ಭಾನುವಾರ, 4 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಮೂಲಭೂತ ಆರ್ಥಿಕ ಸಮಸ್ಯೆಗಳತ್ತ ಗಮನಹರಿಸಿ: ಪ್ರಧಾನಿಗೆ ಖರ್ಗೆ ಮನವಿ

Published 12 ಜುಲೈ 2024, 9:36 IST
Last Updated 12 ಜುಲೈ 2024, 9:36 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೂಲಭೂತ ಆರ್ಥಿಕ ಸಮಸ್ಯೆಗಳತ್ತ ಗಮನಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಕಳೆದ 10 ವರ್ಷಗಳಲ್ಲಿ ಜನರ ಮೂಲಭೂತ ಸಮಸ್ಯೆಗಳಿಂದ ಸರ್ಕಾರ ಪಲಾಯನ ಮಾಡಲು 'ಪಿಆರ್' ಅನ್ನು ಚೆನ್ನಾಗಿ ಬಳಸಿದ್ದೀರಿ. ಆದರೆ ಮುಂದೆ ಹೀಗಾಗುವುದಿಲ್ಲ. ಜನರು ಉತ್ತರವನ್ನು ಬಯಸುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.

ಮುಂಬರುವ ಕೇಂದ್ರ ಬಜೆಟ್‌ಗಾಗಿ ಕ್ಯಾಮರಾದ ನೆರಳಿನಲ್ಲಿ ಸಭೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೂಲಭೂತ ಆರ್ಥಿಕ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

'ಪ್ರಧಾನಿ ಮೋದಿ ಅವರ ಸರ್ಕಾರ ಕೋಟ್ಯಂತರ ಜನರ ಬದುಕನ್ನು ಹಾಳು ಮಾಡಿದ್ದು, ನಿರುದ್ಯೋಗ, ಹಣದುಬ್ಬರ ಹಾಗೂ ಅಸಮಾನತೆಯ ಕೂಪಕ್ಕೆ ತಳ್ಳಿಹಾಕಿದೆ. ನಿರುದ್ಯೋಗ ದರ ಶೇ 9.2ರಷ್ಟಿದ್ದು, ಯುವಜನರ ಭವಿಷ್ಯ ಡೋಲಾಯಮಾನವಾಗಿದೆ' ಎಂದು ಹೇಳಿದ್ದಾರೆ.

'20ರಿಂದ 24 ವರ್ಷದವರಲ್ಲಿ ನಿರುದ್ಯೋಗ ದರವು ಶೇ 40ರಷ್ಟುಏರಿಕೆ ಕಂಡಿದೆ. ಇದು ಗಂಭೀರ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ. ಕೇಂದ್ರ ಸರ್ಕಾರಿ ಸ್ವಾಮ್ಯದಲ್ಲಿ (ಪಿಎಸ್‌ಯು) 3.84 ಲಕ್ಷ ಉದ್ಯೋಗ ಕಡಿತಗೊಂಡಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.

'ಹಣದುಬ್ಬರದ ಕೆಟ್ಟ ಪರಿಣಾಮದಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಪರಿಣಾಮ ಕುಟುಂಬಗಳ ಉಳಿತಾಯವು 50 ವರ್ಷಗಳಲ್ಲೇ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT