ಹೊಸಪೇಟೆ: ಅವಧಿ ಪೂರ್ಣಗೊಳ್ಳುವ ಮೊದಲೇ ಆನಂದ್ ಸಿಂಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ವಿಜಯನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಹೊಸ್ತಿಲಲ್ಲಿದೆ.

ಬಹಳ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಆನಂದ್ ಸಿಂಗ್ ಪುನಃ ಬಿಜೆಪಿ ಸೇರಿದ್ದಾರೆ. ಈಗ ಆ ಪಕ್ಷದಿಂದ ಪುನರಾಯ್ಕೆಗಾಗಿ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. 2008, 2013ರಲ್ಲಿ ಸತತ ಎರಡು ಸಲ ಬಿಜೆಪಿಯಿಂದ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿಂಗ್, 2018ರಲ್ಲಿ ದಿಢೀರನೆ ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.

ಗೆದ್ದು ಒಂದುವರೆ ವರ್ಷವೂ ಆಗಿರಲಿಲ್ಲ. ಈಗ ಮತ್ತೆ ಬಿಜೆಪಿಗೆ ಜಿಗಿದಿದ್ದಾರೆ. ಸರ್ಕಾರ ಜಿಂದಾಲ್ಗೆ ಭೂ ಪರಭಾರೆ ಮಾಡಬಾರದು ಎಂದು ಒತ್ತಾಯಿಸಿ ಸಿಂಗ್ ಜುಲೈನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದಾದ ಬಳಿಕ ಕೆಲವು ದಿನಗಳ ವರೆಗೆ ಜಿಂದಾಲ್ ಕಂಪನಿ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಕಾಳಜಿ ತೋರಿಸಿದ್ದರು. ದಿನ ಕಳೆದಂತೆ ಆ ವಿಷಯ ಮರೆತೇ ಬಿಟ್ಟ ಅವರು, ನಂತರ ವಿಜಯನಗರ ಜಿಲ್ಲೆ (ಹೊಸಪೇಟೆ ಜಿಲ್ಲಾ ಕೇಂದ್ರವಾಗಿ) ರಚನೆ ವಿಷಯ ಪ್ರಸ್ತಾಪಿಸಿ ಮುಖ್ಯವಾಹಿನಿಗೆ ಬಂದರು.

ಈಗ ಅದೇ ವಿಷಯ ಹೇಳಿಕೊಂಡು ಚುನಾವಣೆಯಲ್ಲಿ ಮತ ಕೇಳುತ್ತಿದ್ದಾರೆ. ‘ಮೈತ್ರಿ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರ ಕಡೆಗಣನೆಗೆ ಒಳಗಾಗಿತ್ತು. ಶ್ರೀರಾಮಚಂದ್ರನಂತೆ ನಾನು ವನವಾಸ ಅನುಭವಿಸಿದ್ದೆ. ಈಗ ಹೊಸ ಜಿಲ್ಲೆ ರಚನೆ ಮಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಸೇರಿರುವೆ. ನನಗೆ ಯಾವ ಮಂತ್ರಿಯೂ ಸ್ಥಾನವೂ ಬೇಡ, ವಿಜಯನಗರ ಜಿಲ್ಲೆ ಮಾಡಿದರೆ ಸಾಕಷ್ಟೇ’ ಎಂದು ಹೇಳುತ್ತಿದ್ದಾರೆ.

ಆದರೆ, ಅದನ್ನು ಅವರ ಸ್ವಪಕ್ಷೀಯರು ಹಾಗೂ ವಿರೋಧ ಪಕ್ಷದವರು ಬಲವಾಗಿ ವಿರೋಧಿಸುತ್ತಿದ್ದಾರೆ. ‘ಇದು ಆನಂದ್ ಸಿಂಗ್ ಅವರ ದ್ವಿಮುಖ ಧೋರಣೆ. ಸತತ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದರೂ ಒಮ್ಮೆಯೂ ಜಿಲ್ಲೆ ರಚನೆ ಬಗ್ಗೆ ವಿಧಾನಸಭೆಯಲ್ಲಾಗಲಿ, ಹೊರಗಾಗಲಿ ಮಾತನಾಡಿಲ್ಲ. ಈಗ ಚುನಾವಣೆಯಲ್ಲಿ ಗೆಲ್ಲಲ್ಲು ಆ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಟೀಕಿಸುತ್ತಿದ್ದಾರೆ.

ಆನಂದ್ ಸಿಂಗ್ಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದಕ್ಕೆ ಅನೇಕ ಮುಖಂಡರು ಅಸಮಾಧಾನಗೊಂಡಿದ್ದಾರೆ. ಕವಿರಾಜ್ ಅರಸ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮುಖಂಡರಾದ ಎಚ್.ಆರ್. ಗವಿಯಪ್ಪ, ರಾಣಿ ಸಂಯುಕ್ತಾ, ಕಿಶೋರ್ ಪತ್ತಿಕೊಂಡ ಪ್ರಚಾರದಿಂದಲೇ ದೂರ ಉಳಿದಿದ್ದಾರೆ. ಇತ್ತೀಚೆಗೆ ಸಿ.ಎಂ. ಪಾಲ್ಗೊಂಡ ಸಭೆಗೂ ಅವರು ಬರಲಿಲ್ಲ. ಇನ್ನು, ರಾಮಚಂದ್ರಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದು ಆನಂದ್ ಸಿಂಗ್ ಅವರ ಹಾದಿ ಸುಲಭವಲ್ಲ ಎನ್ನುವುದನ್ನು ಸೂಚಿಸುತ್ತದೆ.

ಸಂಡೂರು ರಾಜಮನೆತನದ ಎಂ.ವೈ. ಘೋರ್ಪಡೆಯವರ ಸಹೋದರ ವೆಂಕಟರಾವ್ ಘೋರ್ಪಡೆಯವರಿಗೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್, ಟಿಕೆಟ್ ನೀಡಿದೆ. ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದ ಗವಿಯಪ್ಪನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಣಕ್ಕಿಳಿಸಲು ಕಾಂಗ್ರೆಸ್ ಬಹಳ ಕಸರತ್ತು ನಡೆಸಿತ್ತು. ಆದರೆ, ಗವಿಯಪ್ಪನವರು ಒಪ್ಪದ ಕಾರಣ, ಸ್ಥಳೀಯವಾಗಿ ಅಷ್ಟೇನೂ ಪ್ರಬಲ ಮುಖಂಡರು ಇಲ್ಲದ ಕಾರಣ, ‘ಹೊರಗಿನವರು’ ಎಂಬ ಹಣೆಪಟ್ಟಿ ಇದ್ದರೂ ಚಿಂತೆಯಿಲ್ಲ ಎಂದು ಘೋರ್ಪಡೆ ಅವರನ್ನು ಚುನಾವಣೆಗೆ ನಿಲ್ಲಿಸಿದೆ.

ಘೋರ್ಪಡೆ ಎಂಬ ನಾಮಬಲದಿಂದಲೇ ಅವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸರಳ, ಸಜ್ಜನಿಕೆ ಅವರಿಗಿರುವ ಸಕಾರಾತ್ಮಕ ಅಂಶಗಳು. ಅದನ್ನೇ ಕಾಂಗ್ರೆಸ್ ಹೆಚ್ಚು ಪ್ರಚಾರ ನಡೆಸುತ್ತಿದೆ. ‘ಗಣಿ ಲೂಟಿ ಹೊಡೆದ ಆನಂದ್ ಸಿಂಗ್ ಹಾಗೂ ನೂರಾರು ಎಕರೆ ಜಮೀನು ದಾನ ಮಾಡಿದ ಘೋರ್ಪಡೆಯವರ ನಡುವಿನ ಸ್ಪರ್ಧೆ ಇದು’ ಎಂದು ಆ ಪಕ್ಷದ ಮುಖಂಡರು ಒತ್ತಿ ಒತ್ತಿ ಹೇಳುತ್ತಿದ್ದಾರೆ.

ಘೋರ್ಪಡೆಯವರು ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. 2004ರಲ್ಲಿ ವಿಧಾನಸಭೆ, 2009ರಲ್ಲಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಕ್ಷೇತ್ರದ ಹೊರಗಿನವರಾದರೂ ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ವಿಜಯನಗರ ಕ್ಷೇತ್ರದ ಅನೇಕ ಗ್ರಾಮಗಳು ಈ ಹಿಂದೆ ಸಂಡೂರು ವ್ಯಾಪ್ತಿಗೆ ಒಳಪಟ್ಟಿದ್ದವು. ಆ ಜನರೊಂದಿಗೆ ಈಗಲೂ ಅವರು ಉತ್ತಮ ಒಡನಾಟ ಹೊಂದಿದ್ದಾರೆ. ‘ನಾನು ಹೊರಗಿನವನಲ್ಲ’ ಎಂದು ಹೇಳುತ್ತಿದ್ದಾರೆ.

ಜೆ.ಡಿ.ಎಸ್.ನ ಎನ್.ಎಂ. ನಬಿ 1994ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಗೆದ್ದು ಸಚಿವರೂ ಆಗಿದ್ದರು. ಕೂಡ್ಲಿಗಿ ಮೀಸಲು ಕ್ಷೇತ್ರವಾಗಿದ್ದರಿಂದ ನೆಲೆ ಕಳೆದುಕೊಂಡು, 15 ವರ್ಷಗಳ ನಂತರ ವಿಜಯನಗರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಜೆ.ಡಿ.ಎಸ್. ಭದ್ರ ನೆಲೆಯಿಲ್ಲ. ಆದರೆ, ನಬಿ ಅವರು ಬಿಜೆಪಿ, ಕಾಂಗ್ರೆಸ್ ಪಕ್ಷಗಳೆರಡನ್ನೂ ಮೀರಿಸುವಂತೆ ಪ್ರಚಾರ ನಡೆಸುತ್ತಿದ್ದಾರೆ.

ಇನ್ನು, ಕವಿರಾಜ್ ಅರಸ್ ಗಣಿ ಉದ್ಯಮಿ. 1999ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಅನೇಕ ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ. 2018ರ ಚುನಾವಣೆಯಲ್ಲಿ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಅವರಿಗಿತ್ತು. ಆದರೆ, ಸಿಕ್ಕಿರಲಿಲ್ಲ. ಈ ಸಲವೂ ಅದು ಹುಸಿಯಾಗಿದೆ. ಹೀಗಾಗಿ ಪಕ್ಷದ ವಿರುದ್ಧ ಬಂಡೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ‘ಆನಂದ್ ಸಿಂಗ್ ಅವರನ್ನು ಸೋಲಿಸುವುದೇ ನನ್ನ ಗುರಿ’ ಎಂದು ಹೇಳಿಕೊಂಡು ಕವಿರಾಜ್ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್, ಜೆ.ಡಿ.ಎಸ್. ಹಾಗೂ ಕವಿರಾಜ್ ಅರಸ್ ಅವರು ಆನಂದ್ ಸಿಂಗ್ ವಿರುದ್ಧ ಪ್ರಚಾರ ಸಭೆಗಳಲ್ಲಿ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಅವರ ವಿರುದ್ಧವೇ ನಮ್ಮ ನೇರ ಸ್ಪರ್ಧೆ ಎಂದು ಹೇಳುತ್ತಿದ್ದಾರೆ. ಆದರೆ, ಆನಂದ್ ಸಿಂಗ್, ‘ನನಗೆ ಯಾರೊಂದಿಗೂ ಸ್ಪರ್ಧೆಯಿಲ್ಲ. ನಾನು ಗೆದ್ದಾಗಿದೆ’ ಎಂದು ಅತಿ ಉತ್ಸಾಹದಲ್ಲಿ ಇದ್ದಾರೆ.

‘ಆನಂದ್ ಸಿಂಗ್ ಅವರು ಅಧಿಕಾರದ ಆಸೆಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಮೂರು ಸಲ ಗೆದ್ದರೂ ಕ್ಷೇತ್ರಕ್ಕಾಗಿ ಏನೂ ಮಾಡಲಿಲ್ಲ. ಈಗ ಮಂತ್ರಿಯಾಗಿ, ವಿಜಯನಗರ ಜಿಲ್ಲೆ ಮಾಡುತ್ತೇನೆ. ಏತ ನೀರಾವರಿ ಯೋಜನೆ ಜಾರಿಗೆ ತರುತ್ತೇನೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ಅವರು ಸಚಿವರಾಗಿದ್ದರು. ಆಗೇಕೇ ಮಾಡಲಿಲ್ಲ. ಈಗ ಮಾಡುತ್ತಾರೆ ಎಂದು ಹೇಗೆ ನಂಬಬೇಕು’ ಎಂದು ಆಟೊ ಚಾಲಕರೂ ಆಗಿರುವ ಸಾಮಾಜಿಕ ಹೋರಾಟಗಾರ ಸಂತೋಷ್ ಕುಮಾರ್ ಪ್ರಶ್ನಿಸುತ್ತಾರೆ.

2018ರ ಚುನಾವಣಾ ಫಲಿತಾಂಶ

ಆನಂದ್ ಸಿಂಗ್ ಕಾಂಗ್ರೆಸ್ - 83,214
ಎಚ್.ಆರ್.ಗವಿಯಪ್ಪ ಬಿಜೆಪಿ - 74,986
ದೀಪಕ್ ಸಿಂಗ್ ಜೆಡಿಎಸ್ -835

ಕಣದಲ್ಲಿರುವ ಪ್ರಮುಖರು

ಆನಂದ್ ಸಿಂಗ್ ಬಿಜೆಪಿ
ವೆಂಕಟರಾವ್ ಘೋರ್ಪಡೆ ಕಾಂಗ್ರೆಸ್
ಎನ್.ಎಂ.ನಬಿ ಜೆಡಿಎಸ್
ಕವಿರಾಜ್ ಅರಸ್ ಪಕ್ಷೇತರ

ಅಂಕಿಸಂಖ್ಯೆ

2,36,154- ಒಟ್ಟು ಮತದಾರರು
1,15,691 -ಪುರುಷರು
1,20,400 -ಮಹಿಳೆಯರು
63- ಇತರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.