ನಿರಂತರ ಚಾರಿತ್ರ್ಯಹನನಕ್ಕೆ ಈಡಾಗುತ್ತಿರುವ ಕೇಂದ್ರ ತನಿಖಾದಳ (ಸಿಬಿಐ)ದ ಬಗ್ಗೆ ಈಗ ಯಾರಿಗೂ ವಿಶ್ವಾಸ ಉಳಿದಿಲ್ಲ. ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಕಣ್ಣಿಡಲು ಸ್ಥಾಪನೆಯಾಗಿರುವ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಈಗ ಅದೇ ಹಾದಿಯಲ್ಲಿದೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ಪಿ.ಜೆ.ಥಾಮಸ್ ಅವರನ್ನು ಸಿವಿಸಿಯ ಮುಖ್ಯ ಆಯುಕ್ತರನ್ನಾಗಿ ನೇಮಿಸುವ ಮೂಲಕ ಈ ಸಂಸ್ಥೆಯ ಚಾರಿತ್ರ್ಯಹನನದ ಪ್ರಕ್ರಿಯೆಯನ್ನು ಹಿಂದಿನ ಎಲ್ಲ ಸರ್ಕಾರಗಳಂತೆ ಯುಪಿಎ ಸರ್ಕಾರ ಕೂಡಾ ಮುಂದುವರಿಸಿಕೊಂಡು ಹೋಗಿದೆ. ಒಂದೆಡೆ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಅನಿಯಂತ್ರಿತವಾಗಿ ಬೆಳೆಯುತ್ತಿದ್ದರೆ, ಇನ್ನೊಂದೆಡೆ ಅದರ ನಿಯಂತ್ರಣಕ್ಕೆಂದೇ ಹುಟ್ಟುಹಾಕಲಾದ ಸಂಸ್ಥೆಗಳು ಒಂದೊಂದಾಗಿ ವಿಶ್ವಾಸಾರ್ಹತೆ ಕಳೆದುಕೊಂಡು ಬಡಕಲಾಗುತ್ತಿವೆ.

ಇವೆಲ್ಲವೂ ಆಕಸ್ಮಿಕವಾಗಿ ನಡೆಯುತ್ತಿದೆಯೇ? ಇಲ್ಲ, ಆಡಳಿತ ಮತ್ತು ವಿರೋಧಪಕ್ಷಗಳೆರಡೂ ಪರಸ್ಪರ ಷಾಮೀಲಾಗಿ ಜನರ ಹಾದಿ ತಪ್ಪಿಸುತ್ತಿವೆಯೇ? ಎರಡನೆಯ ಅಭಿಪ್ರಾಯವನ್ನೇ ನಂಬಲು ಕಾರಣ ಇದೆ. ಯಾಕೆಂದರೆ ಈಗ ನಡೆಯಬೇಕಾಗಿರುವುದು ಸಿವಿಸಿಯನ್ನು ಹೇಗೆ ಬಲಪಡಿಸಬೇಕೆಂಬ ಬಗ್ಗೆ ಚಿಂತನೆ, ಆದರೆ ನಡೆಯುತ್ತಿರುವುದು ಅದರ ಮುಖ್ಯ ಆಯುಕ್ತರು ಪ್ರಾಮಾಣಿಕರು ಹೌದೋ, ಅಲ್ಲವೋ ಎನ್ನುವ ವ್ಯರ್ಥ ಚರ್ಚೆ. ಸಿವಿಸಿಗೆ ತಗಲಿರುವ ರೋಗದ ಮೂಲದ ಬಗ್ಗೆ ಯಾರೂ ಮಾತನಾಡುತ್ತಲೇ ಇಲ್ಲ.

ಭ್ರಷ್ಟಾಚಾರದ ನಿಯಂತ್ರಣಕ್ಕೆ ಮಾರ್ಗೋಪಾಯಗಳನ್ನು ಸೂಚಿಸಲು ನೇಮಿಸಲಾಗಿದ್ದ ಸಂತಾನಂ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ 1964ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆ ಸಿವಿಸಿ. ಆದರೆ ಆಗಿನ ಕಾಂಗ್ರೆಸ್ ಸರ್ಕಾರ ಸಂತಾನಂ ಸಮಿತಿಯ ಶಿಫಾರಸುಗಳೆಲ್ಲವನ್ನೂ ಒಪ್ಪಿಕೊಂಡು ಸಿವಿಸಿಯನ್ನು ಸ್ಥಾಪಿಸಲಿಲ್ಲ. ಆದ್ದರಿಂದ ಸಿವಿಸಿ ಎನ್ನುವುದು ‘ಸಾರ್ವಜನಿಕ ಕ್ಷೇತ್ರದಲ್ಲಿರುವ ಉದ್ಯಮಗಳು ಮತ್ತು ಬ್ಯಾಂಕುಗಳ ಅಧಿಕಾರಿಗಳ ವಿರುದ್ಧ ಕೇಳಿಬರುವ ಅಕ್ರಮ ವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪಗಳ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ನೀಡುವ ಸ್ವತಂತ್ರ ಸಂಸ್ಥೆ’ ಅಷ್ಟೇ.

ತನಗೆ ಬಂದ ದೂರುಗಳ ಬಗ್ಗೆ ವಿಚಾರಣೆಯನ್ನಷ್ಟೇ ನಡೆಸಲು ಸಾಧ್ಯ ಇರುವ ಸಿವಿಸಿಗೆ ತನಿಖೆ ನಡೆಸುವ ಅಧಿಕಾರ ಇಲ್ಲ. ಸಿವಿಸಿ ಪರಾವಲಂಬಿಯಾಗಿ ಹಲ್ಲಿಲ್ಲದ ಹಾವಿನಂತಾಗಲು ಇದೇ ಮುಖ್ಯ ಕಾರಣ. ಈ ಅಧಿಕಾರವನ್ನು ಸಿವಿಸಿಗೆ ಕೊಡಬೇಕೆಂದು ಸಂತಾನಂ ಸಮಿತಿ ಶಿಫಾರಸು ಮಾಡಿದ್ದರೂ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಇದರಿಂದಾಗಿ ಸಿವಿಸಿ ತನಗೆ ಬಂದ ದೂರುಗಳ ಬಗ್ಗೆ ತನಿಖೆಯ ಅವಶ್ಯಕತೆ ಕಂಡುಬಂದರೆ ಸಿಬಿಐಗೆ ಮೊರೆಹೋಗಬೇಕಾಗುತ್ತದೆ. ಆದ್ದರಿಂದ ಸಿವಿಸಿ ಹೆಸರಿಗಷ್ಟೇ ಸ್ವಾಯತ್ತ ಮತ್ತು ಸ್ವತಂತ್ರ, ವಾಸ್ತವದಲ್ಲಿ ಇದು ಸಲಹೆ ನೀಡುವ ಸರ್ಕಾರದ ಅಧೀನ ಸಂಸ್ಥೆ.

ಸಿವಿಸಿಯನ್ನು ಹಲ್ಲಿಲ್ಲದ ಸಂಸ್ಥೆಯನ್ನಾಗಿ ಮಾಡಿರುವ ಪಾಪ ಕೇವಲ ಕಾಂಗ್ರೆಸಿನದ್ದಲ್ಲ, ಅದು ದೀರ್ಘವಾದ ತನ್ನ ಅಧಿಕಾರಾವಧಿಯಲ್ಲಿ ಅನೇಕ ಸಂವಿಧಾನಬದ್ದ ಸಂಸ್ಥೆಗಳನ್ನು ಈ ರೀತಿ ದುರ್ಬಲಗೊಳಿಸುತ್ತಲೇ ಬಂದಿದೆ. ಈ ಪ್ರಯತ್ನವನ್ನು ವಿಫಲಗೊಳಿಸಿ ಸಿವಿಸಿಯನ್ನು ಬಲಪಡಿಸುವ ಅವಕಾಶ ಈಗಿನ ವಿರೋಧಪಕ್ಷವಾದ ಬಿಜೆಪಿಗೆ ಹಿಂದೆ ಒದಗಿಬಂದಿತ್ತು. ಆದರೆ ಅದು ಕೂಡಾ ಕಾಂಗ್ರೆಸ್ ಪಾಪವನ್ನೇ ನಿಷ್ಠೆಯಿಂದ ಮುಂದುವರಿಸಿಕೊಂಡು ಹೋಯಿತು.

ಇದನ್ನು ತಿಳಿದುಕೊಳ್ಳಬೇಕಾದರೆ ಹವಾಲ ಹಗರಣಕ್ಕೆ ಸಂಬಂಧಿಸಿದ ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1997ರ ಡಿಸೆಂಬರ್ ಹದಿನೆಂಟರಂದು ನೀಡಿದ್ದ ಐತಿಹಾಸಿಕ ತೀರ್ಪನ್ನು ಒಮ್ಮೆ ಓದಬೇಕು. ಹವಾಲ ಹಗರಣದ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ಭ್ರಷ್ಟಾಚಾರದ ಹಗರಣಗಳ ಬಗ್ಗೆ ಕಳವಳಕ್ಕೆಡಾಗಿದ್ದ ಸುಪ್ರೀಂಕೋರ್ಟ್ ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ನೆರವಾಗಲೆಂದೇ ಆ ತೀರ್ಪು ನೀಡಿದ್ದು.

ಆ ತೀರ್ಪು ಯಥಾವತ್ತಾಗಿ ಅನುಷ್ಠಾನಕ್ಕೆ ಬಂದಿದ್ದರೆ ಪಿ.ಜೆ.ಥಾಮಸ್ ಅವರಂತಹ ಕಳಂಕಿತರು ಮುಖ್ಯ ಆಯುಕ್ತರ ಸ್ಥಾನವನ್ನು ಅಪವಿತ್ರಗೊಳಿಸಲು ಅವಕಾಶವೇ ಇರುತ್ತಿರಲಿಲ್ಲ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿಯವರಂತಹವರು ಆಗಲೇ ತಮ್ಮ ಪಕ್ಷದ ನಾಯಕರ ಮೇಲೆ ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಕ್ಕೆ ಒತ್ತಡ ಹೇರಿದ್ದರೆ ಈಗಿನಂತೆ ಕಂಠಶೋಷಣೆ ಮಾಡಬೇಕಾದ ಅಗತ್ಯವೂ ಇರುತ್ತಿರಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ.

ಸ್ಥಾನಗಳು ಬದಲಾದರೂ ಈಗಿನ ರಾಜಕೀಯ ಪಕ್ಷಗಳ ಆಳದಲ್ಲಿರುವ ಜನದ್ರೋಹದ ಮೂಲಗುಣ ಬದಲಾಗುವುದಿಲ್ಲ ಎನ್ನುವುದಕ್ಕೂ ಸುಪ್ರೀಂಕೋರ್ಟ್ ತೀರ್ಪಿನ ನಂತರದ ಘಟನಾವಳಿಗಳು ಸಾಕ್ಷಿ. ಸಿವಿಸಿ ಸುಧಾರಣೆಗೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ನೀಡಿದ್ದ ನಿರ್ದೇಶನಗಳ ಬಗ್ಗೆ ಅಭಿಪ್ರಾಯ ನೀಡುವಂತೆ ಅಟಲಬಿಹಾರಿ ವಾಜಪೇಯಿ ಸರ್ಕಾರ ಕಾನೂನು ಆಯೋಗವನ್ನು ಕೇಳಿಕೊಂಡದ್ದು 1998ರ ಏಪ್ರಿಲ್ ಎಂಟರಂದು.

ಐದೇ ದಿನಗಳಲ್ಲಿ ಆಯೋಗ ತನ್ನ ಅಭಿಪ್ರಾಯವನ್ನು ನೀಡಿ ಸುಪ್ರೀಂಕೋರ್ಟ್ ತೀರ್ಪನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಹಮತ ವ್ಯಕ್ತಪಡಿಸಿತ್ತು. ಆದರೆ ಒಂದು ವಾರದ ನಂತರ ನಡೆದ ಸಂಪುಟ ಸಭೆಯಲ್ಲಿ ಕಾನೂನು ಆಯೋಗದ ವರದಿಯನ್ನು ಮುಚ್ಚಿಟ್ಟು ಸರ್ಕಾರದ ಕಾರ್ಯದರ್ಶಿಗಳು ಕೂಡಿ ತಯಾರಿಸಿದ ಅರೆಬೆಂದ ವರದಿಯನ್ನು ಎನ್ಡಿಎ ಸರ್ಕಾರ ಮಂಡಿಸಿತ್ತು. ಕೊನೆಗೂ ‘ಕೇಂದ್ರ ಜಾಗೃತ ಆಯೋಗ ಮಸೂದೆ, 1999’ ಮಸೂದೆ ಸಿದ್ದವಾಗುವಷ್ಟರಲ್ಲಿ ಲೋಕಸಭೆಯೇ ವಿಸರ್ಜನೆಗೊಂಡಿತು.

ಮರಳಿ ಅಧಿಕಾರಕ್ಕೆ ಬಂದ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಹೊಸದಾಗಿ ‘ಕೇಂದ್ರ ಜಾಗೃತ ಆಯೋಗ 1999’ ಮಸೂದೆಯನ್ನು ಸಿದ್ದಗೊಳಿಸಿ ಶರದ್ಪವಾರ್ ಅಧ್ಯಕ್ಷತೆಯ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಿತು. ಆ ಮಸೂದೆಯಲ್ಲಿ ಕೂಡಾ ಸುಪ್ರೀಂಕೋರ್ಟ್ ತೀರ್ಪಿನ ನಿರ್ದೇಶನವನ್ನು ಪಾಲಿಸಿರಲಿಲ್ಲ. ಕೊನೆಗೂ 2003ರಲ್ಲಿ ಕೇಂದ್ರ ಜಾಗೃತ ಆಯೋಗ ಕಾಯಿದೆ ಜಾರಿಗೆ ಬಂತು. ಆದರೆ ಅದರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರಮುಖ ಅಂಶಗಳನ್ನು ಒಂದೋ ಕೈಬಿಡಲಾಗಿತ್ತು, ಇಲ್ಲವೇ ತಿರುಚಲಾಗಿತ್ತು.

ಇವುಗಳಲ್ಲಿ ಪ್ರಮುಖವಾದುದು ಸುಪ್ರೀಂಕೋರ್ಟ್ ರದ್ದುಪಡಿಸಬೇಕೆಂದು ಸ್ಪಷ್ಟವಾಗಿ ಹೇಳಿದ್ದ ‘ಏಕನಿರ್ದೇಶನ’ವನ್ನು ಮತ್ತೆ ಜಾರಿಗೆ ತಂದದ್ದು. ಈ ‘ಏಕನಿರ್ದೇಶನ’ದ ಪ್ರಕಾರ ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಹಿರಿಯ ಅಧಿಕಾರಿಗಳ ಬಗ್ಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಅನ್ವಯ ಪ್ರಕರಣ ದಾಖಲುಮಾಡಿಕೊಂಡು ವಿಚಾರಣೆಯನ್ನಾಗಲಿ ತನಿಖೆಯನ್ನಾಗಲಿ ಸಿಬಿಐ ನಡೆಸುವಂತಿಲ್ಲ.

ಅಂದರೆ ಅಂತಹ ಪ್ರಕರಣಗಳನ್ನು ತನಿಖೆಗೆಂದು ಸಿವಿಸಿ ಸಿಬಿಐಗೆ ಒಪ್ಪಿಸಿದರೂ, ಸಿಬಿಐ ತನಿಖೆಮಾಡಲು ಕೇಂದ್ರ ಸರ್ಕಾರದ ಅನುಮತಿ ಕೇಳಬೇಕಾಗುತ್ತದೆ. ಈ ಬದಲಾವಣೆಯನ್ನು ಜೆಪಿಸಿ ಸದಸ್ಯರಾಗಿದ್ದ ಕುಲದೀಪ್ ನಯ್ಯರ್ ಬಲವಾಗಿ ವಿರೋಧಿಸಿದ್ದರು.‘ಏಕನಿರ್ದೇಶನ’ವನ್ನು ಜಾರಿಗೆ ತರುವುದರಿಂದ ರಾಜಕೀಯ ಒಡೆಯರ ಸೇವೆಗೆ ನಿಂತಿರುವ ಅಧಿಕಾರಿಗಳಿಗೆ ರಕ್ಷಣೆ ನೀಡಿದಂತಾಗುತ್ತದೆ. ಭ್ರಷ್ಟ ಅಧಿಕಾರಿಗಳು ತಮಗೆ ಇರುವ ರಾಜಕೀಯ ರಕ್ಷಣೆಯಿಂದ ಇನ್ನಷ್ಟು ಭ್ರಷ್ಟರಾಗಿ ಹೋಗುತ್ತಾರೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಆದರೆ ವಾಜಪೇಯಿ ಸರ್ಕಾರ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.

ಎರಡನೆಯದಾಗಿ ಸಿವಿಸಿಗೆ ಕಾನೂನುಬದ್ಧ ಸ್ಥಾನಮಾನ ನೀಡಿ ಅದಕ್ಕೆ ಸಿಬಿಐ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯ ಹೊಣೆಯನ್ನು ಒಪ್ಪಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿತ್ತು. ಸಿಬಿಐ ತನಿಖೆಗೆ ನಡೆಸುತ್ತಿರುವ ಪ್ರಕರಣಗಳ ವಿವರ ಮತ್ತು ಅವುಗಳ ತನಿಖೆಯ ಪ್ರಗತಿ ಹಾಗೂ ಆರೊಪ ಪಟ್ಟಿ ಸಲ್ಲಿಸಿದ ಪ್ರಕರಣಗಳು ಮತ್ತು ಅವುಗಳ ತನಿಖೆಯ ಪ್ರಗತಿಯ ವರದಿಯನ್ನು ಕಾಲಕಾಲಕ್ಕೆ ಸಿವಿಸಿಗೆ ಒಪ್ಪಿಸಬೇಕು ಎನ್ನುವುದು ಸುಪ್ರೀಂಕೋರ್ಟ್ ನಿರ್ದೇಶನ. ಈ ಮೂಲಕ ಸಿಬಿಐ ಅನ್ನು ಕೂಡಾ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂಬುದು ಸುಪ್ರೀಂಕೋರ್ಟ್ ಆಶಯವಾಗಿತ್ತು. ಆದರೆ ಹೊಸ ಮಸೂದೆಯಲ್ಲಿ ಈ ಅಂಶವನ್ನು ಕೈಬಿಡಲಾಗಿದೆ. 1988ರ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ದಾಖಲು ಮಾಡಿಕೊಂಡ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಯ ಮಾಹಿತಿಯನ್ನಷ್ಟೇ ಸಿವಿಸಿಗೆ ನೀಡಬೇಕೆಂದು ಹೊಸ ಕಾನೂನು ಹೇಳಿದೆ.

ಮೂರನೆಯದಾಗಿ, ಸಿವಿಸಿ ವ್ಯಾಪ್ತಿಯಲ್ಲಿ ಬರುವ ‘ಸರ್ಕಾರಿ ನೌಕರ’ (ಪಬ್ಲಿಕ್ ಸರ್ವೆಂಟ್) ಶಬ್ದದ ವ್ಯಾಖ್ಯೆಯನ್ನೇ ಹೊಸ ಕಾನೂನಿನಲ್ಲಿ ಬದಲಾಯಿಸಲಾಗಿದೆ. ಕೇಂದ್ರದಲ್ಲಿ ಉದ್ಯೋಗದಲ್ಲಿರುವ ಅಖಿಲಭಾರತ ಸೇವೆಯ ಮತ್ತು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ನಿಗಮ, ಕಂಪೆನಿ ಮತ್ತು ಸೊಸೈಟಿಯಲ್ಲಿನ ಗ್ರೂಫ್ ‘ಎ’ ನೌಕರರು ಮಾತ್ರ ಸಿವಿಸಿ ಕಾರ್ಯವ್ಯಾಪ್ತಿಯಲ್ಲಿ ಬರುತ್ತಾರೆ ಎನ್ನುವುದು ಹೊಸ ಕಾನೂನಿನ ವ್ಯಾಖ್ಯಾನ. ಈ ಮೂಲಕ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್ ಎರಡರ ಪ್ರಕಾರ ‘ಸರ್ಕಾರಿ ನೌಕರ’ರ ವ್ಯಾಪ್ತಿಯಲ್ಲಿ ಬರುವ ರಾಜಕಾರಣಿಗಳನ್ನು ಸಿವಿಸಿ ಕಾರ್ಯವ್ಯಾಪ್ತಿಯಿಂದ ಹೊರಗಿಡಲಾಗಿದೆ.

ನಾಲ್ಕನೆಯದಾಗಿ ಸಿವಿಸಿಯ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗುವ ವ್ಯಕ್ತಿಗೆ ಇರಬೇಕಾದ ಅರ್ಹತೆಯ ಮಟ್ಟವನ್ನೇ ಹೊಸ ಕಾನೂನು ಕೆಳಗಿಳಿಸಿದೆ. ‘ ಕೇಂದ್ರ ಸಂಪುಟ ಕಾರ್ಯದರ್ಶಿ ರಚಿಸಿರುವ ‘ಅದ್ವಿತಿಯ’ ಮತ್ತು ‘ದೋಷರಹಿತ ಪ್ರಾಮಾಣಿಕತೆ’ ಸರ್ಕಾರಿ ಅಧಿಕಾರಿಗಳು ಮತ್ತು ಇತರರ ಪಟ್ಟಿಯಲ್ಲಿನ ಒಂದು ಹೆಸರನ್ನು ಪ್ರಧಾನಮಂತ್ರಿ, ಗೃಹಸಚಿವ ಮತ್ತು ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕರನ್ನೊಳಗೊಂಡಿರುವ ಸಮಿತಿ ಆಯ್ಕೆ ಮಾಡಿ ಸಿವಿಸಿಯ ಮುಖ್ಯ ಆಯುಕ್ತರ ಸ್ಥಾನಕ್ಕೆ ನೇಮಿಸ ಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ಹೊಸ ಕಾನೂನು ‘ಅದ್ವಿತಿಯ’ ಮತ್ತು ‘ದೋಷರಹಿತ ಪ್ರಾಮಾಣಿಕತೆ’ ಎಂಬ ಅರ್ಹತೆಗಳನ್ನು ಕೈಬಿಡಲಾಗಿದೆ. ಈ ಅರ್ಹತೆಯನ್ನು ಉಳಿಸಿಕೊಂಡಿದ್ದರೆ ಬಹುಶಃ ಪಿ.ಜೆ.ಥಾಮಸ್ ಅವರಂತಹ ಕಳಂಕಿತರು ಸಿವಿಸಿಯ ಮುಖ್ಯ ಆಯುಕ್ತರಾಗಿ ಆಯ್ಕೆಯಾಗುತ್ತಿರಲಿಲ್ಲವೇನೋ?

ಈ ರೀತಿ ದುರ್ಬಲಗೊಳಿಸುತ್ತಲೇ ಬರಲಾದ ಕೇಂದ್ರ ಜಾಗೃತ ಆಯೋಗಕ್ಕೆ ಒಬ್ಬ ಶುದ್ಧ ಚಾರಿತ್ರ್ಯದ, ಪ್ರಾಮಾಣಿಕ ಅಧಿಕಾರಿಯನ್ನು ತಂದು ಮುಖ್ಯ ಆಯುಕ್ತರ ಕುರ್ಚಿಯಲ್ಲಿ ಕೂರಿಸಿದರೂ ಅವರಿಂದ ಹೆಚ್ಚೇನೂ ಮಾಡಲು ಸಾಧ್ಯವಾಗದು. ಅದಕ್ಕಾಗಿ ಮೊದಲು ಸಿವಿಸಿಯನ್ನು ಬಲಪಡಿಸುವ ಕೆಲಸ ನಡೆಯಬೇಕಾಗಿದೆ. ಅದು ಯಾವ ಸರ್ಕಾರಕ್ಕೂ ಬೇಕಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.