ಭೂಮಿಯನ್ನು ಬಗೆದು ಗರ್ಭದಲ್ಲಿ ಹುದುಗಿರುವ ಅಮೂಲ್ಯವಾದ ಖನಿಜಗಳ ಅದಿರನ್ನು ಹೊರತೆಗೆದು ಶೋಧಿಸಿ ಶುದ್ಧೀಕರಿಸಿ ಕಲಾತ್ಮಕ ಅಲಂಕರಣದ ಆಭರಣವೋ ಅಥವಾ ಇತರ ಉಪಯುಕ್ತ ವಸ್ತುಗಳನ್ನಾಗಿಯೋ ಮಾರ್ಪಡಿಸಿಕೊಳ್ಳುವುದು. ಹಾಗೆ ತೆಗೆದ ಲೋಹಗಳನ್ನು ಮಿಶ್ರಣಮಾಡಿ ಗಟ್ಟಿಗೊಳಿಸುವುದು ಹೊಳೆಸುವುದು.

ಮತ್ತೊಂದು ಭೂಗರ್ಭದಲ್ಲಿ ಹುದುಗಿಹೋಗಿರುವ ಪ್ರಾಚೀನ ಚಾರಿತ್ರಿಕ ಅವಶೇಷಗಳನ್ನು (ಗುಡಿ ಗೋಪುರಗಳು, ಶಿಲಾಶಾಸನಗಳು ಇತ್ಯಾದಿ) ಹೊರತೆಗೆದು ಚರಿತ್ರೆಯ ವೈಭವವನ್ನು ಪುನರ್ ರಚಿಸಿಕೊಳ್ಳುವುದು. ಈ ಶೋಧಕಾರ್ಯ ಮೇಲುನೋಟಕ್ಕೆ ಭೌತಿಕ ಕ್ರಿಯೆಗಳು. ಇವು ಸಂಪನ್ಮೂಲ ಶೋಧವೂ, ಸಾಂಸ್ಕೃತಿಕ ಪ್ರಕ್ರಿಯೆಯೂ ಆಗಿ ಮಹತ್ವಪೂರ್ಣವಾದುದಾಗಿದೆ. ಹಾಗೆಯೇ ಮನೋ ಬುದ್ಧಿ ಭಾವಗಳ ಶೋಧಕಾರ್ಯವೂ.

ಸುಪ್ತ ಪ್ರಜ್ಞೆಯನ್ನು ಒಳಹೊಕ್ಕು ನೋಡುವುದು. ಉತ್ತಮಾಂಶವನ್ನು ಬಗೆದು ಹೊರತೆಗೆಯುವುದು. ಈ ಅಂತರಂಗದ ಕ್ರಿಯೆಯೂ ಉತ್ಖನನ ಕ್ರಿಯೆಯಂತೆಯೇ. ಇಂಥ ಉತ್ಖನನದ ಪ್ರಕ್ರಿಯೆ ಸೃಜನಶೀಲ ಸಂವೇದನೆಯಾಗಿ ಅಭಿವ್ಯಕ್ತಗೊಳ್ಳುವುದು ವಿಶೇಷವಾದುದು. ಈ ರೀತಿಯ ಸಾಂಸ್ಕೃತಿಕ ಸೃಜನಶೀಲ ಸಾಹಸದಲ್ಲಿ ತೊಡಗಿದ್ದವರು ಕವಿ ಗೋಪಾಲ ಕೃಷ್ಣ ಅಡಿಗರು.

ಕಳೆದ ಶತಮಾನದಲ್ಲಿ ಒಂದರವತ್ತು ವರ್ಷಗಳು ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದವರು ಅಡಿಗರು. ಹೊದ್ದು ಮಲಗಿ ಮಸುಕಾಗಿದ್ದ ಋಷಿ ಸಂಸ್ಕೃತಿಯ ಉತ್ತಮಾಂಶಗಳನ್ನು ಹೊರತೆಗೆಯುವ ತುರ್ತನ್ನು ಮನಗಂಡವರು. ನವ್ಯ ಸಂವೇದನೆಯ ಹರಿಕಾರರಾಗಿ ಭಾಷೆ ಬಂಧ ಮತ್ತು ಸಂವೇದನೆಯಲ್ಲಿ ಸಾಂದರ್ಭಿಕವಾಗಿ ಅವಶ್ಯವಾಗಿದ್ದ ನವ್ಯತೆಯನ್ನು ತಂದುಕೊಟ್ಟರು. ಭಾವನಾತ್ಮಕವಾಗಿ ವಿಜೃಂಭಿಸುತ್ತಿದ್ದ ಕಾವ್ಯ ಕ್ರಿಯೆಯನ್ನು ಬುದ್ಧಿ ವಿಚಾರಗಳ ಕಾವ್ಯ ರಸದಲ್ಲಿ ಅದ್ದಿ ಅಪ್ಪಟ ಅಪರಂಜಿಯಾಗಿಸಿ, ನೂತನ ರೀತಿಯ ಕಲಾತ್ಮಕತೆಯಿಂದ ಕಾವ್ಯಶಿಲ್ಪಗಳನ್ನು ಸೃಷ್ಟಿಸಿದ ಧೀಮಂತ ಕವಿ ಅಡಿಗರು.

ವೇದ ಉಪನಿಷತ್ ಪುರಾಣ ಕಾಲದ ಋಷಿ ಸಂಸ್ಕೃತಿಯ ಉತ್ತಮಾಂಶಗಳನ್ನೆಲ್ಲ ಹೊರತೆಗೆದು ಅವಲೋಕಿಸಿದರು.

‘ಇಂದು ನಮ್ಮೀ ನಾಡು-’ ಕವಿತೆಯಲ್ಲಿ:
‘ಇತ್ತು’ಗಳ ಧ್ವಜವ ಹಿಡಿದೆತ್ತಿ ನಿಲ್ಲೋ ಮಗೂ,/ ‘ಇದೆ’ಯ ಹೃದಯದ್ರಾವ ಬೇಡ ನಿನಗೆ./ ಮರವುಂಟು, ಮರಕೆ ಬಂಗಾರವುಂಟಲ್ಲದೆಯೆ/ ಕಟ್ಟೆಯುಂಟಲ್ಲ! ನೀರಿಕ್ಕು ಅದಕೆ!

ಹೀಗೆ ‘ಇತ್ತು’ ‘ಇದೆ’ಗಳ ಸಂಘರ್ಷದಲ್ಲಿ ಮನುಕುಲಕ್ಕೆ ಒಳ್ಳೆಯದೆನಿಸುವುದಕ್ಕೆಲ್ಲಾ ನೀರಿಕ್ಕಿ ಚಿಗುರಿಸುವ ಕಾಯಕದಲ್ಲಿ ತೊಡಗಿದವರು. ತಮ್ಮ ಪ್ರಾತಿನಿಧಿಕ ಕವಿತೆಗಳಾದ ‘ಭೂಮಿಗೀತ’, ‘ಪ್ರಾರ್ಥನೆ’, ‘ಭೂತ’, ‘ಅಜ್ಜನೆಟ್ಟಾಲ’, ‘ವರ್ಧಮಾನ’, ‘ಆಗಬೋಟಿ’, ‘ಬತ್ತಲಾರದ ಗಂಗೆ’, ‘ಹಳೆಮನೆಯ ಮಂದಿ’, ‘ಸ್ವಾತಂತ್ರ್ಯ- ೧೯೮೭’, ಇನ್ನೂ ಹಲವಾರು ಕವಿತೆಗಳಲ್ಲಿ ಅವರ ಶೋಧಕಾರ್ಯ, ಶುದ್ಧೀಕರಿಸುವ ಕಾರ್ಯವಾಗಿ ನಡೆದಿರುವುದನ್ನು ನೋಡಬಹುದು.

ಅವರ ಆರಂಭಿಕ ಕವಿತೆಗಳಲ್ಲಿ ಒಂದಾದ ‘ನನ್ನ ನುಡಿ’ಯಲ್ಲಿ ಹೇಳಿದಂತೆ ‘ಬಗೆಯೊಳಗನೆ ತೆರೆದು’, ಅಂದರೆ ಸುಪ್ತಪ್ರಜ್ಞೆಯ ಒಳಹೊಕ್ಕು ಸಂವೇದನೆಯನ್ನು ಮೂರ್ತಗೊಳಿಸುವ ಕುಶಲ ಕಲೆಯಲ್ಲಿ ನಿರತರಾಗಿದ್ದರು. ತನ್ನದೇ ಆದ ನುಡಿಯಲ್ಲಿ ಬಣ್ಣ ಬಣ್ಣ ವಾಗಿ ಬಣ್ಣಿಸುವ ಸಂಕಲ್ಪದಿಂದ. ಸುಪ್ತ ಪ್ರಜ್ಞೆಯ ಪಾತಳಿಯಿಂದ ಹೊರತೆಗೆದ ಪ್ರತಿಮೆ ರೂಪಕಗಳಿಂದ ವರ್ತಮಾನವನ್ನು ಕಟ್ಟಿಕೊಡುವ ಸಾಧಕರಾಗಿದ್ದರು. ಅದಕ್ಕಾಗಿ ವೇದ, ಉಪನಿಷತ್ತು, ಪುರಾಣ ಚರಿತ್ರೆಯಿಂದ ಪ್ರತಿಮೆ ರೂಪಕಗಳನ್ನು ಆರಿಸಿ ತಂದು ತಮ್ಮ ಕಾವ್ಯೋದ್ದೇಶ್ಯಕ್ಕೆ ಬಳಸಿಕೊಂಡರು. ಬೈಬಲ್ ಗ್ರೀಕ್ ಪುರಾಣ ಕಾವ್ಯಗಳಿಂದಲೂ ತಂದು ಕಾವ್ಯಾನುಭವವನ್ನು ವಿಸ್ತರಿಸಿದರು.

ಅಡಿಗರ ಪ್ರಮುಖ ಕವಿತೆಗಳಲ್ಲೆಲ್ಲಾ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಒಂದು ರೂಪಕ:
ನೆಲದೊಳಗೆ ಅದಿರಾಗಿ ಹೊದ್ದು ಮಲಗಿದ್ದ ಹೊನ್ನನ್ನು / ಹೊರತೆಗೆದು ಸುಟ್ಟು ಸೋಸಿ ಪರಿಶುದ್ಧ ಮಾಡಿದರೆ/ ಅಪರಂಜಿ ಅಪ್ಪಟ; ಬಂಗಾರದಾದರ್ಶ ರೂಪ...
(ಸ್ವಾತಂತ್ರ್ಯ-೧೯೮೭ )

ಇದಕ್ಕೂ ಮೊದಲು ಈ ರೂಪಕ ಕಾಣಿಸಿ ಕೊಳ್ಳುವುದು ಹೀಗೆ:
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು:/ ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ/ ಕಂಡೀತು ಗೆರೆಮಿರಿವ ಚಿನ್ನದದಿರು/ ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ/ ಇನ್ನಾದರೂ ಕೊಂಚ ಕಲಿಯಬೇಕು;
(ಭೂತ)
ಉತ್ಖನನ ಕ್ರಿಯೆಯ ಇಂಥ ರೂಪಕಗಳು ದುಡಿಯುವುದೆಲ್ಲಾ ಸೃಜನಶೀಲತೆಗಾಗಿ. ಬದುಕಿನ ನಿರಂತರತೆಗಾಗಿ.
ಅಡಿಗರೇ ನಿರೂಪಿಸುವಂತೆ ಟಿ.ಎಸ್. ಎಲಿಯಟ್‌ನ ಪ್ರಯೋಗದಂತೆ ‘ಪ್ರಾಚೀನ ಕಾವ್ಯಕೋಶದಿಂದ ಚಿಂತಾರತ್ನಗಳನ್ನು ಆಯ್ದು ಅವನ ಉದ್ದೇಶ ಸಾಧನೆಗೆ ಅವುಗಳನ್ನು ಉಪಯೋಗಿಸಿಕೊಂಡಂತೆ’ ತನ್ನ ಸಮಕಾಲೀನ ಜೀವನ ಶೋಧನೆಗೆ ನೆರವಾಗುವಂತೆ ಪುರಾಣದ ಸಂದರ್ಭಗಳನ್ನು ಪಾತ್ರ ವಿಶೇಷಗಳನ್ನು, ವೇದೋಪನಿಷತ್ತನ್ನು ಬಳಸಿಕೊಂಡು ವರ್ತಮಾನವನ್ನು ಕಟ್ಟಿಕೊಳ್ಳುವುದು.

‘ಹಿಮಗಿರಿಯ ಕಂದರ’ದಲ್ಲಿ ಬುದ್ಧನ ಬೋಧಿವೃಕ್ಷದ ಛಾಯೆಯಲ್ಲಿ ಜ್ಞಾನೋದಯ, ಪರಿನಿಷ್ಕ್ರಮಣ ಎಲ್ಲವೂ ದುಡಿಯುವ ಕ್ರಮದಲ್ಲಿ ಕವಿಯ ಉದ್ದೇಶ್ಯವನ್ನು ಮನಗಾಣಬೇಕು. ಪ್ರಾಚೀನ ಪ್ರತಿಮೆಗಳ ಮೂಲಕ ಅವರು ಉಂಟುಮಾಡುವ ಕಾವ್ಯಾನುಭವ ಅನನ್ಯವಾದುದು: ‘ಆಗಬೋಟಿ’, ‘ಬತ್ತಲಾರದ ಗಂಗೆ’ ಕವಿತೆಗಳಲ್ಲಿ ಮಡುಗಟ್ಟಿ ಕೊಳೆತು ನಾರುತ್ತಿರುವ ಸಾಂಸ್ಕೃತಿಕ ಸಂದರ್ಭವನ್ನು ಚಲನಶೀಲವಾಗಿಸಲು, ಪರಂಪರೆಗೆ ಹೊಸ ಅರ್ಥವನ್ನು ಹೊಳೆಸುತ್ತಾರೆ :

ಬತ್ತಿಹೋಗಲಿ ಗಂಗೆಯೊಂದುಸಲ ತಳಬಿರಿದು, ಗಂಗೆಯಿಲ್ಲದ ಕಾಲದಲ್ಲಿ ತಡೆದುಡುಕಿದ ಭಗೀರಥನ/ ಸಂಕಲ್ಪಬಲದ ಅಸಂಖ್ಯಾತರಿಲ್ಲಿ/ ಬಂದೆ ಬರುವರು; ದೇವಗಂಗೆಯೆ ನೇರ/ ಹೃದಯದಂತರ್ಗಂಗೆ ತುಂಬಿ ಚೆಲ್ಲಿ,/ ದಡದಲ್ಲಿ ಮತ್ತೆ ವಿದ್ಯಾರಣ್ಯ ಧರ್ಮಕ್ಷೇತ್ರ/ ಚಿಗುರುವುವು ಚಿಗಿಯುವುವು ಮುಗಿಲ ಕಡೆಗೆ;/ ಮುಗಿಲ ಧ್ಯಾನದಲ್ಲಿ.

‘ಆಗಬೋಟಿ’ ಕವಿತೆಯ ರೂಪಕ ಭಾಷೆ ಕಟ್ಟಿಕೊಡುವ ವಿಸ್ತಾರವಾದ ಅನುಭವದಲ್ಲಿ ಅವರ ಆಧುನಿಕವಾದ

ಕಾವ್ಯೋದ್ದೇಶ್ಯವನ್ನು ಮನಗಾಣಬಹುದು:
ಹಳೆ ಹಲಗೆಗಳ ಹಿಡಿದು ಮಿಡಿದು ಬಡಿದು ನೋಡುವಗತ್ಯ
ಮತ್ತೆ ಬಂದಿದೆ. ಪುರಾತನ ಹಡಗುವಿದ್ಯೆಗಳನ್ನು ಇಂದಿನ ಪರಿಗೆ
ಜೋಡಿಸುವ ಕೆಲಸ: ಹೊಸ ಮರ, ಹೊಸ ಕಬ್ಬಿಣ, ಹೊಸ ತಂತ್ರ ಯಂತ್ರಗಳ ಬೆಸವಾಧುನಿಕ ಬೋಟಿ, ಹೊಸ ಲಂಗರು./ ಯಾನ ನಡೆಯಲಿ ತಂಗಿ ತಂಗಿ ಬಂದರಿನಲ್ಲಿ/ ನವ ಖಂಡಗಳ ಸೋಸಿ ಪಾತಾಳದೆಡೆಗೆ,/ ಶಿಖರಗಳನಾಕ್ರಮಿಸಿ ಆಕಾಶದೆಡೆಗೆ. (ಆಗಬೋಟಿ )
ಸಾಂಸ್ಕೃತಿಕ ಯಾನ ನವಖಂಡಗಳ ಶೋಧಿಸಿ ಪಾತಾಳವನ್ನು ಮುಟ್ಟಿ ಮತ್ತೆ ಆಕಾಶದ ಕಡೆಗೆ ಜಿಗಿಯಬೇಕಾದ ತುರ್ತನ್ನು ಮನಗಂಡವರು ಅಡಿಗರು.

ರಾಜಕಾರಣಿ ಗೋಪಾಲ ಗೌಡರನ್ನು ವಿಶ್ವಾಮಿತ್ರ ಶಂಬೂಕ ಋಷಿಗಳ ಪಂಕ್ತಿಯಲ್ಲಿ ನಿಲ್ಲಿಸಿದ್ದಾರೆ. ‘ಶಾಂತವೇರಿಯ ಅಶಾಂತ ಸಂತ’ ಎಂದು ಕರೆದು ‘ನೀವು ಈಗ ಇಲ್ಲಿ ಇರಬೇಕಿತ್ತು ಕರ್ಮಾಂಗಕ್ಕೆ’, ಎಂಬುದಾಗಿ ಪರಿಭಾವಿಸಿ. ಜೀಮೂತವಾಹನ ದಧೀಚಿಯರೊಂದಿಗೆ ಸಮೀಕರಿಸಿ ಹವಿಸ್ಸಾದ ಬಗೆಯನ್ನು ಕವಿತೆಯಲ್ಲಿ ನಿರ್ವಹಿಸುವ ರೀತಿಯಲ್ಲಿ ಪ್ರಾಚೀನವನ್ನು ವರ್ತಮಾನಕ್ಕೆ ಹೊಂದಿಸುವ ಅಡಿಗರ ಘನವಾದ ಉದ್ದೇಶದಲ್ಲಿ ಅವರ ಕಾವ್ಯದ ಸಾಧನೆಯಿದೆ.

ಕೆ. ನರಸಿಂಹಮೂರ್ತಿಯವರು ‘ಟಿ.ಎಸ್. ಎಲಿಯಟ್ ಮತ್ತು ಗೋಪಾಲಕೃಷ್ಣ ಅಡಿಗ’ ಲೇಖನದಲ್ಲಿ ‘ಸಾಂಪ್ರದಾಯಿಕ ಆದರೆ ಈಗ ನಿಸ್ಸತ್ವವಾಗಿರುವ ರೂಪಕಗಳನ್ನು ಬಿಟ್ಟುಕೊಟ್ಟು ವಾಸ್ತವಿಕ ಅನುಭವದ ಮತ್ತು ಸುಪ್ತಪ್ರಜ್ಞೆಯಲ್ಲಿ ಸ್ಫುರಿಸುವ ಸಮಕಾಲೀನವೆನ್ನಿಸುವ ಹೊಸ ರೂಪಕಗಳ ಬಳಕೆಯಿಂದಲೂ, ಹಿಂದೆ ಕಾವ್ಯದಲ್ಲಿ ಉಪಯೋಗಿಸುತ್ತಿದ್ದ ಶಬ್ದಗಳೊಂದಿಗೆ ಇಂದಿನ ಬಳಕೆಯ ಮಾತುಗಳ ಸುಸಂಗತ ಪ್ರಯೋಗದಿಂದಲೂ ಮತ್ತು ಭಾಷೆಯ ಖಚಿತವಾದ ನಿಷ್ಕೃಷ್ಟವಾದ ಬಳಕೆಯಿಂದಲೂ ಕವಿ ಎಲಿಯಟ್ ಹೇಳುವಂತೆ: ‘the dialect of the tribe’, ಎಂದರೆ ‘ಒಂದು ಜನಾಂಗದ ಭಾಷೆಯನ್ನು ಶುದ್ಧೀಕರಿಸಿ ಸಮಾಜಕ್ಕೆ ತನ್ನ ಸೇವೆಯನ್ನು ಸಲ್ಲಿಸಬೇಕು’ ಎಂಬ ಧ್ಯೇಯೋದ್ದೇಶ್ಯದಿಂದ ದುಡಿದ ಕವಿ. ‘ಶ್ರೀರಾಮನವಮಿಯ ದಿವಸ ‘ಕವಿತೆಯಲ್ಲಿ:

ಕೌಸಲ್ಯೆದಶರಥ ಪುತ್ರಕಾಮೇಷ್ಟಿ ಗೆರೆ / ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಫೋಟಿಸಿತು ಸಿಡಿತಲೆ; ಗರಿಷ್ಠ ತೇಜದ ಮೊನೆ/ ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ;
ಎಂಬ ಪರಂಪರೆ ಮತ್ತು ವರ್ತಮಾನದ ಅನುಭವಗಳ ರೂಪಕ ಬಂಧದಲ್ಲಿ ಸ್ಫುರಿಸುವ ದರ್ಶನ ವಿಶೇಷವನ್ನು ಮನಗಾಣಬಹುದು. ಮತ್ತು ಸಾಂಪ್ರದಾಯಿಕ ಶಬ್ದಗಳೊಂದಿಗೆ ಬಳಕೆ ಮಾತುಗಳ ಹಿತವಾದ ಜೋಡಣೆಯನ್ನು ಇದೇ ಕವನದ ಈ ಸಾಲುಗಳಲ್ಲಿ ನೋಡಬಹುದು:

ಸಂಕಲ್ಪಬಲದ ಜಾಗರಣೆ, ಕತ್ತಲಿನೆದೆಗೆ / ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ/ ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ ;
ಸುಟ್ಟಲ್ಲದೆ ಮುಟ್ಟೆನೆಂಬುಡಾಫೆ ...

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕೆ/ ಅಂಚೆ ತಲುಪಿತೇ ಸಹಸ್ರಾರಕೆ?/ ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು/ ಪುರುಷೋತ್ತಮನ ಆ ಅಂಥ ರೂಪ- ರೇಖೆ
ಇತ್ಯಾದಿ ಪದ ಬಂಧಗಳು ಹೊರಡಿಸುವ ಅನುಭವ ವಿಶೇಷಕ್ಕೆ, ವಸ್ತು ಭಾವ ಭಾಷೆಯನ್ನು ವಿನ್ಯಾಸಗೊಳಿಸುವ ಕ್ರಮದಲ್ಲಿ ಶೋಧಕ ಪ್ರವೃತ್ತಿಯನ್ನು ಕಾಣಬಹುದು. ( ಅವರ ಆತ್ಮಚರಿತ್ರೆಯೂ ‘ನೆನಪಿನ ಗಣಿಯಿಂದ’ ಎಂಬುದಾಗಿದೆ. ಮರೆವಿನ ಸಂದರ್ಭದಲ್ಲಿ ಮತ್ತೆ ಸುಪ್ತಪ್ರಜ್ಞೆಯನ್ನು ತಡಕಿ ಆತ್ಮಚರಿತ್ರೆಯನ್ನು ರಚಿಸಿದ್ದಾರೆ.) ಅವರಿಗೆ ಸಾಂಸ್ಕೃತಿಕ ಗಣಿಗಾರಿಕೆಯಂಥ ಕಾವ್ಯೋದ್ಯೋಗ ಪ್ರಿಯವಾದುದು.

ಚರಿತ್ರೆಗೆ ವಾರಸುದಾರರಾಗುವುದು ಅವರ ಕಾವ್ಯ ಕ್ರಿಯೆಯ ಮುಖ್ಯ ಆಸಕ್ತಿ: ಅದು
ಕಳೆದದ್ದನ್ನು ಪಡೆಯುವ / ಪಡೆದದ್ದಕ್ಕೆ ಪಡಿಹತ್ತು ಹಡೆವ / ಗಹ್ವರದ ಒಳಗತ್ತಲಲ್ಲಿ ಸುತ್ತಲು ತಡಕಿ ತಡೆದು ನಡೆಯುವ / ನಡೆದು ಮುಗ್ಗರಿಸಿ ಬಿದ್ದೆದ್ದು ಹರೆವ, ಹರಿಯುವ ಜಾಡು/ ಹಿಡಿವ, ಗುರುತಿಸುವ, ಬೇರೆ ಬಗೆವ, ಕಳೆದದ್ದನ್ನು ಪಡೆವ/ ಪಡೆದದ್ದಕ್ಕೆ ಪಡಿ ಹತ್ತು ಹಡೆವ ಕವನದ ಕರಡು / ಸಿದ್ಧಪಡಿಸುವ ಕಾವ್ಯ ವರ್ಧಮಾನಗೆ.

ಇಂಥ ಕಾವ್ಯ ಕ್ರಿಯೆಯಲ್ಲಿ ಕಳೆದದ್ದನ್ನು ಪಡೆವ, ಗುರುತಿಸುವ , ಬೇರೆ ಬಗೆವ ರೀತಿ ‘ವರ್ಧಮಾನ’ನದು. ಆದ್ದರಿಂದಲೇ ಅಡಿಗರು ಸಂವೇದನೆಯನ್ನು ನೇರವಾಗಿ ಹೇಳಿಮುಗಿಸುವುದಿಲ್ಲ. ‘ಸುತ್ತಲೂ ತಡಕಿ’ ಅನುಭವದ ಎಲ್ಲ ಮಗ್ಗಲುಗಳಿಂದಲೂ ‘ಪರಿಪೂರ್ಣಾವತಾರಿ’ಯಾಗಿ ಕಾವ್ಯದ ಆಕೃತಿ ಮೈದಳೆಯುವಂತೆ ಪರಿಶ್ರಮಿಸಿದವರು. ಪೈರು ಕೃಷಿಯ ತನ್ನೆಲ್ಲಾ ಕ್ರಿಯೆಗಳಿಂದ, ಕೊಟ್ಟ ಎಲ್ಲ ಸಾವಯವ ಸಾಮಗ್ರಿಗಳಿಂದ ಹೊರವಾಗಿ ಬೆಳೆದು ಹಾಲ್ದುಂಬಿದ ತೆನೆ ಕಾಳು ಕಣಜವನ್ನು ತುಂಬುವಂತೆ. ಅವರ ಕಾವ್ಯ ಮೈದಳೆದು ನಿಲ್ಲುತ್ತವೆ. ಸಂಕೀರ್ಣವಾಗಿ ಓದುಗನಿಗೆ ಸವಾಲಾಗಿಯೂ.

ಅಡಿಗರು ತಮಗೆ ತುಂಬ ಪ್ರಿಯವಾದ ಭೂಮಿ ಪ್ರತಿಮೆಯನ್ನು ದುಡಿಸಿಕೊಳ್ಳುವ ರೀತಿ ಅನನ್ಯವಾದುದು. ಭೂಮಿಯ ಆಳದಲ್ಲಿರುವ ಅಮೂಲ್ಯ ವಾಸ್ತವಗಳ ಮೂಲಕವೇ ಅಮೂರ್ತದ ಆಕಾಶದ ಕಡೆಗೆ ಕೈ ಚಾಚುವವರು. ಹಾಗಾಗಿ ಬಗೆಯುವ ಕ್ರಿಯೆ ಅವರಲ್ಲಿ ಸಾಂಕೇತಿಕವಾಗಿ ಸದಾ ದುಡಿಯುತ್ತಿದೆ. ‘ಹೃದಯ ಹೃದಯಗಳಲ್ಲಿ ಹುದುಗಿದ ಅಂತರ್ಗಂಗೆ’ಯನ್ನು ಪುಟಿಸಬೇಕು. ಅಂತರ್‌ದೃಷ್ಟಿಯ ಮೂಲಕ ಎಂಬ ಧೋರಣೆಯ ಕಾವ್ಯ ಅವರದು.

‘ಭೂಮಿಗೀತ’ದಲ್ಲಿ ತುಂಬಿರುವ ಪೌರಾಣಿಕ ಪ್ರತಿಮೆಗಳ ಜೊತೆ ಜೊತೆಯಲ್ಲೇ ಗ್ರೀಕ್ ಪುರಾಣ ಕಾವ್ಯದ ‘ಈಡಿಪಸ್ಸಿನ ಗೂಢ ಪಾಪಲೇಪಿತ ನಾನು;/ ಎಂಬ ಪಾಪ ಪ್ರಜ್ಞೆಯ ಕಾವ್ಯ ನಾಯಕ ಟ್ರ್ಯಾಕ್ಟರನ್ನೇರಿದೆನು; ಉತ್ತೆ, ಸಿಗಿದೆ./ ಬಿತ್ತಿದೆನು, ಬೆಳೆದೆ ಆಟಂಬಾಂಬುಕಾಳುಗಳ;/ ಮಾರಕ ಕ್ರಿಮಿಪೈರ ಗೋರಿ ನಲಿದೆ’ ಎಂಬ ವಿನಾಶಕಾರಿ ನಡವಳಿಕೆಗಳಿಂದ ಹೊರಳಿ ‘ಹೆಳವನ ಹೆಗಲಮೇಲೆ ಕುರುಡ ಕೂತಿದ್ದಾನೆ; ದಾರಿಸಾಗುವುದೆಂತೊ ನೋಡಬೇಕು’ ಎಂದು ಬೆಳಕಿನ ಮಾರ್ಗವನ್ನ ಹುಡುಕಿಕೊಂಡು ಹೊರಟವರು ಅಡಿಗರು.

ಕಾಡುತ್ತಿದ್ದ ಭೂತಕಾಲದ ಹಳಸಲನ್ನೆಲ್ಲಾ ತೆಗೆದೊಗೆದು ಗುದ್ದಲಿಯೊತ್ತಿ ಅಗೆದು ಕಂಡ ಚಿನ್ನದ ಅದಿರನ್ನು ಶೋಧಿಸಿ ‘ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ/ ವಿಗ್ರಹಕ್ಕೊಗಿಸುವ ಅಸಲು ಕಸಬು’ ಅವರ ಕಾವ್ಯ. ಸತ್ಯದೊಡನೆ ಅನುಸಂಧಾನ ಮಾಡುವ ಪ್ರಕ್ರಿಯೆಯಲ್ಲಿ ಸಾಧನೆಮಾಡಿದವರು. ‘ಕಾವ್ಯ ಬರಿ ಮನರಂಜನೆಗಾಗಿಯಲ್ಲ (ಸಾಂಸ್ಕೃತಿಕವಾಗಿ) ವ್ಯಕ್ತಿತ್ವ ಶೋಧನೆಗೆ’ ಎಂಬ ನಿಲುವಿನಲ್ಲಿ ಸಾಕ್ಷಿ ಪ್ರಜ್ಞೆಯಾಗಿದೆ ಅವರ ಕಾವ್ಯ.

ಅಂಥ ಸಂಕಲ್ಪದಿಂದ ಶೋಧಿಸಿ ಶುದ್ಧೀಕರಿಸಿ ಕಡೆದ ಆಕೃತಿಗಳಲ್ಲಿ ಅಡಿಗರ ಕಾವ್ಯ ಸಿದ್ಧಿಯಿರುವುದು. ಪುರಾತನದಲ್ಲಿ ಅತ್ಯಾಧುನಿಕತೆ ಫಲಿಸುವಂತೆ ಕಟ್ಟಿ ಎಳೆದು ತಂದ ಅಡಿಗರ ಸಂಸ್ಕೃತಿ ತೇರು ಕಾಣಿಸುತ್ತಿರುವುದು ಶಾಂತಿ ಭ್ರಾತೃತ್ವ, ಸಮತ್ವವನ್ನು. ಇಂದು ನಾವು ಎದುರಿಸುತ್ತಿರುವ ಕಲ್ಚರಲ್ ಕಾನ್‌ಫ್ಲಿಕ್ಟ್‌ಗೆ ಪರಿಹಾರವನ್ನು ಅಡಿಗರ ಶೋಧ ಕಾವ್ಯ ತೆರೆದಿಟ್ಟಿದೆ. ಬೋಧಿ ಮಾರ್ಗದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.