ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಕೆಪಿಎಸ್‌ಸಿ ‌ಪರೀಕ್ಷೆ: ಅಭ್ಯರ್ಥಿಗಳ ಕಣ್ಗಾವಲಿಗೆ ಇನ್ನು ‘ಎಐ’
ಕೆಪಿಎಸ್‌ಸಿ ‌ಪರೀಕ್ಷೆ: ಅಭ್ಯರ್ಥಿಗಳ ಕಣ್ಗಾವಲಿಗೆ ಇನ್ನು ‘ಎಐ’
ಕೊಠಡಿ ಮೇಲ್ವಿಚಾರಕರ ಶರ್ಟ್‌ನ ಬಟನ್‌ ಅಥವಾ ಕಾಲರ್‌ ಸೂಕ್ಷ್ಮ ಕ್ಯಾಮೆರಾ!
ಫಾಲೋ ಮಾಡಿ
Published 30 ಆಗಸ್ಟ್ 2023, 0:17 IST
Last Updated 30 ಆಗಸ್ಟ್ 2023, 0:17 IST
Comments

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಇದೇ ಮೊದಲ ಬಾರಿಗೆ ‘ಕೃತಕ ಬುದ್ದಿಮತ್ತೆ’ (ಎಐ) ತಂತ್ರಜ್ಞಾನ ಬಳಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಿರ್ಧರಿಸಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಾನಾ ವೃಂದಗಳ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಪಿಎಸ್‌ಸಿ ಪರೀಕ್ಷೆಗಳನ್ನು ನಡೆಸುತ್ತದೆ.

ಅಲ್ಲದೆ, ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕರು ಧರಿಸುವ ಶರ್ಟ್‌ನ ಬಟನ್‌ ಅಥವಾ ಕಾಲರ್‌ನಲ್ಲಿ ಅತಿಸೂಕ್ಷ್ಮ ಕ್ಯಾಮೆರಾ ಅಳವಡಿಸಿ ಇಡೀ ಕೇಂದ್ರದಲ್ಲಿ ನಡೆಯುವ ಚಟುವಟಿಕೆಯನ್ನು ಚಿತ್ರೀಕರಿಸಿ, ನಿಗಾ ವಹಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಈ ಸುಧಾರಣಾ ಕ್ರಮಗಳ ಅನುಷ್ಠಾನಕ್ಕೆ ಮಂಗಳವಾರ (ಆಗಸ್ಟ್‌ 29) ನಡೆದ ಆಯೋಗದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ‘ಕಳ್ಳ ಮಾರ್ಗಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳ ಮೇಲಿನ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹೊಸತಾಗಿ ಈ ಎರಡು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಆಯೋಗ ಒಪ್ಪಿಗೆ ನೀಡಿದೆ’ ಎಂದರು.

ಏನಿದು ವ್ಯವಸ್ಥೆ: ಸದ್ಯ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್‌) ಪ್ರಚಲಿತದಲ್ಲಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ತಂತ್ರಾಂಶವನ್ನು ಅಳವಡಿಸಿದರೆ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಸಾಮೂಹಿಕ ನಕಲು, ಅಭ್ಯರ್ಥಿಗಳಿಂದ ಬ್ಲೂ ಟೂತ್‌ ಬಳಕೆ ಸೇರಿದಂತೆ ಎಲ್ಲ ಅಕ್ರಮಗಳನ್ನು ತಡೆಯಲು ಸಾಧ್ಯವಿದೆ. ಈ ಕಾರಣಕ್ಕೆ ಈ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್‌ ನಂತರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಈಗಾಗಲೇ ಹಲವು ಕ್ರಮಗಳು ಜಾರಿಯಲ್ಲಿವೆ. ಸೂಕ್ಷ್ಮ, ಅತಿಸೂಕ್ಷ್ಮವೆಂದು ಗುರುತಿಸಿದ ಕೇಂದ್ರಗಳಲ್ಲಿ ಎಲ್ಲ ಅಭ್ಯರ್ಥಿಗಳನ್ನು ಹೆಚ್ಚುವರಿ ವ್ಯವಸ್ಥೆಯ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಅಸಲಿ ಅಭ್ಯರ್ಥಿ ಬದಲು ನಕಲಿ ವ್ಯಕ್ತಿ ಹಾಜರಾಗುವುದನ್ನು ತಡೆಯಲು ಪರೀಕ್ಷೆ ಆರಂಭಕ್ಕೂ ಮೊದಲೇ ಅಭ್ಯರ್ಥಿಗಳ ನೈಜತೆ ಪರಿಶೀಲನೆಗೆ ಐರಿಸ್‌ (ಕಣ್ಣಿನ ಪಾಪೆ) ಸ್ಕ್ಯಾನ್‌ ಮಾಡಲಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಬ್ಲೂ ಟೂತ್‌ನಂತಹ ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣ ಹೊಂದಿದ್ದರೂ ಶೋಧಿಸುವ (ಫ್ರಿಸ್ಕಿಂಗ್) ಸಾಧನವನ್ನು ಕೇಂದ್ರಗಳಲ್ಲಿ ಅಳವಡಿಸಲಾಗುತ್ತಿದೆ. ಇಷ್ಟಾದರೂ ಪರೀಕ್ಷಾ ಅಕ್ರಮಗಳು ನಡೆಯುತ್ತಿರುವುದು ಗಮನಕ್ಕೆ ಬಂದಿರುವುದರಿಂದ ಈ ಕ್ರಮಕ್ಕೆ ಕೆಪಿಎಸ್‌ಸಿ ಮೊರೆ ಹೋಗಿದೆ.

ಪರೀಕ್ಷಾ ಕೇಂದ್ರಗಳ ಸೂಕ್ಷ್ಮತೆ ತಿಳಿದುಕೊಂಡ ಬಳಿಕ ಅಗತ್ಯವಿರುವ ಕೇಂದ್ರಗಳಿಗೆ ಈ ಸುಧಾರಣಾ ವ್ಯವಸ್ಥೆಗಳನ್ನು ಅಳವಡಿಸಲಾಗುವುದು. ಟೆಂಡರ್‌ ಅಂತಿಮಗೊಂಡ ನಂತರ ತಗಲುವ ವೆಚ್ಚವನ್ನು ಅಂದಾಜಿಸಲು ಸಾಧ್ಯ
– ವಿಕಾಸ್‌ ಕಿಶೋರ್‌ ಸುರಳ್ಕರ್‌, ಕಾರ್ಯದರ್ಶಿ ಕೆಪಿಎಸ್‌ಸಿ  

ಪ್ರತ್ಯೇಕ ಟೆಂಡರ್‌: ‘ಅಭ್ಯರ್ಥಿಯ ಮುಖ ಗುರುತಿಸುವಿಕೆ, ಬ್ಲೂ ಟೂತ್‌ ಬಳಕೆ, ಸಿಸಿಟಿವಿ ಕ್ಯಾಮೆರಾಗಳಿಂದ ವಿಡಿಯೊ ತುಣುಕು ಪ್ರತ್ಯೇಕಿಸುವುದು, ಎಐ ಅಳವಡಿಕೆ, ಮೇಲ್ವಿಚಾರಕರ ದೇಹಕ್ಕೆ ಅತಿಸೂಕ್ಷ್ಮ ಕ್ಯಾಮೆರಾ ಅಳವಡಿಕೆ- ಈ ಎಲ್ಲ ಸುಧಾರಣಾ ಕ್ರಮಗಳನ್ನು ಅಳವಡಿಸಲು ದರ ನಿಗದಿಪಡಿಸಲು ಪ್ರತ್ಯೇಕ ಟೆಂಡರ್‌ ಆಹ್ವಾನಿಸಲಾಗುವುದು. ಅಲ್ಲದೆ, ಆಯೋಗ ನಡೆಸುವ‌ ಪ್ರತಿ ಪರೀಕ್ಷೆಗೂ ಗುತ್ತಿಗೆ ಪಡೆದ ಏಜೆನ್ಸಿಗಳಿಗೆ ಪ್ರತ್ಯೇಕವಾಗಿ ‌ಕಾರ್ಯಾದೇಶ ನೀಡಲಾಗುವುದು. ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ’ ಎಂದು ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದರು.

ಸಿಸಿಟಿವಿ ಕ್ಯಾಮೆರಾಗಳಿಗೂ ‘ಎಐ’ ತಂತ್ರಾಂಶ
‘ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳನ್ನು ಕೇಂದ್ರೀಕೃತ ವ್ಯವಸ್ಥೆಯಡಿ ಬೆಂಗಳೂರಿನಲ್ಲಿರುವ ಕೆಪಿಎಸ್‌ಸಿ ಮುಖ್ಯ ಕಚೇರಿಯಲ್ಲಿ ವೀಕ್ಷಿಸಲು ಪ್ರತ್ಯೇಕ ತಂಡ ರಚಿಸಲಾಗುತ್ತದೆ. ಸಿಸಿಟಿವಿ ಕ್ಯಾಮೆರಾ ಇದೆ ಎಂಬ ಭಯದಿಂದ ಕೆಲವು ಅಭ್ಯರ್ಥಿಗಳು ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆಗುತ್ತಿರಲಿಲ್ಲ. ಅನುಮಾನ ವ್ಯಕ್ತವಾದ ಕೇಂದ್ರಗಳ ವಿಡಿಯೊ ತುಣುಕುಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಮುಂದೆ ಈ ಸಿಸಿಟಿವಿ ಕ್ಯಾಮೆರಾಗಳಿಗೆ ಎಐ ತಂತ್ರಾಂಶ ಅಳವಡಿಸಲಾಗುತ್ತದೆ’ ಎಂದು ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದರು. ‘ಯಾವುದಾದರೂ ಕೇಂದ್ರದಲ್ಲಿ ಸಾಮೂಹಿಕವಾಗಿ ನಕಲು ನಡೆದರೆ ಅಭ್ಯರ್ಥಿ ಉತ್ತರ ಬರೆಯಲು ಕೊಠಡಿಯ ಮೇಲ್ವಿಚಾರಕನೇ ನೆರವಾದರೆ ಬ್ಲೂ ಟೂತ್‌ ಬಳಕೆಯಾದರೆ  ಆ ನಿರ್ದಿಷ್ಟ ಕೊಠಡಿಯಲ್ಲಿ ಅಳವಡಿಸಿರುವ ಎಐ ತಂತ್ರಾಂಶವಿರುವ ಸಿಸಿಟಿವಿ ಕ್ಯಾಮೆರಾ ‘ಫ್ಲಾಶ್’ ಆಗಲಿದೆ. ಅಂತಹ ಕೊಠಡಿಯನ್ನು ಕೇಂದ್ರೀಕರಿಸಿ ಅಲ್ಲಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ ಮೇಲ್ವಿಚಾರಕರನ್ನು ವಿಚಾರಣೆಗೆ ಒಳಪಡಿಸಲು ಈ ಹೊಸ ವ್ಯವಸ್ಥೆಯಲ್ಲಿ ಅವಕಾಶ ಆಗಲಿದೆ’ ಎಂದೂ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT