ದಕ್ಷಿಣ ಕೊರಿಯಾದಿಂದ ಅಧಿಕ ಸಾಮರ್ಥ್ಯದ ಕ್ಷಿಪಣಿ ಪ್ರದರ್ಶನ
ಸೋಲ್: ಅಧಿಕ ಸಾಮರ್ಥ್ಯ ಮತ್ತು ಪರಿಣಾಮಕಾರಿ ಎನ್ನಲಾದ ಹೊಸ ಖಂಡಾಂತರ ಕ್ಷಿಪಣಿಯನ್ನು ದಕ್ಷಿಣ ಕೊರಿಯಾ ಶನಿವಾರ ಪ್ರದರ್ಶಿಸಿದೆ. ‘ಉತ್ತರ ಕೊರಿಯಾ ಒಂದು ವೇಳೆ ಅಣ್ವಸ್ತ್ರ ಬಳಕೆಗೆ ಯತ್ನಿಸಿದಲ್ಲಿ ತೀವ್ರ ಪ್ರತಿರೋಧ ಎದುರಿಸಲಿದ್ದು ಅಲ್ಲಿನ ಆಡಳಿತ ಕುಸಿಯಲಿದೆ’ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷರು ತನ್ನ ಸೇನಾ ದಿನ ಕಾರ್ಯಕ್ರಮದಲ್ಲಿ ಎಚ್ಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣ ಕೊರಿಯಾ 340 ಸೇನಾ ಪರಿಕರಗಳನ್ನು ಪ್ರದರ್ಶಿಸಿತು. ಇದರಲ್ಲಿ ಅಧಿಕ ಸಾಮರ್ಥ್ಯದ ಹ್ಯೂನ್ಮೂ–5 ಕ್ಷಿಪಣಿ ಸೇರಿದೆ. ‘ಇದು 8 ಟನ್ ತೂಕದ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಉತ್ತರ ಕೊರಿಯಾದಲ್ಲಿರುವ ಭೂಗತ ಬಂಕರ್‌ಗಳನ್ನು ಇದು ನಾಶಪಡಿಸಬಲ್ಲದು’ ಎಂದು ಸೇನೆ ಹೇಳಿಕೊಂಡಿದೆ.