ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿವೃಷ್ಟಿ | ಪರಿಹಾರ ಕಾರ್ಯಕ್ಕೆ ₹775 ಕೋಟಿ: ಸಚಿವ ಕೃಷ್ಣಬೈರೇಗೌಡ

1,247 ಗ್ರಾಮಪಂಚಾಯಿಗಳಿಗೆ ಕಾರ್ಯಪಡೆ
Published 19 ಜುಲೈ 2024, 16:04 IST
Last Updated 19 ಜುಲೈ 2024, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಅತಿವೃಷ್ಟಿಯಿಂದಾದ ಪರಿಹಾರ ಕಾರ್ಯಕ್ಕೆ ₹775 ಕೋಟಿ ಒದಗಿಸಿದ್ದು, ಇನ್ನೂ ಹೆಚ್ಚುವರಿಯಾಗಿ ₹200 ಕೋಟಿ ನೀಡಲು ಸಿದ್ಧರಿದ್ದೇವೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ವಿಧಾನಸಭೆಯಲ್ಲಿ ಮಳೆ ಮತ್ತು ಪ್ರವಾಹದ ಬಗ್ಗೆ ನಿಯಮ 69 ರಡಿ ಚರ್ಚೆಗೆ ಉತ್ತರ ನೀಡಿದ ಅವರು, ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಅತಿವೃಷ್ಠಿಯಿಂದ ಬಾಧಿತವಾಗುವ 1,247 ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ತಲಾ ಒಂದು ಕಾರ್ಯಪಡೆ ರಚಿಸಲಾಗಿದೆ ಎಂದು ತಿಳಿಸಿದರು.

ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರವಾಹದಿಂದ ಸುಮಾರು 2.30 ಲಕ್ಷ ಮಂದಿ ಬಾಧಿತರಾಗುವ ಸಾಧ್ಯತೆ ಇದ್ದು, ಅಂತಹವನ್ನು ಗುರುತಿಸಲಾಗಿದೆ. ಇವರನ್ನು ಎಂತಹದ್ದೇ ಸಂದರ್ಭದಲ್ಲಾದರೂ ರಕ್ಷಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎನ್‌ಡಿಆರ್‌ಎಫ್‌ನ ಆರು ಜಿಲ್ಲೆಗಳಲ್ಲಿ 5 ತುಕಡಿಗಳನ್ನು ಸಜ್ಜಾಗಿರಿಸಲಾಗಿದೆ. ಸಂತ್ರಸ್ತರಿಗೆ ರಕ್ಷಣೆ ಒದಗಿಸಲು 29 ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈವರೆಗೆ 332 ಮಂದಿ ಸಂತ್ರಸ್ತರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

‘ಈ ವರ್ಷ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ಜೂನ್‌ನಲ್ಲಿ 365 ಮಿ.ಮೀ ವಾಡಿಕೆ ಮಳೆ ಬದಲಿಗೆ 447 ಮಿ.ಮೀ ಮಳೆಯಾಗಿದೆ. ಅಂದರೆ ಶೇ 27 ರಷ್ಟು ಅಧಿಕ ಮಳೆಯಾಗಿದೆ. ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಕಳೆದ ವರ್ಷ ಇದೇ ವೇಳೆಯಲ್ಲಿ ರಾಜ್ಯ ಜಲಾಶಯಗಳಲ್ಲಿ 243 ಟಿಎಂಸಿ ಅಡಿ ನೀರು ಇತ್ತು. ಈ ವರ್ಷ ಈಗ 536 ಟಿಎಂಸಿ ಆಡಿ ನೀರು ಇದೆ. ಪ್ರವಾಹದ ಮಟ್ಟವನ್ನು ಮ್ಯಾಪಿಂಗ್‌ ಮಾಡಲಾಗುತ್ತಿದೆ. ನದಿಯ ನೀರಿನ ಮಟ್ಟದ ಮೇಲೂ ನಿರಂತರ ಗಮನವಿಟ್ಟಿದ್ದೇವೆ’ ಎಂದು ಕೃಷ್ಣಬೈರೇಗೌಡ ಹೇಳಿದರು.

ಕೆಆರ್‌ಎಸ್‌ನಲ್ಲಿ 14,167 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಯಲ್ಲಿ 2 ಲಕ್ಷ ಕ್ಯುಸೆಕ್‌, ಆಲಮಟ್ಟಿ ಅಣೆಕಟ್ಟಿಗೆ 43,478 ಕ್ಯುಸೆಕ್‌, ತುಂಗಭದ್ರಾ ಅಣೆಕಟ್ಟಿಗೆ 1.67 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅತಿವೃಷ್ಠಿಯಿಂದ ಕೆಲವರಿಗೆ ತೊಂದರೆ ಆಗಿದೆ. ಇದರಿಂದ ಅಣೆಕಟ್ಟಿನಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬುತ್ತಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಕೇರಳದ ವಯನಾಡಿನಲ್ಲಿ ಯಲ್ಲೊ ಅಲರ್ಟ್ ಇದ್ದು, ಅಧಿಕ ಮಳೆಯಾಗುತ್ತಿದೆ. ಇದರಿಂದ ಕಬಿನಿಗೆ ಒಳ ಹರಿವು ಹೆಚ್ಚಾಗುತ್ತಿದೆ. ನಾಳೆ ಸಂಜೆ ವೇಳೆಗೆ ಕೆಆರ್‌ಎಸ್‌ ತುಂಬಲಿದೆ. 1 ಲಕ್ಷ ಕ್ಯುಸೆಕ್‌ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. ಸಂಗಮ ಮತ್ತು ಶ್ರೀರಂಗಪಟ್ಟಣದ ಬಳಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ನದಿ ಪಾತ್ರದ ಗ್ರಾಮಗಳ ಜನರನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ಆರಂಭಿಸಲಾಗಿದೆ ಎಂದರು.

ಧರಣಿ ಮಧ್ಯೆ ಚರ್ಚೆಗೆ ಅವಕಾಶ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ವಿಚಾರವಾಗಿ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅತಿವೃಷ್ಠಿ ವಿಷಯದ ಕುರಿತು ಚರ್ಚೆಗೆ ಅವಕಾಶ ನೀಡಿದರು. ಚರ್ಚೆಯಲ್ಲಿ ಕಾಂಗ್ರೆಸ್‌ನ ಎ.ಎಸ್. ಪೊನ್ನಣ್ಣ, ನಯನಾ ಮೋಟಮ್ಮ, ಎಚ್.ಡಿ. ತಮ್ಮಯ್ಯ, ಕೆ.ಎಂ.ಶಿವಲಿಂಗೇಗೌಡ, ಪ್ರದೀಪ್‌ ಈಶ್ವರ್, ಬಸವರಾಜ್‌ ಶಿವಗಂಗಾ, ಎಸ್‌.ಎನ್‌.ನಾರಾಯಣಸ್ವಾಮಿ, ಅನಿಲ್‌ ಚಿಕ್ಕಮಾದು, ಆರ್‌.ವಿ.ದೇಶಪಾಂಡೆ ಅವರು ಮಾತನಾಡಿದರು.

ಕಿವಿಗೆ ಹೂವು ಸಿಕ್ಕಿಸಿಕೊಂಡು ಪ್ರತಿಭಟನೆ

‘ಕಾಂಗ್ರೆಸ್‌ ಸರ್ಕಾರ ಜನರ ಕಿವಿಗೆ ಹೂವು ಇಟ್ಟಿದೆ’ ಎಂದು ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಆಸನದ ಬಳಿ ಅಲಂಕಾರಕ್ಕಾಗಿ ಇಟ್ಟಿದ್ದ ಗುಲಾಬಿ ಹೂವಿನ ಕುಂಡದಿಂದ ಹೂವುಗಳನ್ನೇ ಕಿತ್ತುಕೊಂಡು ತಮ್ಮ ಕಿವಿಗೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

ಬಳಕ ಹೂವಿನ ಕುಂಡಗಳನ್ನು ಅಲ್ಲಿಂದ ತೆರವುಗೊಳಿಸಲಾಯಿತು. ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರು ಮಳೆ ಮತ್ತು ಪ್ರವಾಹದ ಬದಲಾಗಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ವಿರುದ್ಧ ಟೀಕೆಗೆ ತಮ್ಮ ಬಹುತೇಕ ಸಮಯ ಮೀಸಲಿರಿಸಿದರು. ಇದರಿಂದಾಗಿ ಪ್ರದೀಶ್‌ ಈಶ್ವರ್‌ ಕೆ.ಎಂ.ಶಿವಲಿಂಗೇಗೌಡ ಅವರು ಬಿಜೆಪಿ ಸದಸ್ಯರ ವ್ಯಂಗ್ಯ ಭರಿತ ಘೋಷಣೆಗಳಿಗೆ ಆಹಾರವಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT