ಅಮೃತಮತಿಯ ಸ್ವಗತವನ್ನು ಗಾಜುಗೋಳದ ಮೂಲಕ ಹಾಯಿಸಿದ್ದ ಎಚ್.ಎಲ್.ಪುಷ್ಪ ಲೋಹದ ಕಣ್ಣು ತೆರೆದು ಈಗ ಹೊಸ ಬಗೆಯ ಕವಿತೆಗಳನ್ನು ಬರೆಯುತ್ತಿದ್ದಾರೆ. ಅಲ್ಲಮನ ಪ್ರಭಾವಲಯದ ರೂಪಕಗಳಲ್ಲೇ ಬದುಕನ್ನು ಚಿತ್ರಿಸುವ ಅವರ ಕಾವ್ಯ ರೀತಿಯ ಪರಿ ಬೆರಗಾಗಿಸುವಂಥದು.

ಈಗಾಗಲೇ ತಮಗೆ ಸಿದ್ಧಿಸಿದ ಮಾರ್ಗಗಳಲ್ಲೇ ಅನ್ಯ ಕವಯತ್ರಿಯರು ದಾಪುಗಾಲಿಡುತ್ತಿರುವಾಗ ಈಗಲೂ ಪುಷ್ಪ ಆತಂಕದಲ್ಲಿ ಆಧ್ಯಾತ್ಮವನ್ನರಸುತ್ತಿರುವುದು ವಿಶೇಷವೆನ್ನಿಸುತ್ತದೆ. ವರ್ಷಕ್ಕೊಂದು ಸಂಕಲನ ತರಲೇಬೇಕು, ಅದನ್ನು ರಾಜಧಾನಿಯಲ್ಲಿ ಸಾಹಿತ್ಯಕ ಗಣ್ಯರು ಬಿಡುಗಡೆ ಮಾಡಬೇಕು, ಮಾಧ್ಯಮಗಳಲ್ಲಿ, ಅದರಲ್ಲೂ ಟೀವಿ ಮತ್ತು ಅಂತರ್ಜಾಲ ಮಾಧ್ಯಮಗಳಲ್ಲಿ ಆ ಕುರಿತು ಸುದ್ದಿ ಬರಲೇಬೇಕೆಂಬ ತಹತಹಿಕೆ ಇರುವ ಈ ದಿನಮಾನಗಳ ಕವಯತ್ರಿ ಈಕೆಯಲ್ಲದ ಕಾರಣ ಇನ್ನೂ ಇವರ ಕವಿತೆಗಳಲ್ಲಿ ಜೀವಂತಿಕೆ ಇದೆ ಹಾಗೂ ಕೃತ್ರಿಮವೆನ್ನಿಸದ ಸಹಜ ಅಭಿವ್ಯಕ್ತಿ ಸಾಧ್ಯವಾಗಿದೆ.

೧೯೯೨ರಲ್ಲಿ ಮೊದಲ ಸಂಕಲನ ಅಮೃತಮತಿಯ ಸ್ವಗತ ಪ್ರಕಟಿಸಿದ ನಂತರ ೧೯೯೯ರಲ್ಲಿ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪುರಸ್ಕಾರ ಸಿಕ್ಕಕಾರಣ ಗಾಜುಗೋಳ ಪ್ರಕಟಿಸಿದರೆ, ೧೯೯೯ರಲ್ಲಿ ಲೋಹಿಯಾ ಶತಮಾನೋತ್ಸವ ಮಾಲಿಕೆಯಲ್ಲಿ ಲೋಹದ ಕಣ್ಣು ಪ್ರಕಟವಾಗಿದೆ. ಅಂದರೆ ಹೆಚ್ಚೂ ಕಡಿಮೆ ಇಪ್ಪತ್ತು ವರ್ಷಗಳ ಅಂತರದಲ್ಲಿ ಪ್ರಕಟಿಸಿರುವುದು ಕೇವಲ ಮೂರು ಸಂಕಲನಗಳಾದರೂ ಕನ್ನಡ ಕಾವ್ಯದ ಕುರಿತ ಎಲ್ಲ ಚರ್ಚೆಗಳಲ್ಲೂ ಪುಷ್ಪ ಅವರ ಕವಿತೆಗಳು ಉಲ್ಲೇಖವಾಗಿವೆ, ಆಗುತ್ತಲಿವೆ ಅಂದರೆ ಅವರ ಕಾವ್ಯ ಪಯಣದ ರೀತಿಯನ್ನು, ಅವರು ಕಾವ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕ್ರಮವನ್ನೂ ವಿವರಿಸುತ್ತವೆ.

ಪುಷ್ಪ ಅವರ ಕಾವ್ಯ ಮಾರ್ಗದಲ್ಲಿ ಸಾಕಷ್ಟು ಸಾರ್ಥಕ ಕವಿತೆಗಳಿರುವುದು, ಒಂದು ಪಾತಳಿಗೆ ಸಿಲುಕದೇ ಆ ಎಲ್ಲ ಕವಿತೆಗಳೂ ತಮಗಿರದ ನೆಲೆಯನ್ನು ಕುರಿತೇ ಶೋಧಿಸುತ್ತಿರುವುದೂ ಹೆಚ್ಚುಗಾರಿಕೆ. ಜಂಭದ ಗಾಳಿಕುದುರೆಗೆ ತಿಳಿದಿರಲಿ/ಬಯಲಿಗೆ ಬಯಲು ಎಂದೂ ಜೊತೆಯಲ್ಲವೆಂದು ಎನ್ನುವ ಅರಿವಿರುವ ಕವಿ ಕರುಣೆಯ ಕಣ್ಣು ತೆರೆದಲ್ಲದೆ/ಈ ತನು, ತನುವಿನ ಭವ ಹಿಂಗದು ಎನ್ನುತ್ತಾರೆ. ಅಪ್ಪಳಿಸುವ ಅಲೆಯೆದುರು/ವಿಳಾಸವಿಲ್ಲದ ನಾನು ತಬ್ಬಿಬ್ಬಾಗಿದ್ದೇನೆ/..

../ಮಾರ್ದನಿಯಿಲ್ಲದ ಪುಟ್ಟ ಹಕ್ಕಿ ಎಂದೂ ಸಂತೈಸಿಕೊಳ್ಳುತ್ತಾರೆ. ಕನ್ನಡ ಕಾವ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಆಧ್ಯಾತ್ಮದ ಹುಡುಕುವಿಕೆ ಇವರ ಪದ್ಯಗಳ ಮೂಲ ಶ್ರದ್ಧಾ ಕೇಂದ್ರ. ಆತ್ಮ ಸಂಗಾತಕ್ಕೆ ನೀನುಂಟು, ಏಕಲವ್ಯನೆಂಬ ಗುರುವಿಗೆ, ದಾರಿ ಕಳಕೊಂಡಿದೆ ಕವಿತೆ, ನದೀಮುಖ, ಕುಣಿವ ನವಿಲುಗಳು ಮುಂತಾದ ಪದ್ಯಗಳು ಪುಷ್ಪ ಅವರು ಶೋಧಿಸುತ್ತಿರುವ ಲೋಕದ ದಾರಿಗೆ ಇಡುತ್ತಿರುವ ಹೆಜ್ಜೆಗಳ ಕುರುಹಾಗಿ ತೋರುತ್ತವೆ.

ಪುಷ್ಪ ಅವರ ಪ್ರಕಟಿತ ಸಂಕಲನಗಳ ಎಲ್ಲ ಕವಿತೆಗಳನ್ನೂ ಒಟ್ಟಿಗೆ ಇಟ್ಟುಕೊಂಡು ಅವರು ನಿರ್ಮಿಸಿಕೊಳ್ಳುತ್ತಿರುವ ಕಾವ್ಯದ ಹಾದಿಯನ್ನು ಸುಲಭವಾಗಿ ಬಗೆಯಬಹುದಾದರೂ ಈ ಲೇಖನದ ಉದ್ದೇಶ ಅದಲ್ಲವಾದ್ದರಿಂದ ಅವರದೊಂದು ಕವಿತೆಯನ್ನು ಸಾಧಾರವನ್ನಾಗಿಟ್ಟುಕೊಂಡು ಒಟ್ಟಾರೆ ಅವರ ಕಾವ್ಯಕ್ರಮವನ್ನು ಅವಲೋಕಿಸಿಸುವುದಾಗಿದೆ.

ಇದು ಒಂದು ರೀತಿಯಲ್ಲಿ ಸುಲಭ. ಮತ್ತೊಂದು ರೀತಿಯಲ್ಲಿ ಅತಿ ಕಠಿಣ. ಸುಲಭ ಹೇಗೆಂದರೆ ಒಬ್ಬ ಕವಿಯ ಒಂದೇ ಒಂದು ಕವಿತೆಯನ್ನು ಕಾವ್ಯ ಪರಂಪರೆಯ ಜೊತೆ ವಿಶ್ಲೇಷಿಸಿ ಆ ಕವಿತೆ ಹೇಗೆ ಪರಂಪರೆಯೊಂದಿಗೆ ತನ್ನ ಸಂಬಂಧವನ್ನು ಕಾಪಾಡಿಕೊಂಡಿದೆ ಮತ್ತು ಹೇಗೆ ಆ ಕವಿ ನಿರ್ಮಿತ ಮಾರ್ಗವನ್ನು ಅನುಲಕ್ಷಿಸಿ ತನ್ನದೇ ದಾರಿಯನ್ನು ನಿರ್ಮಿಸಿಕೊಳ್ಳುವುದರಲ್ಲಿ ನಿರತನಾಗಿದ್ದಾನೆ ಎಂದು ಪ್ರಮಾಣೀಕರಿಸಬಹುದು.

ಆದರೆ ಕಠಿಣವೆಂದರೆ ಆ ಕವಿ ಪರಂಪರೆಗಿಂತಲೂ ವರ್ತಮಾನದ ಸಂಗತಿಗಳಿಗೆ ಹೇಗೆ ಸ್ಪಂದಿಸುತ್ತಿದ್ದಾನೆ ಮತ್ತು ಆ ಸ್ಪಂದನ ಸಹಜವಾಗಿದೆಯಾ ಅಥವ ಅದು ಕೃತ್ರಿಮವಾಗದ ಮತ್ತು ಬರಿಯ ಹೇಳಿಕೆಗಳಾಗದ ನಿಜದ ಸೆಲೆಗಳಾಗಿವೆಯಾ ಎಂದೂ ವಿಶ್ಲೇಷಿಸಬೇಕಾಗುತ್ತದೆ. ಈ ಹೊತ್ತಿನ ಬಹುತೇಕ ಕವಿಗಳು ರಾಜಕಾರಣದಿಂದ ಹಿಡಿದು ಸಾಮಾಜಿಕ ಸ್ಪಂದನೆಯವರೆಗೂ ತಮ್ಮ ಚಾಚುಗಳನ್ನು ವಿಸ್ತರಿಸುತ್ತಿರುವುದರಿಂದ ಮತ್ತು ತಮ್ಮ ನಿಲುವುಗಳನ್ನು ಪ್ರಕಟಣೆಯ ಕಾರಣಕ್ಕಾಗಿಯೇ ಆಗೀಗ ಬದಲಿಸುತ್ತ ಅಥವ ಪ್ರಕಾಶಕರ ಧ್ಯೇಯೋದ್ದೇಶಗಳಿಗೆ ತಕ್ಕಂತೆ ತಮ್ಮ ನಿಲುವುಗಳನ್ನೂ ಬದಲಿಸಿಕೊಳ್ಳುತ್ತ ಇರುವುದರಿಂದ ಅಂಥ ಬರಹಗಾರರ ಸಿದ್ಧಾಂತ ಮತ್ತು ನಂಬಿಕೆಗಳು ಅತಿ ವಾಣಿಜ್ಯೀಕರಣದ ಕಾರಣ ಅಲ್ಪ ಕಾಲದಲ್ಲಿ ತಮ್ಮ ಆಯುಷ್ಯವನ್ನು, ಪರಿಮಳವನ್ನೂ ಮತ್ತು ಪ್ರಸ್ತುತತೆಯನ್ನೂ ನೀಗಿಕೊಳ್ಳುತ್ತವೆ.

ಇಂಥ ಕಠಿಣ ಕಾರಣಗಳು ತಿಳಿದಿದ್ದೂ ಈ ಕಾಲದ ಒಬ್ಬ ಕವಿಯ ಒಂದೇ ಒಂದು ಕವಿತೆಯ ಮೂಲಕ ಆ ಕವಿಯ ಕಾವ್ಯ ಪರಿಕ್ರಮಣವನ್ನು ಅಭ್ಯಸಿಸುವುದು ಕಷ್ಟಸಾಧ್ಯದ ಕೆಲಸವಾಗಿದೆ. ಆದರೆ ಅಡಿಗರ ಭೂಮಿಗೀತ, ಚಿತ್ತಾಲರ ಕಡತ, ನಿಸಾರರ ಮನಸು ಗಾಂಧಿ ಬಜಾರು, ಅಲ್ಲಮನ ಯಾವುದೇ ಒಂದು ವಚನ, ಅಥವ ಹೀಗೆ ಚರ್ಚೆಗೆ ಸಿಕ್ಕುವ ಹಲವರ ಕವಿತೆಗಳನ್ನು ಬೇಕು ಬೇಕಾದ ಹಾಗೆ ಸಿದ್ಧಮಾದರಿಗಳಲ್ಲೂ, ಪ್ರಸಿದ್ಧ ಮಾದರಿಗಳಲ್ಲೂ, ಹಾಗೇ ಸ್ವಯಂ ನಿರ್ಮಿತೆಯ ಪಾತಳಿಗಳಲ್ಲೂ ಅವಲೋಕಿಸಬಹುದು.

ಆದರೆ, ಪುಷ್ಪ ಅವರಂತಹ ಅನೇಕ ಕವಿಯನ್ನು ಒಂದು ಕವಿತೆಯ/ ಸಂಕಲನದ ಆಧಾರದಿಂದ ಮೇಲಕ್ಕೆತ್ತಿ ಮೆರಸುವುದು ಅಥವ ಪಾತಾಳಕ್ಕೆ ತುಳಿಯುವುದು ಅತಿ ಅವಸರದ ಕೆಲಸವಾಗುತ್ತದೆ. ಏಕೆಂದರೆ ಪರಂಪರೆಯೊಂದಿಗಿನ ದೀರ್ಘ ಸಂಬಂಧವನ್ನು ಕಳಚಿಕೊಂಡು ಸ್ವಯಂ ನಿರ್ಮಿತಿಯ ಮತ್ತು ಬಹುಬೇಗ ಮಾಸಲಾಗುವ ಕನಿಷ್ಟ ಅನುಭವಗಳೇ ಈ ಹೊತ್ತಿನ ಬಹುತೇಕ ಲೇಖಕರ ಫ್ಯಾಷನ್ ಆಗುತ್ತಿದೆ. ಅಲ್ಲದೇ ವ್ಯಸ್ತ ರಾಜಕಾರಣಕ್ಕೆ ಅಥವ ಕಣ್ಣೆದುರಿನ ನಿತ್ಯಸಂಗತಿಗಳಿಗೆ ಸ್ಪಂದಿಸದಿದ್ದರೆ ಓಬೀರಾಯನ ಕಾಲದವರೆಂಬ ಹಣೆಪಟ್ಟಿ ದೊರಕುವುದರಿಂದ ಸಿಕ್ಕಸಿಕ್ಕ ಸಂಗತಿಗಳಲ್ಲೆಲ್ಲ ಕವಿತೆಗಳನ್ನು ಕಾಣಹೋಗುವ ಹುಚ್ಚೂ ಹೆಚ್ಚಾಗುತ್ತಿದೆ. ಅನುಭಾವ ಕೂಡ ಹಲವರ ಆಡುಂಬೊಲ! ಇಂಥ ಸ್ಥಿತಿಯಲ್ಲಿ ಪುಷ್ಪ ಅವರ ತಂಬೂರಿ ಮತ್ತು ಗಾಜುಗೋಳ ಕವಿತೆಯನ್ನು ಚಿಕಿತ್ಸಕ ದೃಷ್ಟಿಯಿಂದ ಪರಿಶೀಲಿಸುವ ಪ್ರಯತ್ನ ಈ ಲೇಖನ. ಮೊದಲು ಪದ್ಯದ ಪೂರ್ಣಪಾಠವನ್ನು ಓದಿ ನಂತರ ಹಂತಹಂತವಾಗಿ ಅದನ್ನು ಅವಲೋಕಿಸೋಣ.

ತಂಬೂರಿ ಮತ್ತು ಗಾಜುಗೋಳ
ಹರಿಯೋ ಥಳ ಥಳ ನೀರಿನದು ಎಂಥ ಆಟ?
ಬಿಸಿಲ ಕಿರಣದಲ್ಲಿ ಎಷ್ಟೆಷ್ಟು ಬಣ್ಣ?
ಮಿನುಗೋ ಮುತ್ತು ಜಾರೋ ಬಿಸಿಲಲ್ಲಿ ತೋರಿದ್ದು ಯಾವ ವರ್ಣ?
ಪುಳಕ್ಕನೆ ತೇಲಿ ಮುಳುಗೋ ಮೀನಿಗೆ ಯಾವ ದಿಕ್ಕಿನ ಹೆಸರು?
-ಇಲ್ಲಿ ಯಾವುದೂ ನಿಲ್ಲೋಲ್ಲ; ಯಾರನ್ನೂ ಕಾಯೋಲ್ಲ.
ಬಾವುಟ, ಲಾಠಿ, ಬೂಟುಗಳ ಸಡಗರ
ಅಹಾ ಮೊಳಗುತಿದೆ ಸಂಭವಾಮಿ ಯುಗೇ ಯುಗೇ ಝೇಂಕಾರ
ಕೈಯಲ್ಲಿ ಲಾಠಿ, ಬಾಯಲ್ಲಿ ಪರಾಕು
ಕಟ್ಟುವ ಕೆಡಹುವ ಕರಣಿ ಕೈ ನಾಜೂಕಾಗಿದೆ
ಎಂದೋ ಕೇಳಿದ ನಿನ್ನ ಹಾಡಿನ ತುಣುಕು ಕ್ಷೀಣವಾಗುತ್ತಿದೆ:
ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರ?

ಗುಂಡು ಮುಣುಗಿನ ಹಕ್ಕಿಯಂತೆ
ಕಂಡ ಕಂಡ ನೀರ ಮುಳುಗಿ
ಮುಖದ ಮೇಲೆ ಕಾಷಾಯ ಎಳೆವ ಮುಖಕ್ಕೇನು ಗತ್ತು
ಪೀಠದ ಕೆಳಗೆ ಹಾವು, ಗೆದ್ದಲು, ಹೆಗ್ಗಣಗಳದು
ಎಂತಹ ತೃಪ್ತ ಬದುಕು
ಆಹಾ! ಸನಾತನ ಧರ್ಮ, ನಾರುತಿದೆ ಸೊಗಸಾಗಿ
ಕಂಪೆಷ್ಟು, ಅದರ ಸೊಗಸೆಷ್ಟು.

ಇಂದು ಇಲ್ಲಿ ಜಾತ್ರೆ, ನಾಳೆ ಮತ್ತೆಲ್ಲೋ ನರಮೇಧ
ಡೊಂಕು ಬಾಲದ ನಾಯಕರಾಟ
ದಬ್ಬೆ ಕಟ್ಟಿದರೂ, ಸುರುಟುತಿದೆ ಬಲು ಸೊಗಸಾಗಿ
ಒಳಗೆಲ್ಲೋ ತುಡಿವ ಆತ್ಮಕ್ಕೆ, ಕಂಪಿಸುವ ಜೀವಕ್ಕೆ
ನಯಾಪೈಸೆ ಕಿಮ್ಮತ್ತಿದ್ದರೆ...

ಹೋಗಲಿ ಬಿಡು, ತಂಬೂರಿ ಹೊತ್ತು ತಿರುಗೋ
ತಿರುಕ ನಿನ್ನ ಬುತ್ತಿಯೂಟದಲಿ
ಅದೇ ಗಮಗಮಿಸೋ ತಂಗಳನ್ನ, ಹದನಾದ ಕೆಂಪಿಂಡಿ, ಚಟ್ನಿ, ಕಾರ
ಮಿಡಿ ಉಪ್ಪಿನಕಾಯಿ ಹಾಗೇ ಇರಲಿ.

ಹಸಿದ ಕೈ ಕತ್ತರಿಸಿ ಚಾಚುತ್ತದೆ ನಿನ್ನ ಜೋಳಿಗೆಯ ಅನ್ನಕ್ಕೆ
ಹೊಟ್ಟೆಯೊಳಗಿನ ಬಾಂಬಿನ ಕಾಳು ಮೊಳಕೆಯೊಡೆದು
ಬೇರು ಮೂಡುವ ಮುನ್ನವೇ ಸುಳ್ಳು ಮೊಟ್ಟೆ
ಒಡೆದು ಬಿಡಲಿ, ನಾಜೂಕಿನ ಗಾಜುಗೋಳ ಚೂರಾಗಲಿ
ತಣ್ಣನೆ ಗಾಳಿ ಮುಖಕ್ಕೆ ರಾಚಲಿ.

ಇದು ೧೯೯೯ರಲ್ಲಿ ಪ್ರಕಟವಾದ ಎಚ್.ಎಲ್. ಪುಷ್ಪ ಅವರ ಸಂಕಲನ ಗಾಜುಗೋಳದ ಕವಿತೆಗಳಲ್ಲೊಂದು.
ಈ ಕವಿತೆ ಧ್ಯಾನಿಸಿರುವ ಅಂಶಗಳಲ್ಲಿ ಹಲವು ಇಂದಿಗೂ ಪ್ರಸ್ತುತವೆನ್ನಿಸಿದ ಕಾರಣ ಬೇಕೆಂತಲೇ ಈ ಕವಿತೆಯನ್ನು ಆಯ್ದುಕೊಂಡಿದ್ದೇನೆ. ಕವಿಯೊಬ್ಬ ಒಂದು ಕಾಲದ ಘಟಿನೆಗೆ ಕೊಟ್ಟ ಒಂದು ಖಾಸಗಿ ಟಿಪ್ಪಣಿ ಮುಂದೆ ಎಲ್ಲ ಕಾಲದ ಅದೇ ತೆರನ ಘಟನೆಗಳಿಗೂ ಆ ಟಿಪ್ಪಣಿಯೇ ಸಕಾಲಿಕವಾಗಿ ನಿಲ್ಲುತ್ತಲೇ ಇರುತ್ತದೆನ್ನುವುದಕ್ಕೆ ಇದು ಒಂದು ಅಪ್ಪಟ ಉದಾಹರಣೆ. ಅಡಿಗರ ನೆಹರೂ ನಿವೃತ್ತರಾಗುವುದಿಲ್ಲ, ಕೆ.ಎಸ್.ನ ಅವರ ಗಡಿಯಾರದಂಗಡಿಯ ಮುಂದೆ, ನಿಸಾರರ ರಾಮನ್ ಸತ್ತ ಸುದ್ದಿ ಪದ್ಯಗಳು ಈ ಪದ್ಯವನ್ನು ಮತ್ತೆ ಮತ್ತೆ ಓದುವಾಗ ನೆನಪಾಗುತ್ತವೆ. ನಿಜದ ಕವಿತೆಗಳ ತಾಕತ್ತೇ ಇದು.

ಒಂದು ಗಂಭೀರ ಪದ್ಯ ಓದುವಾಗ ನಮ್ಮನ್ನಾಕ್ರಮಿಸುವ ಸಂಕಟಗಳನ್ನು ಮೀರಲು ಮತ್ತೆ ಮತ್ತೆ ನೆನಪಾಗುವುದು ಅನ್ಯರ ಅಂಥದೇ ಪದ್ಯಗಳು! ಕವಿಯ ಶಕ್ತಿ ಮತ್ತು ದೌರ್ಬಲ್ಯಗಳು ಅರಿವಾಗುವುದೂ ಇಂಥ ಸ್ಥಿತಿಗಳಲ್ಲೇ. ಹೇಗೆ ಕವಿ ತನ್ನನ್ನು ಸುತ್ತಿಕೊಂಡಿರುವ ಸಂಕಟಗಳಿಂದ ಪಾರಾಗಲು ಯತ್ನಿಸುತ್ತಲೇ ಅಂಥದೇ ಪ್ರಯತ್ನಗಳನ್ನು ಮಾಡಿದ್ದ ಪೂರ್ವಸೂರಿಗಳ ತೆಕ್ಕೆಯಿಂದ ಬಿಡಿಸಿಕೊಳ್ಳುವ ಭರದಲ್ಲಿ ಮತ್ತೆ ಮತ್ತೆ ಮತ್ತದೇ ಕಾವ್ಯ ಪರಂಪರೆಯ ಜೇಡರ ಬಲೆಯೊಳಕ್ಕೇ ಮತ್ತೆ ಮತ್ತೆ ಸಿಲುಕಿಕೊಳ್ಳುತ್ತಾನೆ, ಪಾರಾಗಲು ತನ್ನದೇ ಹಾದಿಗಳನ್ನು ನಿರ್ಮಿಸಿಕೊಳ್ಳುತ್ತಾನೆ ಅನ್ನುವ ಬಗೆಹರಿಯದ ಕಾವ್ಯಾನುಲೋಮ ಕ್ರಿಯೆಯಿದು.

ಪದ್ಯದ ಮೊದಲ ಪ್ಯಾರವನ್ನು ಮತ್ತೆ ಓದಿಕೊಳ್ಳೋಣ. ಇತಿಹಾಸ ಎಲ್ಲರನ್ನೂ ಕಸಕ್ಕೆ ಸರಿಸಿರುವ ಸತ್ಯ ಗೊತ್ತಿದ್ದರೂ ಹೇಗೆ ಜಗತ್ತು ಮತ್ತೆ ಮತ್ತೆ ಆ ನೆನಪ ಮರೆತು ಮತ್ತೆ ಹೊಸ ಕಟ್ಟುವಿಕೆಯ ಭರದಲ್ಲಿ ಅನ್ಯರನ್ನು ನೋಯಿಸುತ್ತದೆಯೆನ್ನುವ ವರ್ತಮಾನ ಇದರಲ್ಲಿದ್ದರೂ ಪದ್ಯ ಬಿಚ್ಚಿಕೊಳ್ಳುವ ಕ್ರಮ ಅಂದರೆ ಅದರಲ್ಲಿರುವ ಲಯ, ಪರಂಪರೆ ಕಲಿಸಿಕೊಟ್ಟ ಪಾಠ, ಮತ್ತು ಹೊಸದರ ತುಡಿತ ಎಲ್ಲವೂ ಮೇಳೈಸಿದೆ. ಹರಿಯೋ ಥಳ ಥಳ ನೀರಿನದು ಎಂಥ ಆಟ?ಬಿಸಿಲ ಕಿರಣದಲ್ಲಿ ಎಷ್ಟೆಷ್ಟು ಬಣ್ಣ?ಮಿನುಗೋ ಮುತ್ತು ಜಾರೋ ಬಿಸಿಲಲ್ಲಿ ತೋರಿದ್ದು ಯಾವ ವರ್ಣ?

ಪುಳಕ್ಕನೆ ತೇಲಿ ಮುಳುಗೋ ಮೀನಿಗೆ ಯಾವ ದಿಕ್ಕಿನ ಹೆಸರು? -ಇಲ್ಲಿ ಯಾವುದೂ ನಿಲ್ಲೋಲ್ಲ; ಯಾರನ್ನೂ ಕಾಯೋಲ್ಲ. ಮೊದಲ ಸಾಲು ಅಡಿಗರ ಪದ್ಯಗಳ ಹಾಗೇ ಮೊದಲ ನೋಟಕ್ಕೇ ಸೆರೆ ಹಿಡಿದು ಬಿಡುತ್ತವೆ. ಅವರ ನೆಲ ಸಪಾಟಿಲ್ಲ ಕವಿತೆಯ ಹಾಗೇ ಇಲ್ಲೂ ಕೂಡ ಪದ್ಯ ಬಿಚ್ಚಿಕೊಳ್ಳುವ ಕ್ರಮ ಮತ್ತದು ನಮ್ಮನ್ನು ಉಡ್ಡಯನಕ್ಕೆ ಕರೆದೊಯ್ಯುವ ಕ್ರಮ ಇಷ್ಟವಾಗುತ್ತದೆ.

ನೀರ ಹರಿಯುವಿಕೆಯ ಪ್ರತಿಮೆಯ ಮೂಲಕ ಅಶುದ್ಧಗೊಳ್ಳುತ್ತಿರುವ ವರ್ತಮಾನವನ್ನು ಕವಿ ಹೇಳುತ್ತಲೇ ಬದುಕ ಪಟ್ಟಕದಲ್ಲಿ ಹಾಯುವ ನಿಜದ ಬೆಳಕು ತೋರಿಸುವ ಮುಖಗಳನ್ನು ತೆರೆದಿಡುತ್ತಲೇ ಹೆಜ್ಜೆ ಗುರುತು ದಕ್ಕದ ಮೀನಿನ ಮೂಲಗಮ್ಯವನ್ನು ಧ್ಯಾನಿಸುತ್ತಲೇ ಇದೆಲ್ಲವೂ ಯಾರಿಗೂ ಕಾಯದೇ ಕೇಳದೇ ನಡೆಯುವ ಸಂಗತಿಗಳೆಂದು ಮನದಟ್ಟು ಮಾಡಿಕೊಡುತ್ತಲೇ ಸದ್ಯದ ಆತಂಕವನ್ನು ಎದುರಿಗಿಡುತ್ತಾರೆ.

ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರೂ ಬಲ್ಲಿರ? ಅನ್ನುವ ಕನಕನ ಮಾತನ್ನು ಉದ್ಧರಿಸುತ್ತಲೇ ಇಷ್ಟೂ ದಿನ ಪರಮಾತ್ಮ ಸಂಭವಿಸುತ್ತಾನೆಂಬ ಆಶಯದ ಹಿಂದಿನ ನಂಬಿಕೆಗಳನ್ನೇ ಪ್ರಶ್ನಿಸುತ್ತಾರೆ. ಏಕೆಂದರೆ ಕಟ್ಟುವುದಕ್ಕಿಂತಲೂ ಕೆಡಹುವುದರಲ್ಲೇ ನಿರತವಾಗಿರುವ ಮಂದಿ ತುಂಬಿರುವ ಕಡುಕಷ್ಟದ ದಿನಗಳಲ್ಲೂ ಪರಮಾತ್ಮನೆಂಬುವವನು ಅವತಾರವೆತ್ತದಿದ್ದರೆ ಅಂಥ ನಂಬಿಕೆಯೇ ಹುಸಿಯಲ್ಲವೇ ಅನ್ನುವುದೂ ಇಲ್ಲಿ ಧ್ವನಿಸಿದೆ.

ಪದ್ಯದ ಮೂರನೆಯ ಖಂಡ ಕಾವಿಧಾರಿಗಳ ರಾಜಕಾರಣವನ್ನು ಗೇಲಿ ಮಾಡುತ್ತಲೇ ಮಠ ಮಾನ್ಯಗಳು ಮತ್ತವುಗಳ ಸನ್ನಿಧಿಯಲ್ಲಿ ಬೀಡುಬಿಟ್ಟಿರುವ ಹೆಗ್ಗಣಗಳನ್ನೂ, ಉನ್ನತ ಪೀಠಗಳ ಒಳಗೆ ಆಧುನಿಕ ಹೆಸರುಗಳಲ್ಲಿ ನಡೆಯುವ ಅನಾಚಾರಗಳನ್ನೂ ಅಂಥ ಕಾರ್ಯನಿರತ ಹಾವುಗಳನ್ನೂ ವಿವರಿಸಿ, ಪರಂಪರೆಗೆ ಹತ್ತಿರುವ ಗೆದ್ದಲಿಗೆ ಆತಂಕ ಪಡುತ್ತದೆ.

ಇಂದು ಇಲ್ಲಿ ಜಾತ್ರೆ, ನಾಳೆ ಮತ್ತೆಲ್ಲೋ ನರಮೇಧ ಎಂದು ಆರಂಭವಾಗುವ ನಾಲ್ಕನೇ ಖಂಡ ಡಿವಿಜಿಯವರ ಬದುಕು ಜಟಕಾ ಬಂಡಿ ಪದ್ಯದ ಸಾರ್ಥಕ ಸಾಲುಗಳ ಸಫಲ ಅನುಕರಣೆಯಂತೆ ಆರಂಭವಾದರೂ ದಬ್ಬೆ ಕಟ್ಟಿದರೂ, ಸುರುಟುತಿದೆ ಬಲು ಸೊಗಸಾಗಿ ಅನ್ನುವ ವೇಳೆಗೆ ವ್ಯಂಗ್ಯದ ಮೊನಚಾಗಿ ಬದಲಾಗುತ್ತದೆ. ನಮ್ಮೆಲ್ಲರೊಳಗೂ ಕಿಂಚಿತ್ತಾದರೂ ಒಳ್ಳೆಯತನವಿದ್ದಿದ್ದರೆ ಅನ್ನುವ ಆಶಯ ಒಳಗೆಲ್ಲೋ ತುಡಿವ ಆತ್ಮಕ್ಕೆ, ಕಂಪಿಸುವ ಜೀವಕ್ಕೆ ನಯಾಪೈಸೆ ಕಿಮ್ಮತ್ತಿದ್ದರೆ... ಅನ್ನುವ ಸಾಲುಗಳಲ್ಲಿ ಅನುರಣಿಸಿದೆ.

ಇಲ್ಲಿನ ತನಕ ವರ್ತಮಾನಕ್ಕೆ ತೆರೆದುಕೊಂಡಿದ್ದ ಕವಿತೆ ಐದನೆಯ ಖಂಡಕ್ಕೆ ಹೊರಳಿದಾಗ ಲೌಕಿಕದಿಂದ ಅಧ್ಯಾತ್ಮಕ್ಕೆ ಜಿಗಿದುಬಿಡುತ್ತದೆ. ಮತಾಂಧತೆಯ ರಾಜಕಾರಣವನ್ನು ಪ್ರಶ್ನಿಸುತ್ತಿದ್ದ ಕವಿ ವರ್ತಮಾನದ ಭಾಷ್ಯದಲ್ಲಿ ಅದಕ್ಕೆ ಉತ್ತರ ದಕ್ಕದೇ ಅಧ್ಯಾತ್ಮದ ಹಾದಿಯಲ್ಲಿ ಅದನ್ನು ಹುಡುಕಹೋಗುತ್ತಾನೆ. ಹೋಗಲಿ ಬಿಡು, ತಂಬೂರಿ ಹೊತ್ತು ತಿರುಗೋ ತಿರುಕ ನಿನ್ನ ಬುತ್ತಿಯೂಟದಲಿ ಅದೇ ಗಮಗಮಿಸೋ ತಂಗಳನ್ನ, ಹದನಾದ ಕೆಂಪಿಂಡಿ, ಚಟ್ನಿ, ಕಾರ ಮಿಡಿ ಉಪ್ಪಿನಕಾಯಿ ಹಾಗೇ ಇರಲಿ. ಈ ಸಾಲುಗಳನ್ನು ಓದಿಕೊಳ್ಳುವಾಗ ಏಕೋ ಬೇಂದ್ರೆ ಧೇನಿಸಿದ ಜೋಗಿ ಇಲ್ಲಿ ನೆನಪಾಗುತ್ತಾನೆ. ಲೌಕಿಕದ ಗೋಜಲುಗಳಿಲ್ಲದ ಯಾವ ಸಮಸ್ಯೆಯ ಕಿಲುಬೂ ನಮ್ಮನ್ನು ಕಾಡದ ಅಂಥ ಸ್ಥಿತಿ ಅಷ್ಟೆಲ್ಲ ಸುಲಭಕ್ಕೆ ನಮಗೆಲ್ಲ ಒದಗಿಬರುತ್ತಿದ್ದರೆ ಈ ಹೊತ್ತಿನ ಸಮಸ್ಯೆಗಳಿಂದ ನಾವೆಲ್ಲ ಮುಕ್ತರಾಗಬಹುದಿತ್ತೋ ಏನೋ?ಅಷ್ಟು ಸುಲಭದ ಪ್ರವೇಶ ಎಲ್ಲರಿಗೂ ದಕ್ಕಿದ್ದರೆ... ಬರಿಯ ‘ರೆ...’ ಆಗಿ ಮಾತ್ರವೇ ಉಳಿದ ದುರಂತ ಇವತ್ತಿನದು.

ಹಸಿದ ಕೈ ಕತ್ತರಿಸಿ ಚಾಚುತ್ತದೆ ನಿನ್ನ ಜೋಳಿಗೆಯ ಅನ್ನಕ್ಕೆ ಹೊಟ್ಟೆಯೊಳಗಿನ ಬಾಂಬಿನ ಕಾಳು ಮೊಳಕೆಯೊಡೆದು ಅನ್ನುವ ಪದ್ಯದ ಕಡೆಯ ಸಾಲುಗಳನ್ನು ಈಗ ಪದ್ಯದ ಮೊದಲ ಚರಣವನ್ನಷ್ಟೇ ಓದಿಕೊಂಡು ಓದಿದರೆ ಪದ್ಯ ನಮಗೆ ಕಾಣಿಸುವ ಕ್ರಮವೇ ಬೇರೆಯಾಗುತ್ತದೆ. ನಮ್ಮೆಲ್ಲ ಗೊಂದಲ ಮತ್ತು ಹತಾಶೆಗಳಿಗೆ ಉತ್ತರ ಹುಡುಕಿದ ಖುಷಿ ಕವಿತೆಯ ಕಡೆಯ ಸಾಲುಗಳಲ್ಲಿ ಅನುರಣಿಸಿದೆ. ಕವಿ ಹೇಳುತ್ತಾರೆ- ಸುಳ್ಳು ಮೊಟ್ಟೆ ಒಡೆದು ಬಿಡಲಿ, ನಾಜೂಕಿನ ಗಾಜುಗೋಳ ಚೂರಾಗಲಿ ತಣ್ಣನೆ ಗಾಳಿ ಮುಖಕ್ಕೆ ರಾಚಲಿ.

ಸುಳ್ಳಿನ ಮೊಟ್ಟೆಗಳನ್ನೇ ಸೃಷ್ಟಿಸಿಕೊಂಡ ವರ್ತಮಾನದಲ್ಲಿ ನಾಜೂಕಿನ ಗಾಜುಗೋಳ ಚೂರಾಗಲಿ ಎನ್ನುವುದು ಸ್ಪಷ್ಟ ಆಶಯ, ಸರಿ. ತಣ್ಣನೆಯ ಗಾಳಿ ಮುಖಕ್ಕೆ ರಾಚಿ ಹತ್ತಿದ ಅಮಲನ್ನು ಇಳಿಸಲಿ ಅನ್ನುವುದು ಒಪ್ಪತಕ್ಕ ಮಾತೇ. ಆದರೆ ಇದು ಒಂದು ಕಡೆಯ ಆಶಯವಾದರೆ ಸಾಕೇನು? ಉಭಯತ್ರರಲ್ಲೂ ಮೂಡಬೇಕಾದ ಬೆಳಕಲ್ಲವೇನು? ಅಂತ ಪ್ರಶ್ನಿಸುವುದು ತಲೆಹರಟೆಯಾಗಬಾರದು. ಅದೂ ಕೂಡ ಒಪ್ಪಿತ ಸತ್ಯವಾದರೆ ಅದೆಷ್ಟು ಚೆನ್ನು.

ಮೂರ್ತವಾದ ವರ್ತಮಾನದ ಸಮಸ್ಯೆಗಳ ಅನುಸಂಧಾನದ ಮೂಲಕವೇ ಅಮೂರ್ತ ಲೋಕದಲ್ಲಿದ್ದಿರಬಹುದಾದ ಸಿದ್ಧ ಉತ್ತರಗಳನ್ನು ಪಡೆದುಕೊಳ್ಳುವ ಕವಯತ್ರಿಯ ಪ್ರಯತ್ನ ಇಲ್ಲಿ ಸಹಜವಾಗಿ ಸಫಲವಾಗಿದೆ. ವೈಚಾರಿಕ ನಿಲುವುಗಳನ್ನು ಕಾವ್ಯದ ಧ್ವನಿಸಿದ್ಧಾಂತದ ಮೂಲಕ ಪ್ರಕಟಿಸುವ ಈ ಬಗೆಯ ಪದ್ಯಗಳು ಸರ್ವಕಾಲದ ಸಮಸ್ಯೆಗಳಿಗೂ ಉತ್ತರವನ್ನು ಕಲ್ಪಿಸಿಕೊಡುತ್ತವೆ ಮತ್ತು ಸಕಾಲಿಕವಾಗಿಯೂ ಪುನರ್ರೂಪಗೊಳ್ಳುತ್ತಲೇ ಇರುತ್ತವೆ. ಆ ದೃಷ್ಟಿಯಿಂದ ಪುಷ್ಪ ಅವರ ತಂಬೂರಿ ಮತ್ತು ಗಾಜುಗೋಳ ಧ್ಯಾನಿಸಿದ ನಿಲುವುಗಳನ್ನು ಓದುನಿಗೂ ದಾಟಿಸುವುದರಲ್ಲಿ ಸಫಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.