ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA Scam | 4 ತಿಂಗಳಲ್ಲಿ 79 ಎಕರೆಗೆ ಬದಲಿ ನಿವೇಶನ

ಸರ್ಕಾರದ ಆದೇಶ ಉಲ್ಲಂಘಿಸಿ ಹಂಚಿಕೆ: ಮುಡಾ ಅಧ್ಯಕ್ಷ ಕೆ. ಮರೀಗೌಡ ಮೇಲೂ ತೂಗುಗತ್ತಿ
Published 22 ಆಗಸ್ಟ್ 2024, 22:45 IST
Last Updated 22 ಆಗಸ್ಟ್ 2024, 22:45 IST
ಅಕ್ಷರ ಗಾತ್ರ

ಮೈಸೂರು: ಮುಡಾದಲ್ಲಿ ನಿಯಮ ಉಲ್ಲಂಘನೆಯ ಪ್ರಕರಣಗಳು ಮೊಗೆದಷ್ಟೂ ಹೊರಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ಮರೀಗೌಡ ಮುಡಾ ಅಧ್ಯಕ್ಷರಾದ ನಂತರ, ನಾಲ್ಕು ತಿಂಗಳಲ್ಲೇ 79 ಎಕರೆಯಷ್ಟು ಜಮೀನಿಗೆ 50:50 ಅನುಪಾತದಡಿ ಬದಲಿ ನಿವೇಶನ ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ.

‘ಈ ಅನುಪಾತದಡಿ ಒಂದು ಬದಲಿ ನಿವೇಶನ ಹಂಚಿಕೆ ಮಾಡಬಾರದು’ ಎಂದು ರಾಜ್ಯ ಸರ್ಕಾರ 2023ರ ಅಕ್ಟೋಬರ್‌ನಲ್ಲೇ ಆದೇಶಿಸಿತ್ತು.

2024ರ ಮಾರ್ಚ್‌ನಿಂದ ಜೂನ್‌ ಅಂತ್ಯದವರೆಗೆ 8.87 ಲಕ್ಷ ಚದರ ಅಡಿ ವಿಸ್ತೀರ್ಣದ ಬದಲಿ ನಿವೇಶನಗಳನ್ನು ಪ್ರತಿಷ್ಠಿತ ಬಡಾವಣೆಗಳಲ್ಲಿ ಹಂಚಲಾಗಿದೆ. ಅದರ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಅಧ್ಯಕ್ಷರಿಂದ ಪತ್ರ

‘50:50 ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ಲೋ‍ಪವಾಗಿದ್ದು, ಅದನ್ನು ತಡೆಹಿಡಿಯಿರಿ’ ಎಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದ ಮರೀಗೌಡರು, ಇನ್ನೂ ಕೆಲವು ಪ್ರಕರಣಗಳಲ್ಲಿ ನಿವೇಶನ ಹಂಚಿಕೆ ಮಾಡುವಂತೆ ಸೂಚಿಸಿದ್ದಾರೆ.

ಅಕ್ರಮ ಎಸಗಿದ ಸಂದರ್ಭ ಆಯುಕ್ತರನ್ನು ಎಚ್ಚರಿಸುವ ಪ್ರಯತ್ನವನ್ನು ಅಧ್ಯಕ್ಷರು ಮಾಡಬೇಕಿತ್ತು. ಆದರೆ ಅವರೇ ನಾಲ್ಕಾರು ಪ್ರಕರಣಗಳಲ್ಲಿ ನಿವೇಶನ ವಿತರಣೆಗೆ ಸೂಚಿಸಿದ್ದಾರೆ. ಇದು ಅಕ್ರಮಕ್ಕೆ ಪುರಾವೆಯಾಗಿದೆ. ಹಂಚಿಕೆ ವ್ಯವಹಾರ ಕುದುರದ ಪ್ರಕರಣಗಳಲ್ಲಿ ಒಬ್ಬರಿಗೊಬ್ಬರು ಪತ್ರ ಬರೆದು ಮಂಜೂರಾತಿಯನ್ನು ತಡೆ ಹಿಡಿಯುವುದು ಸಾಮಾನ್ಯವಾಗಿದೆ ಎಂಬ ಆರೋಪವೂ ಇದೆ.

ಶಾಸಕರಿಂದ ಪತ್ರ

ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಜೂನ್‌ 17ರಂದು ಆಯುಕ್ತರಿಗೆ ಪತ್ರ ಬರೆದಿದ್ದು, 9 ಪ್ರಕರಣಗಳಲ್ಲಿ ಬದಲಿ ನಿವೇಶನ ಹಂಚಿಕೆಯನ್ನು ತಡೆಹಿಡಿಯುವಂತೆ ಕೋರಿದ್ದಾರೆ.

‘ರೈತರಲ್ಲದವರು 50:50 ಅನುಪಾತದಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸುತ್ತಿದ್ದು, ಅಧಿಕಾರಿಗಳು ದಾಖಲೆ ಪರಿಶೀಲಿಸದೆಯೇ ನಿವೇಶನ ಹಂಚಿಕೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಬದಲಿ ನಿವೇಶನಗಳ ಹಂಚಿಕೆ ತಡೆ ಹಿಡಿಯಬೇಕು’ ಎಂದು ಒತ್ತಾಯಿಸಿದ್ದರು. 

‘ಆಯುಕ್ತರ ಅಮಾನತು ಕ್ರಮವೂ ಇಲ್ಲ’

ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮದ ದಾಖಲೆಗಳು ಬಹಿರಂಗಗೊಂಡಿದ್ದರೂ, ಅದಕ್ಕೆ ಕಾರಣರಾದ ಆಯುಕ್ತರು, ಅಧಿಕಾರಿಗಳನ್ನು ಇನ್ನೂ ಅಮಾನತು ಗೊಳಿಸದೇ ಇರುವುದು ಕೂಡ ಅನುಮಾನಗಳಿಗೆ ಕಾರಣವಾಗಿದೆ.

ಮತ್ತೊಂದೆಡೆ, ಮುಡಾ ಅಧ್ಯಕ್ಷ ಮರೀಗೌಡ ಮೇಲೆ ಸಿಟ್ಟು ಇದ್ದರೂ ಸಿ.ಎಂ ಸಿದ್ದರಾಮಯ್ಯ ಕ್ರಮಕೈಗೊಳ್ಳದೇ ಸುಮ್ಮನಿದ್ದಾರೆ. ಸ್ವಪಕ್ಷೀಯರಿಂದಲೇ ಪ್ರತಿರೋಧವಿದ್ದರೂ ಸುಮ್ಮನಾಗಿರುವುದು ಕೂಡ ಸಂದೇಹ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT