ಭ್ರಷ್ಟಾಚಾರ ಎನ್ನುವುದು ಹೊಸದಾಗಿ ಹುಟ್ಟಿಕೊಂಡ ರೋಗವೇನಲ್ಲ, ಇದು ಭಾರತದ ವಿಶೇಷ ಕೂಡಾ ಅಲ್ಲ.ಎಲ್ಲ ಕಾಲಗಳಲ್ಲಿಯೂ, ಎಲ್ಲ ದೇಶಗಳಲ್ಲಿಯೂ ಈ ರೋಗ ಹಾವಳಿ ನಡೆಸಿದೆ. ಇದೊಂದು ಮನುಷ್ಯಸಹಜವಾದ ದೌರ್ಬಲ್ಯ.ಎಲ್ಲಿಯವರೆಗೆ ಸಮಾಜದಲ್ಲಿ ಇದನ್ನು ಹೊಡೆದೋಡಿಸುವ ‘ರೋಗನಿರೋಧಕ ಶಕ್ತಿ’ ಇರುತ್ತದೋ, ಅಲ್ಲಿಯವರೆಗೆ ಈ ರೋಗ ನಿಯಂತ್ರಣದಲ್ಲಿರುತ್ತದೆ. ‘ರೋಗನಿರೋಧಕ ಶಕ್ತಿ’ ಕುಂದುತ್ತಿದ್ದಂತೆಯೇ ರೋಗ ಹೆಡೆಬಿಚ್ಚಿ ಹರಡತೊಡಗುತ್ತದೆ. ಇಂತಹದ್ದೊಂದು ಸಮರ ಮಾನವ ಇತಿಹಾಸದುದ್ದಕ್ಕೂ ನಡೆಯುತ್ತಾ ಬಂದಿದೆ.

ಭ್ರಷ್ಟಾಚಾರದ ಕೈ ಎಂದೂ ಮೇಲಾಗಿದ್ದೇ ಇಲ್ಲ. ಭ್ರಷ್ಟಾಚಾರದ ಸುಳಿವು ಸಿಕ್ಕಾಗೆಲ್ಲ ಅದನ್ನು ಅನಾವರಣಗೊಳಿಸುವ, ಅದರ ವಿರುದ್ಧ ಜನಜಾಗೃತಿಗೊಳಿಸುವ, ಅಂತಿಮವಾಗಿ ಭ್ರಷ್ಟರನ್ನು ನ್ಯಾಯದ ಕಟಕಟೆಯಲ್ಲಿ ತಂದು ನಿಲ್ಲಿಸುವ ವ್ಯವಸ್ಥೆಯೊಂದು ಸಮಾಜದಲ್ಲಿ ಸದಾ ಜಾಗೃತವಾಗಿದ್ದದ್ದು ಇದಕ್ಕೆ ಕಾರಣ. ಜನಪರ ಚಿಂತನೆಯ ರಾಜಕೀಯ ನೇತಾರರು, ನ್ಯಾಯನಿಷ್ಠ ನ್ಯಾಯಮೂರ್ತಿಗಳು, ವೃತ್ತಿನಿಷ್ಠ ಪತ್ರಕರ್ತರು, ಜಾಗೃತ ಜನತೆ.. ಮೊದಲಾದವರೆಲ್ಲ ಸಮಾಜದ ರೋಗ ಚಿಕಿತ್ಸಕ ವ್ಯವಸ್ಥೆಯ ಭಾಗವಾಗಿದ್ದರು. ದೇಶದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ದದ ಹೋರಾಟದ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಇದು ಮನದಟ್ಟಾಗುತ್ತದೆ. ಆದ್ದರಿಂದಲೇ ಸಮಾಜ ಇಷ್ಟರಮಟ್ಟಿಗಾದರೂ ಸ್ವಸ್ಥವಾಗಿ ಇದೆ. ಆದರೆ ಭಾರತೀಯ ಸಮಾಜದಲ್ಲಿನ ಈ ‘ರೋಗನಿರೋಧಕ ವ್ಯವಸ್ಥೆ’ಯೇ ದುರ್ಬಲವಾಗುತ್ತಿದೆಯೇನೋ ಎಂದು ಆತಂಕಪಡುವಂತಿದೆ ದೇಶದಲ್ಲಿನ ಇತ್ತೀಚಿನ ವಿದ್ಯಮಾನಗಳು.

ರಾಜಕೀಯ ಕ್ಷೇತ್ರದ ಭ್ರಷ್ಟಾಚಾರಕ್ಕೆ ಬಲಿಯಾದವರಲ್ಲಿ ರಾಜೀವ್ ಗಾಂಧಿಯೇ ಕೊನೆಯವರು. ಅವರ ನಂತರದ ಸರ್ಕಾರಗಳಲ್ಲಿ ಭ್ರಷ್ಟಾಚಾರ ನಡೆದೇ ಇಲ್ಲ ಎಂದಲ್ಲ. ಆದರೆ ಅದಕ್ಕಾಗಿ ಯಾರೂ ತಲೆದಂಡ ಕೊಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಲಿಲ್ಲ. ಪಿ.ವಿ.ನರಸಿಂಹರಾವ್ ಬಹುಮತ ಗಳಿಸಲು ಸಂಸದರನ್ನೇ ಖರೀದಿಸಲು ಹೊರಟ ಆರೋಪಕ್ಕೊಳಗಾದವರು. ಸುಖ್‌ರಾಂನಂತಹ ಭ್ರಷ್ಟರು ಹುಟ್ಟಿಕೊಂಡಿದ್ದು ಅವರ ಕಾಲದಲ್ಲಿಯೇ. ಆದರೆ ಅವರು ಅಧಿಕಾರ ಕಳೆದುಕೊಳ್ಳಲು ಭ್ರಷ್ಟಾಚಾರದ ದೂರುಗಳು ಕಾರಣವೇನಲ್ಲ. ಎನ್‌ಡಿಎ ಅಧಿಕಾರವಧಿಯಲ್ಲಿ ಈಗ ಚರ್ಚೆಯಲ್ಲಿರುವ ಟೆಲಿಕಾಂ ಕ್ಷೇತ್ರದ ಲೈಸೆನ್ಸ್ ನೀಡಿಕೆಯಿಂದ ಹಿಡಿದು ರಕ್ಷಣಾ ಖಾತೆಯ ಶವಪೆಟ್ಟಿಗೆ ಖರೀದಿಯವರೆಗೆ ಎಲ್ಲದರಲ್ಲಿಯೂ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಆಡಳಿತಾರೂಢ ಪಕ್ಷದ ಅಧ್ಯಕ್ಷರೇ ಲಂಚ ಪಡೆಯುವಾಗ ಪತ್ರಕರ್ತರ ಕ್ಯಾಮೆರಾ ಕಣ್ಣಿನಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿದ್ದರು.

ಆದರೆ ಅಟಲಬಿಹಾರಿ ವಾಜಪೇಯಿ ಅವರು ಅಧಿಕಾರ ಕಳೆದುಕೊಂಡದ್ದು ಕೇವಲ ಭ್ರಷ್ಟಾಚಾರದ ಆರೋಪಗಳಿಂದಲ್ಲ.ಇದರಿಂದಾಗಿಯೇ ಭ್ರಷ್ಟಾಚಾರ ಎನ್ನುವುದು ಚುನಾವಣೆಯಲ್ಲಿ ಸೋಲು-ಗೆಲುವು ನಿರ್ಧರಿಸುವ ವಿಷಯವೇ ಅಲ್ಲ ಎಂದು ರಾಜಕಾರಣಿಗಳು ಖುಷಿಖುಷಿಯಾಗಿ ಹೇಳುತ್ತಿರುತ್ತಾರೆ. ಕೆಲವು ಚುನಾವಣೆಗಳ ಫಲಿತಾಂಶವನ್ನು ನೋಡಿದರೂ ಹಾಗೆಯೇ ಅನಿಸುತ್ತದೆ. ಇದಕ್ಕೇನು ಕಾರಣ?

ಹಿಂದಿನ ಕಾಲದ ಶಾಸಕಾಂಗ ಈಗಿನಷ್ಟು ಭ್ರಷ್ಟಗೊಂಡಿರಲಿಲ್ಲ. ಲೋಕಸಭೆಯಲ್ಲಿ ಜವಾಹರಲಾಲ್ ನೆಹರೂ ಅವರಂತಹ ಚಿಂತನಶೀಲ ರಾಜಕಾರಣಿಯಲ್ಲಿಯೂ ಕೀಳರಿಮೆ ಹುಟ್ಟಿಸಬಲ್ಲಂತಹ ಮತ್ತು ಅವರಿಗಿಂತಲೂ ಪ್ರಖರ ಚಿಂತಕರಾದ ಆಚಾರ್ಯ ಕೃಪಲಾನಿ, ಎಸ್.ಪಿ.ಮುಖರ್ಜಿ, ರಾಮಮನೋಹರ ಲೋಹಿಯಾ, ಅಶೋಕ್ ಮೆಹ್ತಾ, ಎ.ಕೆ.ಗೋಪಾಲನ್, ಮಿನೂ ಮಸಾನಿ ಮೊದಲಾದವರಿದ್ದರು. ಈ ನಾಯಕರ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕುಗಳ ನಡುವೆ ಅಂತಹ ಅಂತರಗಳೇನಿರಲಿಲ್ಲ. ಸತತ ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ವಿರೋಧದ ದೀವಟಿಗೆಯಲ್ಲಿನ ಬೆಂಕಿಯನ್ನು ಈ ನಾಯಕರು ಆರಲು ಬಿಟ್ಟಿರಲಿಲ್ಲ. ಅಧಿಕಾರಕ್ಕಾಗಿ ನಂಬಿದ ಸಿದ್ದಾಂತದ ಜತೆ ರಾಜೀ ಮಾಡಿಕೊಂಡು ಆಡಳಿತಾರೂಢ ಪಕ್ಷದ ಜತೆ ಹೊಂದಿಕೊಳ್ಳುವ ಆತ್ಮದ್ರೋಹದ ಕೆಲಸವನ್ನು ಈಗಿನವರಂತೆ ಅವರು ಮಾಡಿರಲಿಲ್ಲ.

ಇಂದಿರಾಗಾಂಧಿಯವರ ಪದಚ್ಯುತಿಗೂ ಕೇವಲ ವಿರೋಧಪಕ್ಷಗಳ ನಾಯಕರು ನಡೆಸಿದ ಹೋರಾಟ ಕಾರಣ ಅಲ್ಲ. ಆ ಪಕ್ಷದೊಳಗಿಂದಲೇ ಚಂದ್ರಶೇಖರ್, ಜಗಜೀವನರಾಂ ಮೊದಲಾದ ವಿಶ್ವಾಸಾರ್ಹ ನಾಯಕರು ನಾಯಕತ್ವದ ವಿರುದ್ಧ ಬಂಡೆದ್ದು ಇಂದಿರಾಗಾಂಧಿಗೆ ಮುಳುವಾಯಿತು.ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ವೈಯಕ್ತಿಕ ಸ್ನೇಹವನ್ನು ಕೂಡಾ ಕಡಿದುಕೊಂಡು ವಿ.ಪಿ.ಸಿಂಗ್ ಕಾಂಗ್ರೆಸ್ ಪಕ್ಷದಿಂದ ಹೊರಗೆ ಬರದೇ ಇದ್ದಿದ್ದರೆ ರಾಜೀವ್‌ಗಾಂಧಿ ಸರ್ಕಾರದ ಪತನ ಆಗುತ್ತಿರಲಿಲ್ಲ. ಒಂದು ಭ್ರಷ್ಟವ್ಯವಸ್ಥೆಯ ನಾಶಕ್ಕೆ ಅದರೊಳಗಿಂದಲೇ, ಅದರ ವಿರುದ್ದ ಹುಟ್ಟಿಕೊಂಡ ಬಂಡಾಯ ಎಷ್ಟೋ ಬಾರಿ ಕಾರಣವಾಗಿದೆ.

ಆದರೆ ಅಂತಹ ಪರಿಸ್ಥಿತಿ ಈಗ ಕಾಣುತ್ತಿಲ್ಲ. ಮೊದಲು ಕಾಮನ್‌ವೆಲ್ತ್ ಕ್ರೆಡಾಕೂಟ, ನಂತರ ಮುಂಬೈನ ಆದರ್ಶ ಹೌಸಿಂಗ್ ಸೊಸೈಟಿ, ಈಗ ಸರ್ಕಾರದ ಬೊಕ್ಕಸಕ್ಕೆ ಅಂದಾಜು 1.76 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟ ಉಂಟುಮಾಡಿರುವ 2ಜಿ ತರಂಗಾಂತರ ಹಗರಣ. ಪ್ರಧಾನಿ ಮನಮೋಹನ್‌ಸಿಂಗ್ ವೈಯಕ್ತಿಕವಾಗಿ ಭ್ರಷ್ಟರಲ್ಲದೆ ಇರಬಹುದು. ಆದರೆ ಅವರದ್ದೇ ಸರ್ಕಾರದಲ್ಲಿ ಇಂತಹ ಹಗರಣಗಳು ನಡೆದಿರುವ ಕಾರಣ ನೈತಿಕವಾಗಿ ಅವರೂ ಹೊಣೆಗಾರರಲ್ಲವೇ? ಹೀಗಿದ್ದಾಗ ಪ್ರಧಾನಿ ಅವರು ಟೆಲಿಕಾಂ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆಗೆ ಒಪ್ಪಿಕೊಳ್ಳಬೇಕು. ಇಲ್ಲವಾದರೆ ಆ ನಿರ್ಧಾರ ಕೈಗೊಳ್ಳಲು ಅವರು ಪ್ರತಿನಿಧಿಸುವ ಪಕ್ಷದ ವಿರೋಧ ಇದೆ ಎಂದಾದರೆ ಆ ಪಕ್ಷವನ್ನು ಬಿಟ್ಟು ಹೊರಬರಬೇಕು. ಭ್ರಷ್ಟತೆಯ ಕಳಂಕ ಅಂಟಿಕೊಂಡಿರುವ ಅಧಿಕಾರವೂ ಬೇಕು, ಪ್ರಾಮಾಣಿಕತೆಯ ಕಿರೀಟವೂ ಬೇಕೆಂದರೆ ಹೇಗೆ? ಇಂತಹ ಎಡಬಿಡಂಗಿ ನಿಲುವಿನ ಮನಮೋಹನ್‌ಸಿಂಗ್ ಮತ್ತು ‘ಸುಮ್ಮನಿರದಿದ್ದರೆ ನಿಮ್ಮದ್ದೆಲ್ಲವನ್ನೂ ಬಹಿರಂಗಗೊಳಿಸುತ್ತೇನೆ’ ಎಂದು ವಿರೋಧಪಕ್ಷಗಳನ್ನು ‘ಬ್ಲ್ಯಾಕ್‌ಮೇಲ್’ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಂತಹವರಿಂದಾಗಿಯೇ ಭ್ರಷ್ಟರ ವಿರುದ್ಧ ದನಿ ಎತ್ತಲಾಗದಷ್ಟು ಶಾಸಕಾಂಗ ದುರ್ಬಲವಾಗಿ ಹೋಗಿರುವುದು.

ನ್ಯಾಯಾಂಗದ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ನ್ಯಾಯದೇಗುಲದ ಅಂಗಳದಲ್ಲಿ ಸುಳಿದಾಡುತ್ತಿರುವ ಹಗರಣಗಳು ಅದರ ಗರ್ಭಗುಡಿಯನ್ನೂ ಪ್ರವೇಶಿಸುತ್ತಿವೆ ಎಂಬ ಸುದ್ದಿ ನ್ಯಾಯಾಂಗದ ಬಗ್ಗೆ ಅಭಿಮಾನ ನಿರೀಕ್ಷೆಗಳನ್ನಿಟ್ಟುಕೊಂಡವರನ್ನು ಕಳವಳಕ್ಕೀಡು ಮಾಡಿದೆ. ಇತ್ತೀಚಿನವರೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆಯಷ್ಟೇ ಆರೋಪಗಳು ಕೇಳಿಬರುತ್ತಿದ್ದವು. ಆದರೆ ಈಗ ನಾವೆಲ್ಲ ಆದರ್ಶಪ್ರಾಯರೆಂದು ತಿಳಿದುಕೊಂಡಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧವೂ ಕೇಳಿ ಬರುತ್ತಿರುವ ಆರೋಪಗಳು ನ್ಯಾಯಾಂಗದ ಬಗ್ಗೆಯೇ ಭ್ರಮನಿರಸನವಾಗುವಂತಿದೆ. ಸ್ವಂತ ಆಸ್ತಿ ವಿವರ ಬಹಿರಂಗ, ನ್ಯಾಯಮೂರ್ತಿಗಳ ನೇಮಕ, ಆರೋಪಿ ನ್ಯಾಯಮೂರ್ತಿಗಳ ತನಿಖೆ ಮೊದಲಾದ ವಿಚಾರಗಳ ಬಗ್ಗೆ ಸುಪ್ರೀಂ ಕೋರ್ಟ್ ನಿಲುವು ಸಾರ್ವಜನಿಕರ ಆಶಯದಂತಿಲ್ಲ. ಇದರಿಂದಾಗಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯಲ್ಲಿ ಮಾದರಿಯಾಗಿರಬೇಕಾಗಿರುವ ನ್ಯಾಯಮೂರ್ತಿಗಳ ಬಗ್ಗೆಯೇ ಜನತೆ ಸಂಶಯಪಡುವಂತಾಗಿದೆ. ಭ್ರಷ್ಟರಿಗೆ ಬೇಕಾಗಿರುವುದು ಇದೇ ಅಲ್ಲವೇ?

ಭ್ರಷ್ಟಾಚಾರದ ನಿರ್ಮೂಲನೆಗಾಗಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ರಚನೆಗೊಂಡ ಕಾವಲು ಸಂಸ್ಥೆಗಳದ್ದು ಇದೇ ಸ್ಥಿತಿ. ಕೇಂದ್ರ ತನಿಖಾ ಆಯೋಗವನ್ನು (ಸಿಬಿಐ) ಎಂದೋ ರಾಜಕೀಯ ದಾಸ್ಯದಲ್ಲಿ ಕೆಡವಿಹಾಕಲಾಗಿದೆ.ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಾಗಿರುವ ಸಿಬಿಐ, ಆತ್ಮರಕ್ಷಣೆಗಾಗಿ ಮತ್ತು ವಿರೋಧಿಗಳ ವಿರುದ್ಧ ದ್ವೇಷಸಾಧನೆಗಾಗಿ ಆಡಳಿತಾರೂಢ ಪಕ್ಷದ ಕೈಯಲ್ಲಿರುವ ಆಯುಧವಾಗಿ ಹೋಗಿದೆ. ಇಂದಿರಾಗಾಂಧಿಯವರಿಂದ ಪ್ರಾರಂಭಗೊಂಡು ಅಟಲಬಿಹಾರಿ ವಾಜಪೇಯಿವರೆಗೆ ಎಲ್ಲ ಪ್ರಧಾನಿಗಳು ಸಿಬಿಐನ ಒಂದೊಂದೇ ಹಲ್ಲನ್ನು ಕಿತ್ತುಹಾಕಿದ್ದಾರೆ.ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಶಾಸನಬದ್ಧ ಸ್ಥಾನಮಾನ ನೀಡಿ ಸಿಬಿಐ ಅನ್ನು ಅದರ ಮೇಲ್ವಿಚಾರಣೆಗೆ ಒಪ್ಪಿಸಬೇಕೆಂದು ಸುಪ್ರೀಂ ಕೋರ್ಟ್ ಹದಿನೈದು ವರ್ಷಗಳ ಹಿಂದೆಯೇ ಹೇಳಿತ್ತು.ಸಿಬಿಐ ಅನ್ನು ಸಶಕ್ತಗೊಳಿಸುವುದು ಯಾವ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ.

ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರಿ ಉದ್ದಿಮೆಗಳಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ರಚಿಸಲಾಗಿರುವ ಕೇಂದ್ರ ಜಾಗೃತ ಆಯೋಗವನ್ನು (ಸಿವಿಸಿ) ಕೂಡಾ ದುರ್ಬಲಗೊಳಿಸುವ ಹುನ್ನಾರ ನಡೆದಿದೆ. ಸಲಹಾ ಸಂಸ್ಥೆಯ ರೂಪದಲ್ಲಿ ಗೃಹ ಸಚಿವಾಲಯದ ಇನ್ನೊಂದು ಇಲಾಖೆಯಂತಿರುವ ಸಿವಿಸಿಯನ್ನು ಬಲಗೊಳಿಸಲು ಅದಕ್ಕೆ ಶಾಸನಬದ್ದ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ರೂಪಿಸಲಾಗಿರುವ ಮಸೂದೆಗೆ ಸಂಸತ್ ಇನ್ನೂ ಅಂಗೀಕಾರ ನೀಡಿಲ್ಲ.ಈಗ ಕಳಂಕಿತ ವ್ಯಕ್ತಿಯೊಬ್ಬರನ್ನು ಆಯುಕ್ತರನ್ನಾಗಿ ನೇಮಿಸುವ ಮೂಲಕ ಸಿವಿಸಿಯ ವಿಶ್ವಾಸಾರ್ಹತೆಯನ್ನು ನಾಶಮಾಡುವಂತಹ ಸಂಚು ನಡೆದಿದೆ.

ಇತ್ತೀಚಿನ ಟೆಲಿಕಾಂ ಹಗರಣ ಬಯಲಿಗೆ ಬಂದದ್ದು ಮಹಾಲೇಖಪಾಲರ (ಸಿಎಜಿ) ವರದಿಯಿಂದಾಗಿ. ಆದರೆ ಸರ್ಕಾರ ಸಿಎಜಿಯನ್ನು ನಪುಂಸಕ ಸ್ಥಿತಿಯಲ್ಲಿಟ್ಟಿದೆ. ಅದು ಸಲ್ಲಿಸುವ ವರದಿ ಆಧಾರದಲ್ಲಿ ವಿರೋಧಪಕ್ಷಗಳು ಒಂದಷ್ಟು ದಿನ ಗದ್ದಲ ಎಬ್ಬಿಸಬಹುದು ಅಷ್ಟೆ, ಉಳಿದಂತೆ ಅದಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ. ಈ ಸಂಸ್ಥೆಗೆ ಬೆಲೆ ಬರಬೇಕಾದರೆ ಇದು ನೀಡುವ ವರದಿಯಲ್ಲಿನ ಆರೋಪಗಳನ್ನು ಪ್ರಥಮ ಮಾಹಿತಿ ವರದಿಗಳಾಗಿ ಪರಿವರ್ತಿಸಿ ಸಿಬಿಐ ಇಲ್ಲವೇ ಭ್ರಷ್ಟಾಚಾರ ವಿರೋಧಿ ಇಲಾಖೆಯಿಂದ ತನಿಖೆಗೊಳಪಡಿಸಬೇಕು ಎನ್ನುವ ಬೇಡಿಕೆ ಇದೆ. ಯಾವ ಸರ್ಕಾರಕ್ಕೂ ಇದು ಬೇಕಿಲ್ಲ.

ಮೊದಲ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಮೊರಾರ್ಜಿ ದೇಸಾಯಿ ಅವರು 1967ರಲ್ಲಿಯೇ ಒಂಬುಡ್ಸ್‌ಮನ್ ರೂಪದ ಲೋಕಪಾಲರ ನೇಮಕಕ್ಕೆ ಶಿಫಾರಸು ಮಾಡಿದ್ದರು. ನಲ್ವತ್ತಮೂರು ವರ್ಷಗಳ ನಂತರವೂ ಲೋಕಪಾಲ ಮಸೂದೆ ಸಂಸತ್‌ನ ಅಂಗಳದಲ್ಲಿ ಬಿದ್ದಿದೆ. ಆಯೋಗದ ಅಡಿಯಲ್ಲಿ ಪ್ರಧಾನಮಂತ್ರಿಯವರನ್ನೂ ಲೋಕಪಾಲರ ವ್ಯಾಪ್ತಿಯೊಳಗೆ ತರಲಾಗಿತ್ತು. ಪರಿಷ್ಕೃತ ಮಸೂದೆಯಲ್ಲಿ ಅವರನ್ನು ಹೊರಗಿಡಲಾಗಿದೆ.ರಾಜ್ಯಗಳ ಲೋಕಾಯುಕ್ತರದ್ದು ಇದೇ ಕತೆ. ಕೇಂದ್ರದಲ್ಲಿ ಯುಪಿಎ ಸರ್ಕಾರದ ಹಗರಣಗಳ ಬೆನ್ನುಹತ್ತಿರುವ ಬಿಜೆಪಿ, ಕರ್ನಾಟಕದಲ್ಲಿ ತಮ್ಮದೇ ಸರ್ಕಾರದ ಭ್ರಷ್ಟರ ಬಣ್ಣ ಬಯಲು ಮಾಡುತ್ತಿರುವ ಲೋಕಾಯುಕ್ತರ ವಿರುದ್ಧ ತಿರುಗಿಬಿದ್ದಿದೆ.ಹವಾಲ ಹಗರಣದಲ್ಲಿನ ಒಂದು ಸಣ್ಣ ಆರೋಪಕ್ಕಾಗಿ ರಾಜೀನಾಮೆ ಎಸೆದವರು ಎಲ್.ಕೆ.ಅಡ್ವಾಣಿ. ಅವರು ಕೂತಿದ್ದ ಕುರ್ಚಿಯಲ್ಲಿ ‘ಗಲ್ಲಾಪೆಟ್ಟಿಗೆಯ ಮುಂದೆ ಕೂತ ವ್ಯಾಪಾರಿ’ಯಂತೆ ಕಾಣುವ ನಿತಿನ್ ಗಡ್ಕರಿ ಎನ್ನುವ ಉದ್ಯಮಿ ಬಂದು ಕೂತರೆ ಇದಕ್ಕಿಂತ ಹೆಚ್ಚೇನು ನಿರೀಕ್ಷಿಸಬಹುದು?

ದೇಶದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧದ ಎಲ್ಲ ಆಂದೋಲನಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು ಪತ್ರಕರ್ತರು.ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಿಗಿರುವ ‘ವಿಶೇಷ ರಕ್ಷಣೆ’ ಇಲ್ಲವೇ ‘ವಿಶೇಷ ಅಧಿಕಾರ’ ಇಲ್ಲದೆ ಇದ್ದರೂ, ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಸಂವಿಧಾನದಲ್ಲಿಯೇ ಸೇರಿಲ್ಲದೆ ಇದ್ದರೂ ಪತ್ರಕರ್ತರು ಅಪಾಯಕ್ಕೆ ಎದೆಕೊಟ್ಟು ಭ್ರಷ್ಟರ ವಿರುದ್ಧ ಲೇಖನಿಯನ್ನು ಖಡ್ಗದಂತೆ ಝಳಪಿಸುತ್ತಾ ಬಂದವರು. ಆದರೆ ಇದೇ ಪತ್ರಕರ್ತರು ಈಗ ಭ್ರಷ್ಟರ ಸಾಲಿನಲ್ಲಿ ಆರೋಪಿಗಳ ಕಟಕಟೆಯಲ್ಲಿ ಬಂದು ನಿಂತಿದ್ದಾರೆ. ರಾಜ್ಯದ 20 ಪತ್ರಕರ್ತರ ಆಸ್ತಿ ತನಿಖೆಗೆ ಯಾರೋ ಲೋಕಾಯುಕ್ತರಿಗೆ ದೂರು ನೀಡಿದ್ದಾರಂತೆ. ಇಂತಹ ಭ್ರಷ್ಟ ಪತ್ರಕರ್ತರಿಂದ ಭ್ರಷ್ಟಾಚಾರದ ವಿರುದ್ಧ ಯಾವ ಹೋರಾಟ ಸಾಧ್ಯ?

ಈ ಎಲ್ಲ ಕಾರಣಗಳಿಂದಾಗಿ ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯ ಒಂದು ಅನಿವಾರ್ಯ ಭಾಗವೇನೋ ಎಂದು ರಾಜಕಾರಣಿಗಳು ಮಾತ್ರವಲ್ಲ, ಜನತೆ ಕೂಡಾ ಒಪ್ಪಿಕೊಂಡಂತಹ ಪರಿಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ.ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವವರು ಅಲ್ಪಸಂಖ್ಯಾತರಾಗುತ್ತಿದ್ದಾರೆ, ಭ್ರಷ್ಟಾಚಾರಿಗಳು ಬಹುಸಂಖ್ಯಾತರಾಗುತ್ತಿದ್ದಾರೆ ಎನ್ನುವುದೇ ಈಗಿನ ಆತಂಕ. ಇದಕ್ಕೇನು ಪರಿಹಾರವೇ ಇಲ್ಲವೇ? ಖಂಡಿತ ಇದೆ. ದುಡ್ಡು ಮತ್ತು ಅಧಿಕಾರ ಇದ್ದರೆ ಎಲ್ಲವನ್ನೂ, ಎಲ್ಲರನ್ನೂ ಕೊಂಡುಕೊಳ್ಳಬಲ್ಲೆ ಎನ್ನುವ ಭ್ರಷ್ಟರು ತಲೆಎತ್ತಲು ಓಡಾಡಲು ಸಾಧ್ಯವಾಗದಂತೆ ಅವರನ್ನು ಸಾಮೂಹಿಕವಾಗಿ ಬಹಿಷ್ಕರಿಸುವ ದಿಟ್ಟತನವನ್ನು ಸಮಾಜ ತೋರಬೇಕು. ದುಡ್ಡು, ಅಧಿಕಾರ ಇದ್ದವರನ್ನೆಲ್ಲ ವೇದಿಕೆಯಲ್ಲಿ ತಂದು ಕೂರಿಸಿ ಮೆರವಣಿಗೆ ಮಾಡುವುದಲ್ಲ.ಭ್ರಷ್ಟತೆಯನ್ನು ಸಹಿಸಿಕೊಂಡು ನಮ್ಮ ಮನಸ್ಸು ಭ್ರಷ್ಟಗೊಳ್ಳಲು ಬಿಡಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.