ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್ ಮತಗಟ್ಟೆ ಸಮೀಕ್ಷೆ: ಭಾರತ ಮೂಲದ ಪ್ರಧಾನಿ ರಿಷಿ ಸುನಕ್‌ಗೆ ಹೀನಾಯ ಸೋಲು?

Published 5 ಜುಲೈ 2024, 3:09 IST
Last Updated 5 ಜುಲೈ 2024, 3:09 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್ ಸಂಸತ್ತಿನ ಸಾರ್ವತ್ರಿಕ ಚುನಾವಣೆ ಮುಗಿದಿದ್ದು, ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಹೀನಾಯ ಸೋಲಾಗುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ನುಡಿದಿವೆ. ಲೇಬರ್ ಪಾರ್ಟಿಯ ಪ್ರತಿಸ್ಪರ್ಧಿ ಕೇರ್ ಸ್ಟಾರ್ಮರ್ ಅಭೂತಪೂರ್ವ ಗೆಲುವು ದಾಖಲಿಸುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿವೆ.

ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ಲೇಬರ್ ಪಕ್ಷವು 410 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತಕ್ಕೆ ಬೇಕಾದ 326 ಅನ್ನು ದಾಟಲಿದೆ. ಈ ಮೂಲಕ 170 ಅಧಿಕ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ, ಆಡಳಿತರೂಢ ಕನ್ಸರ್ವೇಟಿವ್ ಪಕ್ಷವು ಕೇವಲ 131 ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಮುಖಭಂಗ ಅನುಭವಿಸಲಿದೆ ಎಂದು ಸಮೀಕ್ಷೆ ನುಡಿದಿವೆ.

ಬ್ರಿಟನ್ ಪ್ರಧಾನಿಗಾದಿಗೇರಲು ಸಜ್ಜಾಗಿರುವ ಸ್ಟಾರ್ಮರ್ , ‘ಈ ಚುನಾವಣೆಯಲ್ಲಿ ಲೇಬರ್‌ ಪಕ್ಷಕ್ಕಾಗಿ ಪ್ರಚಾರ ಮಾಡಿದ ಪ್ರತಿಯೊಬ್ಬರಿಗೂ ನಮಗೆ ಮತ ಚಲಾಯಿಸಿದ ಮತ್ತು ನಮ್ಮ ಬದಲಾದ ಲೇಬರ್ ಪಕ್ಷದ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು’ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈಶಾನ್ಯ ಇಂಗ್ಲೆಂಡ್‌ನ ಹೌಟನ್ ಮತ್ತು ಸುಂದರ್‌ಲ್ಯಾಂಡ್‌ ಕ್ಷೇತ್ರದಲ್ಲಿ ಮೊದಲ ಫಲಿತಾಂಶ ಬಂದಿದ್ದು, ಲೇಬರ್‌ ಪಕ್ಷದ ಅಭ್ಯರ್ಥಿ ಬ್ರಿಜೆಟ್ ಫಿಲಿಪ್ಸನ್ ಗೆಲುವು ಸಾಧಿಸುವುದರೊಂದಿಗೆ ಲೇಬರ್ ಪಕ್ಷ ಶುಭಾರಂಭ ಮಾಡಿದೆ.

ಆಘಾತಕಾರಿ ಮತಗಟ್ಟೆ ಸಮೀಕ್ಷೆ ಬಳಿಕ ಸುನಕ್ ಸಹ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ‘ಕನ್ಸರ್ವೇಟಿವ್ ಪಕ್ಷದ ನೂರಾರು ಅಭ್ಯರ್ಥಿಗಳು, ಸಾವಿರಾರು ಮಂದಿ ಕಾರ್ಯಕರ್ತರು ಮತ್ತು ಲಕ್ಷಾಂತರ ಮಂದಿ ಮತದಾರರಿಗೆ ನಿಮ್ಮ ಪರಿಶ್ರಮಕ್ಕೆ ಧನ್ಯವಾದ. ನಿಮ್ಮ ಬೆಂಬಲಕ್ಕೆ ಧನ್ಯವಾದ. ನಿಮ್ಮ ಮತಕ್ಕೆ ಧನ್ಯವಾದ’ ಎಂದು ತಿಳಿಸಿದ್ದಾರೆ.

ಗುರುವಾರ ಮತದಾನ ಆರಂಭವಾಗುತ್ತಿದ್ದಂತೆ ಸ್ಥಳೀಯ ಮತಗಟ್ಟೆಗೆ ಕೈಕೈ ಹಿಡಿದು ಬಂದ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿ ತಮ್ಮ ಮತದಾನ ಮಾಡಿದ್ದರು. ಇಂದು ಮತ ಎಣಿಕೆ ನಡೆಯುತ್ತಿದ್ದು, ಮತಗಟ್ಟೆ ಸಮೀಕ್ಷೆ ನಿಜವಾದರೆ ಬ್ರಿಟನ್ ಪ್ರಧಾನಿಗಾದಿಗೆ ಏರಿದ್ದ ಮೊದಲ ಭಾರತೀಯ ರಿಷಿಸುನಕ್ ತೀವ್ರ ಮುಖಭಂಗ ಅನುಭವಿಸಲಿದ್ದಾರೆ.

ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನ 650 ಕ್ಷೇತ್ರಗಳಿಗೆ ಮತದಾನ ನಡೆಯಿತು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 326 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.

ಲೇಬರ್ ಮತ್ತು ಕನ್ಸರ್ವೇಟಿವ್ ಪಕ್ಷಗಳ ಜೊತೆಗೆ ಲಿಬರಲ್ ಡೆಮಾಕ್ರಟ್ಸ್, ಗ್ರೀನ್ ಪಾರ್ಟಿ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ (ಎಸ್‌ಎನ್‌ಪಿ), ಎಸ್‌ಡಿಎಲ್‌ಪಿ, ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ (ಡಿಯುಪಿ), ಸಿನ್ ಫಿಯೆನ್, ಪ್ಲೈಡ್ ಸಿಮ್ರು, ವರ್ಕರ್ಸ್ ಪಾರ್ಟಿಗಳ ಅಭ್ಯರ್ಥಿಗಳು ಕಣದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT