ಮಹಿಳೆಯರ ಕುರಿತು ಸಂವೇದನೆರಹಿತ ಹೇಳಿಕೆಗಳನ್ನು ನೀಡುವುದು ಭಾರತದಲ್ಲಿ ಸಹಜವೇ ಎಂಬಂತಾಗಿದೆ. ಹೆಣ್ಣನ್ನು ಅವಹೇಳನ ಮಾಡುವಂತಹ ಮಾತುಗಳನ್ನು– ಪ್ರಧಾನಿಯಿಂದ ಹಿಡಿದು ಶಾಸಕರವರೆಗೆ– ಹಲವರು ಆಡಿದ್ದಾರೆ. ಪ್ರತಿ ಬಾರಿ ಇಂತಹ ಹೇಳಿಕೆಗಳು ಬಂದಾಗಲೂ ಮಹಿಳಾ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇಂತಹ ಹೇಳಿಕೆ ನೀಡುವ ಪರಿಪಾಟ ಮಾತ್ರ ನಿಂತಿಲ್ಲ. ಕೋಲಾರ ಸಂಸದ ಮುನಿಸ್ವಾಮಿ ಅವರು, ಕುಂಕುಮ ಇಟ್ಟಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಹರಿಹಾಯ್ದ ಪ್ರಕರಣದ ಕುರಿತೂ ಈಗ ವ್ಯಾಪಕ ಸಿಟ್ಟು ಕಂಡು ಬಂದಿದೆ.

ಹೆಣ್ಣು ಮಕ್ಕಳ ಕುರಿತು ಹೇಳಿಕೆಗಳನ್ನು ನೀಡಿ, ಅದಕ್ಕೆ ಜನರಿಂದ ತೀವ್ರ ಟೀಕೆ ವ್ಯಕ್ತವಾದ ಬಳಿಕ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದು ಅಥವಾ ಕ್ಷಮೆ ಯಾಚಿಸುವುದು ಕರ್ನಾಟಕದಲ್ಲಿ ಹೊಸ ಬೆಳವಣಿಗೆ ಏನೂ ಅಲ್ಲ. ಸಂಸದರು, ಶಾಸಕರು ಮುಂತಾದ ಜನಪ್ರತಿನಿಧಿಗಳೇ ಇಂತಹ ಹೇಳಿಕೆಗಳನ್ನು ಹೆಚ್ಚು ನೀಡಿದ್ದಾರೆ ಎಂಬುದೂ ಗಮನಾರ್ಹ.

‘ಪಾಶ್ಚಿಮಾತ್ಯ ದಿರಿಸಿನಿಂದಾಗಿ ಹಲ್ಲೆ’
ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಪ್ರತಿ ವರ್ಷ ಹೊಸ ವರ್ಷ ಅದ್ದೂರಿಯಾಗಿ ನಡೆಯುತ್ತದೆ. 2016ರ ಡಿಸೆಂಬರ್ 31ರಂದು ಕೂಡ ಹೊಸ ವರ್ಷಾಚರಣೆ ಸಂಭ್ರಮದಿಂದ ನಡೆದಿತ್ತು. ಸಾವಿರಾರು ಜನರು ಸೇರಿದ್ದರು. ಆ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಯುವತಿಯರ ಕೈ ಹಿಡಿದು ಎಳೆದಾಡಿದ್ದರು. ಜಿ.ಪರಮೇಶ್ವರ ಅವರು ಆಗ ಉಪಮುಖ್ಯಮಂತ್ರಿ ಆಗಿದ್ದರು. ಗೃಹ ಖಾತೆಯೂ ಅವರ ಬಳಿಯೇ ಇತ್ತು. ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗೆ ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ ಅವರು, ‘ಇಂಥ (ಹೊಸ ವರ್ಷಾಚರಣೆ) ಘಟನೆಗಳು ಜರುಗುವಾಗ ಮಹಿಳೆಯರ ಮೇಲೆ (ಲೈಂಗಿಕ) ದೌರ್ಜನ್ಯಗಳು ನಡೆಯುವುದು ಸಹಜ. ಪಾಶ್ಚಿಮಾತ್ಯ ದಿರಿಸು ಧರಿಸುತ್ತಿರುವುದರಿಂದ ಮಹಿಳೆಯರ ಮೇಲೆ ಹಲ್ಲೆಗಳಾಗುತ್ತಿವೆ’ ಎಂದು 2017ರ ಜನವರಿ 5ರಂದು ಹೇಳಿದ್ದರು. ಇದಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿತ್ತು. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಪರಮೇಶ್ವರ ಅವರು ಬಳಿಕ ಸಮಜಾಯಿಷಿ ನೀಡಿದ್ದರು.

‘ಅತ್ಯಾಚಾರವನ್ನು ಆನಂದಿಸಿ’
ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 2021ರ ಡಿಸೆಂಬರ್ 17ರಂದು ನೀಡಿದ್ದ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.

ರಮೇಶ್ ಕುಮಾರ್ ಹೇಳಿದ್ದು ಇಷ್ಟು: ‘ದೆರ್ ಈಸ್ ಎ ಸೇಯಿಂಗ್, ವೆನ್ ರೇಪ್ ಈಸ್ ಇನೆವಿಟೆಬಲ್ ಲೆಟ್ ಲೇಡೌನ್ ಅಂಡ್ ಎಂಜಾಯ್ (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ).

ಅತಿವೃಷ್ಟಿಯ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿತ್ತು. ಆಡಳಿತ ಮತ್ತು ವಿರೋದ ಪಕ್ಷದ ಸದಸ್ಯರು ‘ನಾವೂ ಮಾತನಾಡಬೇಕು, ನಾವೂ ಮಾತನಾಡಬೇಕು’ ಎಂದು ದುಂಬಾಲು ಬಿದ್ದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬೇಸತ್ತು ‘ಎಷ್ಟು ಶಾಸಕರು ಬೇಕಾದರೂ ಮಾತನಾಡಲಿ, ನಾನು ಕೇಳುತ್ತಾ ಆನಂದಿಸುವುದನ್ನು ಬಿಟ್ಟರೆ ಇನ್ನೇನು ಮಾಡಲಿ. ಅಜೆಂಡಾದಲ್ಲಿರುವ ಬೇರೆ ಯಾವುದೇ ವಿಷಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದರು. ಅದೊಂದು ಮಾತಿದೆಯಲ್ಲ ರಮೇಶ್ ಕುಮಾರ್ ಅವರೇ ಎಂದು ಕಾಗೇರಿ ಹೇಳಿದರು. ಆಗ ಸಾಂದರ್ಭಿಕವಾಗಿ ರಮೇಶ್ಕುಮಾರ್ ಮೇಲಿನಂತೆ ಮಾತು ಹೇಳಿದ್ದರು. ಮರುದಿನ ರಮೇಶ್ ಕುಮಾರ್ ಕ್ಷಮೆ ಕೇಳಿದ್ದರು.

‘ಇಂತಹ ಹೇಳಿಕೆ ನೀಡಿದ ರಮೇಶ್ ಕಮಾರ್ ಅವರನ್ನು ಸದನದಿಂದ ಬಹಿಷ್ಕರಿಸಬೇಕು’ ಎಂಬ ಕೂಗು ಕೂಡ ಆಗ ಕೇಳಿ ಬಂದಿತ್ತು.

ಯುವತಿಯದ್ದೇ ತಪ್ಪು
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯುವತಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ನೀಡಿದ್ದ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿಗೆ ತಿರುಗಾಡಲು ಹೋಗಿದ್ದ ಯುವತಿ ಮತ್ತು ಯುವಕನ ಮೇಲೆ ಗುಂಪೊಂದು ಮುಗಿಬಿದ್ದಿತ್ತು. ಯುವಕನನ್ನು ಥಳಿಸಿ, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಘಟನೆ ಕುರಿತು ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಜ್ಞಾನೇಂದ್ರ ಅವರು ‘ಸಂಜೆ 7.30ರ ಹೊತ್ತಿಗೆ ಯುವತಿ ಅಲ್ಲಿಗೆ ಹೋಗಬಾರದಿತ್ತು’ ಎಂದು 2021ರ ಆಗಸ್ಟ್ 26ರಂದು ಹೇಳಿದ್ದರು. ಈ ಹೇಳಿಕೆಗೆ ರಾಜ್ಯದಾದ್ಯಂತ ಖಂಡನೆ
ವ್ಯಕ್ತವಾಗಿತ್ತು. ಜ್ಞಾನೇಂದ್ರ ಹೇಳಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ, ಜ್ಞಾನೇಂದ್ರ ಅವರು ತಮ್ಮ ಹೇಳಿಕೆ ಹಿಂದಕ್ಕೆ ಪಡೆದಿದ್ದರು.

ಮುಳುವಾದ ಹೇಳಿಕೆ
ಲೋಕಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ನ ಭದ್ರಕೋಟೆ ಎಂದೇ ಭಾವಿಸಲಾಗಿದ್ದ ಈ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿತ್ತು. ಆಗ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ. ರೇವಣ್ಣ ಅವರು ಸುಮಲತಾ ಸ್ಪರ್ಧೆಯ ಕುರಿತು ನೀಡಿದ್ದ ಹೇಳಿಕೆಯೊಂದು ಜೆಡಿಎಸ್ಗೆ ಮುಳುವಾಯಿತು ಎಂದು ವಿಶ್ಲೇಷಕರು ಹೇಳಿದ್ದರು. ‘ಗಂಡ ಸತ್ತು ಇನ್ನೂ ಒಂದೆರಡು ತಿಂಗಳು ಕಳೆದಿಲ್ಲ. ಆದರೂ ಅಂಬರೀಷ್ ಪತ್ನಿ, ನಟಿ ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು’ ಎಂದು ರೇವಣ್ಣ 2019ರ ಮಾರ್ಚ್ 8ರಂದು ಹೇಳಿದ್ದರು. ಅಂಬರೀಶ್ ಅವರು 2018ರ ನವೆಂಬರ್ 24ರಂದು ಮೃತಪಟ್ಟಿದ್ದರು.

ರಾಷ್ಟ್ರ ನಾಯಕರ ಸ್ತ್ರೀ ದ್ವೇಷ

‘ಮನೆಯಲ್ಲಿ ಅಡುಗೆ ಮಾಡಿಕೊಂಡು ಇರಿ’: ‘ಮನೆಗೆ ಹೋಗಿ ಅಡುಗೆ ಮಾಡಿಕೊಂಡು ಇರಿ’ ಎಂದು ಹೇಳಿಸಿಕೊಳ್ಳಬೇಕಾದ ಪ್ರಸಂಗ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಎದುರಾಗಿತ್ತು. ಒಬಿಸಿ ಮೀಸಲಾತಿ ಕುರಿತಂತೆ ಸುಪ್ರಿಯಾ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ, ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು, ‘ನಿಮಗೆ ರಾಜಕೀಯ ಅರ್ಥವಾಗುವುದಿಲ್ಲ ಎಂದಾದರೆ ಮನೆಗೆ ಹೋಗಿ ಅಡುಗೆ ಮಾಡಿಕೊಂಡಿರಿ’ ಎಂದು ಹೇಳಿದ್ದರು. 2022ರ ಮೇನಲ್ಲಿ ಈ ಘಟನೆ ನಡೆದಿತ್ತು. ಮರುದಿನ ನಿರೀಕ್ಷೆಯಂತೆ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದ ಅವರು, ‘ಹಳ್ಳಿ ಧಾಟಿಯಲ್ಲಿ ಹಾಗೆ ಮಾತನಾಡಿದ್ದೆನಷ್ಟೇ. ಸುಳೆ ಅವರನ್ನು ಅಗೌರವದಿಂದ ಕಾಣುವ ಉದ್ದೇಶ ಇರಲಿಲ್ಲ’ ಎಂದು ಹೇಳಿದ್ದರು.

‘ಪ್ರತಿಭಟನಕಾರ್ತಿಯರು ಡಿಸ್ಕೊಥೆಕ್ಗೆ ಹೋಗುತ್ತಾರೆ’: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಕುರಿತು ನೀಡಿದ್ದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ‘ಪ್ರತಿಭಟನೆಗೆ ಬರುವ ಮಹಿಳೆಯರು ಎರಡು ನಿಮಿಷದ ಪ್ರಚಾರಕ್ಕಾಗಿ ತಿದ್ದಿತೀಡಿ, ಬಣ್ಣ ಹಚ್ಚಿಕೊಂಡು ಬರುತ್ತಾರೆ. ಪ್ರತಿಭಟನೆ ನಡೆಸುವ ವ್ಯಕ್ತಿಗಳಿಗೆ ವಾಸ್ತವ ಏನೆಂದೇ ಗೊತ್ತಿರುವುದಿಲ್ಲ. ಅವರೆಲ್ಲರೂ ‘ಡಿಸ್ಕೊಥೆಕ್’ಗೆ ಹೋಗುವವರು’ ಎಂದು ಸುದ್ದಿವಾಹಿನಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಭಿಜಿತ್ ಅವರ ಈ ಮಾತಿಗೆ ಅವರ ಸಹೋದರಿ ಶರ್ಮಿಷ್ಠಾ ಮುಖರ್ಜಿ ಅವರು ಕ್ಷಮೆ ಕೇಳಿದ್ದರು.

‘ಹುಡುಗರು ತಪ್ಪು ಮಾಡುತ್ತಾರೆ’: ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದ ಮುಲಾಯಂ ಸಿಂಗ್ ಯಾದವ್ ಬದೌನ್ ಅತ್ಯಾಚಾರ ಪ್ರಕರಣದ ಕುರಿತು ಆಡಿದ್ದ ಮಾತು ವಿಷಯದ ಗಂಭೀರತೆಯನ್ನು ಮೀರಿತ್ತು. ತಮ್ಮ ಪಕ್ಷದ ಹುಡುಗರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ, ‘ಹುಡುಗರು ಹುಡುಗರೇ. ಅವರು ತಪ್ಪು ಮಾಡುತ್ತಾರೆ. ಮೊದಲು, ಹುಡುಗಿಯರು ಹುಡುಗರ ಸ್ನೇಹ ಸಂಪಾದಿಸುತ್ತಾರೆ. ಅವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಾಗ, ಹುಡುಗಿಯರು ಅತ್ಯಾಚಾರದ ಆರೋಪ ಹೊರಿಸುತ್ತಾರೆ. ಹುಡುಗರು ತಪ್ಪು ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ಗಲ್ಲಿಗೇರಿಸಲು ಆಗುತ್ತದೆಯೇ’ ಎಂದು ಪ್ರಶ್ನಿಸಿದ್ದರು.

ಈ ಅಧಿಕಪ್ರಸಂಗ ಹೇಗೆ ಬಂತು?
ಹೆಣ್ಣುಮಗಳೊಬ್ಬಳ ಖಾಸಗಿ ಆಯ್ಕೆಯ, ಇಷ್ಟಾನಿಷ್ಟದ ವಿಚಾರವನ್ನು ಜನಪ್ರತಿನಿಧಿಯೊಬ್ಬರು ಹೀಗೆ ಸಾರ್ವಜನಿಕವಾಗಿ ಆರ್ಭಟಿಸಿ ಆದೇಶಿಸುವ ಉದ್ಧಟತನ, ಅಧಿಕಪ್ರಸಂಗ ಹೇಗೆ ಬಂತು? ನಾಡಿನ ಜನರಿಗೆ, ಮಹಿಳೆಯರಿಗೆ ಉತ್ತರದಾಯಿಗಳಾಗಿ ಇರಬೇಕಾದ ರಾಜಕಾರಣಿಗಳು ಬೇಕಾಬಿಟ್ಟಿ ತಪ್ಪು ಮಾಡುವುದು, ಹೆಣ್ಣು ಮಕ್ಕಳ ವಿಷಯದಲ್ಲಿ ಅಸಭ್ಯವಾಗಿ ವರ್ತಿಸುವುದು, ನಾವು ಪ್ರಶ್ನಿಸಿಲ್ಲವಾದ್ದರಿಂದಲೇ ಅಲ್ಲವೇ? ಜನಪ್ರತಿನಿಧಿಗಳ ನೈತಿಕ ಜವಾಬ್ದಾರಿ ಏನೆಂಬುದನ್ನು ನಾವು, ಈ ನಾಡಿನ ಹೆಣ್ಣು ಮಕ್ಕಳು ಘಟ್ಟಿಸಿ ಆದೇಶಿಸಬೇಕು. ಪ್ರಶ್ನಿಸಬೇಕು. ನಾವು ಕೀಲುಗೊಂಬೆಗಳಲ್ಲ ಎಂಬುದವರಿಗೆ ಮನವರಿಕೆಯಾದರೆ ಮಾತ್ರ ಮುಂದೆ ಇಂತಹ ಸದರವನ್ನು ಇನ್ಯಾವ ರಾಜಕಾರಣಿಯೂ ತೆಗೆದುಕೊಳ್ಳುವ ಧೈರ್ಯ ಮಾಡಲಾರರು.
–ರೂಪ ಹಾಸನ, ಲೇಖಕಿ

ಮಹಿಳೆಯ ಘನತೆಗೆ ಚ್ಯುತಿ
ಹಣೆಗೆ ಯಾಕೆ ಬೊಟ್ಟು ಇಟ್ಟುಕೊಂಡಿಲ್ಲ ಎಂದು ಕೋಲಾರದ ಸಂಸದ ಎಸ್. ಮುನಿಸ್ವಾಮಿ, ಮಹಿಳೆಯೊಬ್ಬರನ್ನು ಪ್ರಶ್ನಿಸಿರುವುದು ಸಂವಿಧಾನ ವಿರೋಧಿ ನಡೆ. ಸ್ತ್ರೀಯನ್ನು ಕುಂಕುಮ ಅಥವಾ ಬಾಹ್ಯ ಸಂಗತಿಗಳ ಮೇಲೆ ಅಳೆಯುವ ಅಗತ್ಯವಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ತಾನೇನು ಮಾಡಬಲ್ಲೆ, ಸರ್ಕಾರ ಮಟ್ಟದಲ್ಲಿ ಮಹಿಳೆಯರಿಗೆ ಯಾವೆಲ್ಲ ಸೌಲಭ್ಯ ಒದಗಿಸಿಕೊಡಬಹುದು ಎಂದು ಯೋಚಿಸಲಿ. ಇದು ಪುರುಷ ಪ್ರಧಾನ ಮನಃಸ್ಥಿತಿಯನ್ನು ತೋರಿಸುತ್ತದೆ. ಇದು ಖಂಡನೀಯ.
–ಮಂಜುಳಾ ಸನಿಲ್, ಮಹಿಳಾ ಹೋರಾಟಗಾರ್ತಿ, ಮಂಗಳೂರು

ಸಂಸದರಿಂದ ಸಂಸ್ಕಾರ ಹೇಳಿಸಿಕೊಳ್ಳಬೇಕೆ?
ಮಹಿಳೆಯನ್ನು ನಿಂದಿಸಿದ ಸಂಸದರ ನಡೆ ಸರಿಯಲ್ಲ. ಪ್ರತಿ ಮಹಿಳೆಗೆ ತಾನು ಹೇಗಿರಬೇಕು ಎಂಬುದು ಗೊತ್ತಿದೆ. ಕುಂಕುಮ ಹಚ್ಚಿಕೊಳ್ಳದಿದ್ದರೆ ಗಂಡ ಬದುಕಿಲ್ಲ, ಸಂಸಾರ ಚೆನ್ನಾಗಿಲ್ಲ ಎಂದು ಅರ್ಥೈಸಿಕೊಳ್ಳುವುದು ಮೂರ್ಖತನ. ಮಹಿಳೆಯ ಕುಂಕುಮ ವಿಷಯವನ್ನು ಪ್ರಶ್ನಿಸುವ ಹಕ್ಕು ಸಂಸದರಿಗೆ ಇಲ್ಲ. ಅವರು ಅವಮಾನಿಸಿದ್ದು ಸರಿಯಲ್ಲ. ಇದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರ ಸಣ್ಣತನ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವರು ಪ್ರೋತ್ಸಾಹಿಸಬೇಕಿತ್ತು. ಮಹಿಳೆಯರಿಗೆ ಸಂಸ್ಕಾರ, ಸಂಸ್ಕೃತಿ ಗೊತ್ತಿದೆ. ಇನ್ನೊಬ್ಬ ಗಂಡಸಿನಿಂದ ಹೇಳಿಸಿಕೊಳ್ಳುವಷ್ಟು ದಡ್ಡರು ಅಲ್ಲ.
–ಸಾವಿತ್ರಿ ಮುಜುಮದಾರ, ಸಾಹಿತಿ, ಕೊಪ್ಪಳ

ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿ ಬದಲಾಗಲಿ
ಮಹಿಳೆಯನ್ನು ನೋಡುವ ದೃಷ್ಟಿ ಮೊದಲು ಬದಲಾಗಬೇಕು. ಮಹಿಳೆ ಮೇಲೆ ಅತ್ಯಾಚಾರ, ದೌರ್ಜನ್ಯಗಳಾದಾಗ ಒಂದು ಬಾರಿಯೂ ಮುನಿಸ್ವಾಮಿ ಮಾತನಾಡಿದ್ದನ್ನು ನಾನು ಕಂಡಿಲ್ಲ. ಹೊಟ್ಟೆ ಪಾಡಿಗೆ ದುಡಿಯುತ್ತಿರುವ ಹೆಣ್ಣುಮಗಳು ತನ್ನ ಹಣೆಯಲ್ಲಿ ಕುಂಕುಮ ಇದೆಯಾ, ಇಲ್ಲವಾ ಎಂದು ನೋಡಿಕೊಂಡು ಕೂರಲು ಸಾಧ್ಯವಿಲ್ಲ. ಕುಂಕುಮ ಮುಖ್ಯ ಕೂಡ ಅಲ್ಲ. ಗಂಡ ಇದ್ದರಷ್ಟೇ ಕುಂಕುಮ ಇಟ್ಟುಕೊಳ್ಳಬೇಕಾ? ಹುಟ್ಟಿನಿಂದಲೇ ಕುಂಕುಮ ಧರಿಸುವ ಹೆಣ್ಣುಮಕ್ಕಳಿಗೆ ಆಗ ಗಂಡ ಎಲ್ಲಿದ್ದ?
–ಬಿ.ಟಿ. ಜಾಹ್ನವಿ, ಸಾಹಿತಿ, ದಾವಣಗೆರೆ

ಅಧಿಕಾರ ಕೊಟ್ಟವರು ಯಾರು?
ಮಹಿಳೆಯ ವೈಯಕ್ತಿಕ ವಿಷಯ ಕುರಿತು ಪ್ರಶ್ನೆ ಕೇಳಲು ಸಂಸದ ಎಸ್. ಮುನಿಸ್ವಾಮಿ ಅವರಿಗೆ ಅಧಿಕಾರ ಕೊಟ್ಟವರು ಯಾರು? ಅವರ ವರ್ತನೆ ಖಂಡನೀಯ. ಮಹಿಳೆಯರ ಬದುಕಿನ ಕುರಿತು ಅಮಾನವೀಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಕ್ಷೇತ್ರದ ಜನರ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳದೆ ಮಹಿಳೆಯರ ಕುಂಕುಮ, ಬಳೆ ಕುರಿತು ಮಾತನಾಡುತ್ತಿದ್ದಾರೆ. ಆಹಾರ, ಬಟ್ಟೆ ಮುಗೀತು. ಈಗ ಕುಂಕುಮದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದು ಅಜ್ಞಾನ ಹಾಗೂ ಸ್ತ್ರೀ ದ್ವೇಷದ ನಡೆಯಾಗಿದೆ.
–ಬಾ.ಹ. ರಮಾಕುಮಾರಿ, ಲೇಖಕಿ, ತುಮಕೂರು

ಅಸಹ್ಯದ ಮನಃಸ್ಥಿತಿ
ಕಟ್ಟಳೆಗಳನ್ನೆಲ್ಲ ಕಳಚಿ ಬದುಕು ಕಟ್ಟಿಕೊಳ್ಳುವತ್ತ ಧಾವಿಸುತ್ತಿರುವ ಮಹಿಳೆ ಎಲ್ಲ ಸವಲತ್ತುಗಳಿಲ್ಲದಿರುವ ಮತ್ತು ದಕ್ಕಿಸಿಕೊಳ್ಳುವ ಎಲ್ಲ ಹಂತವನ್ನೂ ಬಹಳ ಆತ್ಮಸ್ಥೈರ್ಯ ದಿಂದಲೇ ಎದುರಿಸುತ್ತಾಳೆ. ಮಹಿಳಾ ದಿನಾಚರಣೆಯ ದಿನವೇ ಇಂತದೊಂದು ಮಾತನ್ನು ಆಡಿದ ಸಂಸದ ಮುನಿಸ್ವಾಮಿ ಹೆಣ್ಣು ಮನೆಯೊಳಗೇ ಕುಳಿತುಕೊಳ್ಳಬೇಕೆಂಬ ಪುರುಷಪ್ರಧಾನ ಸಮಾಜದ ಮುಖವಾಣಿ.
–ಪಲ್ಲವಿ ಇಡೂರು, ಮಹಿಳಾ ಹೋರಾಟಗಾರ್ತಿ

ಮನುಸ್ಮೃತಿ ವಿಷಬೀಜದ ಸಂಸದ
ಸಂಸದ ಎಸ್. ಮುನಿಸ್ವಾಮಿ ಅವರ ಮಾತುಗಳು, ಮಹಿಳೆಯರಿಗೆ ಅವರು ನೀಡುವ ಗೌರವ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ. ಸಂಸದರ ಮಿದುಳಿನಲ್ಲಿ ಮನುಸ್ಮೃತಿಯ ವಿಷಬೀಜವಿರುವುದು ಸ್ಪಷ್ಟ. ಗೌರವಯುತವಾಗಿ ತನ್ನಿಷ್ಟದಂತೆ ಬದುಕುವ ಹಕ್ಕನ್ನು ಸಂವಿಧಾನ ಮಹಿಳೆಗೆ ಕೊಟ್ಟಿದೆ. ಮಹಿಳೆಯರ ಘನತೆಯ ಕುಂದಿಸುವ ಮನುಸ್ಮೃತಿ ಪಾಲಕರ ಇಂತಹ ಮಾತುಗಳನ್ನು ಎಲ್ಲರೂ ವಿರೋಧಿಸಬೇಕು.
–ಸುನಂದಾ ಕಡಮೆ, ಸಾಹಿತಿ, ಹುಬ್ಬಳ್ಳಿ

ಸಂಸದರು ಕ್ಷಮೆ ಕೋರಲಿ
ಮಹಿಳಾ ದಿನದಂದು ಕೋಲಾರದ ಸಂಸದರು ಕುಂಕುಮವಿಡದ ಸುಜಾತಳಿಗೆ ಬೆದರಿಕೆ ಹಾಕಿರುವುದು ಅಜ್ಞಾನದ, ಸ್ತ್ರೀ ದ್ವೇಷದ ನಡೆಯಾಗಿದೆ. ಕುಂಕುಮ ಮದುವೆಯಾದ ಮೇಲೆ ಬರುವುದಲ್ಲ. ಅದೊಂದು ಅಲಂಕಾರ. ಮದುವೆಯಾದವರೂ, ಆಗದಿದ್ದವರೂ, ವಿಧವೆಯರೂ ಹೆಣ್ಣುಗಳೂ ಗಂಡುಗಳೂ ತಮಗಿಷ್ಟದ ಆಕಾರ, ಬಣ್ಣಗಳ ಬೊಟ್ಟಿಡುತ್ತಾರೆ. ಅದು ಸಂಪೂರ್ಣ ಅವರವರ ಆಯ್ಕೆಗೆ ಬಿಟ್ಟದ್ದು. ಅದವರ ಹಕ್ಕು. ಇನ್ನೊಂದೆಡೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಹಿಳಾ ಲೇಖಕರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡದೇ ಇದ್ದುದಕ್ಕೆ ಪ್ರಶ್ನೆ ಮಾಡಿದ್ದ ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ಕ.ಸಾ.ಪ. ಅಧ್ಯಕ್ಷರು ರದ್ದುಗೊಳಿಸಿದ್ದಾರೆ. ಇವೆರಡೂ ಮಹಿಳಾ ದೌರ್ಜನ್ಯದ ಬೀಜರೂಪಿ ಮನಃಸ್ಥಿತಿಯಾಗಿದೆ. ಸರ್ವಸಮಾನತೆ ಪ್ರತಿಪಾದಿಸುವ ಸಂವಿಧಾನಕ್ಕೆ ವಿರೋಧಿಯಾಗಿದೆ. ಜನಪ್ರತಿನಿಧಿಗಳು ತಾವು ಜನಸೇವಕರೇ ಹೊರತು ಸರ್ವಾಧಿಕಾರಿಗಳಲ್ಲ ಎಂದರಿತು ಮೊದಲು ಸಂವಿಧಾನವನ್ನು, ಬಾಬಾಸಾಹೇಬರನ್ನು ಸರಿಯಾಗಿ ಓದಿಕೊಳ್ಳಲಿ. ತಕ್ಷಣವೇ ಸಮಾಜದ ಕ್ಷಮೆ ಕೋರಲಿ. ಇಲ್ಲದಿದ್ದಲ್ಲಿ ಸಮತೆಯನ್ನು ಬಯಸುವ ಸ್ತ್ರೀ ಪುರುಷರೆಲ್ಲರೂ ತಕ್ಕಪಾಠ ಕಲಿಸುತ್ತಾರೆನ್ನುವುದನ್ನು ಮರೆಯದಿರಲಿ.

–ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪರವಾಗಿ, ಸಬಿಹಾ ಭೂಮಿಗೌಡ. ಎಂ. ಎನ್. ಸುಮನಾ ನೆಟ್ಟಾರ್, ವಾಣಿ ಪೆರಿಯೋಡಿ, ರತಿರಾವ್, ಅಖಿಲಾ ವಿದ್ಯಾಸಂದ್ರ, ಮಲ್ಲಿಗೆ ಸಿರಿಮನೆ, ಗೌರಿ, ಶಾಂತಮ್ಮ ಕೋಲಾರ, ಸಬಿತಾ ಬನ್ನಾಡಿ, ಎಚ್. ಎಸ್. ಅನುಪಮಾ, ರೇಖಾಂಬಾ ಟಿ.ಎಲ್., ಕಲ್ಯಾಣಿ ತುಮಕೂರು, ಅರುಂಧತಿ ಡಿ., ಮಲ್ಲಿಕಾ ಬಸವರಾಜು.

ಸಂಸದರು ಶಿಕ್ಷಾರ್ಹರು
ಕುಂಕುಮ ಇಡದವರು ಗಂಡನನ್ನು ಕಳೆದುಕೊಂಡೇ ಇರಬೇಕು, ಇಲ್ಲವೇ ಕುಂಕುಮ ಧರಿಸದವರ ಧರ್ಮಕ್ಕೆ ಮತಾಂತರ ಹೊಂದಲು ತರಬೇತಿ ಪಡೆಯುತ್ತಿರಬೇಕು ಎಂಬ ಅರ್ಥಕ್ಕೆ ಅವಕಾಶವಾಗುವಂತಹ ಮಾತುಗಳನ್ನು ಸಂಸದ ಎಸ್.ಮುನಿಯಪ್ಪ ಅವರು ಆಡಿರುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 504ರ ಅನುಸಾರ, ಯಾವುದೇ ವ್ಯಕ್ತಿಯನ್ನು ಉದ್ದೇಶ ಪೂರ್ವಕವಾಗಿ ಅವಮಾನಿಸುವುದು ಇಲ್ಲವೇ ಪ್ರಚೋದನೆಗೆ ಒಳಪಡಿಸುವುದು ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸುವುದಕ್ಕೆ ಕಾರಣವಾಗಬಹುದು. ಈ ಪ್ರಕಾರ ಸಂಸದರಿಂದ ನಿಂದನೆಗೆ ಒಳಗಾದ ಮಹಿಳೆ ಆ ಕ್ಷಣದಲ್ಲಿ ನೂರಾರು ಮಹಿಳೆಯರ ಮಧ್ಯೆ ಇದ್ದರು ಎಂಬ ಗ್ರಹಿಕೆಯ ಅಡಿಯಲ್ಲಿ ಘಟನೆಯನ್ನು ಗಮನಿಸಿದಾಗ, ನಿಂದಿಸಿದ ವ್ಯಕ್ತಿಯನ್ನು (ಇಲ್ಲಿ ಸಂಸದರು) 2 ವರ್ಷಗಳ ಜೈಲು ಶಿಕ್ಷೆಗೆ ಗುರಿ ಮಾಡಬಹುದು.

ಕಲಂ 506ರ ಪ್ರಕಾರ, ಒಬ್ಬ ವ್ಯಕ್ತಿಯನ್ನು ಕುರಿತು ಅಧೀರರನ್ನಾಗಿಸುವ ಇಲ್ಲವೇ ಜರ್ಝರಿತಗೊಳಿಸುವಂತಹ ಮಾತುಗಳನ್ನು ಆಡಿರುವುದರಿಂದ, ಮುಂದುವರಿದಂತೆ ಅದಕ್ಕೂ ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸುವ ಅಪರಾಧವನ್ನು ಎಸಗಿದಂತಾಗುತ್ತಾರೆ.

ಈ ಎರಡೂ ಅಪರಾಧಗಳು ಅಸಂಜ್ಞೇಯ ಅಪರಾಧಗಳಾಗಿರುವುದರಿಂದ ಪೊಲೀಸರು ನೊಂದ ಮಹಿಳೆಯಿಂದ ದೂರು ಪಡೆದು ಸ್ಥಳೀಯ ಮ್ಯಾಜಿಸ್ಟ್ರೇಟರ ಅನುಮತಿಯೊಂದಿಗೆ ಪ್ರಕರಣವನ್ನು ದಾಖಲಿಸಿ ಸಂಸದರ ವಿರುದ್ಧ ತನಿಖೆ ಕೈಗೊಂಡು ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ಅವಕಾಶವಿದೆ.
ಸಿ. ಎಚ್. ಹನುಮಂತರಾಯ, ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.