ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್‌ನ ಈಶ್ವರ ಖಂಡ್ರೆ ಮಧ್ಯೆ ವಿಧಾನಸಭೆಯಲ್ಲಿ ಗುರುವಾರ ಕಾವೇರಿದ ವಾಕ್ಸಮರ ನಡೆಯಿತು.

‘ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ’ ಎಂದು ಖಂಡ್ರೆ ಅವರಿಗೆ ಕಾಗೇರಿ ಎಚ್ಚರಿಕೆ ನೀಡಿದಾಗ, ಅದನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು. ಆಗ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು.

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕುರಿತು ತಾವು ಆಡಿದ ಮಾತುಗಳ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಮಜಾಯಿಷಿ ನೀಡಿ ವಿಷಾದ ವ್ಯಕ್ತಪಡಿಸಿದ ಬಳಿಕವೂ ಕಾಂಗ್ರೆಸ್ ಸದಸ್ಯರಾದ ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ ಮುಂತಾದವರು ಸಚಿವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

‘ಎಲ್ಲರೂ ಕುಳಿತುಕೊಳ್ಳಬೇಕು, ಒಟ್ಟಿಗೆ ಮಾತನಾಡಬಾರದು’ ಎಂದು ಕಾಗೇರಿ ಗದರಿದರು. ಆ ವೇಳೆಯಲ್ಲಿ ಖಂಡ್ರೆ ಏರಿದ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಅದರಿಂದ ಸಿಟ್ಟಿಗೆದ್ದ ಅವರು, ‘ಏನು ನೀವು ಸದನದ ಮೇಲೆ ಸವಾರಿ ಮಾಡುತ್ತೀರಾ, ಕೂತ್ಕೊಳ್ಳಿ, ಹೀಗೆ ಮಾತನಾಡುತ್ತಿದ್ದರೆ ನಿಮ್ಮನ್ನು ಹೊರ ಹಾಕಬೇಕಾಗುತ್ತದೆ’ ಎಂದರು.

‘ನಮಗೆ ಮಾತನಾಡಲು ಅಧಿಕಾರ ಇಲ್ವಾ, ನೀವು ಸದಸ್ಯರನ್ನು ಈ ರೀತಿ ನಡೆಸಿಕೊಳ್ಳಬಾರದು. ನಮಗೂ ಮಾತನಾಡಲು ಅವಕಾಶ ನೀಡಬೇಕು’ ಎಂದು ಖಂಡ್ರೆ ಏರಿದ ಧ್ವನಿಯಲ್ಲಿ ಪ್ರತ್ಯುತ್ತರ ಕೊಟ್ಟಾಗ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿದರು.

‘ನಾನು ಹೇಳ್ತಾ ಇದ್ದೇನೆ, ನೀವು ಕುಳಿತುಕೊಳ್ಳಬೇಕು. ಪೀಠದ ಮಾತು ಕೇಳದಿದ್ದರೆ ನನಗಿರುವ ಅಧಿಕಾರವನ್ನು ಚಲಾಯಿಸಬಹುದು. ನಿಮ್ಮ ಉಪನಾಯಕರು ಹೇಳಿದರೂ ನೀವು ಕೇಳುತ್ತಿಲ್ಲ. ಪ್ರತಿ ಬಾರಿ ಹೀಗೆ ನಡೆದುಕೊಳ್ಳುತ್ತೀರಿ’ ಎಂದು ಕಾಗೇರಿ ಅವರು ಖಂಡ್ರೆಯನ್ನು ಉದ್ದೇಶಿಸಿ ಆವೇಶಭರಿತರಾಗಿ ಹೇಳಿದರು. ‘ಹೊರಗೆ ಹಾಕುವುದಿದ್ದರೆ ಹಾಕಿ ನೋಡೋಣ’ ಎಂದು ಖಂಡ್ರೆ ಸವಾಲು ಹಾಕಿದರು.

‘ನಿಮಗೊಬ್ಬರಿಗೆ ಬಿ.ಪಿ ಅಲ್ಲ, ನನಗೂ ಬಿ.ಪಿ ಇದೆ. ಇಂತಹ ಸದಸ್ಯರನ್ನು ಏಕೆ ಆರಿಸಿ ಕಳಿಸುತ್ತೀರಿ ಎಂದು ನಿಮ್ಮ ಕ್ಷೇತ್ರದ ಮತದಾರರನ್ನು ಕೇಳಬೇಕಾಗುತ್ತದೆ’ ಎಂದು ಕಾಗೇರಿ ಭಾವಾವೇಶದಿಂದ ಹೇಳಿದಾಗ, ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು. ಖಂಡ್ರೆ ಸೇರಿದಂತೆ ಬಹುತೇಕ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಬಂದು ನಿಂತು ಧರಣಿ ಆರಂಭಿಸಿದರು.

‘ನಿಮ್ಮ ಆಸನಗಳಿಗೆ ಹೋಗಿ’ ಎಂದು ಸಭಾಧ್ಯಕ್ಷರು ಮಾಡಿದ ಮನವಿಗೆ ಒಪ್ಪಲಿಲ್ಲ. ಆಗ ಕಲಾಪವನ್ನು 15 ನಿಮಿಷಗಳಿಗೆ ಮುಂದೂಡಿದರು. ಆ ಬಳಿಕ ಸಭಾಧ್ಯಕ್ಷರು ತಮ್ಮ ಕೊಠಡಿಗೆ ಕಾಂಗ್ರೆಸ್ ಸದಸ್ಯರನ್ನು ಕರೆಸಿಕೊಂಡು ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮುಖದಲ್ಲಿ ಪ್ರಕರಣ ಇತ್ಯರ್ಥಪಡಿಸಿದರು.

ಮತ್ತೆ ಕಲಾಪ ಸೇರಿದಾಗ ವಿಷಯ ಪ್ರಸ್ತಾಪಿಸಿದ ಕಾಗೇರಿ, ‘ಕಲಾಪದ ವೇಳೆ ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಈಶ್ವರ ಖಂಡ್ರೆ ಅವರೇ ನಿಮ್ಮ ಬಗ್ಗೆ ಮತ್ತು ನಿಮ್ಮ ಕ್ಷೇತ್ರದ ಮತದಾರರ ಬಗ್ಗೆ ನನಗೆ ಗೌರವಿದೆ. ನಿಮ್ಮ ತಂದೆಯವರ ಜತೆ ಒಳ್ಳೆಯ ಒಡನಾಟವಿತ್ತು. ಅವರ ಶಿಸ್ತಿನ ಜೀವನ ನನಗೆ ಪ್ರೇರಣೆ ಆಗಿತ್ತು. ವೈಯಕ್ತಿಕವಾಗಿ ನಿಮ್ಮ ಬಗ್ಗೆ ಸದಭಿಪ್ರಾಯವಿದೆ. ಅನ್ಯಥಾ ಭಾವಿಸಬೇಡಿ. ಇದನ್ನು ಇಲ್ಲಿಗೇ ಮುಗಿಸೋಣ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ, ‘ನಿಮ್ಮ ಬಗ್ಗೆ ಮತ್ತು ಪೀಠದ ಬಗ್ಗೆ ಗೌರವ ಇದೆ. ನಾನು ಗಡಿ ಭಾಗದ ಬೀದರ್‌ನಿಂದ ಬಂದವನು. ನಾನು ಸಹಜವಾಗಿ ಮಾತನಾಡಿದರೂ ಅದು ಏರಿದ ಧ್ವನಿಯಲ್ಲಿ ಮಾತನಾಡಿದಂತೇ ಇರುತ್ತದೆ. ಅದನ್ನು ಟೀಕೆ ಟಿಪ್ಪಣಿ ಎಂದು ಭಾವಿಸುವುದು ಬೇಡ. ಆದರೆ, ನೀವು ಈ ರೀತಿ ಮಾತನಾಡುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. 3 ಲಕ್ಷ ಮತದಾರರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಎಂಬ ಭಾವನೆ ಬರುತ್ತದೆ’ ಎಂದರು.

‘ಕಡತ ತರಿಸಿ ಯಾವುದನ್ನು ತೆಗೆಸಬೇಕೋ ಅದನ್ನು ತೆಗೆಸುತ್ತೇನೆ’ ಎಂದು ಕಾಗೇರಿ ಕಾಂಗ್ರೆಸ್ ಸದಸ್ಯರಿಗೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.