‘ಆರ್ಥಿಕ ಸಾಮಾಜಿಕ ಪ್ರಜಾಪ್ರಭುತ್ವ ಬೇಕಿದೆ’
‘ಈವರೆಗಿನ 17 ಲೋಕಸಭಾ ಚುನಾವಣೆಗಳನ್ನು ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳ ಮೂಲಕವೇ ಎದುರಿಸಲಾಗಿದೆ. ಈ ಬಾರಿಯ 18ನೇ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳೂ ಮತದಾನವನ್ನು ತುಸು ಪ್ರಭಾವಿಸಿದವು’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದರು. ‘ನಮ್ಮಲ್ಲಿ ಈಗ ರಾಜಕೀಯ ಪ್ರಜಾಪ್ರಭುತ್ವ ಮಾತ್ರವೇ ಇದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರ್ಥಿಕ ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿಸುವ ಕೆಲಸ ಆಗಬೇಕಿದೆ. ಕೃಷಿ ಬಿಕ್ಕಟ್ಟು ಕೈಗಾರಿಕಾ ಬಿಕ್ಕಟ್ಟು ನಿರುದ್ಯೋಗ ಸಮಸ್ಯೆ ಪರಿಶಿಷ್ಟರ ಮೇಲಿನ ದೌರ್ಜನ್ಯ ಮೊದಲಾದ ವಿಷಯಗಳನ್ನು ಚುನಾವಣಾ ರಾಜಕಾರಣದ ಜತೆ ಸಂಯೋಜಿಸಬೇಕು’ ಎಂದರು. ‘ವಿರೋಧ ಪಕ್ಷಗಳ ಒಕ್ಕೂಟವು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಇದರಿಂದ ಮತದಾರರ ನಂಬಿಕೆ ಗಳಿಸಲು ಸಾಧ್ಯವಾಗುತ್ತದೆ. ಇದರಿಂದ ಗೆಲುವಿನ ಸಾಧ್ಯತೆ ಹೆಚ್ಚಾಗುತ್ತದೆ’ ಎಂದರು.