ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಡನ್‌ ಸ್ಪರ್ಧೆ: ಪಕ್ಷದೊಳಗೇ ಭಿನ್ನಾಭಿಪ್ರಾಯ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಬೈಡನ್‌ ವಿರುದ್ಧ ಪ್ರಮುಖ ಪತ್ರಿಕೆಗಳ ಸಂಪಾದಕೀಯ
Published 30 ಜೂನ್ 2024, 14:40 IST
Last Updated 30 ಜೂನ್ 2024, 14:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜೋ ಬೈಡನ್‌ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯಬೇಕು ಎಂಬ ಅಭಿಪ್ರಾಯವನ್ನು ಡೆಮಾಕ್ರಟಿಕ್‌ ಪಕ್ಷದವರೇ ಮುಂದಿಡುತ್ತಿದ್ದಾರೆ. ಇದರಿಂದ, ಪಕ್ಷದ ಒಳಗೇ ಭಿನ್ನಾಭಿಪ್ರಾಯ ಮೂಡಿದೆ.

ಕಳೆದ ಗುರುವಾರ ಅಟ್ಲಾಂಟದಲ್ಲಿ, ಬೈಡನ್‌ ಹಾಗೂ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ನಡುವಿನ ಚರ್ಚೆಯಲ್ಲಿ ಬೈಡನ್‌ ಅವರ ವಾದವು ಸಪ್ಪೆಯಾಗಿತ್ತು. ಇದೇ ಕಾರಣ ನೀಡಿ ಬೈಡನ್‌ ಅವರನ್ನು ಬದಲಾಯಿಸಬೇಕು ಎನ್ನುವ ಕೂಗು ಎದ್ದಿದೆ. 

‘ಚರ್ಚೆಯಲ್ಲಿ ಬೈಡನ್‌ ಅವರ ಮಾತುಗಳು ಅರ್ಥವಾಗುತ್ತಿರಲಿಲ್ಲ. ಟ್ರಂಪ್‌ ಅವರ ಪ್ರಶ್ನೆಗೆ ಸರಿಯಾಗಿಯೂ ಉತ್ತರಿಸುತ್ತಿರಲಿಲ್ಲ. ಹಾಗಾಗಿ, ಬೈಡನ್‌ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮುಂದುವರಿಸುವುದು ಸರಿಯೇ? ಎಂಬುದು ಪಕ್ಷದ ಹಲವರ ಅಭಿಪ್ರಾಯವಾಗಿದೆ’ ಎಂದು ಬಿಬಿಸಿ ವರದಿ ಮಾಡಿದೆ. ಆದರೆ, ಪಕ್ಷದ ಚುನಾವಣಾ ಪ್ರಚಾರದ ನೇತೃತ್ವವಹಿಸಿರುವ ಹಲವರು, ‘ಬೈಡನ್‌ ಅವರೇ ನಮ್ಮ ಪಕ್ಷದ ಅಭ್ಯರ್ಥಿ. ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ಬೈಡನ್‌ ಪರವಾಗಿ ಪಕ್ಷದ 3,894 ಪ್ರತಿನಿಧಿಗಳು ಇದ್ದಾರೆ. ಪಕ್ಷದ ಅಭ್ಯರ್ಥಿಯಾಗಲು 1,975 ಪ್ರತಿನಿಧಿಗಳ ಬೆಂಬಲ ಸಾಕಾಗುತ್ತದೆ. ಆದರೆ, ನ್ಯೂಯಾರ್ಕ್‌ ಟೈಮ್ಸ್‌ ಸೇರಿದಂತೆ ಇತರ ಹಲವು ಪ್ರಮುಖ ಪತ್ರಿಕೆಗಳು, ‘ಬೈಡನ್‌ ಅವರೇ ಏಕೆ ಡೆಮಾಕ್ರಟಿಕ್‌ ಪಕ್ಷ ಅಭ್ಯರ್ಥಿಯಾಗಬೇಕು‘ ಎಂದು ಪ್ರಶ್ನಿಸಿವೆ. 

‘ವರ್ಚಸ್ಸು ಕಳೆದುಕೊಂಡಿರುವ ಬೈಡನ್‌ ಅವರು ಟ್ರಂಪ್‌ ವಿರುದ್ಧ ಸೋಲುವುದು ಹೆಚ್ಚು ನಿಚ್ಚಳವಾಗಿದೆ’ ಎಂದು ಹಲವು ಪ್ರಮುಖ ಅಂಕಣಕಾರರು ಅಭಿಪ್ರಾಯಪಡುತ್ತಿದ್ದಾರೆ.

ನವೆಂಬರ್‌ 5ರಂದು ನಡೆಯಲಿರುವ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಬೈಡನ್‌ ಅವರು ಹೇಳಿದ್ದಾರೆ. ‘ಬರಾಕ್‌ ಒಬಾಮ ಹೇಳಿದ ಹಾಗೆ, ಗುರುವಾರದ ಚರ್ಚೆಯಲ್ಲಿ ನನ್ನ ಪ್ರದರ್ಶನವು ಸಪ್ಪೆಯಾಗಿಯೇ ಇತ್ತು. ನನ್ನ ಪ್ರದರ್ಶನದ ಕುರಿತು ನನಗೆ ಅರಿವಿದೆ. ಆದರೆ, ನಾನು ಕೈಚೆಲ್ಲುವುದಿಲ್ಲ. ನಾನು ಇನ್ನಷ್ಟು ಕಷ್ಟಪಡುತ್ತೇನೆ. ಗುರುವಾರ ರಾತ್ರಿ ನನಗೆ ನಿದ್ದೆ ಬಂದಿಲ್ಲ ನಿಜ. ಆದರೆ, ಟ್ರಂಪ್‌ ಅವರಿಗೂ ನಿದ್ದೆ ಬಂದಿಲ್ಲ. ಚರ್ಚೆಯಲ್ಲಿ ಆತ ಆಡಿದ ಸುಳ್ಳುಗಳೇ ಆತನ ಸೋಲನ್ನು ಸೂಚಿಸುತ್ತದೆ. ಅಧ್ಯಕ್ಷನಾಗಿದ್ದಾಗ ಆತ ಏನೆಲ್ಲಾ ಮಾಡಿದ್ದಾನೆ ಎಂದು ಜನರಿಗೆ ನೆನಪಿದೆ’ ಎಂದು ಜೋ ಬೈಡನ್‌ ಹೇಳಿಕೊಂಡಿದ್ದಾರೆ.

ಜೋ ಬೈಡನ್‌
ಜೋ ಬೈಡನ್‌
ದೇಶವನ್ನು ಉಳಿಸಲು ಬೈಡನ್‌ ಅವರು ಚುನಾವಣೆಯಿಂದ ಹಿಂದೆ ಸರಿಯಬೇಕು
ನ್ಯೂಯಾರ್ಕ್‌ ಟೈಮ್ಸ್‌ ಸಂಪಾದಕೀಯ
ದೇಶಾಭಿಮಾನವನ್ನು ತೋರ್ಪಡಿಸಲು ಬೈಡನ್‌ ಅವರಿಗೆ ಇದು ಸರಿಯಾದ ಸಮಯ. ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ‌ಸರಿಯಬೇಕು
ದಿ ಅಟ್ಲಾಂಟಿಕ್‌ ಪತ್ರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT