್ಯಾಯ ಮಾಡಿತ್ತು’ ಎಂದು ಸಿಜೆಐ ಹೇಳಿದ್ದರು. ನಾಗರತ್ನಾ ಅವರು 130 ಪುಟಗಳ ಪ್ರತ್ಯೇಕ ತೀರ್ಪು ನೀಡಿದ್ದು ‘ಆರ್ಥಿಕ ನೀತಿ ನಿರೂಪಣೆ ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಆದರೆ ಆರ್ಥಿಕ ಪ್ರಜಾಪ್ರಭುತ್ವವೊಂದರ ಬುನಾದಿಗೆ ಬೇಕಾದಂತಹ ಚೌಕಟ್ಟು ರಚನೆಗೆ ನೆರವು ನೀಡುವುದಾಗಿದೆ. ಹೀಗಾಗಿ ನ್ಯಾಯಮೂರ್ತಿ ಅಯ್ಯರ್ ಅವರ ಸಿದ್ಧಾಂತವು ಸಂವಿಧಾನಕ್ಕೆ ಅಪಚಾರವೆಸಗಿಲ್ಲ’ ಎಂದು ಹೇಳಿದ್ದಾರೆ. ‘ಸರ್ಕಾರದ ಆರ್ಥಿಕ ನೀತಿಗಳಲ್ಲಿ ಭಾರಿ ಬದಲಾವಣೆಗಳಾಗಿವೆ ಎಂದ ಮಾತ್ರಕ್ಕೆ ಈ ಹಿಂದಿನ ನ್ಯಾಯಮೂರ್ತಿಗಳಿಂದ ಸಂವಿಧಾನಕ್ಕೆ ಅನ್ಯಾಯವಾಗಿದೆ ಎಂದು ಹೇಳುವುದು ಸರಿಯಲ್ಲ’ ಎಂದೂ ಹೇಳಿದ್ದಾರೆ. ‘ನ್ಯಾಯಮೂರ್ತಿ ಅಯ್ಯರ್ ಸಿದ್ಧಾಂತ ಕುರಿತಂತೆ ವ್ಯಕ್ತವಾದ ಹೇಳಿಕೆಗೆ ನನ್ನ ಪ್ರಬಲ ಅಸಮ್ಮತಿಯನ್ನು ಈ ವೇಳೆ ದಾಖಲಿಸುತ್ತೇನೆ’ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ.