ದೀಪಾ: ಸಂಕಷ್ಟದಲ್ಲಿ ನೆರವಿನ ‘ಬೆಳಕು‘
ವಯನಾಡ್: ದೀಪಾ ಜೋಸೆಫ್, ಬಾಧಿತ ಗ್ರಾಮಗಳಲ್ಲಿ ನೆರವು ಕಾರ್ಯಕ್ಕೆ ಕೈಜೋಡಿಸಿರುವ ಆಂಬುಲೆನ್ಸ್‌ನ ಚಾಲಕಿ. ಕೇರಳದ ಪ್ರಥಮ ಮಹಿಳಾ ಆಂಬುಲೆನ್ಸ್ ಚಾಲಕಿ ಎಂಬ ಹಿರಿಮೆ ಇವರದು.
ತಮ್ಮ ವ್ಯಕ್ತಿಗತ ಬದುಕಿನ ನೋವಿನಲ್ಲೂ ಅವರು ಆಂಬುಲೆನ್ಸ್ ಓಡಿಸುತ್ತಾ ಶವಗಳ ಸಾಗಣೆ ಸೇರಿದಂತೆ ನೆರವು ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಮಗಳು ಕೆಲ ತಿಂಗಳ ಹಿಂದೆ ರಕ್ತದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.
ಆಂಬುಲೆನ್ಸ್ ಸೇವೆ ಅತ್ಯಗತ್ಯ ಎಂದು ತಿಳಿದು ಕೋಯಿಕ್ಕೋಡ್‌ನಿಂದ ವಯನಾಡ್‌ಗೆ ಬಂದಿದ್ದರು. ಅಂಗಾಂಗಗಳು, ಶವಗಳನ್ನು ಸಾಗಿಸಿದ್ದರು.
‘ಬಾಧಿತ ಪ್ರದೇಶಗಳಲ್ಲಿ ಐದು ದಿನ ಕಷ್ಟದ ವಿಸ್ತೃತ ಸ್ವರೂಪವನ್ನು ಪ್ರತ್ಯಕ್ಷವಾಗಿ ನೋಡಿದ ನಂತರ, ತನ್ನ ವೈಯಕ್ತಿಕ ಬದುಕಿನಲ್ಲಿನ ನೋವು ಸುಲಭವಾಗಿ ಶಮನ ಆಗಬಹುದು ಎನಿಸುತ್ತಿದೆ’ ಎನ್ನುತ್ತಾರೆ.
‘ನಮ್ಮವರು ಸತ್ತಿದ್ದಾರೆ ಎಂದು ನಂಬಲು ಸಿದ್ಧರಿಲ್ಲದವರೂ, ಕೆಲ ದಿನದ ಬಳಿಕ ನಾಪತ್ತೆಯಾಗಿರುವ ಶವ ನಮ್ಮವರದೇ ಆಗಿರಲಿ ಎಂದು ಪ್ರಾರ್ಥಿಸುವ ಹಂತವನ್ನು ಕೂಡ ತಲುಪಿದ್ದರು’ ಎಂದು ಅವರು ಸ್ಮರಿಸಿದರು.
ಇವರಿಗೆ ಒಬ್ಬ ಮಗನಿದ್ದಾನೆ. ಇನ್ನೂ ಓದುತ್ತಿದ್ದಾನೆ. ‘ಅವನಿಗಾಗಿ ಆಂಬುಲೆನ್ಸ್ ಚಾಲಕಿ ಕೆಲಸ ಮುಂದುವರಿಸುತ್ತೇನೆ’ ಎನ್ನುತ್ತಾರೆ ದೀಪಾ.