ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಸದನದ ಘನತೆ, ಗೌರವ ಕುಸಿತ: ಹೊರಟ್ಟಿ ಬೇಸರ

ಶಿಕ್ಷಕನಿಂದ ಸಭಾಪತಿವರೆಗಿನ 44 ವರ್ಷಗಳ ರಾಜಕೀಯ ಪಯಣ
Published : 2 ಜುಲೈ 2024, 21:31 IST
Last Updated : 2 ಜುಲೈ 2024, 21:31 IST
ಫಾಲೋ ಮಾಡಿ
Comments
ಪ್ರ

ಶಾಲಾ ಶಿಕ್ಷಕನಿಂದ ವಿಧಾನ ಪರಿಷತ್ತಿನ ಸಭಾಪತಿಯವರೆಗಿನ 44 ವರ್ಷಗಳ ಪಯಣ ಹೇಗೆ ಅನ್ನಿಸುತ್ತದೆ?

ಶಿಕ್ಷಕರ ಹಿತಕ್ಕಾಗಿ ಆರಂಭಿಸಿದ ಹೋರಾಟ ಇಲ್ಲಿಯವರೆಗೆ ಕರೆತಂದಿದೆ. ಶಿಕ್ಷಕರ ಧ್ವನಿ ಆಗಿರುವೆ. ಪರಿಷತ್‌ ಸದಸ್ಯ, ಸಚಿವ ಮತ್ತು ಸಭಾಪತಿಯಾಗಿ ಅವರ ಹಿತ ಕಾಪಾಡಿರುವೆ. ಸದಸ್ಯನಾಗಿ ಪ್ರವೇಶಿಸಿದ ದಿನ ಭಾವುಕನಾಗಿದ್ದೆ. ಆಗಿನ ಸಭಾಪತಿ ಬಸವರಾಜ ನನಗೆ ಮಾತನಾಡಲು ಅವಕಾಶ ನೀಡಿದರು. ಶಿಕ್ಷಕರ ಸಮಸ್ಯೆ ಬಗ್ಗೆ 10 ನಿಮಿಷ ಮಾತನಾಡಿದೆ. ಎಲ್ಲರೂ ಶ್ಲಾಘಿಸಿದರು. ಇದು ಪವಿತ್ರ ಸ್ಥಳ, ಇಲ್ಲಿ ಪ್ರಾಮಾಣಿಕವಾಗಿ ಇರಲು ನಿರ್ಧರಿಸಿದೆ.

ಪ್ರ

ಅಂದಿನ ಮತ್ತು ಇಂದಿನ ಕಲಾಪಗಳಿಗೂ ವ್ಯತ್ಯಾಸವಿದೆಯೇ?

ಹಿಂದೆ ಪರಿಷತ್‌ನಲ್ಲಿ ರಾಜಗೋಪಾಲ, ಎಸ್‌.ವೆಂಕಟರಾಮಣ, ಎ.ಕೆ. ಸುಬ್ಬಯ್ಯ, ಎಚ್‌.ನರಸಿಂಹಯ್ಯ, ಖಾದ್ರಿ ಶಾಮಣ್ಣರಂತಹ ಘಟನಾಘಟಿಗಳು ಇದ್ದರು. ಅವರ ಮಾತು ಆಲಿಸುವುದೇ ಸುದೈವವಾಗಿತ್ತು. ಆದರೆ, ಈಗ ಮುಖ್ಯಮಂತ್ರಿ ಮಾತನಾಡಿದರೂ ಯಾರೂ ಆಲಿಸಲ್ಲ. ಟೀಕೆ, ಗದ್ದಲಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿದೆ. ಘನತೆ, ಗೌರವ ಕುಸಿದಿದೆ.

ಪ್ರ

ವಿಧಾನ ಪರಿಷತ್ತು ಎಂಬುದು ರಾಜಕೀಯ ಪುನರ್ವಸತಿ ಕಲ್ಪಿಸುವ ತಾಣವಾಗಿದೆ ಎಂಬ ಮಾತಿದೆ. ನಿಜವೇ?

ವಿವಿಧ ಕ್ಷೇತ್ರಗಳ ತಜ್ಞರು, ಚಿಂತಕರು ವಿಧಾನ ಪರಿಷತ್‌ ಪ್ರವೇಶಿಸಬೇಕು ಮತ್ತು ಅವರ ವಿದ್ವತ್ತು ಸದ್ಬಳಕೆ ಆಗಬೇಕು ಎಂಬುದು ಉದ್ದೇಶ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಸೋತವರು ಅಥವಾ ಯಾವುದೋ ಒಂದು ಪುಸ್ತಕ ಬರೆದವರು ಲಾಬಿ ನಡೆಸಿ, ಪರಿಷತ್ತಿನ ಸದಸ್ಯತ್ವ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂಥವರ ಬಗ್ಗೆ ಸರ್ಕಾರ ಮಾಡುವ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದರೂ ಸರ್ಕಾರವು ಅವರನ್ನೇ ನೇಮಿಸುತ್ತದೆ. ಅದರ ಬಗ್ಗೆ ಬೇಸರವಿದೆ.

ಪ್ರ

ಕಲಾಪ ಹಾಗೂ ಸದಸ್ಯರ ನಡವಳಿಕೆ ಸುಧಾರಿಸುವುದು ಹೇಗೆ?

ಕಲಾಪವನ್ನು ಸರಿಯಾದ ಸಮಯಕ್ಕೆ ಆರಂಭಿಸುವುದರ ಜೊತೆಗೆ ಸದಸ್ಯರ ನಡವಳಿಕೆ ಸುಧಾರಿಸಲು ತರಬೇತಿ ಕೊಡಿಸಲು ಪ್ರಯತ್ನಿಸಿದ್ದೇವೆ. ಆದರೆ, ಹಿಂದಿನ ಸದನಗಳ ಘನತೆ, ಗೌರವ ವಾಪಸ್‌ ಬರುವುದಿಲ್ಲ.

ಪ್ರ

ಅವ್ವ ಸೇವಾ ಟ್ರಸ್ಟ್‌ ಸ್ಥಾಪಿಸಿ 12 ವರ್ಷಗಳಿಂದ ನೀವು ಕೈಗೊಂಡಿರುವ ಸಾಮಾಜಿಕ ಕಾರ್ಯಗಳು ಯಾವ್ಯಾವು?

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತೇನೆ. ಬಡವರು, ವೃದ್ಧರಿಗೆ ನೆರವಾಗುತ್ತೇನೆ. ನನ್ನ ಸ್ವಗ್ರಾಮ ಯಡಹಳ್ಳಿಯಲ್ಲಿ ಸರ್ಕಾರಿ ಶಾಲೆ ಆರಂಭಿಸಿದೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ.

ಪ್ರ

ಶಿಕ್ಷಕರಿಗೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?

ನಾನು ಶಿಕ್ಷಣ ಸಚಿವನಾದಾಗ ಶಿಕ್ಷಕರ ನೇಮಕಾತಿ ಜೊತೆಗೆ ಉತ್ತರ ಕರ್ನಾಟಕದ ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿದೆ. ಶಿಕ್ಷಕರ ವರ್ಗಾವಣೆ ನೀತಿ ಸುಧಾರಿಸಿದೆ. ಅನುದಾನಿತ ಶಾಲೆಗಳಿಗೂ ಬಿಸಿಯೂಟ ಯೋಜನೆ ವಿಸ್ತರಿಸಿದೆ. ಕಾನೂನು ಸಚಿವನಾಗಿ ಹುಬ್ಬಳ್ಳಿಯಲ್ಲಿ ರಾಜ್ಯ  ಕಾನೂನು ವಿಶ್ವವಿದ್ಯಾಲಯ ಮತ್ತು ಧಾರವಾಡಕ್ಕೆ ವಿಜ್ಞಾನ ಕೇಂದ್ರ ಮಂಜೂರು ಮಾಡಿದೆ. ಪಂಚಾಯತ್‌ ರಾಜ್‌ ಸಚಿವನಾಗಿ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ಹಂಚಿಕೆ ಮಾಡಿದೆ.

ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT