ನಾನು ಎರಡು ವರ್ಷ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡಿದೆ. ಮೂವತ್ತನಾಲ್ಕು ವರ್ಷ ಪೊಲೀಸ್ ಇಲಾಖೆಯಲ್ಲಿದ್ದೆ. ಆದರೆ ಇಂಡಿಯಲ್ಲಿ ಕಳೆದ ದಿನಗಳೇ ಎಲ್ಲಕ್ಕಿಂತ ಹೆಚ್ಚು ಆಪ್ತವಾಗಿದ್ದವು. ಒಂದು ರೀತಿಯಲ್ಲಿ ಅದು ಐಷಾರಾಮಿ ಜೀವನ. ಅಲ್ಲಿ ಲೈನ್‌ಮನ್‌ಗಳು ಕಂಬ, ತಂತಿ ಇತ್ಯಾದಿಯನ್ನು ಹೊತ್ತೊಯ್ಯಬೇಕಿತ್ತು. ಅವನ್ನು ಗಾಡಿಯಲ್ಲಿ ಹಾಕಿಕೊಂಡು ಎಷ್ಟು ದೂರ ಸಂಚರಿಸಿದ್ದು ಎಂಬುದನ್ನು ಇಂಗ್ಲಿಷ್‌ನಲ್ಲಿ ಬರೆಯಬೇಕಿತ್ತು. ಪಾಪ, ಲೈನ್‌ಮನ್‌ಗಳು ನಿರಕ್ಷರಿಗಳು. ನಾನೇ ಅವರಿಗೆ ಆ ವಿವರಗಳನ್ನು ಬರೆದುಕೊಡುತ್ತಿದ್ದೆ. ಅವರಿಗೆ ನನ್ನ ಮೇಲೆ ಇನ್ನಿಲ್ಲದ ಗೌರವ. ಟೆಲಿಫೋನ್ ಆಪರೇಟರ್ ಆಗಿ ನಾನು ಪಟ್ಟ ಖುಷಿಯ ಮುಂದೆ ಅಸಿಸ್ಟೆಂಟ್ ಕಮಿಷನರ್ ಆಗಿ ಆಗಲೀ, ಐಪಿಎಸ್ ಅಧಿಕಾರಿ ಆಗಿ ಪಡೆದ ಸಂತೋಷವಾಗಲೀ ಏನೇನೂ ಅಲ್ಲ.

ಮದುವೆಯಾದ ಮೇಲೆ ನಾವು ಪಾಂಡಿಚೆರಿಗೆ ಹನಿಮೂನ್‌ಗೆ ಹೋದೆವು. ನನ್ನ ಮಾವ ಮಧುರಚೆನ್ನರು ಹಾಗೂ ವರಕವಿ ದ.ರಾ.ಬೇಂದ್ರೆ ಅಣ್ಣ-ತಮ್ಮನಂತೆ ಇದ್ದರು. ಮಾತೆ ಹಾಗೂ ಅರವಿಂದರನ್ನು ಬೇಂದ್ರೆ, ಗೋಕಾಕ್ ಇಬ್ಬರಿಗೂ ಪರಿಚಯ ಮಾಡಿಸಿಕೊಟ್ಟಿದ್ದೇ ನಮ್ಮ ಮಾವ. ಬೇಂದ್ರೆಯವರಿಗೆ ನಮ್ಮ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ. ಅವರು ಒಂದು ಪತ್ರ ಬರೆದು, ತಮ್ಮ ಮನೆಯಲ್ಲಿ ಒಂದಿಷ್ಟು ದಿನ ಇದ್ದು ಹೋಗುವಂತೆ ಆಹ್ವಾನವಿತ್ತರು. ಪಾಂಡಿಚೆರಿಯಿಂದ ಹುಬ್ಬಳ್ಳಿ-ಧಾರಾವಾಡಕ್ಕೆ ಹೋದೆವು.

ಅವರ ಮನೆಯಲ್ಲಿ ಒಂದು ವಾರ ಇದ್ದೆವು. ಅಲ್ಲಿ ಎರಡು ಸಿನಿಮಾಗಳನ್ನು ಕೂಡ ನೋಡಿದೆವು. ಅಲ್ಲಿ ನಮ್ಮನ್ನು ಬಹಳ ಚೆನ್ನಾಗಿ ಉಪಚರಿಸಿದರು. ಬೇಂದ್ರೆಯವರಿಗೆ ಆಗ ಸಂಖ್ಯಾಶಾಸ್ತ್ರದ ಕಡೆಗೆ ಮನಸ್ಸು ವಾಲಿತ್ತು. ಸಂಖ್ಯೆಗಳ ಆಟ ಯಾವ ರೀತಿ ಇರುತ್ತದೆ ಎಂಬುದರ ಕುರಿತು ಅವರು ವಿವರವಾಗಿ ಹೇಳುತ್ತಿದ್ದರು. ಆಗ ಅಧ್ಯಾತ್ಮ, ಕಾವ್ಯದ ಬಗೆಗೆ ಅವರಿಗೆ ಆಸಕ್ತಿ ಉಳಿದಿರಲಿಲ್ಲ. ಅವರ ಮನೆಯಿಂದ ಹೊರಡುವಾಗ ನಮಗೆ ಐದು ಐದೆಯರ ಮೂರ್ತಿ, ಟಾಲ್‌ಸ್ಟಾಯ್ ಬರೆದ `ರೆಸರೆಕ್ಷನ್' ಕೃತಿ, 501 ರೂಪಾಯಿಯನ್ನು ಅವರು ಕೊಟ್ಟರು. ಐದು ಐದೆಯರ ಮೂರ್ತಿಯನ್ನು ನಾನು ಇಂದಿಗೂ ದೇವರು ಎಂದೇ ಭಾವಿಸಿ ಮನೆಯಲ್ಲಿ ಪೂಜಿಸುತ್ತಿದ್ದೇನೆ. ಟಾಲ್‌ಸ್ಟಾಯ್ ಕೃತಿ ನನ್ನ ಪುನರುತ್ಥಾನಕ್ಕೆ ಪ್ರೇರಣೆ ನೀಡಿತು. ಇಂದಿಗೂ ಬೇಂದ್ರೆ ಅವರ ಕುಟುಂಬ ಸದಸ್ಯರ ಜೊತೆಗೆ ನನ್ನ ಒಡನಾಟವಿದೆ.

ನಾನು ಅಸಿಸ್ಟೆಂಟ್ ಕಮಿಷನರ್ ಆಗಿದ್ದನ್ನು ನನ್ನೂರಿನ ಜನ ನಂಬಲೇ ಇಲ್ಲ. ಯಾಕೆಂದರೆ, ಅಧಿಕೃತವಾಗಿ ನಾನು ಪಿಯುಸಿ ಅಷ್ಟೇ ಓದಿದ್ದು. ದೂರಶಿಕ್ಷಣದಲ್ಲಿ ಪದವಿ ಮಾಡಿದ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಕೆಲಸದ ಆರ್ಡರ್ ತೋರಿಸಿದ ಮೇಲೆ ಜನ ನನ್ನ ಮಾತನ್ನು ನಂಬಿದರು. ಊರಿನ ದೈವ ಮಂಡಳಿಯವರು ನನಗೆ ಸನ್ಮಾನ ಮಾಡಿ, ಒಂದು ತೊಲ ಬಂಗಾರದ ಉಂಗುರ ಕೊಟ್ಟು ಗೌರವಿಸಿದರು.

ಫೆಬ್ರುವರಿ 6, 1977 ನಾನು ಮೈಸೂರು ತಲುಪಿದೆ. 15 ಜನ ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ ಆಯ್ಕೆಯಾಗಿದ್ದೆವು. ಅಲ್ಲಿನ ಜಾಕಿ ಕ್ವಾಟ್ರರ್ಸ್‌ನಲ್ಲಿ ನಮ್ಮ ವಾಸ. ಆ ದಿನ `ಇಂದ್ರಭವನ್'ನಲ್ಲಿ ಎಲ್ಲರದ್ದೂ ಒಟ್ಟಿಗೆ ಊಟ. ಮರುದಿನ ಕೆಲಸಕ್ಕೆ ಸೇರಿದೆವು. ಕಾರ್ಮಿಕ, ವಾಣಿಜ್ಯ ತೆರಿಗೆ ಮೊದಲಾದ ಇಲಾಖೆಗಳಿಗೆ ಸಂಬಂಧಪಟ್ಟಂತೆಯೂ ಅಧಿಕಾರಿಗಳ ನೇಮಕಾತಿ ಆಗಿತ್ತು. ನಮ್ಮೆಲ್ಲರಿಗೂ ಅಲ್ಲಿಯೇ ವ್ಯವಸ್ಥಿತ ತರಬೇತಿ. ಆಗ ಎ.ಎಸ್. ಮೇಲುಕೋಟೆ ಎಂಬ ನಿರ್ದೇಶಕರು ತರಬೇತಿಯ ಉಸ್ತುವಾರಿ ವಹಿಸಿದ್ದರು. ಅವರಿಗೆ ಹೊಸಬರನ್ನು ಪಳಗಿಸುವುದರಲ್ಲಿ ಇನ್ನಿಲ್ಲದ ಆಸಕ್ತಿ. ಕರ್ನಾಟಕದ ಇತಿಹಾಸ, ಆಡಳಿತ ಪರಂಪರೆ, ಕಂದಾಯ ಆಡಳಿತ, ಅಭಿವೃದ್ಧಿ ಆಡಳಿತ ಎಲ್ಲವನ್ನೂ ನಮಗೆ ಕಲಿಸಿದರು. ಅಮೃತಪ್ಪ ಪಟೇಲ್,ಪಲ್ಲೇದ್, ಕಟ್ಟಿ ಮೊದಲಾದವರು ಅಲ್ಲಿ ನಮಗೆ ಮಾರ್ಗದರ್ಶನ ತೋರಿದ್ದನ್ನು ಮರೆಯಲಾಗದು.

ಆಗ ಜಿ.ವಿ.ಕೆ. ರಾವ್ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿ. ಮಹಾರಾಜರ ಕಾಲದಲ್ಲಿ ಮೈಸೂರು ಸಿವಿಲ್ ಸರ್ವಿಸ್ ಸೇರಿದ್ದವರು ಅವರು. ನಮ್ಮ ಕೋರ್ಸ್ ಪ್ರಾರಂಭವಾದ ಹತ್ತು ದಿನಗಳ ನಂತರ ಅವರು ಬಂದರು. ಅವರಿಗೆ ಕೆಎಎಸ್ ಅಧಿಕಾರಿಗಳ ಬಗೆಗೆ ವಿಶೇಷ ಗೌರವ. ನಮ್ಮನ್ನು ಕೆಲಸಕ್ಕೆ ಸೇರಿಸಿಕೊಂಡ ಉದ್ದೇಶ, ಯಾವ ರೀತಿ ಕೆಲಸ ಮಾಡಬೇಕು, ಮೈಸೂರು ಆಡಳಿತದ ಪರಂಪರೆ ಎಲ್ಲವನ್ನೂ ಅವರು ವಿವರವಾಗಿ ಹೇಳಿದರು. ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಂಡಿದ್ದೇ ಅಲ್ಲದೆ ಸ್ಫೂರ್ತಿ ತುಂಬುವ ಮಾತಾಡಿದರು. ಹದಿನೈದು ಜನರನ್ನೂ ಪ್ರತ್ಯೇಕವಾಗಿ ಕೂರಿಸಿಕೊಂಡು ಹಿತವಚನಗಳನ್ನು ಹೇಳಿದರು. ಅವರು ಅಷ್ಟೊಂದು ಆಸಕ್ತಿ ವಹಿಸಿದ್ದು ನನ್ನ ಮೇಲೆ ಪರಿಣಾಮ ಬೀರಿತು. ಅವರ ಜೊತೆ ಕಳೆದ ಒಂದು ಇಡೀ ದಿನ ನನ್ನ ನೆನಪಿನಲ್ಲಿ ಅಚ್ಚೊತ್ತಿದೆ.

ತರಬೇತಿ ವೇಳೆ ಇಡೀ ಕರ್ನಾಟಕ ನೋಡುವ ಅವಕಾಶ ನಮ್ಮದಾಯಿತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯ ವ್ಯವಸ್ಥೆಯನ್ನು ಅರಿತೆವು. ಅದಷ್ಟೇ ಅಲ್ಲದೆ ಕುದುರೆ ಸವಾರಿಯ ತರಬೇತಿಯೂ ಇತ್ತು. ಲೆಫ್ಟಿನೆಂಟ್ ಬಿಜಲಿ ಎಂಬುವರು ಅಲ್ಲಿ ತರಬೇತುದಾರರು. ನಮ್ಮಲ್ಲಿ ಬಹಳಷ್ಟು ಜನ ಹೆಸರು ಕೊಟ್ಟಿದ್ದರೂ ಕುದುರೆ ಸವಾರಿ ಮಾಡಲು ಧೈರ್ಯ ಮಾಡಲಿಲ್ಲ. ಅವರನ್ನು ಹುರಿದುಂಬಿಸಿ, ಎಲ್ಲರಿಗೂ ಕುದುರೆ ಸವಾರಿ ಕಲಿಸಲು ಬಿಜಲಿ ಅವರು ತೋರಿದ ಕಾಳಜಿಯದ್ದೇ ಒಂದು ಕತೆ. ನಾಲ್ಕು ತಿಂಗಳು ನಮ್ಮ ಬುನಾದಿ ತರಬೇತಿ ಬಹಳ ಚೆನ್ನಾಗಿ ನಡೆಯಿತು. ಆಮೇಲೆ ಮೈಸೂರಿನ ಸರ್ವೆ ಸೆಟಲ್‌ಮೆಂಟ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಭೂಸರ್ವೇಕ್ಷಣೆ ಮಾಡುವ ಬಗೆ, ಅದಕ್ಕೆ ಬಳಸುವ ಉಪಕರಣಗಳು ಇವುಗಳ ತರಬೇತಿ ನಡೆಯಿತು. ನಾವು ಏಳು ಇಲಾಖಾ ವಿಷಯಗಳಲ್ಲಿ ಪರೀಕ್ಷೆ ಬರೆಯಬೇಕಿತ್ತು. ನಾವು ಈ ರಾಜ್ಯದವರೇ ಆದ್ದರಿಂದ ಕನ್ನಡ ಪರೀಕ್ಷೆ ಬರೆಯುವ ಅವಶ್ಯಕತೆ ಇರಲಿಲ್ಲ.

ತರಬೇತಿ ಮುಗಿದ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನನಗೆ ಸಿಕ್ಕಿದರು. ನನ್ನ ಹೆಂಡತಿ ಇಂಡಿಯಲ್ಲಿ ವೈದ್ಯಾಧಿಕಾರಿ ಆಗಿದ್ದ ಸಂಗತಿಯನ್ನು ಕಿವಿಮೇಲೆ ಹಾಕಿದೆ. ನನಗೆ ಗುಲ್ಬರ್ಗಕ್ಕೆ ಪೋಸ್ಟಿಂಗ್ ಕೊಟ್ಟರು. ವಾರಕ್ಕೊಮ್ಮೆ ಇಂಡಿಗೆ ಹೋಗಿ ಬರುವ ಬಸ್ ಸೌಕರ್ಯ ಗುಲ್ಬರ್ಗದಿಂದ ಇತ್ತು. ಮೊದಲು ನಾವು ಪ್ರೊಬೆಷನರಿ ಅವಧಿಯಲ್ಲಿ ಹಳ್ಳಿಗಳಲ್ಲಿ ಕೆಲಸ ಮಾಡಬೇಕಾಯಿತು.

ಅರಳಗುಂಡಿಗೆ ಗ್ರಾಮದಲ್ಲಿ ಗ್ರಾಮಲೆಕ್ಕಿಗನಾಗಿದ್ದೆ. ಆಮೇಲೆ ಫರಹತಾಬಾದ್‌ನಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್. ಎಂಟು ವಾರ ಜೇವರ್ಗಿ ತಾಲ್ಲೂಕಿನಲ್ಲಿ ಬಿಡಿಒ ಆಗಿ ಕೆಲಸ ಮಾಡುವ ಅವಕಾಶವೂ ನನ್ನದಾಯಿತು. ಮೊದಲ ಬಾರಿಗೆ ಧರ್ಮಸಿಂಗ್ ಆಗ ಶಾಸಕರಾಗಿದ್ದರು. `ಪೀಪಲ್ಸ್ ಹೌಸಿಂಗ್ ಪ್ರೋಗ್ರಾಮ್' ಎಂಬ ಯೋಜನೆ ಆಗ ಅನುಷ್ಠಾನಕ್ಕೆ ಬಂದಿತು. ತಲಾ ಎರಡೂವರೆ ಸಾವಿರ ರೂಪಾಯಿ ಖರ್ಚಿನಂತೆ ಒಂದಷ್ಟು ಮನೆಗಳನ್ನು ಕಟ್ಟಿಕೊಡುವುದು ಆ ಯೋಜನೆಯ ಧ್ಯೇಯ. ಎರಡು ಸಾವಿರ ರೂಪಾಯಿಯನ್ನು ಸರ್ಕಾರ ಕೊಡುತ್ತಿತ್ತು. ಐನೂರು ರೂಪಾಯಿ ಫಲಾನುಭವಿಗಳ ಶ್ರಮದಾನದ ಬಾಬತ್ತಾಗಿತ್ತು. ಪ್ರತಿಯೊಬ್ಬರಿಗೂ ಸರ್ಕಾರದಿಂದ ಐದೈದು ಚೀಲ ಸಿಮೆಂಟ್ ಮೂಟೆಗಳು ಬಂದವು. ಅವನ್ನು ನಾನು ಓಡಾಡುತ್ತಿದ್ದ ಜೀಪ್‌ನಲ್ಲಿ ಹಾಕಿಕೊಂಡೇ ಫಲಾನುಭವಿಗಳಿಗೆ ತಲುಪಿಸಿದೆ. ಅಷ್ಟು ಕಡಿಮೆ ಬೆಲೆಗೆ ಕಟ್ಟಿಸಿದ ಮನೆಗಳನ್ನು ಮತ್ತೆ ನೋಡುವ ಬಯಕೆಯಾಗಿ, ಆರು ವರ್ಷದ ಹಿಂದೆ ಅಲ್ಲಿಗೆ ಪ್ರವಾಸ ಹೋಗಿದ್ದೆ. ಆ ಮನೆಗಳು ಆಗಲೂ ಸುಸ್ಥಿತಿಯಲ್ಲಿ ಇದ್ದಿದ್ದನ್ನು ನೋಡಿ ಹೆಮ್ಮೆ ಎನಿಸಿತು. ಶಾಲೆಗಳ ರಿಪೇರಿ, ಸಣ್ಣ ಸಣ್ಣ ರಸ್ತೆಗಳ ಕಾಮಗಾರಿ ಇತ್ಯಾದಿಗೆಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಟಿ.ಡಿ.ಬಿ ಸೌಕರ್ಯ ಇತ್ತು. ಅದರ ಅಡಿ ಐದು ಸಾವಿರ ರೂಪಾಯಿವರೆಗೆ ಹಣ ಖರ್ಚು ಮಾಡುವ ಅಧಿಕಾರ ನಮಗಿತ್ತು. ನಾನು ಬಿಡಿಒ ಆಗಿದ್ದಾಗ ಜೇವರ್ಗಿ ತಾಲ್ಲೂಕಿನಲ್ಲಿ ಎರಡು ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಕೆಲಸಗಳನ್ನು ಸಮರೋಪಾದಿಯಲ್ಲಿ ಮಾಡಿಸಿದೆ. ವಾರದಲ್ಲಿ ಎರಡು ಮೂರು ದಿನ ಪ್ರವಾಸಕ್ಕೆ ಹೋಗುತ್ತಿದ್ದೆವು. ಆ ಕೆಲಸ ಆದಮೇಲೆ ಆರು ತಿಂಗಳು ಅಫಜಲಪುರಕ್ಕೆ ತಹಶೀಲ್ದಾರ್ ಎಂದು ನೇಮಕ ಮಾಡಿದರು. ಆಗಿನ ಡಿಸಿ ಆಗಿದ್ದ ಸಿ.ಎಂ.ಚಂದಾವರ್ಕರ್ ಅವರು ಇಂಡಿಗೆ ಹೋಗಿ ಬರಲು ನನಗೆ ಅನುಕೂಲವಾಗುವಂತೆ ಅಲ್ಲಿಗೆ ಪೋಸ್ಟಿಂಗ್ ಮಾಡಿಸಿದ್ದರು.

ಮುಂದಿನ ವಾರ: ಐಪಿಎಸ್ ಕನಸು ನನಸಾದದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.