ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊರಗುತ್ತಿಗೆಯಲ್ಲಿ ಮೀಸಲು: ಕಾಯ್ದೆಗೆ ತಿದ್ದುಪಡಿ

ತಾಂತ್ರಿಕ ತೊಡಕು ನಿವಾರಣೆಗೆ ಮುಂದಾದ ಸರ್ಕಾರ
Published 10 ಜುಲೈ 2024, 0:07 IST
Last Updated 10 ಜುಲೈ 2024, 0:07 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳು ಹೊರಗುತ್ತಿಗೆಯಡಿ ನೇಮಕ ಮಾಡಿಕೊಳ್ಳುವಾಗ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ನೀಡಲು ಇದ್ದ ಅಡ್ಡಿಗಳನ್ನು ನಿವಾರಿಸಲು ಸರ್ಕಾರ ಮುಂದಾಗಿದೆ.

ಈ ಉದ್ದೇಶಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಮುಂದಿನ ವಾರದಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ವಿದ್ಯಾವಂತರಿಗೆ ಸರ್ಕಾರದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ತರುವ ಸಂಬಂಧ ಇದೇ ಮೇ 20ರಂದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿತ್ತು. ಸ್ವಚ್ಛತಾ ಸಿಬ್ಬಂದಿ, ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್‌ಗಳು, ಮತ್ತು ಗ್ರೂಪ್‌–ಡಿ ಹುದ್ದೆಗಳಲ್ಲಿ ಮೀಸಲಾತಿ ಒದಗಿಸಬೇಕು ಎಂದು ಸುತ್ತೋಲೆ ವಿವರಿಸಿತ್ತು. 

ಆದರೆ, ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲಾತಿ ಇತ್ಯಾದಿ) ಕಾಯ್ದೆಯ 3ನೇ ಸೆಕ್ಷನ್‌ ಅನುಸಾರ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡಲು ಅವಕಾಶ ಇರಲಿಲ್ಲ. ‘ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿದ ಯಾವುದೇ ಹುದ್ದೆಗೆ ಮೀಸಲಾತಿ ಅನ್ವಯವಾಗುವುದಿಲ್ಲ’ ಎಂದು ಈ ಕಾಯ್ದೆಯ 3(ಡಿ) ಸೆಕ್ಷನ್‌ ಸ್ಪಷ್ಟವಾಗಿ ಹೇಳುತ್ತದೆ. ಹೀಗಾಗಿ, ಸರ್ಕಾರವು ಹೊರಗುತ್ತಿಗೆಯಲ್ಲಿ ಮೀಸಲಾತಿ ನೀಡಿ ಎಂದು ಸುತ್ತೋಲೆ ಹೊರಡಿಸಿದರೂ ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿರಲಿಲ್ಲ.

‘ಕಾಯ್ದೆಯ 3(ಡಿ) ಸೆಕ್ಷನ್‌ ಅನ್ನು ತೆಗೆದುಹಾಕಿ, 2ನೇ ಸೆಕ್ಷನ್‌ಗೆ 2(ಎ) ಎಂಬ ಹೊಸ ಉಪಸೆಕ್ಷನ್‌ ಅನ್ನು ಸೇರಿಸಲಾಗಿದೆ. ‘ಹೊರಗುತ್ತಿಗೆ ಮೂಲಕ ನೇಮಕಾತಿ’ ಎಂದು ಈ ಹೊಸ ಸೆಕ್ಷನ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಇಲಾಖೆ ಮೂಲಗಳು ಹೇಳಿವೆ.

ಸುತ್ತೋಲೆಯಲ್ಲಿ ಇದ್ದ ಈ ತಾಂತ್ರಿಕ ಸಮಸ್ಯೆಯ ಬಗ್ಗೆ ಕಾನೂನು ತಜ್ಞರು, ಹಲವು ಸಂಘಸಂಸ್ಥೆಗಳು ಸರ್ಕಾರದ ಗಮನ ಸೆಳೆದಿದ್ದವು.

‘ಈ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಬೇಕು. ಹೊರಗುತ್ತಿಗೆ ಮೀಸಲಾತಿಯು 20 ಮತ್ತು ಅದಕ್ಕಿಂತಲೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುವಾಗ ಅನ್ವಯವಾಗುತ್ತದೆ. ಕಡಿಮೆ ಸಂಖ್ಯೆಯ ಹುದ್ದೆಗಳಿಗೆ ನೇಮಕಾತಿ ನಡೆಸಿದಾಗ ಮೀಸಲಾತಿ ನೀಡಬೇಕಾಗುವುದಿಲ್ಲ. ಈ ಸಮಸ್ಯೆಯನ್ನೂ ನಿವಾರಿಸಬೇಕು’ ಎಂದು ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತ್ತು.

<p class="quote">ಮೀಸಲಾತಿ ಜಾರಿಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ನಮ್ಮ ಸರ್ಕಾರ ಇರುವವರೆಗೆ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿ ಇಲ್ಲ</p> <p class="quote"> <br/><span class="Designate"></span></p>
ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT