‘ಅರೆ… ಎಲ್ಲಿಯ 1932 ಮತ್ತು ಎಲ್ಲಿಯ 2022… ನಡುವೆ 90 ವರ್ಷಗಳು ಕಳೆದುಹೋದವೇ? ಇಲ್ಲ ಕಳೆದಿಲ್ಲ… ಇದು ಸಂಗೀತ, ಗುರುಭಕ್ತಿ, ಸಾಹಿತ್ಯ, ಚಿತ್ರಕಲೆ, ಮೋಟರ್ ಬೈಕ್ ರಿಪೇರಿ, ಕೋಳಿ ಸಾಕಾಣಿಕೆ, ಅಡುಗೆ... ಹೀಗೆ ಹತ್ತು ಹಲವು ಆಸಕ್ತಿಗಳು ಒಳಚೈತನ್ಯವನ್ನು ಪೊರೆಯುತ್ತ ಕೂಡಿದ, ಕಟ್ಟಿದ ಬದುಕು.

ಈ ಸರೋದ್ ತಂತಿಗಳಿಗೆ ತುಕ್ಕು ಹಿಡಿಯುವುದಿಲ್ಲ. ಸ್ವರಗಳು ಬೇಸುರಾ ಆಗುವುದಿಲ್ಲ. ಬೆರಳುಗಳು ರಾಗವನ್ನು ಮರೆಯುವುದಿಲ್ಲ. ಬೆರಳಿನ ಲಾಸ್ಯದೊಳು ರಾಗಗಳು ದಣಿಯುವುದಿಲ್ಲ. ಪರಿಚಿತ ರಾಗಗಳೊಳಗೆ ಮತ್ತೇನೋ ತಡಕಾಟ, ಹುಡುಕಾಟ ಮುಗಿಯುವುದಿಲ್ಲ. ಸ್ವರಗಳ ಬೆನ್ನುಹತ್ತಿದ ಮನಸ್ಸಿಗೆ ವಯಸ್ಸಿನ ಹಂಗಿಲ್ಲ. ಮಾತುಗಳು ಚೂಪು ಲಯವನ್ನು ಕಳೆದುಕೊಳ್ಳುವುದಿಲ್ಲ. ಎಂದೋ ಕೇಳಿದ ಕರೀಂಖಾನರ ಗಾಯನವೂ ಜೀವಕೊರಳಿನೊಳು ಉಸಿರುಪಡೆವುದು. ಮತ್ತೆ ಇಲ್ಲೀಗ ಸರೋದ್ ನಾದವನ್ನಾಲಿಸುತ್ತ ಕಾಲವೂ ಮೆತ್ತಗೆ ನಡೆಯುವುದು...’

ನಮ್ಮ ನಡುವಿನ ಸಾಕ್ಷಿಪ್ರಜ್ಞೆಯಂತಿದ್ದ ಪಂಡಿತ್ ರಾಜೀವ ತಾರಾನಾಥ ಅವರಿಗೆ ತೊಂಬತ್ತು ವರ್ಷ ತುಂಬಿದಾಗ ‘ಪ್ರಜಾವಾಣಿ’ಗೆ ನಾನು ಬರೆದಿದ್ದ ಲೇಖನದಲ್ಲಿನ ಸಾಲುಗಳಿವು. ಈಗ ಆ ಸಾಲುಗಳ ಮೇಲೆ ಕಣ್ಣಾಡಿಸಲು ಹೋದರೆ ಅವುಗಳು ಮಸುಕು ಮಸುಕಾಗಿ ಕೊನೆಗೆ ಕಾಣದಂತೆ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಬೆರಳುಗಳಿಗೆ ದಣಿವಿಲ್ಲದೆ ಸರೋದ್ ನುಡಿಸುತ್ತಿದ್ದ, ರಾಗಗಳೇ ಮೈವೆತ್ತ ಮೂರ್ತಿಯಾಗಿದ್ದ, ವಯಸ್ಸಿನ ಹಂಗಿಲ್ಲದೆ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಆ ಮಹಾನ್ ವ್ಯಕ್ತಿತ್ವ ಈಗ ನಮ್ಮ ನಡುವೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲೇ ಆಗುತ್ತಿಲ್ಲ.

ನಮ್ಮ ರಾಜೀವರು ಎಂತಹ ಪ್ರಖರ ಚಿಂತಕರಾಗಿದ್ದರು ಗೊತ್ತೇ? ಕೆಲವು ವರ್ಷಗಳ ಹಿಂದೆ ನಗರ ನಕ್ಸಲರು ಎಂಬ ಹೆಸರಿನಲ್ಲಿ ಬಂಧನಗಳು ಹೆಚ್ಚಾದಾಗ ಯಾವುದೇ ಭಯವಿಲ್ಲದೆ ಅವರು ಆಡಿದ ಮಾತುಗಳನ್ನು ನೋಡಿ: ‘ಅರ್ಬನ್ ನಕ್ಸಲರು– ಇದೊಂದು ಕಾರಣವೋ? ನೆಪವೋ? ಕೋರ್ಟು ಕೇಳಿತು– ‘ನೀವು ಯಾವ ಕಾರಣಕ್ಕೆ ಬಂಧಿಸಿದಿರಿ’ ಅಂತ. ಕಾರಣವೇ ಇರಲಿಲ್ಲ. ಜೈಲಿಗೆ ಹಾಕಬೇಡಿ, ಮನೇ ಒಳಗಿಡಿ ಅಂತ ಕೋರ್ಟು ಹೇಳಿತು. ನಮ್ಮಲ್ಲಿ ಇಲ್ಲಿಯವರೆಗೆ ನ್ಯಾಯಸಂಸ್ಥೆಗಳು ಸಂಪೂರ್ಣ ಕೊಳೆಯಾಗಿಲ್ಲ ಅನ್ನೋದೇ ಸಮಾಧಾನ. ತಮ್ಮ ವಿವೇಚನೆಯನ್ನು ಉಪಯೋಗಿಸ್ತವೆ. ಈಗ ಆಗಿರೋದು, ಈ ಜನರ ದಸ್ತಗಿರಿ, ಬಂಧನ ನೋಡಿ ನಂಗೆ ಆಶ್ಚರ್ಯವೇನೂ ಆಗಿಲ್ಲ. ಈಗ ದೇಶವನ್ನೇ ಆಳ್ತಾ ಇರೋದು ತರಹೇವಾರಿ ದ್ವೇಷ. ಪ್ರತಿಯೊಂದು ಮಟ್ಟದಲ್ಲಿಯೂ ದ್ವೇಷ, ಕ್ರೌರ್ಯ. ಸಾಂಘಿಕ ಕ್ರೌರ್ಯ’. ಹೀಗೆ ಜನಸಾಮಾನ್ಯರ ಅಭಿಪ್ರಾಯವನ್ನು ನಿರ್ಬಿಢೆಯಿಂದ ಹೇಳಬಲ್ಲ ಸಾಕ್ಷಿಪ್ರಜ್ಞೆ ಈಗ ನಮ್ಮ ನಡುವೆ ಮತ್ತೊಬ್ಬರು ಯಾರಿದ್ದಾರೆ? ಈ ಸಂಗೀತ ಸಾಮ್ರಾಟ, ಸಂಗೀತ ಕಲಾವಿದ ಮಾತ್ರ ಆಗಿರಲಿಲ್ಲ. ಸಾಂಸ್ಕೃತಿಕ ಚಿಂತಕರಾಗಿ ಕೂಡ ಸೀಮಿತವಾಗಿ ಉಳಿಯಲಿಲ್ಲ. ಇಡೀ ಸಮಾಜದ ಒಳಿತಿಗಾಗಿ ಮಿಡಿಯುತ್ತಿದ್ದ ಸಮಾಜಮುಖಿಯಾಗಿ ಬೆಳೆದಿದ್ದರು. ‘ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿ ಕಲಾಪ್ರಕಾರಗಳು ಮತ್ತು ಸಾಹಿತ್ಯ ಎಲ್ಲಿ ಜೀವಂತವಾಗಿರುತ್ತದೆಯೋ ಅಲ್ಲಿಯ ಸಮಾಜವೂ ಜೀವಂತವಾಗಿರುತ್ತದೆ’ ಎಂದು ಪದೇ ಪದೇ ಹೇಳುತ್ತಿದ್ದರು. ತಮ್ಮ ಗುರು ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಬಗೆಗೆ ಅಪಾರವಾದ ಪ್ರೇಮವನ್ನು ಹೊಂದಿದ್ದ ಅವರು, ‘ಗುರು ಎಂದರೆ ಅನುಭವ, ಗುರು ಎಂದರೆ ಅನುಗ್ರಹ’ ಎಂದು ಹನಿಗಣ್ಣಾಗುತ್ತಿದ್ದರು.

‘ಸಂಗೀತದಲ್ಲಿ ಕಲಿಕೆಗಿಂತ ಮೈಗೂಡಿಸಿಕೊಳ್ಳೋದು ಭಾಳ ಇರತದೆ. ಬಾಯಿ ಮಾತಿನಲ್ಲಿ ಎಷ್ಟೂ ಅಂತ ಹೇಳಬಹುದು? ಶಬ್ದಗಳಲ್ಲಿ ಸಂಗೀತವನ್ನು ಹೇಳೋದಕ್ಕೆ ಆಗೋದಿಲ್ಲ. ಗುರುಗಳ ಗಾಯನ ಅಥವಾ ವಾದನ, ಬೇರೆ ದೊಡ್ಡವರ ಸಂಗೀತವನ್ನು ಕೇಳಿಕೇಳಿ ಮೈಗೂಡಿಸಿಕೊಳ್ಳಬೇಕು. ಆ ಸಂಗೀತದೊಳಗೇ ಇದ್ದರೆ, ನೀವು ಮೈಮನಸ್ಸೆಲ್ಲವನ್ನೂ ತೆರೆದುಕೊಂಡಿದ್ದರೆ ಬೇಗ ಬರುತ್ತದೆ. ಇಲ್ಲದಿದ್ದರೆ ಗೋಡೆ ಹಾಯ್ದುಕೊಂಡು ಸಂಗೀತ ನಿಮ್ಮ ತಲುಪೋದು ಕಷ್ಟವಾಗುತ್ತದೆ’ ಎಂಬುದು ಅವರ ಕಿವಿಮಾತು ಆಗಿತ್ತು.

ತಮ್ಮ ಗುರುಗಳನ್ನು ನೆನೆಯುವಾಗ ಅವರು ವಿನೀತರಾಗಿಬಿಡುತ್ತಿದ್ದರು. ‘ಗುರುಗಳು ನಮ್ಮ ಮುಂದೆ ದೊಡ್ಡ ಖಜಾನೆಯನ್ನೇ ತೆರೆದು ಇಟ್ಟಿರಬಹುದು. ಆದರೆ ನನ್ನ ಬುಟ್ಟಿ ಆಗ ಸಣ್ಣದಿತ್ತು. ಅದೇ ಬುಟ್ಟಿ ದೊಡ್ಡದಾಗಿದೆ. ಆಗ ಸಮುದ್ರದೆದುರು ನಿಂತಿದ್ದರೂ ನನ್ನ ಬೊಗಸೆ ಚಿಕ್ಕದಿತ್ತು. ಈಗ ಬೊಗಸೆ ದೊಡ್ಡದಾಗಿದೆ. ಕವನವೊಂದನ್ನು ಮತ್ತೆ ಮತ್ತೆ ಓದಿದಾಗ ಬೇರೆ ಅರ್ಥಗಳು ಹೊಳೆಯುತ್ತ ಹೋಗುತ್ತವೆಯಲ್ಲ, ಹಾಗೆಯೇ ಈಗ ರಾಗಗಳ ಬೇರೆ ಬೇರೆ ಅರ್ಥ, ಸಾಧ್ಯತೆಗಳ ಹುಡುಕಾಟ ಮಾಡೋದಕ್ಕೆ ಆಗುತ್ತಿದೆ. ಪ್ರತಿದಿನ ಉಜ್ಜಬೇಕು, ತಿಕ್ಕಬೇಕು. ಸುಮ್ಮನೇ ತಿಕ್ಕೋದಲ್ಲ. ಮೈಮನಸು ಪೂರಾ ರಿಯಾಜಿನಲ್ಲೇ ಇರಬೇಕು. ಈಗ ತುಸು ಮಟ್ಟಿಗೆ ಪಾಂಡಿತ್ಯವನ್ನು ಗಳಿಸ್ತಾ ಇದ್ದೀನಿ’ ಎಂದು ಅವರು ಹೇಳಿದ್ದರು.

‘ನಿಮ್ಮ ಗುರುಗಳು ಎಲ್ಲಿರ್ತಾರೆ, ನಿಮ್ಮ ಹೃದಯದಲ್ಲಿ ಯಾವಾಗ್ಲೂ ಇರ್ತಾರೆಯೇ’ ಅಂತ ಯಾರೋ ಕೇಳಿದರು. ‘ಹೃದಯದಲ್ಲಿ ಗೊತ್ತಿಲ್ಲರೀ, ನನ್ನ ಈ ಮೂರು ಬೆರಳಿನಲ್ಲಿ ಇರತಾರೆ’ ಅಂದೆ. ನಾ ನುಡಿಸಬೇಕಿದ್ದರೆ ಅವರು ಈ ಮೂರು ಬೆರಳಿನಲ್ಲಿ ಇರತಾರೆ. ನಾ ಛಲೋ ಬಾರಿಸಿದರೆ ಅಲ್ಲೇ ಇರತಾರೆ. ಕೆಟ್ಟು ಹೋಯಿತು ಅಂದರೆ ಎದ್ದು ಹೋಗಿರತಾರೆ, ಅಷ್ಟೆ’ ಎಂದು ಹೇಳುತ್ತಿದ್ದ ಅವರ ಮಾತಿನಲ್ಲಿ ಸಂಗೀತಗಾರನೊಬ್ಬ ಹೇಗೆ ಅಭ್ಯಾಸ ಮಾಡಬೇಕು ಎಂಬ ದೊಡ್ಡಪಾಠವೇ ಇರುತ್ತಿತ್ತು.

ಅದು 1953ನೇ ಇಸ್ವಿ. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಆಯೋಜನೆಗೊಂಡಿದ್ದ ಕಛೇರಿ ಅದು. ಆಗಿನ್ನೂ ಹಿಂದೂಸ್ತಾನಿಯ ಅಭಿರುಚಿ ಬೆಳೆಯುತ್ತಿದ್ದ ಕಾಲ. ಆದರೂ ಅಂದಿನ ಸಿತಾರ್-ಸರೋದ್ ಜುಗಲಬಂದಿ ಕಛೇರಿಗೆ ಟೌನ್‌ಹಾಲಿನಲ್ಲಿ ರಸಿಕರು ಕಿಕ್ಕಿರಿದು ಸೇರಿದ್ದರು. 30ರ ಆಸುಪಾಸಿನಲ್ಲಿದ್ದ ಪಂಡಿತ್ ರವಿಶಂಕರ್ - ಉಸ್ತಾದ್ ಅಲಿ ಅಕ್ಬರ್ ಖಾನ್ ವೇದಿಕೆಯೇರುತ್ತಿದ್ದಂತೆಯೇ ಕರತಾಡನ ಎಲ್ಲೆಮೀರಿತ್ತು. ಸರೋದ್ ಬಗ್ಗೆ ಅಷ್ಟೇನೂ ಕುತೂಹಲವಿಲ್ಲದಿದ್ದರೂ ಸಿತಾರ್ ತುಂಬ ಇಷ್ಟಪಡುವ 20ರ ಹರೆಯದ ಯುವಗಾಯಕ ರಾಜೀವರು ಅಂದಿನ ಕಛೇರಿಗೆ ಬಂದಿದ್ದರು. ಆದರೆ, ಕಛೇರಿ ಮುಗಿಯುವಷ್ಟರಲ್ಲಿ ಅವರ ಮೈಮನಸ್ಸನ್ನು ಸರೋದ್ ನಾದದ ಗುಂಗು ಸಂಪೂರ್ಣವಾಗಿ ಆವರಿಸಿತ್ತು.

ಆ ದಿನ ಅಲ್ಲಿ ಸೇರಿದ್ದ ಇನ್ನೂ ನೂರಾರು ರಸಿಕರು ಅದೇ ಸಿತಾರ್-ಸರೋದ್ ನಾದವನ್ನು ಆಲಿಸಿದ್ದರು, ಖುಷಿಪಟ್ಟಿದ್ದರು. ಆದರೆ ಅವರ‍್ಯಾರನ್ನೂ ಕಾಡದ, ಆವರಿಸಿದ ಮಾಯೆಯೊಂದು ಈ ಯುವ ರಾಜೀವರನ್ನು ಆವರಿಸಿತಲ್ಲ... ಬದುಕಿನಲ್ಲಿ ಇನ್ನು ಕಲಿತರೆ ಸರೋದ್ ಮಾತ್ರ, ಹೇಗಾದರೂ ಮಾಡಿ ಈ ಉಸ್ತಾದರ ಬಳಿ ಹೋಗಲೇಬೇಕೆಂಬ ತಹತಹ ಹುಟ್ಟಿ ಹೆಮ್ಮರವಾಯಿತಲ್ಲ! ಉಸ್ತಾದ್ ಅಲಿ ಅಕ್ಬರ್ ಖಾನ್ ಹೀಗೆ ಎಷ್ಟೆಲ್ಲ ಕಡೆ ಒಬ್ಬರೇ ಕಛೇರಿ ನೀಡಿದ್ದರು, ರವಿಶಂಕರ್ ಜೊತೆಗೂಡಿ ಜುಗಲಬಂದಿ ಕಛೇರಿ ನೀಡಿದ್ದರು... ಆದರೆ, ಅವರ ಒಂದೇ ಒಂದು ಕಛೇರಿಯನ್ನು ಕೇಳಿ, ‘ಇರುವುದೆಲ್ಲ ಬಿಟ್ಟು’, ಸರೋದ್ ಕಲಿಯಲೇಬೇಕು ಎಂದು ಬೆನ್ನುಹತ್ತಿ ಬಂದಿದ್ದು ಇವರು ಮಾತ್ರ. ಹಾಗೆ ಸರೋದ್ ಮಾಯೆಯ ಬೆಂಬತ್ತಿ, ಗುರುವನ್ನು ಹುಡುಕಿಕೊಂಡು ಮುಂಬೈಗೆ ಕಾಲಿಟ್ಟಿದ್ದರು ಆ ಯುವಗಾಯಕ.

ಹಾಗೆ ನೋಡಿದರೆ ಅವರ ಸಂಗೀತ ಪಯಣ ಆರಂಭವಾಗಿದ್ದು ಬೆರಳುಗಳ ಮೂಲಕವೇ. ಮೂರು–ನಾಲ್ಕು ವರ್ಷದ ಬಾಲಕನಾಗಿದ್ದಾಗ, ಎಡಗೈ, ಬಲಗೈ ವ್ಯತ್ಯಾಸ ತಿಳಿಯುವ ಮೊದಲೇ, ಎಳೆಯ ಪುಟ್ಟ ಬೆರಳುಗಳು ತಬಲಾದ ಮೇಲಾಡುತ್ತಿದ್ದವು. ಆಯುರ್ವೇದ ಪಂಡಿತರೂ ಆಗಿದ್ದ ತಂದೆ ತಾರಾನಾಥರು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಇವರಿಗೆ ತಬಲಾ ಕಲಿಸಿದ್ದರು. ಅದು ಮುಂದೆ ಆಯುರ್ವೇದದಲ್ಲಿ ನಾಡಿ ನೋಡುವುದಕ್ಕೂ ಸಹಾಯವಾಗುತ್ತದೆ ಎಂದು. ರಾಜೀವರು ಹುಟ್ಟಿ ಬೆಳೆದಿದ್ದು ರಾಯಚೂರಿನ ಮಂತ್ರಾಲಯದ ಸಮೀಪದ ತುಂಗಭದ್ರ ಎಂಬ ಊರಿನಲ್ಲಿ. ಹತ್ತೊಂಬತ್ತನೇ ಶತಮಾನದ ಆರಂಭದ ಆ ಕಾಲಘಟ್ಟದಲ್ಲಿ ಕ್ರಾಂತಿಕಾರಿಯೆಂದು ಹೆಸರಾಗಿದ್ದ, ಸಾಹಿತ್ಯ, ಸಂಗೀತ ಹಾಗೂ ಆಯುರ್ವೇದದಲ್ಲಿ ಪರಿಣತಿ ಹೊಂದಿದ್ದ ಪಂಡಿತ ತಾರಾನಾಥ ಮತ್ತು ಪ್ರಗತಿಪರ ನಿಲುವಿನ, ಮಹಿಳೆಯರ ಹಕ್ಕುಗಳ ಕುರಿತು ಅಧಿಕಾರಯುಕ್ತವಾಗಿ ಮಾತನಾಡುತ್ತಿದ್ದ ಸುಮತೀಬಾಯಿಯವರ ಹಿರಿಯ ಮಗನಾಗಿ ಹುಟ್ಟಿದ ರಾಜೀವರಿಗೆ ಬಾಲ್ಯದಲ್ಲಿಯೇ ದೊಡ್ಡತನದ, ಔತ್ತಮ್ಯದ ಮಾದರಿಗಳು ಕಣ್ಣ ಮುಂದಿದ್ದವು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿಯತೊಡಗಿದ ರಾಜೀವರು ಮೊದಲ ಕಾರ್ಯಕ್ರಮ ನೀಡಿದಾಗ ಅವರುಗೆ ಒಂಬತ್ತೇ ವರ್ಷ. ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದಾಗ ಅವರಿಗೆ ಹತ್ತೊಂಬತ್ತು ವರ್ಷ. ಅಂತರಕಾಲೇಜು ಸ್ಪರ್ಧೆಗಳಲ್ಲಿ ಎಲ್ಲ ಗಾಯನ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ಕಟ್ಟಿಟ್ಟ ಬುತ್ತಿ. ತಲತ್ ಮಹಮೂದರ ಗಝಲ್ ಅನ್ನು ತುಂಬ ಇಷ್ಟಪಡುತ್ತಿದ್ದ ರಾಜೀವರ ಕಣ್ಣಿನಲ್ಲಿ ಹಿನ್ನೆಲೆ ಗಾಯಕರಾಗುವ ಕನಸು ಆಗೀಗ ತೂಗುತ್ತಿತ್ತು. ಆದರೆ ಉಸ್ತಾದ್ ಅಲಿ ಅಕ್ಬರ್ ಖಾನರ ಸರೋದ್ ವಾದನ ಮೈಮನವನ್ನು ತುಂಬಿದ ನಂತರ ಕೊರಳಿಗಿಂತ ಬೆರಳಿನ ಕರೆಯೇ ತೀವ್ರವಾಗಿತ್ತು.

ಸರೋದ್, ಮಾತ್ರವಲ್ಲ ಹೆಚ್ಚುಕಡಿಮೆ ಎಲ್ಲ ತಂತಿವಾದ್ಯಗಳನ್ನು ಚಿಕ್ಕ ವಯಸ್ಸಿನಲ್ಲಿ, ಎಳೆ ಬೆರಳುಗಳನ್ನು ಬೇಕಿದ್ದಂತೆ ಬಾಗಿ, ಬಳುಕಿಸಿ, ಪಳಗಿಸುವ ಕಾಲದಲ್ಲಿ ಕಲಿಯಬೇಕು ಎನ್ನುತ್ತಿದ್ದರು ಅವರು. ಆದರೆ ರಾಜೀವರು ಗುರುಗಳ ಸಂಪರ್ಕ ಸಾಧಿಸಿ, ಅವರ ಬಳಿ ಹೋದಾಗ ಅವರಿಗೆ 23 ವರ್ಷ. ನಂತರ ಬೆರಳುಗಳನ್ನು ಪಳಗಿಸುವುದು ಅಷ್ಟು ಸುಲಭವಲ್ಲ. ಅಷ್ಟು ವರ್ಷ ಕೊರಳಿನಲ್ಲಿ ನೆಲೆಗೊಂಡಿದ್ದ ರಾಗಗಳನ್ನು ಬೆರಳಿಗೆ ದಾಟಿಸುವ ಆ ಸವಾಲು ಕಠಿಣವಿತ್ತು. ಆ ವೇಳೆಗೆ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು, ಏಕಾಂಗಿಯಾಗಿ ಆ ದುರ್ಗಮ ದಾರಿಯ ಪಯಣವನ್ನೂ ಮಾಡಬೇಕಿತ್ತು. ತಂದೆಸಮಾನ ಗುರುಗಳಾದ ಖಾನ್ ಸಾಹೇಬರಲ್ಲಿ ಅವರು ಹೊಸ ಬದುಕನ್ನು ಕಟ್ಟಿಕೊಂಡ ಆ ಅಧ್ಯಾಯಗಳು ಈಗ ಭಾರತೀಯ ಸಂಗೀತ ಲೋಕದಲ್ಲಿ ಚಾರಿತ್ರಿಕ ಮೈಲಿಗಲ್ಲುಗಳು.

ಸಂಗೀತ–ಸಾಹಿತ್ಯ ಎರಡನ್ನೂ ಬೆಸೆಯುವ ಕೊಂಡಿಯಾಗಿದ್ದ ರಾಜೀವರಿಗೆ ಎಂದೋ ಓದಿದ್ದ ಸಂಸ್ಕೃತದ ರಘುವಂಶ, ರಾಮಾಯಣ, ಮಹಾಭಾರತ, ಅಮರಕೋಶ, ಭಗವದ್ಗೀತೆ, ಇಂಗ್ಲಿಷ್‌ನ ರಸೆಲ್, ಷೇಕ್ಸ್‌ಪಿಯರ್, ಎಲಿಯಟ್ ಅವರ ಸಾಹಿತ್ಯದ ಸಾರವೆಲ್ಲ ಅವರ ಮಾತಿನಲ್ಲಿ ಇಣುಕುತ್ತಿತ್ತು. ಗುರುಭಕ್ತಿಯನ್ನು ನಾವು ಅವರಿಂದಲೇ ಕಲಿಯಬೇಕಿತ್ತು. ಸಂಗೀತದ ಔನ್ನತ್ಯದಲ್ಲಿದ್ದರೂ ಇಳಿವಯಸ್ಸಿನಲ್ಲಿ ಕೂಡ ರಿಯಾಜ್‌ನ ಜಪ ಮಾಡುತ್ತಿದ್ದ ರಾಜೀವರು ನಮ್ಮ ನಡುವೆ ಬದುಕಿದ್ದರು ಎನ್ನುವುದೇ ನಮ್ಮ ಸೌಭಾಗ್ಯ. ವಯಸ್ಸಿನ ಸುಸ್ತು ಉಸ್ಸಪ್ಪಗಳನ್ನು ಕೊನೆಯವರೆಗೆ ಹತ್ತಿರ ಬಿಟ್ಟುಕೊಂಡವರಲ್ಲ. ನನ್ನ ನಾಳೆಗಳನ್ನು ಎದುರು ನೋಡ್ತಿರ್ತೇನೆ ಎನ್ನುತ್ತಿದ್ದರು, ನನಗೀಗ ನನ್ನ ನಾಳೆಗಳು ಮಸುಕಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.