ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ 17 ತಿಂಗಳಿಂದ ಜೈಲಿನಲ್ಲಿದ್ದ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿತು. ಇದರ ಬೆನ್ನಲ್ಲೇ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾದರು.

ವಿಚಾರಣೆ ಸಂದರ್ಭದಲ್ಲಿ ಅಧೀನ ನ್ಯಾಯಾಲಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ‘ವಿಚಾರಣೆ ಇಲ್ಲದೇ ದೀರ್ಘಕಾಲ ಸೆರೆಯಲ್ಲಿ ಇಡುವ ಮೂಲಕ, ಅವರ ತ್ವರಿತ ನ್ಯಾಯದ ಹಕ್ಕು ಮತ್ತು ಮೂಲಭೂತ ಹಕ್ಕಾದ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡಂತಾಗಿದೆ’ ಎಂದು ಹೇಳಿತು.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಕೆ.ವಿ.ವಿಶ್ವನಾಥನ್ ಅವರ ಪೀಠವು, ‘ಅಸಾಧಾರಣ ಸಂದರ್ಭದಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು’ ಎಂಬ ತತ್ವವನ್ನು ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ಗಳು ಗಮನಿಸಲು ಇದು ಸೂಕ್ತ ಸಮಯ’ ಎಂದು ಸೂಚ್ಯವಾಗಿ ತಿಳಿಸಿತು.

ಸಿಸೋಡಿಯಾ ಅವರು ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದ ಪೀಠವು, ‘ತಪ್ಪಿತಸ್ಥ ಎಂದು ಘೋಷಣೆಯಾಗುವುದಕ್ಕೂ ಮೊದಲು ವಿಚಾರಣೆಯಿಲ್ಲದೇ ದೀರ್ಘ ಕಾಲದ ಸೆರವಾಸಕ್ಕೆ ಅನುಮತಿ ನೀಡುವುದು ತರವಲ್ಲ’ ಎಂದು ಖಾರವಾಗಿ ಹೇಳಿತು.

ದೆಹಲಿಯ ಮಾಜಿ ಉಪಮುಖ್ಯಮಂತ್ರಿಯೂ ಆದ ಸಿಸೋಡಿಯಾ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ್ದವು.

ಈ ಎರಡೂ ಪ್ರಕರಣಗಳಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿ ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್ನ ಮೇ 21ರ ತೀರ್ಪನ್ನು ಪೀಠ ರದ್ದುಗೊಳಿಸಿತು. ಅಲ್ಲದೆ ಎರಡೂ ಪ್ರಕರಣಗಳಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿತು.

ಜಾಮೀನು ಷರತ್ತುಗಳು:

ಸಿಸೋಡಿಯಾ ಅವರು ₹10 ಲಕ್ಷದ ಜಾಮೀನು ಬಾಂಡ್ ಮತ್ತು ಸಮಾನ ಮೊತ್ತದ ಇಬ್ಬರ ಶ್ಯೂರಿಟಿಗಳನ್ನು ಒದಗಿಸಬೇಕು. ಅವರು ತಮ್ಮ ಪಾಸ್ಪೋರ್ಟ್ ಅನ್ನು ವಿಶೇಷ ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಸಾಕ್ಷ್ಯನಾಶಕ್ಕೆ ಪ್ರಯತ್ನಿಸಬಾರದು. ಅಲ್ಲದೆ ಪ್ರತಿ ಸೋಮವಾರ ಮತ್ತು ಗುರುವಾರ ಬೆಳಿಗ್ಗೆ 10ರಿಂದ 11 ಗಂಟೆ ನಡುವೆ ತನಿಖಾಧಿಕಾರಿ ಬಳಿ ವರದಿ ಮಾಡಿಕೊಳ್ಳಬೇಕು ಎಂದು ಪೀಠ ಷರತ್ತುಗಳನ್ನು ಪಟ್ಟಿ ಮಾಡಿತು.

ಜಾಮೀನು ಷರತ್ತು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಸಿಸೋಡಿಯಾ ಅವರು ಶುಕ್ರವಾರ ರಾತ್ರಿ ಜೈಲಿನಿಂದ ಬಿಡುಗಡೆಯಾದರು.

17 ತಿಂಗಳಿಂದ ಬಂಧನದಲ್ಲಿದ್ದರೂ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ತಮಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಸಿಸೋಡಿಯಾ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಗೆ ಸಿಬಿಐ ಮತ್ತು ಇ.ಡಿ ವಿರೋಧ ವ್ಯಕ್ತಪಡಿಸಿದ್ದವು.

ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖಾಂಶಗಳು:

ವಿಚಾರಣೆ ಪ್ರಾರಂಭಿಸದೆ ಸುಮಾರು 17 ತಿಂಗಳಷ್ಟು ದೀರ್ಘಕಾಲ ಸೆರೆವಾಸದಲ್ಲಿಡುವ ಮೂಲಕ ಮೇಲ್ಮನವಿದಾರರಿಗೆ (ಸಿಸೋಡಿಯಾ) ತ್ವರಿತ ವಿಚಾರಣೆಯ ಹಕ್ಕನ್ನು ವಂಚಿಸಲಾಗಿದೆ.

ತ್ವರಿತ ವಿಚಾರಣೆಯ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳು ಪವಿತ್ರವಾದ ಹಕ್ಕುಗಳು. ಇವುಗಳನ್ನು ನಿರಾಕರಿಸಲು, ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ಗಳು ಸಮರ್ಪಕವಾದ ಕಾರಣಗಳನ್ನು ನೀಡಬೇಕು.

ಜಾಮೀನು ತಡೆಹಿಡಿಯುವುದನ್ನೇ ಶಿಕ್ಷೆಯನ್ನಾಗಿಸಬಾರದು ಎಂಬ ಕಾನೂನಿನ ತತ್ವವನ್ನು ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ಗಳು ಮರೆತಿವೆ ಎಂದು ಅವು ನೀಡಿರುವ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ ಪೀಠ ಹೇಳಿದೆ.

ನಮ್ಮ ಅನುಭವದಿಂದ ಹೇಳುವುದಾದರೆ, ಜಾಮೀನು ನೀಡುವ ವಿಚಾರದಲ್ಲಿ ಕೆಳ ನ್ಯಾಯಾಲಯಗಳು ಸುರಕ್ಷಿತವಾಗಿ ವರ್ತಿಸಲು ಯತ್ನಿಸುತ್ತಿವೆ.

ನೇರ, ಮುಕ್ತ ಪ್ರಕರಣಗಳಲ್ಲಿಯೂ ಕೆಳ ನ್ಯಾಯಾಲಯಗಳು ಜಾಮೀನು ನಿರಾಕರಿಸುತ್ತಿವೆ. ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಅರ್ಜಿಗಳ ದೊಡ್ಡ ರಾಶಿಯೇ ಇದೆ. ಇದರಿಂದ ಬಾಕಿ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಈ ಪ್ರಕರಣದಲ್ಲಿ ಇ.ಡಿ ಮತ್ತು ಸಿಬಿಐ 493 ಸಾಕ್ಷಿಗಳನ್ನು ಹೆಸರಿಸಿವೆ. ಸಹಸ್ರಾರು ಪುಟಗಳ ದಾಖಲೆಗಳು ಮತ್ತು ಲಕ್ಷಕ್ಕೂ ಹೆಚ್ಚು ಪುಟಗಳಷ್ಟು ಡಿಜಿಟಲ್ ದಾಖಲೆಗಳನ್ನು ಈ ಪ್ರಕರಣ ಒಳಗೊಂಡಿದೆ. ಹೀಗಾಗಿ ಇದರ ವಿಚಾರಣೆ ಸದ್ಯದಲ್ಲಿ ಮುಗಿಯುವ ಸಾಧ್ಯತೆಗಳಿಲ್ಲ ಎಂಬುದು ಸ್ಪಷ್ಟ.

ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಭರವಸೆಯಲ್ಲಿ ಸಿಸೋಡಿಯಾ ಅವರನ್ನು ದೀರ್ಘಕಾಲ ಜೈಲಿನಲ್ಲಿ ಇಟ್ಟಿರುವುದು ಸರಿಯಲ್ಲ. ಅದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ನೀಡಲಾಗಿರುವ ಸ್ವಾತಂತ್ರ್ಯದ ಹಕ್ಕನ್ನು (ಮೂಲಭೂತ ಹಕ್ಕು) ಕಸಿದುಕೊಂಡಂತೆ.

ಸಮಾಜದ ಜತೆಗೆ ಉತ್ತಮ ಒಡನಾಟ ಹೊಂದಿರುವ ಸಿಸೋಡಿಯಾ ಅವರು, ದೇಶ ಬಿಟ್ಟು ಓಡಿಹೋಗುವ, ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿಲ್ಲ. ಹಾಗೇನಾದರೂ ಅನಿಸಿದರೆ, ಅಗತ್ಯ ಷರತ್ತುಗಳನ್ನು ವಿಧಿಸಬಹುದು

ಸಿಸೋಡಿಯಾ ಪ್ರಕರಣದ ಕಾಲಾನುಕ್ರಮಣಿಕೆ

2023ರ ಫೆಬ್ರುವರಿ 26: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನ .

ಮಾರ್ಚ್ 9: ಇದೇ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನ .

ಮಾರ್ಚ್ 31: ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತ .

ಏಪ್ರಿಲ್ 28: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲೂ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತ .

ಮೇ 30: ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್.

ಜುಲೈ 3: ಇ.ಡಿ ಪ್ರಕರಣದಲ್ಲೂ ಹೈಕೋರ್ಟ್ನಿಂದ ಜಾಮೀನು ಅರ್ಜಿ ತಿರಸ್ಕಾರ.

ಜುಲೈ 6: ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ.

ಅಕ್ಟೋಬರ್ 30: ಸಿಸೋಡಿಯಾಗೆ ಪರಿಹಾರ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್.

2024ರ ಏಪ್ರಿಲ್ 30: ವಿಚಾರಣಾ ನ್ಯಾಯಾಲಯದಿಂದ ಮತ್ತೊಮ್ಮೆ ಜಾಮೀನು ನಿರಾಕರಣೆ.

ಮೇ 2: ಎರಡೂ ಪ್ರಕರಣಗಳಲ್ಲಿ ಜಾಮೀನು ಕೋರಿ ಪುನಃ ಹೈಕೋರ್ಟ್ಗೆ ಅರ್ಜಿ.

ಮೇ 21: ಹೈಕೋರ್ಟ್ನಿಂದ ಜಾಮೀನು ನಿರಾಕರಣೆ.

ಜುಲೈ 16: ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ. ಸಿಬಿಐ ಮತ್ತು ಇ.ಡಿಗೆ ಪ್ರತಿಕ್ರಿಯಿಸಲು ಸೂಚನೆ .

ಆಗಸ್ಟ್ 6: ಎರಡೂ ಪ್ರಕರಣಗಳಲ್ಲಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್.

ಆಗಸ್ಟ್ 9: ಸಿಸೋಡಿಯಾಗೆ ‘ಸುಪ್ರೀಂ’ನಿಂದ ಜಾಮೀನು ಮಂಜೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.