ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವನ್ಯಜೀವಿ ಧಾಮದಲ್ಲಿ ಜಲವಿದ್ಯುತ್‌ ಯೋಜನೆ: ಪಿಸಿಸಿಎಫ್‌ಗೆ ಪ್ರಸ್ತಾವ

ವಾರಾಹಿ ಪಂಪ್ಡ್‌ ಸ್ಟೋರೇಜ್‌ ಪ್ರಾಜೆಕ್ಟ್‌ಗಾಗಿ ಪಿಸಿಸಿಎಫ್‌ಗೆ ಪ್ರಸ್ತಾವ
Published : 6 ಅಕ್ಟೋಬರ್ 2024, 0:13 IST
Last Updated : 6 ಅಕ್ಟೋಬರ್ 2024, 0:13 IST
ಫಾಲೋ ಮಾಡಿ
Comments

ಬೆಂಗಳೂರು: ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ವನ್ಯಜೀವಿ ಧಾಮದೊಳಗೇ ಜಲವಿದ್ಯುತ್‌ ಯೋಜನೆಯೊಂದು ತಲೆ ಎತ್ತಲಿದೆ. ಇದಕ್ಕಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯಲು ಪ್ರಯತ್ನವೂ ಆರಂಭವಾಗಿದೆ.

‘ವಾರಾಹಿ ಪಂಪ್ಡ್‌ ಸ್ಟೋರೇಜ್’ ಸ್ಥಾಪನೆಗೊಳ್ಳಲಿರುವ ಹೊಸ ಜಲ ವಿದ್ಯುತ್ ಯೋಜನೆ. 1,500 ಮೆ.ವಾ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಮೂಕಾಂಬಿಕಾ ಮತ್ತು ಸೋಮೇಶ್ವರ ವನ್ಯಜೀವಿ ಧಾಮಗಳು, ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ ಮಧ್ಯದಲ್ಲೇ ಯೋಜನೆ ತಲೆ ಎತ್ತಲಿದೆ.

ಈಗಾಗಲೇ ‘ವಾರಾಹಿ ಪಂಪ್ಡ್‌ ಸ್ಟೋರೇಜ್ ವಿದ್ಯುತ್‌ ಯೋಜನೆ’ಯ ಪ್ರಸ್ತಾವ ಮಂಡಳಿಗೆ ಸಲ್ಲಿಕೆಯಾಗಿದೆ. ನಾಗರಿಕರು ಮತ್ತು ಪರಿಸರವಾದಿಗಳ ವಿರೋಧದ ನಡುವೆಯೂ ‘ಶರಾವತಿ ಪಂಪ್ಡ್‌ ಸ್ಟೋರೇಜ್ ವಿದ್ಯುತ್‌ ಯೋಜನೆ’ಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಈ ಯೋಜನೆಗೆ ಇತ್ತೀಚೆಗಷ್ಟೇ ಕೇಂದ್ರ ಇಂಧನ ಸಚಿವಾಲಯ ಒಪ್ಪಿಗೆ ನೀಡಿತ್ತು. ಅದೇ ಮಾದರಿಯ ಮತ್ತೊಂದು ಯೋಜನೆಗೆ ಹಸಿರು ನಿಶಾನೆ ನೀಡುವ ತಯಾರಿ ನಡೆದಿದೆ. ಯೋಜನೆ ಅನುಷ್ಠಾನಗೊಂಡರೆ ಸುಮಾರು 82 ಹೆಕ್ಟೇರ್‌ ಅರಣ್ಯಭೂಮಿಗೆ ಹಾನಿಯಾಗಲಿದೆ.

ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾಣಿ ಜಲಾಶಯದಿಂದ 26 ಕಿ.ಮೀ ದೂರದಲ್ಲಿ ವಾರಾಹಿ ಭೂಗರ್ಭ ವಿದ್ಯುದಾಗಾರವು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇದು 460 ಮೆ.ವಾ ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ. ಘಟ್ಟದ ತಗ್ಗಿನಲ್ಲಿ ವಿಎಚ್‌ಇಪಿ ಟೇಲ್‌ರೇಸ್‌ ಕೂಡ ಅಲ್ಪ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ.

ಹೊಸ ಯೋಜನೆಯ ಅಂದಾಜು ವೆಚ್ಚ ₹4,267.80 ಕೋಟಿ. ಯೋಜನೆಯನ್ನು ಎನ್‌ಟಿಪಿಸಿ ಅಂಗಸಂಸ್ಥೆಯಾದ ಟಿಎಚ್‌ಡಿಸಿಸಿ ಇಂಡಿಯಾ ಲಿಮಿಟೆಡ್‌ ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ಜತೆ ಸೇರಿ ಕಾರ್ಯಗತಗೊಳಿಸಲು ಉದ್ದೇಶಿಸಿದೆ. ಈ ಬಗ್ಗೆ ಕರ್ನಾಟಕ ವಿದ್ಯುತ್‌ ನಿಗಮವು 184 ಪುಟಗಳ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿದೆ. ಯೋಜನೆ ಕಾರ್ಯಗತಗೊಳಿಸಬೇಕಾದ ಜಾಗದ ಸರ್ವೇಗೆ ಅನುಮತಿ ಕೋರಿ ಟಿಎಚ್‌ಡಿಸಿಸಿ ರಾಜ್ಯದ ಪಿಸಿಸಿಎಫ್‌ (ವನ್ಯಜೀವಿ) ಅವರಿಗೆ ಪತ್ರ ಬರೆದಿದೆ.

ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯದ ವನ್ಯಜೀವಿ ಮಂಡಳಿಗಳ ಅನುಮೋದನೆ ಅಗತ್ಯವಿದೆ. ಈ ಪ್ರಸ್ತಾವವು 8ರಂದು ನಡೆಯುವ ರಾಜ್ಯ ವನ್ಯಜೀವಿ ಮಂಡಳಿಯ ಕಾರ್ಯಸೂಚಿ ಪಟ್ಟಿಯಲ್ಲಿದೆ. ಯಾವುದೇ ‘ವಿಘ್ನ’ಗಳು ಎದುರಾಗದಿದ್ದರೆ, 2029ರಲ್ಲಿ ಕಾಮಗಾರಿ ಆರಂಭಗೊಳಿಸಿ, 2030ರ ವೇಳೆಗೆ ಕಾಮಗಾರಿ ಮುಗಿಸಲಿದೆ. 2033 ರಿಂದ ವಿದ್ಯುತ್‌ ಉತ್ಪಾದನೆ ಆರಂಭಗೊಳ್ಳಲಿದೆ.

‘ಕರ್ನಾಟಕದ ವಿದ್ಯುತ್‌ ಕೊರತೆಯನ್ನು ನೀಗಿಸುವಲ್ಲಿ ಇದು ಮಹತ್ವದ ಯೋಜನೆ ಎನ್ನಲಾಗಿದೆ.
2026–27ರ ವೇಳೆಗೆ ರಾಜ್ಯದ ವಿದ್ಯುತ್‌ ಬೇಡಿಕೆ ವಿಪರೀತ ಏರಲಿದೆ. ಈ ಯೋಜನೆಯಿಂದ ನಿರಂತರ ವಿದ್ಯುತ್‌ ಪೂರೈಸಬಹುದು. ಗ್ರಿಡ್‌ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ’ ಎಂದು ಟಿಎಚ್‌ಡಿಸಿ ಇಂಡಿಯಾದ ಜನರಲ್‌ ಮ್ಯಾನೇಜರ್‌ ಅಮರ್‌ದೀಪ್ ಕೇಂದ್ರ ಮತ್ತು ರಾಜ್ಯಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲಿ ತಿಳಿಸಿದ್ದಾರೆ.

‘ವಾರಾಹಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಸಂಬಂಧ ಪವರ್‌ ರೀಸರ್ಚ್‌ ಅಂಡ್‌ ಡೆವಲಪ್‌ಮೆಂಟ್‌ ಕನ್ಸಲ್ಟಂಟ್‌ (ಪಿಆರ್‌ಡಿಸಿ) ಮತ್ತು ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌ (ನಿಯಾಸ್‌) ಅಧ್ಯಯನ ನಡೆಸಿದ್ದು, ಭವಿಷ್ಯದ ವಿದ್ಯುತ್ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಈ ಯೋಜನೆ ಅಗತ್ಯ ಎಂದು ಪ್ರತಿಪಾದಿಸಿವೆ’ ಎಂದು ಅವರು ಹೇಳಿದ್ದಾರೆ.

ಹುಲಿಕಲ್‌ನಿಂದ ವಾರಾಹಿ ಟೇಲ್‌ರೇಸ್‌ಗೆ ಸುರಂಗ
ಮಾಣಿ, ಪಿಕಪ್ ಡ್ಯಾಂ ಮತ್ತು ಹುಲಿಕಲ್‌ ಫೋರ್ಬೆ ಅಣೆಕಟ್ಟೆ ನೀರನ್ನು ಯೋಜನೆಗೆ ಬಳಸಿಕೊಳ್ಳಲಾಗುವುದು. ಇದಕ್ಕಾಗಿ ಕೆಳ ಭಾಗದಲ್ಲಿ 7.7 ದಶಲಕ್ಷ ಘನಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಲಾಗುವುದು. ಈ ಯೋಜನೆಗೆ ಮೇಲ್ಭಾಗದಲ್ಲಿರುವ ಹುಲಿಕಲ್‌ ಪಿಕಪ್‌ ಜಲಾಶಯವನ್ನು ಬಳಸಿ ಕೊಳ್ಳಲಾಗುವುದು. ಕೆಳಭಾಗದಲ್ಲಿ ಈಗ ಇರುವ ವಿಎಚ್‌ಇಪಿ ಟೇಲ್‌ರೇಸ್‌ ಸಮೀಪ ಹೊಸದಾಗಿ ಜಲಾಶಯವನ್ನು ನಿರ್ಮಿಸಲಾಗುವುದು. ಮೇಲಿನ ತುದಿಯಿಂದ ಕೆಳಗಿನ ಭಾಗಕ್ಕೆ ಒಟ್ಟು 3 ಕಿ.ಮೀ ದೂರವಿದೆ. ಈ ಮೂರು ಕಿ.ಮೀ ಭೂಗರ್ಭದೊಳಗೆ ಸುರಂಗ ನಿರ್ಮಿಸಲಾಗುವುದು.
ಪಂಪ್ಡ್‌ ಸ್ಟೋರೇಜ್‌ ಕಾರ್ಯವೈಖರಿ ಹೇಗೆ?
‘ಪಂಪ್ಡ್‌ ಸ್ಟೋರೇಜ್‌ ಪ್ರಾಜೆಕ್ಟ್‌’ ಯೋಜನೆಗಳಲ್ಲಿ ಎರಡು ಜಲಾಶಯಗಳ ನಡುವೆ ಭೂಗರ್ಭದೊಳಗೆ ಸುರಂಗ ಕೊರೆದು, ಅದರೊಳಗೆ ಜಲವಿದ್ಯುತ್‌ ಉತ್ಪಾದನಾ ಘಟಕಗಳನ್ನು ಅಳವಡಿಸಿ, ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಇದಕ್ಕೆ ಒಂದು ಜಲಾಶಯ ಎತ್ತರ ಪ್ರದೇಶದಲ್ಲಿದ್ದು, ಮತ್ತೊಂದು ಜಲಾಶಯ ಕೆಳ ಭಾಗದಲ್ಲಿರಬೇಕು. ಸುರಂಗದ ಮೂಲಕ ಎರಡೂ ಜಲಾಶಯಗಳ ಮಧ್ಯೆ ನೀರು ರಭಸದಿಂದ ಹರಿಯುವಂತೆ ಮಾಡಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ವಿದ್ಯುತ್‌ ಬೇಡಿಕೆ ಕಡಿಮೆ ಇದ್ದಾಗ ಅಂದರೆ, ರಾತ್ರಿ ಅಥವಾ ವಾರಾಂತ್ಯದಲ್ಲಿ ಅಧಿಕ ವಿದ್ಯುತ್‌ ಬಳಸಿ ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರು ಪಂಪ್‌ ಮಾಡಲಾಗುತ್ತದೆ. ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರನ್ನೆತ್ತಲು ಟರ್ಬೈನ್‌ ಪಂಪ್‌ನಂತೆ ಕೆಲಸ ಮಾಡುತ್ತದೆ. ವಿದ್ಯುತ್‌ ಬೇಡಿಕೆ ಅಧಿಕ ಇದ್ದಾಗ ಮೇಲೆ ಸಂಗ್ರಹಿಸಿದ ನೀರನ್ನು ಟರ್ಬೈನ್‌ ಮೂಲಕ ಬಿಡುಗಡೆ ಮಾಡಲಾಗುತ್ತದೆ. ‘ಪಂಪ್ಡ್‌ ಸ್ಟೋರೇಜ್‌ ಘಟಕ’ವು ಜಲ ವಿದ್ಯುತ್‌ ಘಟಕದಂತೆ ಕಾರ್ಯ ನಿರ್ವಹಿಸುತ್ತದೆ. ಬಳಸಿದ ನೀರನ್ನೇ ಮತ್ತೆ ಮತ್ತೆ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT