ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಮೇಶ್ವರ– ಡಿಕೆಶಿ ಚರ್ಚೆ: ನಾನಾ ವ್ಯಾಖ್ಯಾನ

Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುತ್ತಿಕೊಳ್ಳುತ್ತಿರುವ ಬೆನ್ನಲ್ಲೆ, ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಜಿ. ಪರಮೇಶ್ವರ ಚರ್ಚೆ ನಡೆಸಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಖುದ್ದು ಡಿ.ಕೆ. ಶಿವಕುಮಾರ್‌ ಅವರೇ ಪರಮೇಶ್ವರ ಅವರ ಮನೆಗೆ ಸೋಮವಾರ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಸಮಯ ಗೌಪ್ಯವಾಗಿ ಚರ್ಚೆ ನಡೆಸಿದರು. ಆದರೆ, ಇಬ್ಬರು ಸಚಿವರೂ, ‘ನಾವು ಎತ್ತಿನಹೊಳೆ ಯೋಜನೆ ಅನುಷ್ಠಾನ ವಿಚಾರವಾಗಿ ಚರ್ಚಿಸಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದಿದ್ದಾರೆ.

‘ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಿದ್ದಾರೆ. ನಾವು ಮಾತಾಡಿಕೊಳ್ಳದಿದ್ದರೆ ಇನ್ಯಾರು ಮಾತಾಡಿಕೊಳ್ಳಬೇಕು? ನಮ್ಮ ಸಮಸ್ಯೆಗಳ ಬಗ್ಗೆ ನಾವೇ ಚರ್ಚೆ ಮಾಡಬೇಕು. ನಾನು‌ ಮತ್ತು ಶಿವಕುಮಾರ್ ಅವರು ಹೊಸದಾಗಿ ಭೇಟಿ ಆಗುತ್ತಿದ್ದೇವೆಯೇ? ಎಂದು ಪರಮೇಶ್ವರ ಹೇಳಿದ್ದಾರೆ.

‘ನೀವಿಬ್ಬರೂ ರಾಜಕೀಯದ ಕುರಿತು ಚರ್ಚೆ ಮಾಡಿದ್ದೀರಾ?’ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ನಿಮಗೆ (ಮಾಧ್ಯಮ) ರಾಜಕೀಯ ಬಿಟ್ಟು ಬೇರೆ ಗೊತ್ತಿಲ್ಲವೇ? ರಾಜಕೀಯ ಕುರಿತು ಪ್ರತಿದಿನವೂ ಮಾತನಾಡುತ್ತಲೇ ಇರುತ್ತೇವೆ. ಜನ ನಮಗೆ ಅಧಿಕಾರ ನೀಡಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸುವತ್ತ ಮತ್ತು ಪ್ರಣಾಳಿಕೆಯಲ್ಲಿನ ಆಶ್ವಾಸನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ ನೀಡುತ್ತೇವೆ’ ಎಂದಿದ್ದಾರೆ.

ಮುಖ್ಯಮಂತ್ರಿ ಸ್ಥಾನ– ಚರ್ಚೆ?:

‘ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾದ ಈ ಇಬ್ಬರು ನಾಯಕರು, ಮುಡಾ ಪ್ರಕರಣದಲ್ಲಿನ ಸದ್ಯದ ಬೆಳವಣಿಗೆಗಳು, ಬೀರಬಹುದಾದ ರಾಜಕೀಯ ಸೂಕ್ಷ್ಮ ಪರಿಣಾಮಗಳು ಮತ್ತು ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಕೆಳಗಿಳಿಯುವ ಸಂದರ್ಭ ಬಂದರೆ ಹೈಕಮಾಂಡ್‌ ಮುಂದೆ ವ್ಯಕ್ತಪಡಿಸಬೇಕಾದ ನಿಲುವಿನ ಬಗ್ಗೆ ಇಬ್ಬರೂ ವಿಚಾರ ವಿನಿಮಯ ನಡೆಸಿದ್ದಾರೆ’ ಎಂದೂ ಗೊತ್ತಾಗಿದೆ.

ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಎದುರಾದರೆ ಸಿದ್ದರಾಮಯ್ಯ ಅವರು ವ್ಯಕ್ತಪಡಿಸುವ ಅಭಿಪ್ರಾಯವೂ ಮುಖ್ಯವಾಗುತ್ತದೆ. ಸತೀಶ ಜಾರಕಿಹೊಳಿ ಸೇರಿದಂತೆ ಕೆಲವರು ಈಗಾಗಲೇ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ರಾಜಕೀಯ ಸಾಧ್ಯಾಸಾಧ್ಯತೆಗಳನ್ನು‌ ಪರಿಗಣಿಸಿಯೇ ಹೈಕಮಾಂಡ್‌ ತೀರ್ಮಾನಕ್ಕೆ ಬರುತ್ತದೆ. ಆಗ, ಸಹಮತದ ಅಭಿಪ್ರಾಯ ವ್ಯಕ್ತಪಡಿಸುವ ಬಗ್ಗೆ ಇಬ್ಬರೂ ಸಮಾಲೋಚನೆ ನಡೆಸಿದ್ದಾರೆ ಎಂದೂ ಹೇಳಲಾಗಿದೆ.

ಜೊತೆಗೆ, ನಿಗಮ ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡುವ ಬಗ್ಗೆಯೂ ಇಬ್ಬರೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT