ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ರಾಜ್ಯಕ್ಕೆ ₹ 7 ಲಕ್ಷ ಕೋಟಿ ಆದಾಯ ನಷ್ಟ: ನಾಯ್ಡು

Published 26 ಜುಲೈ 2024, 10:57 IST
Last Updated 26 ಜುಲೈ 2024, 10:57 IST
ಅಕ್ಷರ ಗಾತ್ರ

ಅಮರಾವತಿ, ಆಂಧ್ರಪ್ರದೇಶ: ಐದು ವರ್ಷಗಳ ವೈಎಸ್‌ಆರ್‌ಸಿಪಿ ಆಡಳಿತವು ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿದೆ. ಇದರಿಂದಾಗಿ ರಾಜ್ಯಕ್ಕೆ ₹7 ಲಕ್ಷ ಕೋಟಿ ಆದಾಯ ನಷ್ಟವಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಆರೋಪಿಸಿದರು.

ವಿಧಾನಸಭೆಯಲ್ಲಿ ರಾಜ್ಯದ ಹಣಕಾಸು ಸ್ಥಿತಿ ಕುರಿತು ಅವರು ಶ್ವೇತಪತ್ರ ಹೊರಡಿಸಿದರು. ಈ ವೇಳೆ ಮಾತನಾಡಿದ ಅವರು, 2014–19ರ ವರೆಗಿನ ಟಿಡಿಪಿ ಸರ್ಕಾರದ ಅವಧಿಯಲ್ಲಿ ಕೃಷಿ ವಲಯದ ಬೆಳವಣಿಗೆ ದರವು ಶೇ 16 ಇತ್ತು. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅದು ಶೇ 10.3ಕ್ಕೆ ಇಳಿದಿದೆ. ಸೇವಾ ವಲಯದ ಬೆಳವಣಿಗೆ ದರವು ಶೇ 10.3ರಿಂದ ಶೇ 9.9ಗೆ ಇಳಿದಿದೆ ಎಂದು ದೂರಿದರು.

‘ಹಣವೇ ಇಲ್ಲದೇ ನಮ್ಮಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. 2014– 19ರ ನಡುವೆ ಆಂಧ್ರಪ್ರದೇಶವು ತೆಲಂಗಾಣಕ್ಕಿಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿತ್ತು. ಆದರೆ 2019– 24ರ ನಡುವೆ ಆರ್ಥಿಕತೆಗೆ ಹಾನಿಯುಂಟಾಯಿತು. ರೈತರ ಆದಾಯ ಕಡಿಮೆಯಾಗಿ ಸಾಲ ಹೆಚ್ಚಾಯಿತು. ಸಂಪತ್ತನ್ನು ಸೃಷ್ಟಿಸಿದರೆ ಜನರ ಆದಾಯವೂ ವೃದ್ಧಿಯಾಗುತ್ತದೆ’ ಎಂದು ಸದನಕ್ಕೆ ತಿಳಿಸಿದರು.

ಜಗನ್‌ಮೋಹನ್‌ ರೆಡ್ಡಿ ಆಡಳಿತದಲ್ಲಿ ವಿದ್ಯುತ್‌ ದರವೂ ಹೆಚ್ಚಾಗಿತ್ತು. ಅಲ್ಪಕಾಲಕ್ಕಾಗಿ ವಿದ್ಯುತ್‌ ಖರೀದಿಸುವುದರಿಂದ ₹12,250 ಕೋಟಿ ಹೆಚ್ಚುವರಿ ಹೊರೆ ರಾಜ್ಯದ ಮೇಲೆ ಬಿದ್ದಿದೆ. ಖನಿಜ ಸಂಪತ್ತನ್ನು ಲೂಟಿ ಮಾಡಿದ್ದಕ್ಕಾಗಿ ₹9,750 ಕೋಟಿ ಆದಾಯ ನಷ್ಟ ಆಗಿದೆ. ಅಮರಾವತಿ ನಗರ, ಪೊಲವಾರಮ್‌ ಯೋಜನೆ ಮತ್ತು ಇಂಧನ ಗುತ್ತಿಗೆಗಳಲ್ಲಿ ನಡೆದಿರುವ ಅವ್ಯವಹಾರಗಳಿಂದ ಹೂಡಿಕೆದಾರರ ವಿಶ್ವಾಸವನ್ನೂ ರಾಜ್ಯ ಸರ್ಕಾರ ಕಳೆದುಕೊಂಡಿದೆ ಎಂದರು.

ರಾಜ್ಯದ ಸಾಲವು 2019ರ ಮಾರ್ಚ್‌ 31ರಂದು ₹3.75 ಲಕ್ಷ ಕೋಟಿಗೆ ಏರಿತ್ತು. 2024ರ ಜೂನ್‌ 12ರ ವೇಳೆಗೆ ₹9.74 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT