ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಮುಚ್ಚಿಕೊಳ್ಳಲು ತನಿಖೆ ಮಾಡುತ್ತೀರಾ?: ಸಿಎಂಗೆ ಕುಮಾರಸ್ವಾಮಿ

Published 21 ಜುಲೈ 2024, 10:38 IST
Last Updated 21 ಜುಲೈ 2024, 10:38 IST
ಅಕ್ಷರ ಗಾತ್ರ

ಹಾಸನ: ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಆಡಳಿತ ನಡೆಸುತ್ತಿದ್ದಾರೆ. ಇದೀಗ 2010, 2011 ರ ಇಸವಿಯ ಪ್ರಕರಣಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆಗ ಇವರ ಗಮನಕ್ಕೆ ಬಂದಿರಲಿಲ್ಲವಾ? ಈಗ ತಾವು ಮಾಡಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ತನಿಖೆ ಮಾಡಿಸುವುದಾಗಿ ಹೇಳುತ್ತಿದ್ದಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ತನಿಖೆ ನಡೆಸಿ, ಯಾರ ಮೇಲೆ ಕ್ರಮ ಕೈಗೊಂಡಿದ್ದೀರಿ? ಕೆಂಪಣ್ಣ ಆಯೋಗದ ವರದಿ, ನೈಸ್‌ ಕುರಿತು ಅವರದ್ದೇ ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ನೀಡಿದ್ದ ವರದಿಗಳು ಏನಾದವು ಎಂದು ಪ್ರಶ್ನಿಸಿದರು.

ಮುಡಾದಲ್ಲಿ ಇಷ್ಟೆಲ್ಲ ತಪ್ಪು ಮಾಡಿ, ನನ್ನ ಭಾಮೈದ ತಪ್ಪು ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ. ಆ ಭೂಮಿ ನಿಮ್ಮ ಭಾಮೈದ ತೆಗೆದುಕೊಳ್ಳಲು ಅವಕಾಶ ಇತ್ತೇ? ಅದು ದಲಿತರಿಗೆ ಸೇರಿದ ಭೂಮಿ. ಯಾರದ್ದೋ ಜಮೀನು, ₹62 ಕೋಟಿ ಕೊಟ್ಟರೆ ಪುಕ್ಸಟ್ಟೆ ಬಿಡ್ಡುಕೋಡ್ತೀರಾ ಎಂದು ಕೇಳಿದರು.

1992 ರಲ್ಲಿ ಫೈನಲ್‌ ನೋಟಿಫಿಕೇಶನ್‌ ಆಗಿದೆ. 1998 ರಲ್ಲಿ ಭೂಮಾಲೀಕರು ಬದುಕಿಯೇ ಇರಲಿಲ್ಲ. ಹೀಗಿರುವಾಗ ಡಿನೋಟಿಫಿಕೇಶನ್‌ಗೆ ಅರ್ಜಿ ಕೊಟ್ಟವರು ಯಾರು? ಮೂಲ ಮಾಲೀಕರು ತೀರಿಕೊಂಡಿದ್ದು ಯಾವಾಗ? ಡಿನೋಟಿಫಿಕೇಶನ್‌ಗೆ ಸ್ವರ್ಗದಿಂದ ಅರ್ಜಿ ಕೊಟ್ಟಿದ್ದರಾ? ಆ ಜಮೀನನ್ನು ನಿಮ್ಮ ಭಾಮೈದ ಖರೀದಿ ಮಾಡಿ, ದಾನ ಮಾಡಿದ್ದಾರೆ ಎಂದು ಹೇಳುತ್ತಿದ್ದೀರಿ? ಏನು ಡ್ರಾಮಾ ಇದು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮುಖದಲ್ಲಿ ಪಾಪಪ್ರಜ್ಞೆ ಕಾಡುತ್ತಿದೆ ಎನ್ನುವುದು ಅವರು ಮಾಧ್ಯಮದ ಮುಂದೆ ಕುಳಿತಾಗ ಗೊತ್ತಾಗುತ್ತಿದೆ ಎಂದರು.

ಮುಡಾದಲ್ಲಿ ನನ್ನದೂ ಸೈಟ್‌ ಇದೆ ಎಂದು ಚರ್ಚೆ ಆಗಿದೆ. ನನ್ನದು ತೆರೆದ ಪುಸ್ತಕ. 1985 ರಲ್ಲಿ ನನಗೆ 21 ಸಾವಿರ ಚದರ ಅಡಿ ಕೈಗಾರಿಕಾ ನಿವೇಶನ ಮಂಜೂರಾಗಿತ್ತು. ಅದಕ್ಕೆ ದುಡ್ಡು ಕಟ್ಟಿದ್ದೇನೆ. ನನಗೆ ಮಂಜೂರಾಗಿರುವ ಜಾಗದಲ್ಲಿ ಯಾವನೋ ಕಟ್ಟಡ ನಿರ್ಮಿಸಿದ್ದಾನೆ. ಬದಲಿ ನಿವೇಶನಕ್ಕೆ ಅರ್ಜಿ ಹಾಕುವುದು ಬೇಡ ಎಂದು ಸುಮ್ಮನಿದ್ದೆ. ಸ್ನೇಹಿತರು ನನ್ನ ಗಮನಕ್ಕೆ ಬಾರದೇ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಇಲ್ಲಿಯವರೆಗೆ ಅದಕ್ಕೆ ಯಾವುದೇ ಉತ್ತರವಿಲ್ಲ ಎಂದು ಸ್ಪಷ್ಟಪಡಿಸಿದರು.

ದಯವಿಟ್ಟು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿ. ಮುಡಾಕ್ಕೆ ಸಂಬಂಧಿಸಿದಂತೆ ನಾವು ದಾಖಲೆಗಳ ಸಮೇತ ಮಾತನಾಡುತ್ತಿದ್ದೇವೆ. ನಾಚಿಕೆ ಆಗಲ್ವ ಸಿದ್ದರಾಮಯ್ಯನವರೇ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT