ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶ | '36 july’ ಗೋಡೆಬರಹ; ಜುಲೈಗೆ ಹೆಚ್ಚುವರಿ 5 ದಿನ ಸೇರಿದ್ದು ಹೇಗೆ.?

Published : 20 ಆಗಸ್ಟ್ 2024, 12:40 IST
Last Updated : 20 ಆಗಸ್ಟ್ 2024, 12:40 IST
ಫಾಲೋ ಮಾಡಿ
Comments

ಢಾಕಾ: 'ಇದು ಹೊಸ ಬಾಂಗ್ಲಾದೇಶ, ಪ್ರತಿರೋಧ ಚಿರಕಾಲ ಇರಲಿ’ ಎಂಬಿತ್ಯಾದಿ ಗೋಡೆ ಬರಹಗಳು ಬಾಂಗ್ಲಾದೇಶದ ಎಲ್ಲೆಡೆ ರಾರಾಜಿಸುತ್ತಿವೆ. ಸರ್ಕಾರಿ ಕಟ್ಟಡಗಳು, ವಿಶ್ವವಿದ್ಯಾಲಯಗಳ ಆವರಣ, ಬೃಹತ್ ಗೇಟುಗಳ ಮುಂಭಾಗದಲ್ಲಿ ಸ್ಪ್ರೇ ಪೇಯಿಂಟ್ ಬಳಸಿ ಗೋಡೆ ಬರಹಗಳನ್ನು ಬರೆಯಲಾಗಿದೆ. ಇದರೊಂದಿಗೆ ‘36 July’ ಎಂಬ ಬರಹವೂ ಹೆಚ್ಚು ಜನಪ್ರಿಯವಾಗಿದೆ. 

ಬಾಂಗ್ಲಾದೇಶದ ರಾಷ್ಟ್ರಧ್ವಜ ಹಾಗೂ ಹೋರಾಟದ ಕೈಗಳನ್ನು ರಚಿಸಿದ ಯುವ ಕಲಾವಿದರ ಈ ಪರಿಶ್ರಮ ಎಲ್ಲೆಡೆ ವ್ಯಾಪಕವಾಗಿ ಸುದ್ದಿಯಾಗಿದೆ.

ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದಲ್ಲಿ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಪದಚ್ಯುತಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಕ್ಷಿಪ್ರ ಕ್ರಾಂತಿಯೊಂದು ಅಲ್ಲಿ ಸಂಭವಿಸಿತು. ಇದರ ಪರಿಣಾಮ ಆ. 5ರಂದು ಶೇಖ್ ಹಸೀನಾ ದೇಶ ತೊರೆದರು. ಈ ಘಟನೆಯಲ್ಲಿ 600ಕ್ಕೂ ಹೆಚ್ಚು ಜನರು ಪ್ರಾಣ ತೆತ್ತರು. ಹಲವರು ಗಾಯಗೊಂಡಿದ್ದಾರೆ.

ಹಸೀನಾ ಅವರ ಸರ್ಕಾರ ಪತನಗೊಂಡಿದ್ದು, ಬಾಂಗ್ಲಾದೇಶಕ್ಕೆ ಸಿಕ್ಕ 2ನೇ ಸ್ವಾತಂತ್ರ್ಯ ಎಂದೇ ಅಲ್ಲಿ ಸಂಭ್ರಮಿಸಲಾಗುತ್ತಿದೆ. 1971ರವರೆಗೂ ಪೂರ್ವ ಪಾಕಿಸ್ತಾನ ಎಂದೇ ಕರೆಯಲಾಗುತ್ತಿದ್ದ ಈ ಪ್ರದೇಶವನ್ನು ಮುಕ್ತಿ ಜೋಧಾಸ್ ಹಾಗೂ ಭಾರತೀಯ ಸೇನೆಯು ಭುಜಕ್ಕೆ ಭುಜ ಕೊಟ್ಟು ಪಾಕಿಸ್ತಾನ ಸೇನೆ ವಿರುದ್ಧ ಹೋರಾಡಿದವು. ಈ ಹೋರಾಟದಿಂದ ಜನಿಸಿದ ಬಾಂಗ್ಲಾದೇಶದ ಮೊದಲ ಅಧ್ಯಕ್ಷರಾಗಿ ಶೇಖ್ ಮುಜಿಬುರ್ ರೆಹಮಾನ್ ನೇಮಕಗೊಂಡರು.

ಇದೀಗ ಅವರ ಪುತ್ರಿ ಶೇಖ್ ಹಸೀನಾ ವಿರುದ್ಧ ಜುಲೈನಲ್ಲಿ ಆರಂಭಗೊಂಡ ಹೋರಾಟ ಆಗಸ್ಟ್ 5ರವರೆಗೂ ಮುಂದುವರಿಯಿತು. ಈ ಹೋರಾಟವನ್ನು ‘36 ಜುಲೈ’ ಎಂದೇ ಬಾಂಗ್ಲಾದೇಶದಲ್ಲಿ ಕರೆಯಲಾಗುತ್ತಿದೆ.

ಜುಲೈನಲ್ಲಿರುವುದೇ 31 ದಿನಗಳು. ಆದರೆ ಈ ಹೋರಾಟಕ್ಕೆ ಆ. 5ರಂದು ಜಯ ಸಿಕ್ಕ ಕಾರಣ, ಸಾಂಕೇತಿಕವಾಗಿ ಬಾಂಗ್ಲಾದೇಶಿಗರು 5 ದಿನವನ್ನು ಜುಲೈಗೆ ಸೇರಿಸಿದ್ದಾರೆ. ಹೀಗಾಗಿ ‘36 ಜುಲೈ– ನಾವು ಎಂದೂ ಮರೆಯುವುದಿಲ್ಲ, ಎಂದೂ ಕ್ಷಮಿಸುವುದೂ ಇಲ್ಲ’ ಎಂಬ ಬರಹಗಳೂ ದೇಶದ ಅಲ್ಲಲ್ಲಿ ಕಾಣಿಸುತ್ತಿವೆ. 

ಬಾಂಗ್ಲಾದೇಶದಲ್ಲಿ ಈಗ ಮಧ್ಯಂತರ ಸರ್ಕಾರ ರಚನೆಯಾಗಿದೆ. ಹೊಸದಾಗಿ ಎಂದು ಚುನಾವಣೆ ನಡೆಯಲಿದೆ ಎಂಬುದು ಈವರೆಗೂ ಘೋಷಣೆಯಾಗಿಲ್ಲ. ಹೋರಾಟದ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿ ಸಂಘಟನೆಗಳ ಬೇಡಿಕೆಗೆ ಅನುಗುಣವಾಗಿ ನೋಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT