ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ ಉದ್ಯೋಗ, ಶಿಕ್ಷಣದಲ್ಲಿ 65% ಮೀಸಲಾತಿ: ನಿತೀಶ್ ನಿರ್ಧಾರಕ್ಕೆ ಹೈಕೋರ್ಟ್ ತಡೆ

Published 20 ಜೂನ್ 2024, 7:30 IST
Last Updated 20 ಜೂನ್ 2024, 7:30 IST
ಅಕ್ಷರ ಗಾತ್ರ

ಪಟ್ನಾ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗಗಳು ಹಾಗೂ ಬುಡಕಟ್ಟು ಜನರ ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 65ಕ್ಕೆ ಹೆಚ್ಚಿಸಿ ಬಿಹಾರ ಸರ್ಕಾರ ಕಳೆದ ವರ್ಷ ಕೈಗೊಂಡಿದ್ದ ನಿರ್ಧಾರವನ್ನು ಪಟ್ನಾ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ.

ಹೈಕೋರ್ಟ್‌ನ ಈ ನಿರ್ಧಾರದಿಂದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ರೂಪಿಸಿದ್ದ ಶಾಸನವನ್ನು ಪ್ರಶ್ನಿಸಿ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಕೆ.ವಿನೋದಚಂದ್ರನ್ ನೇತೃತ್ವದ ವಿಭಾಗೀಯ ನ್ಯಾಯಪೀಠ ನಡೆಸಿತು.

ರಾಜ್ಯದಲ್ಲಿ ಕೈಗೊಂಡಿದ್ದ ಜಾತಿ ಸಮೀಕ್ಷೆಯನ್ನು ಆಧರಿಸಿ ಬಿಹಾರ ಸರ್ಕಾರವು ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಇಬಿಸಿಗಳಿಗೆ ಇದ್ದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರವನ್ನು ಕೈಗೊಂಡಿತ್ತು. ಈ ಸಂಬಂಧ, ಕಳೆದ ವರ್ಷ ನವೆಂಬರ್‌ 21ರಂದು ಗೆಜೆಟ್‌ ಅಧಿಸೂಚನೆಯನ್ನು ಸಹ ಪ್ರಕಟಿಸಿತ್ತು.

‘ಮೀಸಲಾತಿ ಪ್ರಮಾಣ ಹೆಚ್ಚಿಸಿ ಬಿಹಾರ ಸರ್ಕಾರ ಮಾಡಿದ್ದ ತಿದ್ದುಪಡಿಗಳಿಂದ ಸಂವಿಧಾನದ ವಿಧಿಗಳಾದ 14, 16 ಹಾಗೂ 20ರ ಉಲ್ಲಂಘನೆಯಾಗುತ್ತದೆ ಎಂಬುದು ನಮ್ಮ ವಾದವಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ತನ್ನ ತೀರ್ಪನ್ನು ಕಾಯ್ದಿರಿಸಿತ್ತು’ ಎಂದು ಕೆಲ ಅರ್ಜಿದಾರರ ಪರ ವಕೀಲೆ ರಿತಿಕಾ ರಾಣಿ ಹೇಳಿದ್ದಾರೆ.

ಅರ್ಜಿದಾರರ ಮತ್ತೊಂದು ಗುಂಪಿನ ಪರ ವಕೀಲ ನಿರ್ಭಯ್‌ ಪ್ರಶಾಂತ್, ‘ಜಾತಿ ಸಮೀಕ್ಷೆ ಆಧಾರದಲ್ಲಿ ಇಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು’ ಎಂದರು.

‘ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ನಾವು, ಇಂದಿರಾ ಸಾಹ್ನಿ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದ್ದೆವು. ಇತ್ತೀಚೆಗೆ, ಮರಾಠರಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದ ತೀರ್ಪನ್ನು ಸಹ ನ್ಯಾಯಾಲಯದ ಗಮನಕ್ಕೆ ತಂದಿದ್ದೆವು’ ಎಂದರು.

‘ನಮ್ಮ ವಾದ ಆಲಿಸಿದ ನ್ಯಾಯಾಲಯ, ಶೇ 50ರ ಮಿತಿಗಿಂತ ಅಧಿಕ ಮೀಸಲಾತಿಯನ್ನು ಯಾವುದೇ ರಾಜ್ಯ ಸರ್ಕಾರ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ’ ಎಂದು ವಕೀಲ ಪ್ರಶಾಂತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT