ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

KPSC | ಆಕಾಂಕ್ಷಿಗಳಿಂದ ಅರ್ಜಿಗಳ ಮಹಾಪೂರ: 2,243 ಹುದ್ದೆ; 10.79 ಲಕ್ಷ ಅರ್ಜಿ!

ಕೆಪಿಎಸ್‌ಸಿ: ಸರ್ಕಾರಿ ಹುದ್ದೆಗಾಗಿ ಆಕಾಂಕ್ಷಿಗಳಿಂದ ಅರ್ಜಿಗಳ ಮಹಾಪೂರ
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಹಾತೊರೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಈಗಾಗಲೇ ಅರ್ಜಿ ಆಹ್ವಾನಿಸಿರುವ ವಿವಿಧ ಇಲಾಖೆಗಳ ನಾನಾ ವೃಂದಗಳ 2,243 ಹುದ್ದೆಗಳಿಗೆ 10,79,236 ಅರ್ಜಿಗಳು ಸಲ್ಲಿಕೆ ಆಗಿವೆ!

ಈ ಪೈಕಿ, ಉಳಿಕೆ ಮೂಲ ವೃಂದದ (ಹೈದರಾಬಾದ್‌- ಕರ್ನಾಟಕೇತರ) 1,772  ಹುದ್ದೆಗಳಿಗೆ 8,65,715, ಹೈದರಾಬಾದ್‌ ಕರ್ನಾಟಕದ 471 ಹುದ್ದೆಗಳಿಗೆ 2,13,521 ಅರ್ಜಿಗಳು ಬಂದಿವೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಅದರಲ್ಲೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ತಾಲ್ಲೂಕು ಕಲ್ಯಾಣ ಅಧಿಕಾರಿ (ಗ್ರೂಪ್‌ ‘ಬಿ’) ಹೈದರಾಬಾದ್‌ –ಕರ್ನಾಟಕೇತರ ವೃಂದದ 21 ಹುದ್ದೆಗಳಿಗೆ 1,33,781 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) 247 (ಹೈಕ 97) ಹುದ್ದೆಗಳಿಗೆ 4,04,430 ಅರ್ಜಿಗಳು ಸಲ್ಲಿಕೆ ಆಗಿವೆ.

2023ರ ಏಪ್ರಿಲ್‌ನಿಂದ ಈವರೆಗೆ ವಿವಿಧ ಹುದ್ದೆಗಳ ನೇಮಕಾತಿಗೆ ಒಟ್ಟು 20 ಅಧಿಸೂಚನೆಗಳನ್ನು ಕೆಪಿಎಸ್‌ಸಿ ಹೊರಡಿಸಿದೆ. ಈ ಪೈಕಿ, 19 ಅಧಿಸೂಚನೆಗಳಿಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಂದು ಅಧಿಸೂಚನೆಗೆ (ಪಶು ವೈದ್ಯಾಧಿಕಾರಿ 400 ಹುದ್ದೆಗಳು) ಮಾತ್ರ ಆಗಸ್ಟ್‌ 9 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಅರ್ಜಿ ಸಲ್ಲಿಕೆ ಅವಧಿ ಪೂರ್ಣಗೊಂಡ ಅಧಿಸೂಚನೆಗಳ ಪೈಕಿ, ವಾಣಿಜ್ಯ ತೆರಿಗೆ ಪರಿವೀಕ್ಷಕ 245 (ಹೈಕ 15) ಹುದ್ದೆಗಳಿಗೆ ನೇಮಕಾತಿಗೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆದಿದೆ. ಉಳಿದ 18 ನೇಮಕಾತಿ ಅಧಿಸೂಚನೆಗಳಲ್ಲಿ ಅರ್ಜಿ ಆಹ್ವಾನ ಅವಧಿ ಪೂರ್ಣಗೊಂಡು ಕೆಲವು ತಿಂಗಳು ಕಳೆದರೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೆಪಿಎಸ್‌ಸಿ ನಡೆಸಿಲ್ಲ.

‘ವಿಧಾನಸಭೆ ಚುನಾವಣೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದರೆ, ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಅನುಮೋದಿತ  ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ, ಆ ಭರವಸೆ ಈಡೇರುವುದಿರಲಿ, ಅಧಿಸೂಚನೆ ಹೊರಡಿಸಿದ ನೇಮಕಾತಿಗಳ ಪ್ರಕ್ರಿಯೆಗಳೂ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ’ ಎಂದು ಹುದ್ದೆ ಆಕಾಂಕ್ಷಿಗಳು ಅಲವತ್ತುಕೊಂಡಿದ್ದಾರೆ.

ಕೆಎಎಸ್‌– ಯಾವ ಪದವಿ, ಎಷ್ಟು ಅರ್ಜಿ?

2023–24ನೇ ಸಾಲಿನ ಕೆಎಎಸ್‌ 40 ಹುದ್ದೆಗಳೂ ಸೇರಿ ಗೆಜೆಟೆಡ್ ಪ್ರೊಬೇಷನರಿ ಒಟ್ಟು 384 ಹುದ್ದೆಗಳಿಗೆ 2,10,910 ಅರ್ಜಿಗಳು ಸಲ್ಲಿಕೆ ಆಗಿವೆ. ಕೆಪಿಎಸ್‌ಸಿಗೆ ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದವರಲ್ಲಿ ಯಾವ ಪದವಿ ಪಡೆದವರು, ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದೆ. ಆ ಮಾಹಿತಿಯ ಪ್ರಕಾರ, ಬಿ.ಎ 63,769‌ (ಶೇ 30.24), ಬಿ.ಇ 38,692 (ಶೇ18.35), ಬಿ.ಎಸ್‌ಸಿ 36,091 (ಶೇ 17.11) ಬಿ.ಕಾಂ 34,795 (ಶೇ 16.50) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ನಾಲ್ಕು ಪದವಿ ಪಡೆದವರು ಅತೀ ಹೆಚ್ಚು 1,73,347 (ಶೇ 82.19) ಅರ್ಜಿ ಸಲ್ಲಿಸಿದ್ದಾರೆ.

ನೇಮಕಾತಿ ವಿಳಂಬಕ್ಕೆ ಕೆಪಿಎಸ್‌ಸಿ ಕಾರಣಗಳೇನು?

*ಇಲಾಖೆಗಳಿಂದ ಬರುವ ಪ್ರಸ್ತಾವಗಳಲ್ಲಿ ನ್ಯೂನತೆ

*ಪ್ರಸ್ತಾವಗಳಲ್ಲಿರುವ ನ್ಯೂನತೆಗಳಿಗೆ ಸ್ಪಷ್ಟೀಕರಣ, ಮಾಹಿತಿ ನೀಡಲು ಇಲಾಖೆಗಳು ಕಾಲಾವಕಾಶ ತೆಗೆದುಕೊಳ್ಳುತ್ತಿರುವುದು

*ಕೆಇಎ ಸೇರಿದಂತೆ ಇತರ ಪ್ರಾಧಿಕಾರಗಳೂ ಶನಿವಾರ, ಭಾನುವಾರ ಪರೀಕ್ಷೆ ಗಳನ್ನು ನಡೆಸುತ್ತಿರುವುರಿಂದ, ಆ ದಿನಗಳನ್ನು ಹೊರತುಪಡಿಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಬೇಕಿದೆ.

*ಹಬ್ಬ ಹರಿದಿನ, ಜಯಂತಿ, ರಾಷ್ಟ್ರೀಯ ದಿನಗಳನ್ನೂ ಹೊರತುಪಡಿಸಿಯೂ ದಿನಾಂಕ ನಿಗದಿಪಡಿಸಬೇಕಿದೆ

*ಆಯ್ಕೆಗೊಂಡ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಮೂಲ ದಾಖಲೆ ಸಲ್ಲಿಸದಿರುವುದು

*ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ವಿಳಂಬ

*ಎಲ್ಲ ನೇಮಕಾತಿ ಪ್ರಕ್ರಿಯೆಗಳಲ್ಲೂ ಅಭ್ಯರ್ಥಿಗಳು ಕೋರ್ಟ್ ಮೊರೆ
ಹೋಗುತ್ತಿರುವುದು

*ಸಿಬ್ಬಂದಿ ಕೊರತೆ

ವಿವಿಧ ಹುದ್ದೆಗಳಿಗೆ ನಡೆಸುವ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ ತಡೆಗೆ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪರಿಶೀಲಿಸಲಾಗುತ್ತಿದೆ
ಕೆ. ರಾಕೇಶ್‌ ಕುಮಾರ್, ಕಾರ್ಯದರ್ಶಿ, ಕೆಪಿಎಸ್‌ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT