ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲ ಗೆಹಲೋತ್ ವಿರುದ್ಧ ರಾಷ್ಟ್ರಪತಿಗೆ ದೂರು?

ವಾಪಸ್ ಕರೆಸಿಕೊಳ್ಳುವಂತೆ ಒತ್ತಡ ಹೇರಲು ‘ಕೈ’ ನಾಯಕರ ಚರ್ಚೆ
Published : 22 ಸೆಪ್ಟೆಂಬರ್ 2024, 21:11 IST
Last Updated : 22 ಸೆಪ್ಟೆಂಬರ್ 2024, 21:11 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ತೀವ್ರಗೊಂಡಿರುವ ನಡುವೆಯೇ, ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿ ದೌಪದಿ ಮುರ್ಮು ಮೇಲೆ ಒತ್ತಡ ಹೇರಲು ರಾಜ್ಯ ಕಾಂಗ್ರೆಸ್‌ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ ಬಳಿಕ ಆರಂಭವಾದ ‘ಸರ್ಕಾರ–ರಾಜಭವನ’ ನಡುವಿನ ಮುಸುಕಿನ ಗುದ್ದಾಟ ‘ಕೈ’ ನಾಯಕರನ್ನು ಕೆರಳಿಸಿದೆ. ವಿವಿಧ ಪ್ರಕರಣಗಳ ಮಾಹಿತಿಗಾಗಿ ರಾಜ್ಯಪಾಲರು ಪದೇ ಪದೇ ಪತ್ರ ಬರೆಯುತ್ತಿರುವುದರ ವಿರುದ್ಧ ರಾಷ್ಟ್ರಪತಿಗೆ ದೂರು ನೀಡಲು ಕೂಡಾ ನಾಯಕರು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.

‘ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರು, ಎಚ್‌.ಡಿ. ಕುಮಾರಸ್ವಾಮಿ, ಮುರುಗೇಶ್‌ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ಮೇಲಿನ ಪ್ರಕರಣಗಳಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ತಾರತಮ್ಯ ನೀತಿ’ ಎಂದು ಆರೋಪಿಸಿ ಈಗಾಗಲೇ ರಾಜಭವನ ಚಲೋ ನಡೆಸಿರುವ ಕಾಂಗ್ರೆಸ್‌ ನಾಯಕರು, ರಾಷ್ಟ್ರಪತಿ ಭವನ ಚಲೋ ನಡೆಸುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿದೆ.

ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ ಈಗಾಗಲೇ ಪಕ್ಷದ ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್‌ ವರಿಷ್ಠರು ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ. ಆದರೆ, ಮುಖ್ಯಮಂತ್ರಿಯ ಬೆನ್ನಿಗೆ ನಿಂತಿರುವ ವರಿಷ್ಠರು, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದಾರೆ.

ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ನಡೆಯನ್ನು ಖಂಡಿಸಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದ ರಾಜ್ಯ ಸರ್ಕಾರ, ತನ್ನ ಆಕ್ಷೇಪವನ್ನೂ ವ್ಯಕ್ತಪಡಿಸಿದೆ. ರಾಜಭವನ ಚಲೋ ನಡೆಸಿ ಮನವಿ ಪತ್ರವನ್ನೂ ಸಲ್ಲಿಸಿದೆ. ಆದರೂ, ಸಚಿವರುಗಳ ವಿರುದ್ಧ ತಮಗೆ ಬರುವ ದೂರುಗಳನ್ನು ಉಲ್ಲೇಖಿಸಿ ವಿವರಣೆ ನೀಡುವಂತೆ ರಾಜ್ಯಪಾಲರು ಪತ್ರ ಬರೆಯುತ್ತಿದ್ದಾರೆ. ರಾಜ್ಯಪಾಲರ ವಿರುದ್ಧ ಹೋರಾಟ ನಡೆಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಹೈಕಮಾಂಡ್‌ ನಾಯಕರಿಗೆ ಮನವಿ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡು ಶಕ್ತಿ ಪ್ರದರ್ಶನ ಮಾಡಲು ಮತ್ತು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.

‘ರಾಷ್ಟ್ರಪತಿಯವರನ್ನು ಭೇಟಿ ಮಾಡಿ ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳುವಂತೆ ಒತ್ತಡ ಹೇರಬೇಕೆಂಬ ವಿಚಾರದಲ್ಲಿ ಸಚಿವರು ಒಲವು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಹೋರಾಟ ರೂಪಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಯವರು ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ. ಹೈಕಮಾಂಡ್ ಸೂಚನೆಯ ಬಳಿಕ ಪಕ್ಷದ ರಾಜ್ಯ ಘಟಕದ ನಾಯಕರು ಮುಂದಿನ ಹೋರಾಟದ ರೂಪುರೇಷೆ ತಯಾರಿಸಲಿದ್ದಾರೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT