ಅಸಮಾಧಾನ, ಪ್ರತಿಭಟನೆ, ವಿವಾದ, ಗದ್ದಲಕ್ಕೆ ಕಾರಣವಾದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಯಾವುದಾದರೂ ಮಾನದಂಡ ಅನುಸರಿಸಲಾಗಿದೆಯೇ?

ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಪಕ್ಷನಿಷ್ಠೆ, ದಕ್ಷತೆ, ಕ್ರಿಯಾಶೀಲತೆ, ಪ್ರತಿಭೆ, ದಿಟ್ಟತನ, ಲೋಕಸಭಾ ಚುನಾವಣೆ ಕಾರ್ಯತಂತ್ರ ಇವೇ ಮೊದಲಾದ ಅಂಶಗಳನ್ನು ಆಧರಿಸಿ ಸಂಪುಟ ವಿಸ್ತರಣೆ ನಡೆದಿದೆಯೇ ಎಂದು ಕಣ್ಣಾಡಿಸಿದರೆ ಅಂಥ ಯಾವುದೇ ಲಕ್ಷಣಗಳೂ ಇಲ್ಲ. ರೊಕ್ಕಮುಕ್ಕರನ್ನೂ ಸಂಪೂರ್ಣವಾಗಿ ಹೊರಗಿಟ್ಟಿಲ್ಲ.

ಮತ್ತೆ ಸಚಿವರಾಗಿರುವ ಕೆಲವು ಮಂದಿ ತಮ್ಮ ಅಧಿಕಾರಾವಧಿಯಲ್ಲಿ ಮಹತ್ಸಾಧನೆ ಮಾಡಿ ಜನಪ್ರೀತಿ ಗಳಿಸಿದವರೇನಲ್ಲ. ಈ ಹಿಂದೆ ಒಂದಲ್ಲ ಒಂದು ಸಚಿವ ಸಂಪುಟದಲ್ಲಿ ವಿವಿಧ ಕಾರಣಗಳಿಂದ ಹೆಸರು ಮಾಡಿದ್ದ ನಜೀರ್ ಸಾಬ್, ಎಂ.ಸಿ.ನಾಣಯ್ಯ, ಬಿ.ರಾಚಯ್ಯ, ಬಿ.ಬಸವಲಿಂಗಪ್ಪ, ಕೆ.ಆರ್.ಪೇಟೆ ಕೃಷ್ಣ, ವೈ.ಕೆ.ರಾಮಯ್ಯ, ಕೆ.ಎಸ್.ನಾಗರತ್ನಮ್ಮ (ಇಂಥಇನ್ನಷ್ಟು ಜನನಾಯಕರಿದ್ದರೂ ಉದಾಹರಣೆಗಾಗಿ ಕೆಲವೇ ಹೆಸರುಗಳನ್ನು ಉಲ್ಲೇಖಿಸಿದ್ದೇನೆ) ಅವರಂಥ ಅಪರೂಪದ ಒಂದೇ ಒಂದು ಮುಖವೂ ಸಂಪುಟದಲ್ಲಿ ಇಲ್ಲ. ಈ ಕಾರಣಕ್ಕೆ ಏನಾದರೂ ಪ್ರತಿಭಟನೆ ನಡೆದಿದೆಯೇ? ಇಲ್ಲ.

ತಮ್ಮನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿಲ್ಲ ಎನ್ನುವುದೊಂದೇ ಕಾರಣ. ಅದೂ ಬೆಂಬಲಿಗರಿಂದ ಪ್ರತಿಭಟನೆಯಂತೆ. ಬಹುತೇಕ ಎಲ್ಲವೂ ಜಾತಿಕಾರಣ. ಇದೇ ಮೊದಲ ಬಾರಿಗೆ ಮಂತ್ರಿಯಾಗಿರುವವರು ಏನು ಮಾಡುತ್ತಾರೋ ಕಾದು ನೋಡಬೇಕಿದೆ.

ಸಚಿವ ಸ್ಥಾನ ಎನ್ನುವುದು ಕೆಲವೇ ಕೆಲವರ ಆಸ್ತಿಯಾಗಿಬಿಟ್ಟಿದೆ. ವರ್ಷಗಳ ಕಾಲ ಸಚಿವರಾಗಿದ್ದರೂ ತಾವೇ ಶಾಶ್ವತವಾಗಿ ಸಚಿವರಾಗಿರಬೇಕೆನ್ನುವ ಮನೋಭಾವ, ಅದಕ್ಕಾಗಿ ನಡೆಸುವ ಪಿತೂರಿ, ಜಾತಿ, ಧನಬಲ ಇಲ್ಲದಿದ್ದರೆ ಸಚಿವರಾಗುವುದು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ ನಿಜವಾಗಿಯೂ ಅರ್ಹರಾದವರನ್ನು ಅಧಿಕಾರದಿಂದ ದೂರವೇ ಇರಿಸಿದೆ.

ರಾಜ್ಯದಲ್ಲಿ 34 ಮಂದಿಗಷ್ಟೇ ಸಚಿವರಾಗುವ ಸೌಭಾಗ್ಯವಿದ್ದು ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಸೇರಿದಂತೆ ಸಚಿವ ಸಂಪುಟದಲ್ಲಿ 27 ಸದಸ್ಯರಿದ್ದಾರೆ. ಕುಮಾರಸ್ವಾಮಿ ಸೇರಿದಂತೆ ‘ಜಾತ್ಯತೀತ’ ಜನತಾದಳದಿಂದ ಸಚಿವರಾಗಿರುವ 10 ಮಂದಿಯಲ್ಲಿ 7 ಮಂದಿ ಒಕ್ಕಲಿಗರು! (ಸಂಪುಟದ ಒಟ್ಟು ಒಕ್ಕಲಿಗ ಸಚಿವರ ಸಂಖ್ಯೆ 10). ಈ ಅಪರೂಪದ ಸಾಧನೆ ಮಾಡಿದ ಜಾತ್ಯತೀತ ಜನತಾದಳಕ್ಕೆ ಜೈ ಎನ್ನಲೇಬೇಕು!

ಸಚಿವ ಸಂಪುಟ ರಚನೆಯಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ತೋರಿದ ಕಿಲಾಡಿತನ ಮೆಚ್ಚಲೇಬೇಕು. ಅದೇಕೋ ಡಿ.ಕೆ. ಶಿವಕುಮಾರ್ ಇಂಧನ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದರಂತೆ, ಇದರಿಂದ ಮನನೊಂದು ಶಿವಕುಮಾರ್ ಯಾರ ಕೈಗೂ ಸಿಗುತ್ತಿಲ್ಲವಂತೆ, ಈ ಹಿಂದೆ ಎಚ್.ಡಿ. ರೇವಣ್ಣ ಅವರು ಇಂಧನ ಖಾತೆಯನ್ನು ನಿರ್ವಹಿಸಿದ್ದರಿಂದ ಅವರು ಕೂಡ ಅದೇ ಖಾತೆಬೇಕೆಂದು ರಚ್ಚೆ ಹಿಡಿದಿದ್ದಾರಂತೆ, ಖಾತೆಗಳ ಹಂಚಿಕೆ ವಿಚಾರದಲ್ಲಿ ಜೆಡಿಎಸ್ಗೆ ಹೋಗಿದ್ದ ಇಂಧನ ಖಾತೆಯನ್ನು ಕಾಂಗ್ರೆಸ್ಗೆ ಕೊಡಲು ದೇವೇಗೌಡರು ಸಮ್ಮತಿಸಿದ್ದಾರಂತೆ...

ಇವೇ ಅಂತೆಕಂತೆಗಳ ನಡುವೆಯೂ ಇಂಧನ ಜೆಡಿಎಸ್ನಲ್ಲೇ ಉಳಿಯಿತು. ಕ್ಷಮಿಸಿ. ಇಂಧನ ಖಾತೆ ದೇವೇಗೌಡರ ಕುಟುಂಬದಲ್ಲೇ ಉಳಿಯಿತು! ಅರ್ಥಾತ್ ಮುಖ್ಯಮಂತ್ರಿ ಕುಮಾರಸ್ವಾಮಿ ಹಣಕಾಸು ಖಾತೆ ಜತೆ ಇಂಧನವನ್ನೂ ಇರಿಸಿಕೊಂಡರು. ದೇವೇಗೌಡರ ಕುಟುಂಬಕ್ಕೆ Power ವ್ಯಾಮೋಹ ಇಲ್ಲ ಎಂದು ಯಾರು ತಾನೇ ಸುಳ್ಳು ಹೇಳುವುದು ಸಾಧ್ಯವಿದೆ? ಕುಮಾರಸ್ವಾಮಿ ಅವರೇ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದಂತೆ ಹೃದಯದ ಸಮಸ್ಯೆ ಇರುವುದರಿಂದ ಹಣಕಾಸು ಖಾತೆ ಜವಾಬ್ದಾರಿಯೇ ಸಾಕಷ್ಟಿರುವಾಗ ಇಂಧನವನ್ನು ಹೇಗೆ ತಾನೇ ನಿಭಾಯಿಸಿಯಾರು?

ತಮ್ಮ ಪ್ರೀತಿಪಾತ್ರ ಖಾತೆಯಾಗಿರುವ ಲೋಕೋಪಯೋಗಿಯನ್ನು ರೇವಣ್ಣಗೆ, ಸಾರಿಗೆ ಜವಾಬ್ದಾರಿಯನ್ನು ಬೀಗರಾದ ಡಿ.ಸಿ. ತಮ್ಮಣ್ಣಗೆ ವಹಿಸಿ ಪ್ರಮುಖ ಖಾತೆಗಳನ್ನು ತಮ್ಮ ಕುಟುಂಬದಲ್ಲೇ ಉಳಿಸಿಕೊಂಡ ದೇವೇಗೌಡರು ಇಂಧನ ಖಾತೆಯನ್ನು ತಮ್ಮ ಪುತ್ರ ರೇವಣ್ಣ ಕೇಳಿದರೂ ಕೊಡಲಿಲ್ಲ, ತಮಗೆ ಪುತ್ರ ವ್ಯಾಮೋಹ ಇಲ್ಲ ಎಂದು ಸಮರ್ಥಿಸಿಕೊಳ್ಳುವ ಅಪೂರ್ವ ಅವಕಾಶವನ್ನು ಉಳಿಸಿಕೊಂಡಿದ್ದಾರೆ!

ಆ ಮೂಲಕ ತಮ್ಮ ಪಕ್ಷದಿಂದ ಸಚಿವರಾದವರೂ ಕೇಳಿದ ಖಾತೆ ಕೊಡಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳುವ ಜಾಣತನ ಮೆರೆದಿದ್ದಾರೆ. ಹೀಗಾಗಿ ಹಿಂಬಾಗಿಲಿನಿಂದ ರೇವಣ್ಣ ತಮ್ಮ Energyಯನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ.

‘What an idea sir(Gowda)ji’! ಅಂದಹಾಗೆ ಹಿಂದೊಮ್ಮೆ ಮಂತ್ರಿಗಳಾಗಿದ್ದ ಎಚ್.ವಿಶ್ವನಾಥ್ ಮತ್ತು ಬಸವರಾಜ ಹೊರಟ್ಟಿ ಅವರನ್ನು ಜೆಡಿಎಸ್ ಕೋಟಾದಿಂದ ಮತ್ತೆ ಮಂತ್ರಿಗಳಾಗಿ ಮಾಡಬೇಕೆಂದೇನೂ ಇಲ್ಲ. ವಿಶ್ವನಾಥ್ ದಿಟ್ಟತನ, ಪ್ರತಿಭೆ, ಕ್ರಿಯಾಶೀಲತೆ, ಸಜ್ಜನಿಕೆಗೆ ಹೆಸರಾದ ಮನುಷ್ಯ. ಬಸವರಾಜ ಹೊರಟ್ಟಿ ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಸದಾ ವಿಧಾನ ಪರಿಷತ್ತಿಗೆ ಆಯ್ಕೆಯಾಗುತ್ತಿರುವ ಲಿಂಗಾಯತ ಪ್ರಮುಖ.

ಅಡಿಯಾಳುಗಳನ್ನು ಬಯಸುವ ದೇವೇಗೌಡ ಕುಟುಂಬಕ್ಕೆ ಮೆದುಳು, ನಾಲಗೆ, ಬೆನ್ನುಮೂಳೆ ಸ್ವತಂತ್ರವಾಗಿ ಇರಿಸಿಕೊಂಡಿರುವ ವ್ಯಕ್ತಿಗಳೆಂದರೆ ಅಪಥ್ಯ ಇದ್ದಂತಿದೆ. ಮನಗೂಳಿ ಎಂಬ ವೃದ್ಧರನ್ನೂ ಸಚಿವರಾಗಿಸಿರುವ ಜೆಡಿಎಸ್ ಈ ಇಬ್ಬರನ್ನು ಹೊರಗಿಟ್ಟಿರುವುದಕ್ಕೆ ಸಕಾರಣಗಳೂ ಕಾಣುತ್ತಿಲ್ಲ.

ಮಿತ್ರ ಪಕ್ಷವಾದ ಕಾಂಗ್ರೆಸ್ನಲ್ಲಿ ಬಂಡಾಯದ ಬಿರುಗಾಳಿಯೇ ಎದ್ದಿದೆ. ಕನಿಷ್ಠ ಎಂದರೂ ಒಂದು ಡಜನ್ ಶಾಸಕರು ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದಾರೆ. ಬಹಿರಂಗವಾಗಿಯೇ ತಮ್ಮ ನಾಯಕರ ವಿರುದ್ಧ ದನಿ ಎತ್ತಿದ್ದಾರೆ. ಎಂ.ಬಿ.ಪಾಟೀಲ, ಎಚ್.ಕೆ.ಪಾಟೀಲ, ಬಿ.ಸಿ.ಪಾಟೀಲ, ಶಾಮನೂರು ಶಿವಶಂಕರಪ್ಪ, ಎಚ್.ಎಂ. ರೇವಣ್ಣ, ರಾಮಲಿಂಗಾರೆಡ್ಡಿ, ರೋಷನ್ ಬೇಗ್, ತನ್ವೀರ್ ಸೇಠ್, ದಿನೇಶ್ ಗುಂಡೂರಾವ್ ಮೊದಲಾದವರು ತಮ್ಮದೇ ಕಾರಣಗಳು ಮತ್ತು ತಮ್ಮ ಅರ್ಹತೆಗಳನ್ನು ಮಂಡಿಸುತ್ತಾ ನ್ಯಾಯ ಕೇಳುತ್ತಿದ್ದಾರೆ.

ಯಾಕೆ ಹೀಗಾಗುತ್ತಿದೆ? ಕಾಂಗ್ರೆಸ್ ಪಕ್ಷದಲ್ಲೇ ಸುಮಾರು ನಾಲ್ಕು ದಶಕಗಳಿಂದ ಸಕ್ರಿಯರಾಗಿದ್ದರೂ ಅವಕಾಶ ವಂಚಿತರಾಗುವ ಅದೆಷ್ಟೋ ಸಂದರ್ಭ ಎದುರಿಸಿ ಒಮ್ಮೆಯೂ ಪಕ್ಷಾಂತರದ ಬಗ್ಗೆ ಯೋಚಿಸದ ನಾಯಕರೊಬ್ಬರನ್ನು ಪ್ರಶ್ನಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಸ್ಥಾನಗಳನ್ನು ಗೆಲ್ಲುತ್ತೇವೆಂದು ಹೇಳುತ್ತಿರುವ ಬಿಜೆಪಿ ನಾಯಕ ಯಡಿಯೂರಪ್ಪ ಅವರ ಮಾತುಗಳನ್ನು ಕಾರ್ಯರೂಪಕ್ಕೆ ತರಲು ಹೊರಟಂತಿದೆ ತಮ್ಮ ಪಕ್ಷದ ಸಚಿವರ ಪಟ್ಟಿ ಎನ್ನುತ್ತಾರೆ ಅವರು.

ಆರೋಗ್ಯಕರ ಮತ್ತು ಸಭ್ಯ ರಾಜಕಾರಣದ ಹೊಸ ಮಾರ್ಗವೊಂದನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಚಿಂತನೆಗೆ ಪುಷ್ಟಿ ನೀಡುವಂಥ ಚಟುವಟಿಕೆಗಳ ಬದಲು ಪಕ್ಷದ ಗೋರಿ ತೋಡುವ ಕಾರ್ಯಕ್ಕೆ ರಾಜ್ಯ ಮಟ್ಟದ ನಾಯಕರು ಮುಂದಾಗಿದ್ದಾರೆ ಎನ್ನುವಂತಿತ್ತು ಅವರ ಮಾತುಗಳು. ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರ ಕೈ ಇನ್ನೊಬ್ಬರ ಕಾಲಲ್ಲಿದೆ. ಕೆಲವರು ಕಾಲು ಹಿಡಿಯುತ್ತಿದ್ದರೆ, ಇನ್ನು ಕೆಲವರು ಕಾಲು ಎಳೆಯುತ್ತಿದ್ದಾರೆ.

ಜನತಾ ಪರಿವಾರ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ನಿರಂತರ ಪ್ರಮುಖ ಖಾತೆಯ ಸಚಿವರಾಗುತ್ತಲೇ ಇರುವ ಆರ್.ವಿ.ದೇಶಪಾಂಡೆ ತಮ್ಮ ಕ್ಷೇತ್ರದಿಂದ ಗೆದ್ದು ಬರುವುದನ್ನು ಬಿಟ್ಟು ಚುನಾವಣೆಯಲ್ಲಿ ಪಕ್ಷಕ್ಕೆ ಅವರಿಂದ ಆಗುತ್ತಿರುವ ಲಾಭವಾದರೂ ಏನು? ಜಮೀರ್ ಅಹ್ಮದ್ ಜೆಡಿಎಸ್ನಿಂದ ಬಂದು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆಂದ ಮಾತ್ರಕ್ಕೆಮಂತ್ರಿ ಮಾಡಲೇಬೇಕೆಂಬ ವ್ಯಕ್ತಿತ್ವ ಅವರದ್ದೇ? ಪಕ್ಷಕ್ಕೆ ನಿಷ್ಠರಾಗಿ ಕೊಳಕು ರಾಜಕಾರಣದಿಂದ ದೂರವೇ ಇರುವ ತನ್ವೀರ್ ಸೇಠ್ ಇದಕ್ಕಿಂತ ಉತ್ತಮ ಆಯ್ಕೆಯಾಗಿರಲಿಲ್ಲವೇ?

ಕೆ.ಜೆ. ಜಾರ್ಜ್ ಮಂತ್ರಿಯಾಗಿದ್ದ ಅವಧಿಯಲ್ಲಿ ಪಕ್ಷಕ್ಕೆ ಘನತೆ ತರುವಂಥ ಒಂದಾದರೂ ಕೆಲಸವನ್ನು ಮಾಡಿದ್ದಾರೆಯೇ? ಇಂಥ ಅನೇಕ ಪ್ರಶ್ನೆಗಳು ಕಾರ್ಯಕರ್ತರ ಮಟ್ಟದಲ್ಲಿ ಹರಿದಾಡುತ್ತಿವೆ. ಈ ಪ್ರಶ್ನೆಗಳು ಸಮರ್ಥನೀಯವೂ ಆಗಿವೆ.

ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಎಂಬ ಒಂದೇ ಕಾರಣಕ್ಕೆ ಪ್ರಿಯಾಂಕ್ ಖರ್ಗೆಯನ್ನು ಮತ್ತೆ ಮಂತ್ರಿ ಮಾಡಿರುವುದಕ್ಕೆ ಒಂದು ವರ್ಗದಲ್ಲಿ ಅಸಮಾಧಾನ ಇದೆಯಾದರೂ ಹಿಂದಿನ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿ ಅವರು ಮಾಡಿರುವ ಕೆಲಸಗಳ ಬಗ್ಗೆ ಐ.ಟಿ. ವಲಯ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದೆ.

ಅತ್ತ ತಂದೆಯಂತೆ ಹುಲಿಯೂ ಅಲ್ಲದ ಇತ್ತ ರಾಜಕಾರಣಕ್ಕೆ ಬೇಕಾದ ನರಿಯೂ ಆಗಿಲ್ಲದ ಕೃಷ್ಣಬೈರೇಗೌಡರ ಇಂಗ್ಲಿಷ್ ಪ್ರೇಮವೇ ಅವರನ್ನು ಮಂತ್ರಿಯಾಗಿಸಿದೆಯೇ ಹೊರತು ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಅವರ ಸಾಧನೆ ಹೇಳಿಕೊಳ್ಳುವಂತಿಲ್ಲ. ಅನುಭವ ಮತ್ತು ಸಾಧನೆಯೇ ಮುಖ್ಯ ಎನ್ನುವುದಾದರೆ ಎಚ್.ಕೆ.ಪಾಟೀಲ ಮತ್ತೆ ಮಂತ್ರಿಯಾಗಬೇಕಿತ್ತು.

ಅರ್ಹ ಲಿಂಗಾಯತ ಪ್ರಾತಿನಿಧ್ಯ ದೃಷ್ಟಿಯಿಂದ ಈಶ್ವರ ಖಂಡ್ರೆ ಹೆಸರು ಹೆಚ್ಚು ಸೂಕ್ತವಾಗಿರುತ್ತಿತ್ತು. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಸಕ್ರಿಯರಾಗಿದ್ದ ಎಂ.ಬಿ.ಪಾಟೀಲ ಪಕ್ಷದ ನಿಲುವನ್ನು ನಿಷ್ಠೆಯಿಂದ ಸಮರ್ಥಿಸಿಕೊಂಡಿರುವುದರಿಂದ ಅವರನ್ನು ಸಚಿವರಾಗಿ ಮುಂದುವರಿಸಬೇಕಿತ್ತು, ವೃದ್ಧರಾಗಿರುವ ಶಾಮನೂರು ಶಿವಶಂಕರಪ್ಪ ಅವರನ್ನು ಪರಿಗಣಿಸದಿರುವುದೂ ಒಳ್ಳೆಯ ಬೆಳವಣಿಗೆ ಎನ್ನುವ ಅಭಿಪ್ರಾಯವೂ ಕಾಂಗ್ರೆಸ್ನಲ್ಲಿದೆ. ಸರಳತೆ, ಸೌಜನ್ಯ, ಜನಸಂಪರ್ಕದ ದೃಷ್ಟಿಯಿಂದ ಯು.ಟಿ. ಖಾದರ್ ಉತ್ತಮ ಆಯ್ಕೆ ಎನ್ನುವುದು ಬಹುತೇಕ ಕಾಂಗ್ರೆಸ್ ನಿಷ್ಠರ ಅಭಿಪ್ರಾಯವಾಗಿದೆ.

ಪರಿಶಿಷ್ಠರಲ್ಲಿ ಮತ್ತೆ ಎಡಗೈಯವರನ್ನು ನಿರ್ಲಕ್ಷಿಸಿರುವುದು ಒಳ್ಳೆ ನಡೆಯಲ್ಲ, ಬಲಗೈ ಪಂಗಡಕ್ಕೆ ಸೇರಿದ ಪ್ರಿಯಾಂಕ್ ಖರ್ಗೆ ವಿಷಯದಲ್ಲಿ ಮೊದಲ ಸಲ ಆಯ್ಕೆಯಾದಾಗಲೇ ಸಚಿವರಾಗಿಸಿದ ಕಾಂಗ್ರೆಸ್ ಪಕ್ಷ ಎಡಗೈ ಪಂಗಡಕ್ಕೆ ಸೇರಿದ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಅವರಿಗೆ ಅನ್ಯಾಯ ಮಾಡಿದೆ ಎಂಬ ಬೇಸರ ಕೆಲವರಲ್ಲಿದೆ. ಹೀಗಾಗಿಯೇ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸಿದ್ದ ಎಡಗೈ ಪಂಗಡಕ್ಕೆ ರಾಜ್ಯ ಬಿಜೆಪಿ ನಾಯಕರು ಹತ್ತು ವರ್ಷಗಳಿಂದ ಸೂಕ್ತ ಪ್ರಾತಿನಿಧ್ಯ ನೀಡುತ್ತಿರುವುದರಿಂದ ಆ ಪಕ್ಷಕ್ಕೆ ಅನುಕೂಲವಾಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ.

ಕಾಂಗ್ರೆಸ್ ಪಕ್ಷದಲ್ಲಿ ಕೆಲವರಿಗೆ ಅನ್ಯಾಯ, ತಾರತಮ್ಯ ಆಗಿರುವುದು ಹೌದು. ಇದಕ್ಕೆ ಕಾರಣವಾದರೂ ಏನು? ಯಾರು? ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತಲೇ ಎಲ್ಲರ ಬೆರಳುಗಳು ತೋರಿಸುತ್ತವೆ.

ಅದರಲ್ಲೂ ವೇಣುಗೋಪಾಲ್ ಬಗ್ಗೆ ಬಹುತೇಕ ಹಿರಿಯ ನಾಯಕರಿಗೆ ಸಿಟ್ಟಿದ್ದಂತಿದೆ. ಅವರು ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲ ತಲೆಯಾಡಿಸುವುದರಿಂದಾಗಿಯೇ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಹೈಕಮಾಂಡ್ ಪ್ರತಿನಿಧಿಯಾಗಿ ವಾಸ್ತವವನ್ನು ದೆಹಲಿ ನಾಯಕರೆದುರು ತೆರೆದಿಡುವ ಬದಲು ಮರೆಮಾಚಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಈ ನಾಯಕರು.

ಲಿಂಗಾಯತ ಸ್ವಾಮಿಯೊಬ್ಬರು ಸಂಖ್ಯಾಬಲಕ್ಕೆ ಅನುಗುಣವಾಗಿ ತಮ್ಮ ಸಮುದಾಯಕ್ಕೆ ಇನ್ನೂ ನಾಲ್ಕು ಮಂತ್ರಿ ಸ್ಥಾನಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹಾಗಾದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇ 35 ರಿಂದ 40 ರಷ್ಟಿರುವ ಹಿಂದುಳಿದ ಜಾತಿಗಳಿಗೆ 14, ಸುಮಾರು ಶೇ 25 ರಷ್ಟಿರುವ ಪರಿಶಿಷ್ಟರಿಗೆ 9, ಶೇ 15ರಷ್ಟಿರುವ ಮುಸ್ಲಿಮರಿಗೆ ಕನಿಷ್ಠ ಐದು ಸ್ಥಾನಗಳನ್ನು ನೀಡಲೇಬೇಕಾಗುತ್ತದೆ. ನಮ್ಮ ಅರ್ಧ ಜಗತ್ತೇ ಆಗಿರುವ ಮಹಿಳೆಯರಿಗೆ ಸಂಪುಟದಲ್ಲಿ ಹದಿನೇಳು ಸ್ಥಾನಗಳನ್ನು (ಜಾತಿ ಮೀಸಲಾತಿಯನ್ನೂ ಒಳಗೊಂಡಂತೆ) ನೀಡಬೇಕಾಗುತ್ತದೆ.

ಆದರೆ ಸರ್ಕಾರ ರಚಿಸಿರುವ ಕಾಂಗ್ರೆಸ್ನಲ್ಲಿ ಏಳು ಮಹಿಳೆಯರಿದ್ದರೆ ಜೆಡಿಎಸ್ನಲ್ಲಿ ಮಹಿಳಾ ಸದಸ್ಯರೇ ಇಲ್ಲ. ಚುನಾವಣೆ ಸಂದರ್ಭದಲ್ಲಿ ಶೇ 50 ರಷ್ಟು ಟಿಕೆಟ್ ನೀಡುವುದಿರಲಿ, ಈಗಾಗಲೇ ಚರ್ಚೆಯಾಗುತ್ತಿರುವ ಶೇ 33.33 ಸ್ಥಾನಗಳನ್ನು ಮಹಿಳೆಯರಿಗೆ ಬಿಟ್ಟುಕೊಡುವುದಕ್ಕೂ ಯಾವುದೇ ರಾಜಕೀಯ ಪಕ್ಷ ಮುಂದಾಗುತ್ತಿಲ್ಲ.

ಟಿಕೆಟ್ ಹಂಚಿಕೆ ಸಂದರ್ಭದಲ್ಲೇ ವಂಚಿಸುವ ರಾಜಕೀಯ ಪಕ್ಷಗಳಿಂದ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸಂಖ್ಯಾಬಲಕ್ಕೆ ಅನುಗುಣವಾಗಿ ಮಂತ್ರಿಗಳಾಗುವುದು ಹೇಗೆ ತಾನೇ ಸಾಧ್ಯ? ನಾನು ಹಿಂದೊಮ್ಮೆ ಇದೇ ಅಂಕಣದಲ್ಲಿ ಹೇಳಿದಂತೆ ಕ್ರಿಯಾಶೀಲತೆ, ದಿಟ್ಟತನ, ಪ್ರಾಮಾಣಿಕತೆ, ಪ್ರತಿಭೆ, ದಕ್ಷತೆ ಜನಪ್ರತಿನಿಧಿಯ ಅರ್ಹತೆಯಾಗಬೇಕೇ

ಹೊರತು ಜಾತಿ, ವಂಶ, ಥೈಲಿಯಲ್ಲ. ಹಾಗೊಂದು ವೇಳೆ ಒಂದು ಸಂಪುಟದ ಬಹುತೇಕ ಸಚಿವರು ಈ ಎಲ್ಲ ಅರ್ಹತೆಗಳಿದ್ದೂ ಒಂದೇ ಜಾತಿಗೆ ಸೇರಿದ್ದರೂ ಜನಸಾಮಾನ್ಯರ್ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ, ಎಲ್ಲರನ್ನೊಳಗೊಂಡ- ಎಲ್ಲರ ಸರ್ಕಾರವಾಗಿರಬೇಕೆನ್ನುವ ಆಶಯದಿಂದ ಎಲ್ಲ ಜಾತಿಗಳಿಗೂ ಪ್ರಾತಿನಿಧ್ಯ ಇರಬೇಕು. ಅಂಥವರಲ್ಲಿ ಜನಪರ ಕಾಳಜಿ ಇದ್ದರೆ ಇನ್ನೇನು ತಾನೇ ಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.