ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭೆ: ಖರ್ಗೆ–ಧನಕರ್ ವಾಕ್ಸಮರ

ಜಾತಿ ವ್ಯವಸ್ಥೆ ತರಬೇಡಿ: ಎಐಸಿಸಿ ಅಧ್ಯಕ್ಷ ಕಿಡಿ
Published 2 ಜುಲೈ 2024, 14:44 IST
Last Updated 2 ಜುಲೈ 2024, 14:44 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನವನ್ನು ಜೈರಾಮ್‌ ರಮೇಶ್‌ ಅಲಂಕರಿಸಬೇಕು ಎಂದು ಸಭಾಪತಿ ಜಗದೀಪ್‌ ಧನಕರ್‌ ಅವರು ವ್ಯಂಗ್ಯವಾಗಿ ಹೇಳಿದ್ದು, ಮಂಗಳವಾರ ರಾಜ್ಯಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು.

ರಾಷ್ಟ್ರಪತಿ ಅವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್‌ನ ಪ್ರಮೋದ್‌ ತಿವಾರಿ ಅವರು ಮಾತನಾಡುವ ವೇಳೆ ಖರ್ಗೆ–ಧನಕರ್‌ ಮಧ್ಯೆ ‘ವಾಕ್ಸಮರ’ ನಡೆಯಿತು.

‘ದೃಢೀಕರಿಸದ ಸಂಗತಿಗಳನ್ನು ಭಾಷಣದಲ್ಲಿ ಹೇಳಬೇಡಿ’ ಎಂದು ತಿವಾರಿ ಅವರಿಗೆ ಧನಕರ್ ಕೇಳಿದಾಗ ವಾಗ್ವಾದ ಪ್ರಾರಂಭವಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಜೈರಾಮ್‌ ರಮೇಶ್‌, ತಿವಾರಿ ಅವರು ತಾವಾಡಿದ ಮಾತುಗಳನ್ನು ದೃಢೀಕರಿಸುತ್ತಾರೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಧನಕರ್, ‘ತುಂಬಾ ಬುದ್ಧಿವಂತ ಮತ್ತು ಪ್ರತಿಭಾವಂತರಾಗಿರುವ ನೀವು ಖರ್ಗೆ ಅವರ ಸ್ಥಾನವನ್ನು ತುಂಬಬೇಕು ಎಂದು ನಾನು ಭಾವಿಸುತ್ತೇನೆ. ತಕ್ಷಣವೇ ಖರ್ಗೆ ಅವರ ಸ್ಥಾನದಲ್ಲಿ ಕುಳಿತುಕೊಳ್ಳಬೇಕು. ಅವರು ಮಾಡಬೇಕಿರುವ ಕೆಲಸವನ್ನು ನೀವು ಮಾಡುತ್ತಿದ್ದೀರಿ’ ಎಂದು ಚುಚ್ಚುವಂತೆ ಹೇಳಿದರು.

‘ನೀವು ವರ್ಣ (ಜಾತಿ) ವ್ಯವಸ್ಥೆಯನ್ನು ಇಲ್ಲಿ ತರಬೇಡಿ. ಜಾತಿ ವ್ಯವಸ್ಥೆ ಇನ್ನೂ ನಿಮ್ಮ ಮನಸ್ಸಿನಲ್ಲಿದೆ. ಅದಕ್ಕೆ ರಮೇಶ್ ತುಂಬಾ ಬುದ್ದಿವಂತ ಎಂದು ಹೇಳುತ್ತಿದ್ದೀರಿ. ನಾನು ಚುರುಕಿಲ್ಲದ ಕಾರಣ ನನ್ನನ್ನು ಬದಲಾಯಿಸಬೇಕು ಎನ್ನುತ್ತಿದ್ದೀರಿ’ ಎಂದು ದಲಿತ ಸಮುದಾಯಕ್ಕೆ ಸೇರಿದ ಖರ್ಗೆ ತಕ್ಷಣ ತಿರುಗೇಟು ನೀಡಿದರು.

‘ನಾನು ಹೇಳಿದ್ದು ಖರ್ಗೆ ಅವರಿಗೆ ಅರ್ಥವಾಗಿಲ್ಲ’ ಎಂದು ಪ್ರತಿಕ್ರಿಯಿಸಿದ ಧನಕರ್, ‘ನಾನು ಹೇಳಿದ್ದು ಏನು? ಮೊದಲ ಸಾಲಿನಲ್ಲಿ ಕುಳಿತಿರುವ ನಿಮಗೆ 56 ವರ್ಷಗಳ ರಾಜಕೀಯ ಅನುಭವ ಇದೆ. ಆದರೆ ಎಲ್ಲಾ ಸಂದರ್ಭಗಳಲ್ಲಿ ಜೈರಾಮ್ ರಮೇಶ್ ಅವರು ಹೇಳಿಕೆಗಳನ್ನು ಕೊಡುತ್ತಾರೆ. ಈ ಸಮಸ್ಯೆಯನ್ನು ನೀವು ಬಗೆಹರಿಸಬೇಕಿದೆ. ನೀವು ವಿಷಯವನ್ನು ತಿರುಚಬೇಡಿ’ ಎಂದು ಹೇಳಿದರು.

****

‘ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ಈ ದೇಶದ ಜನರ ಸಹಕಾರದಿಂದಾಗಿ ನಾನು ಈ ಸ್ಥಾನಕ್ಕೆ (ರಾಜ್ಯಸಭೆ ವಿರೋಧ ಪಕ್ಷದ ನಾಯಕ) ಏರಿದ್ದೇನೆ. ನಿಮ್ಮ (ಧನಕರ್‌) ಅಥವಾ ಜೈರಾಮ್‌ ರಮೇಶ್‌ ಅವರಿಂದಾಗಿ ಈ ಹಂತಕ್ಕೆ ಏರಿಲ್ಲ

-ಮಲ್ಲಿಕಾರ್ಜುನ ಖರ್ಗೆ

’ಸಭಾಪತಿ ಪೀಠಕ್ಕೆ ನೀವು ತೋರಿದಷ್ಟು ಅಗೌರವ ಸಂಸದೀಯ ಪ್ರಜಾಪ್ರಭುತ್ವ ಮತ್ತು ರಾಜ್ಯಸಭೆ ಕಲಾ‍ಪದ ಇತಿಹಾಸದಲ್ಲಿ ಬೇರೆ ಯಾರೂ ತೋರಿಲ್ಲ. ಪ್ರತಿ ಬಾರಿ ಸಭಾಪತಿ ಜತೆ ಜಗಳ ಕಾಯುವುದು, ಪೀಠವನ್ನು ಅಗೌರವಗೊಳಿಸುವುದು ಸರಿಯಲ್ಲ

-ಜಗದೀಪ್‌ ಧನಕರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT