ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಳಿ ತೀವ್ರಗೊಳಿಸಿದ ಇಸ್ರೇಲ್: ಹಿಜ್ಬುಲ್ಲಾ ವಿರುದ್ಧ ಭೂ ಕಾರ್ಯಾಚರಣೆಗೆ ಸಿದ್ಧತೆ

Published : 27 ಸೆಪ್ಟೆಂಬರ್ 2024, 18:49 IST
Last Updated : 27 ಸೆಪ್ಟೆಂಬರ್ 2024, 18:49 IST
ಫಾಲೋ ಮಾಡಿ
Comments

ಬೈರೂತ್, ಲೆಬನಾನ್ : ಹಿಜ್ಬುಲ್ಲಾ ವಿರುದ್ಧದ ದಾಳಿಯನ್ನು ಇಸ್ರೇಲ್‌ ಇನ್ನಷ್ಟು ತೀವ್ರಗೊಳಿಸಿದ್ದು, ಲೆಬನಾನ್‌ನಲ್ಲಿ ಒಂದು ವಾರದಲ್ಲಿ ಮೃತಪಟ್ಟವರ ಸಂಖ್ಯೆ 700ರ ಗಡಿ ದಾಟಿದೆ.

ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ಮುಂದಿಟ್ಟಿದ್ದ ಕದನ ವಿರಾಮ ಪ್ರಸ್ತಾವವನ್ನು ಇಸ್ರೇಲ್‌ ಗುರುವಾರ ತಿರಸ್ಕರಿಸಿತ್ತು. ಶುಕ್ರವಾರ ಬೆಳಿಗ್ಗೆ ಹಿಜ್ಬುಲ್ಲಾ ತಾಣಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್‌ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ, ಹಲವು ರಾಕೆಟ್‌ಗಳನ್ನು ಹಾರಿಸಿದೆ.

‘ಇಸ್ರೇಲ್‌ನ ‘ಕ್ರೂರ ಕೃತ್ಯ’ಕ್ಕೆ ಪ್ರತ್ಯುತ್ತರವಾಗಿ ಟೈಬೀರಿಯಸ್‌ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದೇವೆ’ ಎಂದು ಹಿಜ್ಬುಲ್ಲಾ ಸಂಘಟನೆ ಹೇಳಿದೆ.

ಶುಕ್ರವಾರ ಬೆಳಿಗ್ಗೆಯಿಂದ ನಡೆದ ದಾಳಿಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ ಎಂದು ಲೆಬನಾನ್‌ ಆರೋಗ್ಯ ಸಚಿವ ಫಿರಾಸ್‌ ಅಬಿಯದ್ ಹೇಳಿದ್ದಾರೆ.

ಶುಕ್ರವಾರ ಬೆಳಗಿನ ಜಾವ ದಕ್ಷಿಣ ಲೆಬನಾನ್‌ನ ಶೆಬಾ ಪಟ್ಟಣದ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಮಂದಿ ಬಲಿಯಾಗಿದ್ದಾರೆ ಎಂದು ಅಲ್ಲಿನ ಮೇಯರ್‌ ಮೊಹಮ್ಮದ್‌ ಸಅಬ್ ಮಾಹಿತಿ ನೀಡಿದ್ದಾರೆ.

‘ಸಾಧ್ಯವಾದಷ್ಟು ಬೇಗ ಲೆಬನಾನ್‌ನಲ್ಲಿ ಭೂ ಕಾರ್ಯಾಚರಣೆ ಆರಂಭಿಸುತ್ತೇವೆ. ಅದಕ್ಕಾಗಿ ಎಲ್ಲ ತಯಾರಿ ನಡೆಯುತ್ತಿದೆ’ ಎಂದು ಇಸ್ರೇಲ್‌ ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಮೂಲಕ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗುವ ಸೂಚನೆ ಕೊಟ್ಟಿದ್ದಾರೆ.

ಟೆಲ್‌ ಅವಿವ್‌ ಮೇಲೆ ದಾಳಿ– ಹುಥಿ (ದುಬೈ ವರದಿ): ಇಸ್ರೇಲ್‌ನ ಟೆಲ್‌ ಅವಿವ್‌ ಮತ್ತು ಅಶ್ಕೆಲಾನ್ ನಗರಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಲಾಗಿದೆ ಎಂದು ಯೆಮೆನ್‌ನ ಇರಾನ್ ಬೆಂಬಲಿತ ಹುಥಿ ಬಂಡುಕೋರರು ಶುಕ್ರವಾರ ಹೇಳಿದ್ದಾರೆ.

ಯೆಮೆನ್‌ ಕಡೆಯಿಂದ ಬಂದ ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ‘ಗಾಜಾ ಮತ್ತು ಲೆಬನಾನ್‌ ಮೇಲಿನ ದಾಳಿಯನ್ನು ನಿಲ್ಲಿಸುವವರೆಗೂ ನಾವು ಇಸ್ರೇಲ್‌ ವಿರುದ್ಧ ಹೋರಾಟ ಮುಂದುವರಿಸುತ್ತೇವೆ’ ಎಂದು ಹುಥಿ ಸೇನಾ ವಕ್ತಾರ ಯಹ್ಯಾ ಸರೀ ತಿಳಿಸಿದ್ದಾರೆ. 

ಸಿರಿಯಾದ ಐವರು ಸೈನಿಕರು ಬಲಿ

ಡಮಾಸ್ಕಸ್: ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ ಗಡಿ ಸಮೀಪ ಸಿರಿಯಾದ ಐವರು ಯೋಧರು ಮೃತಪಟ್ಟಿದ್ದಾರೆ ಎಂದು ಸನಾ ಸುದ್ದಿಸಂಸ್ಥೆ ವರದಿ ಮಾಡಿದೆ. ಸಿರಿಯಾ–ಲೆಬನಾನ್‌ ಗಡಿ ಸಮೀಪದ ಕಫಾರ್‌ ಯಬೂಸ್ ಎಂಬಲ್ಲಿ ನಿಯೋಜಿಸಲಾಗಿದ್ದ ಸೇನಾ ತುಕಡಿಯ ಮೇಲೆ ಇಸ್ರೇಲ್‌ ಸೇನೆ ದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ.

ಗಡಿ ದಾಟಿದ 30 ಸಾವಿರ ಮಂದಿ

ಬರ್ಲಿನ್: ಕಳೆದ 72 ಗಂಟೆಗಳಲ್ಲಿ ಲೆಬನಾನ್‌ನಿಂದ 30 ಸಾವಿರ ಮಂದಿ ಗಡಿ ದಾಟಿ ಸಿರಿಯಾಗೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್‌ (ಯುಎನ್‌ಎಚ್‌ಸಿಆರ್‌) ತಿಳಿಸಿದೆ. ‘ಇದರಲ್ಲಿ ಶೇ 80 ರಷ್ಟು ಸಿರಿಯನ್ನರು ಹಾಗೂ ಶೇ 20 ರಷ್ಟು ಮಂದಿ ಲೆಬನಾನ್‌ನವರು. ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT