ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕ್ಫ್‌ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿಯಲ್ಲ: ಕೇಂದ್ರ ಸಚಿವ ರಾಜೀವ್ ರಂಜನ್

Published : 8 ಆಗಸ್ಟ್ 2024, 9:49 IST
Last Updated : 8 ಆಗಸ್ಟ್ 2024, 9:49 IST
ಫಾಲೋ ಮಾಡಿ
Comments

ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆಯು ವಕ್ಫ್‌ ಮಂಡಳಿ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರುವ ಉದ್ದೇಶವನ್ನು ಒಳಗೊಂಡಿದೆಯೇ ಹೊರತು ಇದು ಮಸೀದಿಗಳ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸುವ ಪ್ರಯತ್ನವಲ್ಲ ಎಂದು ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.

ಲೋಕಸಎಯಲ್ಲಿ ಮಸೂದೆ ಮಂಡನೆಗೆ ವಿಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಎಂದು ನಿಂತ ಜೆಡಿಯು ನಾಯಕ ರಾಜೀವ್ ಸ್ಪಷ್ಟನೆ ನೀಡಿದರು.

‘ಜೆಡಿಯು ಸಹ ಇಲ್ಲಿ ಒಂದು ಪಕ್ಷ. ಆಡಳಿತ ಪಕ್ಷವಾಗಿರಲಿ ಅಥವಾ ವಿರೋಧ ಪಕ್ಷವಾಗಿರಲಿ. ನನ್ನ ಹೇಳಿಕೆಯನ್ನು ನಾನು ಇಲ್ಲಿ ದಾಖಲಿಸಲೇಬೇಕಿದೆ’ಎಂದು ಹೇಳಿದರು.

ಮಸೂದೆಯನ್ನು ಸಮರ್ಥಿಸಿಕೊಂಡ ಅವರು,‘ಸದನದ ಹಲವು ಸದಸ್ಯರು ವಕ್ಫ್‌ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿಯಾಗಿದೆ ಎಂದು ಹೇಳುತ್ತಿದ್ದಾರೆ. ಅದು ಹೇಗೆ ಮುಸ್ಲಿಂ ವಿರೋಧಿ ಎಂಬುದನ್ನು ವಿವರಿಸಿ ಎಂದು ಮರು ಪ್ರಶ್ನೆ ಹಾಕಿದರು. ಇದರ ಮೂಲಕ ವಕ್ಫ್ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶ ಹೊಂದಲಾಗಿದೆಯೇ ಹೊರತು ಮಸೀದಿಗಳ ಚಟುವಟಿಕೆಯಲ್ಲಿ ಮೂಗು ತೂರಿಸುವುದಲ್ಲ ಎಂದಿದ್ದಾರೆ.

‘ವಕ್ಫ್ ಮಂಡಳಿಯನ್ನು ಹೇಗೆ ರಚಿಸಲಾಗಿದೆ? ಕಾನೂನು ಮೂಲಕವೇ ಅದರ ರಚನೆಯಾಗಿದೆ. ಯಾವುದೇ ಒಂದು ಸಂಸ್ಥೆ ಕಾನೂನಿನ ಮೂಲಕ ರಚನೆಯಾಗಿದ್ದಾಗ ಸರ್ವಾಧಿಕಾರವಾಗಲು ಹೇಗೆ ಸಾಧ್ಯ. ಪಾರದರ್ಶಕತೆ ಖಚಿತಪಡಿಸುವ ಉದ್ದೇಶದಿಂದ ಕಾನೂನು ಮಾಡುವ ಅಧಿಕಾರ ಸರ್ಕಾರಕ್ಕಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವಿಚಾರವಾಗಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ಇಲ್ಲಿ ಕೋಮು ವಿಭಜನೆಯ ಪ್ರಶ್ನೆಯೇ ಇಲ್ಲ. ವಿಪಕ್ಷಗಳು ವದಂತಿಗಳನ್ನು ಹಬ್ಬಿಸುತ್ತಿವೆ’ಎಂದರು

1984ರ ಸಿಖ್ ವಿರೋಧಿ ದಂಗೆಯನ್ನು ಪ್ರಸ್ತಾಪಿಸಿದ ಅವರು,‘ಸಾವಿರಾರು ಮಂದಿ ಸಿಖ್ಖರನ್ನು ಕೊಂದಿದ್ದು ಯಾರು?’ಎಂದು ಪ್ರಶ್ನಿಸಿದ್ದಾರೆ.

‘ಈ ಮಸೂದೆಯನ್ನು ಜಾರಿಗೆ ತರಲೇಬೇಕು ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲೇಬೇಕು’ಎಂದಿದ್ದಾರೆ.

ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರುವ ಈ ಮಸೂದೆಯು ವಕ್ಫ್ ಕಾಯಿದೆ, 1995ರಲ್ಲಿ ದೂರಗಾಮಿ ಬದಲಾವಣೆಗಳನ್ನು ತರುತ್ತದೆ. ವಕ್ಫ್‌ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದು ಸೇರಿದಂತೆ ಕೆಲ ಬದಲಾವಣೆಗೆ ಉದ್ದೇಶಿಸಲಾಗಿದೆ ಎಂದು ವರದಿ ತಿಳಿಸಿದೆ.

ವಕ್ಫ್ ತಿದ್ದುಪಡಿ ಮಸೂದೆಯು ಕಾಯಿದೆಗೆ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ 1995 ಎಂದು ಮರುನಾಮಕರಣಮಾಡುವ ಉದ್ದೇಶವನ್ನೂ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT