ಮೈಸೂರು/ ಮಂಗಳೂರು: ಮೈಸೂರು ಭಾಗದ ಜಿಲ್ಲೆಗಳಲ್ಲಿ ಮಳೆ ಹಾಗೂ ಕಬಿನಿ, ಕೆಆರ್ಎಸ್ ಜಲಾಶಯಗಳಿಂದ ನೀರು ಬಿಡುಗಡೆ ಪ್ರಮಾಣವು ಕೊಂಚ ತಗ್ಗಿದ್ದರೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಧಾರಾಕಾರ ಮಳೆಯಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಬಿಟ್ಟು ಬಿಟ್ಟು ಮಳೆ ಸುರಿದಿತ್ತು.

ಕೊಡಗಿನಲ್ಲಿ 37 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಸಂಪಾಜೆಯಲ್ಲಿ ಭೂಕುಸಿತವಾಗಿದೆ. ನಾಪೋಕ್ಲುವಿನ ಮಡಿಕೇರಿ ರಸ್ತೆಯಲ್ಲಿ ನೀರು ಕಡಿಮೆಯಾಗಿದ್ದು, ಸಂಪರ್ಕ ಸಾಧ್ಯವಾಗಿದೆ.

ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ರಕ್ಷಿತಾರಣ್ಯದಲ್ಲಿರುವ ಆನೆ ಕಂದಕ ಹಾಗೂ ಚಿಣ್ಣರ ಹಾಡಿಯ ತೋಡು ತುಂಬಿ ಅಂಚಿನ ಹಾಡಿಗಳ ಗುಡಿಸಲುಗಳಿಗೆ ನೀರು ನುಗ್ಗುತ್ತಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪಟ್ಟಣದ ಬಳಿ ಕಾವೇರಿ ನದಿ ಬುಧವಾರ ರಾತ್ರಿ ಉಕ್ಕಿ ಹರಿದು, ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆಯ ಮೂಲೆ ಕಲ್ಲೊಂದು ಜಾರಿ ಬಿದ್ದಿದೆ. ಪಟ್ಟಣದಿಂದ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ಮುಖ್ಯ ಕೊಂಡಿಯಾಗಿರುವ ಆಂಜನೇಯಸ್ವಾಮಿ ಗುಡಿಯ ಮುಂದಿನ ಡಾಂಬರು ರಸ್ತೆ 50 ಮೀಟರ್ನಷ್ಟು ಕೊಚ್ಚಿಹೋಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲತಾಲ್ಲೂಕಿನ ಆರು ಗ್ರಾಮಗಳ 575ಕ್ಕೂ ಹೆಚ್ಚು ಮಂದಿಯನ್ನು ತೆಪ್ಪಗಳ ಮೂಲಕ ಕಾಳಜಿ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ. ತೆರಳಲು ನಿರಾಕರಿಸಿದವರನ್ನು ಜಿಲ್ಲಾಧಿಕಾರಿ ಶಿಲ್ಪನಾಗ್ ಮತ್ತು ಶಾಸಕ ಎ.ಆರ್.ಕೃಷ್ಣಮೂರ್ತಿ ನೇತೃತ್ವದ ತಂಡ ಮನವೊಲಿಸಿದೆ.ಸತ್ತೆಗಾಲ ಸೇತುವೆ ಕೆಳಗೆ ಬಹಿರ್ದೆಸೆಗೆ ತೆರಳಿದ್ದ ಮಹಮ್ಮದ್ ಮನ್ಸೂರ್ ಎಂಬಾತ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುವಾಗ ತೆಪ್ಪ ಚಲಾಯಿಸುವವರು ರಕ್ಷಿಸಿದರು.

ಮೂಡುಬಿದಿರೆ ತಾಲ್ಲೂಕಿನ ನೆಲ್ಲಿಕಾರು ಗ್ರಾಮದ ಬೋರುಗುಡ್ಡೆಯಲ್ಲಿ ಗಾಳಿ ಮಳೆಗೆ ಮನೆಯ ಚಾವಣಿ ಕುಸಿದು ಗೋಪಿ (65) ವೃದ್ಧೆ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಅವರ ನಾಲ್ವರು ಮಕ್ಕಳು ಚಾವಣಿಗೆ ಟರ್ಪಾಟ್ ಹೊದಿಸಲು ಹೊರಗೆ ಹೋಗಿದ್ದರಿಂದ ಪಾರಾಗಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿ ಸೋಣಂದೂರು ಗ್ರಾಮದ ಮೊದಲೆಯಲ್ಲಿ ಕಿರು ಸೇತುವೆ ಕುಸಿದಿದ್ದು, ಸಬರಬೈಲು–ಪಡಂಗಡಿ ನಡುವೆ ಸಂಪರ್ಕ ಕಡಿತಗೊಂಡಿದೆ. ಮರೋಡಿ ಗ್ರಾಮದ ದೇರಾಜೆ ಬೆಟ್ಟಕ್ಕೆ ಹೋಗುವ ಸೇತುವೆ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗಿದೆ. ಇದೇ ಗ್ರಾಮದ ಪಲಾಗೋಳಿ ಸೇತುವೆಯೂ ಪ್ರವಾಹದಿಂದ ಹಾನಿಗೊಳಗಾಗಿದೆ.

ಫಲ್ಗುಣಿ ನದಿಯ ದಂಡೆಯಲ್ಲಿರುವ ವೇಣೂರು, ಪೊಳಲಿ, ಮೂಲಾರಪಟ್ಣ, ಅಮ್ಮುಂಜೆ ಮುಂತಾದ ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ವೇಣೂರು ಪಟ್ಟಣದ ಚರ್ಚ್ ಬಳಿ ವೇಣೂರು– ಮೂಡುಬಿದಿರೆ ರಸ್ತೆ ಪ್ರವಾಹದಲ್ಲಿ ಮುಳುಗಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ವೇಣೂರು– ನಾರಾವಿ ಮಾರ್ಗದಲ್ಲಿ ಹಲವೆಡೆ ಸೇತುವೆಗಳು ಜಲಾವೃತಗೊಂಡವು. ಗುಡ್ಡ ಕುಸಿತದ ಆತಂಕ ವಿರುವ ಕಾರಣ ಅಂಕಾಜೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಗುರುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ರೆಂಜಾಳದಲ್ಲಿ 32 (ರಾಜ್ಯದಲ್ಲೇ ಗರಿಷ್ಠ), ಸಾಣೂರಿನಲ್ಲಿ 29 ಸೆಂ.ಮೀ ಮಳೆಯಾಗಿದೆ.

ದಾವಣಗೆರೆ ವರದಿ:

ತುಂಗಾ ಮತ್ತು ಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟಿರುವುದ
ರಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ನೀರು ಹರಿಹರದ ಗಂಗಾನಗರದ 23 ಮನೆಗಳಿಗೆ ನುಗ್ಗಿದೆ. ಉಕ್ಕಡಗಾತ್ರಿ ದೇಗುಲದ ಆವರಣ ಮುಳುಗಡೆಯಾಗಿದೆ.

*ಮೈಸೂರು–ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ

*ಕನಕಪುರ ತಾಲ್ಲೂಕಿನ ಸಂಗಮ, ಮೇಕೆದಾಟು ಪ್ರವಾಸಿ ತಾಣಗಳಿಗೆ ಆ. 5ರವರೆಗೆ ಸಾರ್ವಜನಿಕರ ಪ್ರವೇಶ ನಿಷೇಧ

*ಕೊಡಗಿನಲ್ಲಿ 10 ಕಾಳಜಿ ಕೇಂದ್ರಗಳು ಸಕ್ರಿಯ

803 ಮನೆಗಳಿಗೆ ಹಾನಿ

ಹುಬ್ಬಳ್ಳಿ: ಜುಲೈ 1ರಿಂದ ಆಗಸ್ಟ್ 1ರವರೆಗೆ ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ 803 ಮನೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ 99 ಮನೆಗಳು ಪೂರ್ಣಪ್ರಮಾಣದಲ್ಲಿ ಬಿದ್ದಿವೆ. 6 ಮಂದಿ ಮೃತಪಟ್ಟಿದ್ದು, 12 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಪ್ರವಾಹ ಇಳಿದಿದೆ. ಆದರೆ, ಜನ ಇನ್ನೂ ಕಾಳಜಿ ಕೇಂದ್ರದಲ್ಲಿ ಇದ್ದಾರೆ.

ತುಂಗಭದ್ರಾ ನದಿಯ ಒಳ ಹರಿವು ಹೆಚ್ಚಿದ್ದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿ ತಾಲ್ಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ. ನದಿ ತೀರದ ಗ್ರಾಮಗಳ ಕೃಷಿ ಭೂಮಿ ಪ್ರವಾಹದಲ್ಲಿ ಮುಳುಗಡೆಯಾಗಿದೆ. ಸಾವಿರಾರು ಎಕರೆಯಲ್ಲಿನ ಭತ್ತ, ಕಬ್ಬು, ಜೋಳ, ಮೆಕ್ಕೆಜೋಳ, ಅಡಿಕೆ ಬೆಳೆಗಳು ಜಲಾವೃತಗೊಂಡಿವೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕೋಟೆ ಪ್ರದೇಶ ಜಲಾವೃತಗೊಂಡಿದೆ. ಹೊಳೆ ಆಂಜನೇಯ ದೇವಸ್ಥಾನ, ಮಹಾಂಕಾಳಿ ದೇವಸ್ಥಾನ, ನದಿ ಬಳಿಯ ವೆಂಕಟರಮಣ ದೇವಸ್ಥಾನ, ಕೋಟೆ ಜನವಸತಿ ಪ್ರದೇಶಕ್ಕೆ ತೆರಳುವ ಮುಖ್ಯರಸ್ತೆ, ಕುಮಾರರಾಮನ ಹೆಬ್ಬಾಗಿಲಿನವರೆಗೆ ನದಿ ಬಂದಿದೆ. ಮೀನುಗಾರರ ಕೆಲ ಮನೆಗಳಿಗೆ ನೆರೆ ನೀರು ನುಗ್ಗಿದೆ.

ಋಷಿಮುಖ : ನಡುಗಡ್ಡೆಯಲ್ಲಿ ಸಿಲುಕಿದ ಬಾಬಾಗಳು

ಗಂಗಾವತಿ: ಬುಧವಾರ ರಾತ್ರಿ ಹನುಮನಹಳ್ಳಿ ಗ್ರಾಮದ ಬಳಿಯ ಋಷಿಮುಖ ಪರ್ವತದ ನಡುಗಡ್ಡೆಯಲ್ಲಿ ಬಾಬಗಳು ಸೇರಿ ನಾಲ್ವರು ಹಾಗೂ ವಿರುಪಾಪುರಗಡ್ಡೆಯಲ್ಲಿ ಎರಡು ಕುಟುಂಬ ಸೇರಿ ಒಂಬತ್ತು ಜನ ಸಿಲುಕಿಕೊಂಡಿದ್ದಾರೆ.

ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದ್ದು, ಋಷಿಮುಖ ಪರ್ವತದ ಆಂಜನೇಯಸ್ವಾಮಿ, ರಾಮಚಂದ್ರ ದೇವಸ್ಥಾನ ಜಲಾವೃತವಾಗಿದೆ. ಇಲ್ಲಿ ನಿತ್ಯ ಪೂಜೆ ಮಾಡುವ ಉತ್ತರಪ್ರದೇಶದ ಆನಂದಗಿರಿ ಬಾಬಾ, ಹರಿದಾಸ ಬಾಬಾ ಅವರ ನಿವಾಸವಿದೆ. ಸ್ಥಳೀಯರಾದ ನೀಲಪ್ಪ, ಶಿವಯೋಗಿ ಅವರು ಇವರೊಂದಿಗಿದ್ದಾರೆ.

ನಾಲ್ವರು ನಡುಗಡ್ಡೆಯಲ್ಲಿ ಸಿಲುಕಿದ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ, ಆಹಾರ ಪೂರೈಕೆ ಬಗ್ಗೆ ಮಾಹಿತಿ ಕೇಳಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಬಾಬಾಗಳು ತಿಳಿಸಿದ್ದಾರೆ. ವಿರುಪಾಪುರಗಡ್ಡೆಯಲ್ಲೂ 2 ಕುಟುಂಬಗಳು ವಾಸವಿದ್ದು, ಇವರೂ ನಡುಗಡ್ಡೆಯಲ್ಲಿ
ಸಿಲುಕಿಕೊಂಡಿದ್ದಾರೆ. ಇವರ ಬಳಿ ಒಂದು ತಿಂಗಳಿಗೆ ಆಗುವಷ್ಟು ದವಸ-ಧಾನ್ಯಗಳ ದಾಸ್ತಾನು ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಡ್ಯ ವರದಿ:

ಶ್ರೀರಂಗಪಟ್ಟಣ ತಾಲ್ಲೂಕಿನ ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಗಜಾನನ ಸ್ವಾಮೀಜಿ ಮತ್ತು ಇಬ್ಬರು ಮಹಿಳೆಯರನ್ನು ಕರೆತರಲು ತೆರಳಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಇಬ್ಬರು ಅಗ್ನಿಶಾಮಕರು ವಾಪಸ್ ಬರಲಾಗದೆ ಅಲ್ಲಿಯೇ ಸಿಲುಕಿದ್ದಾರೆ.

ದೊಡ್ಡತಪ್ಪಲೆ: ನಿಲ್ಲದ ಭೂಕುಸಿತ

ಹಾಸನ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75 ರಲ್ಲಿ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಗುರುವಾರ ಬೆಳಿಗ್ಗೆ ವಾಹನ ಸಂಚಾರ ಆರಂಭಿಸಿದ ಒಂದು ಗಂಟೆಯಲ್ಲಿಯೇ ಮತ್ತೆ ರಸ್ತೆಗೆ ಮಣ್ಣು ಕುಸಿಯಿತು. ಯಾವುದೇ ಅನಾಹುತ ಸಂಭವಿಸಿಲ್ಲ. ಮತ್ತೆ ಮಣ್ಣು ತೆರವುಗೊಳಿಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ‘ಗಣಿ ಮತ್ತು ಭೂವಿಜ್ಞಾನ ಇಲಾಖೆ ತಜ್ಞರ ನಿರ್ದೇಶನದಂತೆ ಭೂಕುಸಿತವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.