ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರೆಂದರೆ BJPಗೆ ಏಕೆ ದ್ವೇಷ: ಕಂಗನಾ ಹೇಳಿಕೆಗೆ ರೈತರು, ಕಾಂಗ್ರೆಸ್‌, ಎಎಪಿ ಕಿಡಿ

Published : 26 ಆಗಸ್ಟ್ 2024, 14:08 IST
Last Updated : 26 ಆಗಸ್ಟ್ 2024, 14:08 IST
ಫಾಲೋ ಮಾಡಿ
Comments

ಚಂಡೀಗಢ: ರೈತರ ಪ್ರತಿಭಟನೆ ಕುರಿತು ಸಂಸದೆ ಕಂಗನಾ ರನೌತ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ದೇಶದ ರೈತರನ್ನು ಕಂಡರೆ ಬಿಜೆಪಿಗರಿಗೆ ಏಕಿಷ್ಟು ದ್ವೇಷ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

‘ರೈತರು ತಿಂಗಳಾನುಗಟ್ಟಲೆ ನಡೆಸಿದ ಪ್ರತಿಭಟನೆಯಲ್ಲಿ ಹೆಣಗಳು ನೇತಾಡುತ್ತಿದ್ದವು. ಅತ್ಯಾಚಾರಗಳು ನಡೆದಿವೆ. ಬಾಂಗ್ಲಾದೇಶ ಮಾದರಿಯ ಅರಾಜಕತೆ ಸೃಷ್ಟಿಗೆ ಇಲ್ಲಿ ಯೋಜನೆ ನಡೆದಿತ್ತು’ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಹೇಳಿಕೆ ನೀಡಿದ್ದರು.

ಅ. 1ರಿಂದ ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಹೊರಬಿದ್ದ ಕಂಗನಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಬಿಜೆಪಿ ನಟಿಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

ಕಂಗನಾ ಹೇಳಿಕೆ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕಿಡಿ ಕಾರಿರುವ ಸುರ್ಜೇವಾಲಾ, ‘ನೀವು ಬೇಗನೆ ಹುಷಾರಾಗಿ ಕಂಗನಾ... ಆದರೂ ಬಿಜೆಪಿಗರಿಗೆ ದೇಶದ ಅನ್ನದಾತರ ಕಂಡರೆ ಏಕಿಷ್ಟು ದ್ವೇಷ? ನೀವು ಬಿಜೆಪಿಯವರು ರೈತರನ್ನು ಸದಾ ತುಳಿದಿದ್ದೀರಿ. ಸುಳ್ಳುಗಳನ್ನು ಹೇಳಿ ವಂಚಿಸಿದ್ದೀರಿ. ಇದೀಗ ಅದೇ ಪಕ್ಷದ ಸಂಸದೆಯೊಬ್ಬರು ನಮ್ಮ ರೈತರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ’ ಎಂದಿದ್ದಾರೆ.

‘ರೈತರ ವಿರುದ್ಧ ಕಂಗನಾ ಮಾಡಿರುವ ಈ ಆರೋಪವು ಬಿಜೆಪಿಯವರ ಚುನಾವಣಾ ತಂತ್ರವೇ? ಇದು ಕಂಗನಾ ಅವರ ಹೇಳಿಕೆಯೇ ಅಥವಾ ಇದರ ಹಿಂದಿರುವರು ಬರೆದುಕೊಟ್ಟರೇ? ಸಂಸದೆಯ ಈ ಹೇಳಿಕೆ ವಿರುದ್ಧ ದೇಶದ ಪ್ರಧಾನಿ, ಹರಿಯಾಣದ ಮುಖ್ಯಮಂತ್ರಿ, ಬಿಜೆಪಿಯ ಸಂಸದರು ಮತ್ತು ಶಾಸಕರು ಏಕೆ ಮೌನ ವಹಿಸಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

ಕಂಗನಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಸಂಸದೆ ಕುಮಾರಿ ಶೆಲ್ಜಾ ಅವರೂ ಪ್ರತಿಕ್ರಿಯಿಸಿದ್ದು, ‘ಬಿಜೆಪಿ ನಾಯಕರಿಗೆ ರೈತರ ಕಂಡರೆ ದ್ವೇಷವೇಕೆ’ ಎಂದಿದ್ದಾರೆ.

‘ಎಮರ್ಜೆನ್ಸಿ’ ಚಿತ್ರದ ಪ್ರಚಾರಕ್ಕಾಗಿ ಕಂಗನಾ ಇಂಥ ಹೇಳಿಕೆ ನೀಡಿ ಗಮನ ಸೆಳೆಯುವ ಯತ್ನವನ್ನು ಮಾಡಿದ್ದಾರೆ ಎಂದು ಕೆಲ ರೈತ ಮುಖಂಡರು ಆರೋಪಿಸಿದ್ದಾರೆ.

ರೈತರ ಮುಖಂಡರಾದ ಸರವಣ ಸಿಂಗ್ ಪಂಧೇರ್, ಹರ್‌ಪ್ರೀತ್ ಸಿಂಗ್‌, ತೇಜ್‌ವೀರ್‌ ಸಿಂಗ್, ಶೇರ್ ಸಿಂಗ್‌ ಜಂಟಿ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿ, ‘ಯಾವುದೇ ವಿಷಯಲ್ಲವೆಂದಾಗ ಕಂಗನಾ ಅವರು ಪಂಜಾಬ್ ಮತ್ತು ರೈತರ ವಿರುದ್ಧ ಹೇಳಿಕೆ ನೀಡುತ್ತಾರೆ. ಆದರೆ ಜನರಿಗೆ ವಾಸ್ತವ ಗೊತ್ತಿದೆ. ಹೀಗಾಗಿ ಯಾರೂ ಅವರ ಹೇಳಿಕೆಯನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’ ಎಂದಿದ್ದಾರೆ.

ಹರಿಯಾಣದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಸುಶೀಲ್ ಗುಪ್ತಾ ಅವರು ಕಂಗನಾ ಅವರ ರೈತ ವಿರೋಧಿ ಹೇಳಿಕೆಯನ್ನು ಖಂಡಿಸಿದ್ದಾರೆ.

ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಸೇರಿ ದೇಶದ ಹಲವು ರಾಜ್ಯಗಳ ರೈತರು  ತಮ್ಮ ಪ್ರಾಣದ ಹಂಗನ್ನು ತೊರೆದು ದೆಹಲಿ ಗಡಿಯಲ್ಲಿ ತಿಂಗಳುಗಳ ಕಾಲ ಧರಣಿ ನಡಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT