ನಾನು ಮತ್ತು ಪೂರ್ಣಚಂದ್ರ ತೇಜಸ್ವಿಯವರು ‘ಲಹರಿ’ ಎಂಬ ಸಾಂಸ್ಕೃತಿಕ ಪತ್ರಿಕೆಯನ್ನು ಪ್ರಾರಂಭಿಸಿದಾಗಿನಿಂದಲೂ ಕನ್ನಡದಲ್ಲಿ ಒಂದು ಪ್ರಕಾಶನ ಮಾಡಬೇಕೆನ್ನುವುದು ನನ್ನ ಉತ್ಕಟ ಆಕಾಂಕ್ಷೆಯಾಗಿತ್ತು. ಈ ಆಕಾಂಕ್ಷೆಯಿಂದಲೇ ಪೂರ್ಣಚಂದ್ರ ತೇಜಸ್ವಿಯವರ ‘ವ್ಯಕ್ತಿ ವಿಶಿಷ್ಟ ಸಿದ್ದಾಂತ’, ‘ಯಮಳ ಪ್ರಶ್ನೆ’ ಹಾಗೂ ಎಚ್.ಎಂ. ಚೆನ್ನಯ್ಯನವರ ‘ಕಾಮಿ’ ಎನ್ನುವ ಕವನ ಸಂಗ್ರಹ, ಹೀಗೆ ಮೂರು ಪುಸ್ತಕಗಳನ್ನು ಪ್ರಕಟಿಸಿದೆನು. ಆಗೆಲ್ಲಾ ನಾನು ಮತ್ತು ನನ್ನ ಸಮಾನ ಮನಸ್ಕ ಗೆಳೆಯರು ಸಮಾಜವಾದಿ ಯುವಜನಸಭಾ, ಭಾಷಾಚಳವಳಿ, ನವನಿರ್ಮಾಣಕ್ರಾಂತಿ ಇತ್ಯಾದಿ ಚಳವಳಿಗಳ ಮುಂಚೂಣಿಯಲ್ಲಿದ್ದೆವು.

ಇಂಥ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ‘ಅಬಚೂರಿನ ಪೋಸ್ಟ್ ಆಫೀಸ್’ ಎಂಬ ಕಥಾ ಸಂಗ್ರಹವನ್ನು ಪ್ರಕಾಶಿಸಬೇಕೆಂದು ಮುದ್ರಿಸಿದೆನು. ಈ ಸಮಯದಲ್ಲಿ ನಮ್ಮ ಚಳವಳಿಗಳ ರೂಪುರೇಷೆ, ಕಾರ್ಯವಿಧಾನಗಳನ್ನು ರೂಪಿಸಲು ಆಗಾಗ್ಗೆ ಅಧ್ಯಯನ ಶಿಬಿರಗಳನ್ನು ನಡೆಸುತ್ತಿದ್ದೆವು. ಇಂತಹ ಒಂದು ಅಧ್ಯಯನ ಶಿಬಿರದಲ್ಲಿ ತೇಜಸ್ವಿ, ಲಂಕೇಶ್, ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ ಪ. ಮಲ್ಲೇಶ್, ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಕೆ. ರಾಮದಾಸ್ ಇತ್ಯಾದಿ ಗೆಳೆಯರಿದ್ದರು.

ಆ ಶಿಬಿರದಲ್ಲಿ ಲಂಕೇಶರು ‘ನಾವೆಲ್ಲ ಒಂದೊಂದು ಪ್ರಕಾಶನ ಮಾಡುವುದು ಬೇಡ, ನಾವೆಲ್ಲರೂ ಸೇರಿ ಒಬ್ಬ ಮಿತ್ರನಿಗೆ ಪ್ರೋತ್ಸಾಹಿಸೋಣ’ ಎಂದು ಹೇಳಿ, ‘ಪಟ್ಟಣಶೆಟ್ಟಿ ಜಾಣ, ವ್ಯವಹಾರಸ್ಥ, ಈತ ಪ್ರಕಾಶನವನ್ನು ಸರಿಯಾಗಿ ನಡೆಸಬಲ್ಲ, ಆದ್ದರಿಂದ ನೀವು ಈಗಾಗಲೇ ಮುದ್ರಿಸಿರುವ ‘ಅಬಚೂರಿನ ಪೋಸ್ಟ್ ಆಫೀಸ್’ನ ಎಲ್ಲ ಪ್ರತಿಗಳನ್ನು ಪಟ್ಟಣಶೆಟ್ಟರಿಗೆ ವಹಿಸಿ’ ಎಂದರು. ಅದರಂತೆ ಪಟ್ಟಣಶೆಟ್ಟಿ ನಮ್ಮೆಲ್ಲ ಗೆಳೆಯರ ಪ್ರಕಾಶಕರಾದರು.

ಕಾಲ ಮಹಿಮೆಯೊ ಓದುಗರ ಅಭಿರುಚಿ ಅಭಿವೃದ್ಧಿ ಇಲ್ಲದೆಯೊ ಎಲ್ಲರ ನಿರೀಕ್ಷೆಯಂತೆ ಪ್ರಕಾಶನ ಕ್ಷೇತ್ರದಲ್ಲಿ ದಾಪುಗಾಲು ಹಾಕಲು ಪಟ್ಟಣಶೆಟ್ಟರಿಂದ ಸಾಧ್ಯವಾಗಲಿಲ್ಲ. ಹೀಗೆ ಕೆಲವು ವರ್ಷಗಳು ಕಳೆದ ಮೇಲೆ ನನ್ನ ಉತ್ಕಟಾಕಾಂಕ್ಷೆ ಪುನಃ ಚಿಗುರಿ ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಯನ್ನು ಮುದ್ರಿಸಿದೆನು.

ಆದರೆ ಮತ್ತೊಂದು ಅಧ್ಯಯನ ಶಿಬಿರದಲ್ಲಿ ಗೆಳೆಯ ನೆಲಮನೆ ದೇವೇಗೌಡ ಹಾಗೂ ನೆಲಮನೆ ಪ್ರಕಾಶನವನ್ನು ಪ್ರೋತ್ಸಾಹಿಸಬೇಕೆಂದು ನಮ್ಮ ಸಂಘಟನೆಯಲ್ಲಿ ತೀರ್ಮಾನಿಸಿದ್ದರಿಂದ, ಮುದ್ರಿಸಿದ ‘ಕರ್ವಾಲೊ’ ಕಾದಂಬರಿಯ ಪ್ರತಿಗಳನ್ನು ನೆಲಮನೆ ಪ್ರಕಾಶನಕ್ಕೆ ವಹಿಸಿದೆವು.

ನೆಲಮನೆ ದೇವೇಗೌಡರು ಅನೇಕ ಪುಸ್ತಕಗಳನ್ನು ಹೊರತಂದರೂ ಪುಸ್ತಕಗಳ ನಿರ್ಮಾಣ ಇತ್ಯಾದಿ ವ್ಯವಹಾರಗಳಲ್ಲಿ ನಮ್ಮ ನಿರೀಕ್ಷೆಗೆ ಏರಲಾಗಲಿಲ್ಲ. ಗೌಡರು ಅನೇಕ ಚಳವಳಿ, ದಲಿತ ಸಂಘರ್ಷ ಸಮಿತಿ ಹೋರಾಟ, ‘ಮಾನವ’ ಎಂಬ ಮಾಸಿಕದ ಪ್ರಕಟಣೆ, ಚಲನಚಿತ್ರ ನಿರ್ಮಾಣ ಹೀಗೆ ಅನೇಕ ವ್ಯಸನಗಳಲ್ಲಿ ಸಿಲುಕಿ ಅವರ ಪ್ರಕಾಶನವು ಬಡವಾಯಿತು.

ಇಷ್ಟು ಹೊತ್ತಿಗೆ ಲಂಕೇಶರು ತಮ್ಮ ಪತ್ರಿಕೆ ಪ್ರಾರಂಭಿಸಿದ್ದರು. ಆಗ ನಮ್ಮೆಲ್ಲರನ್ನು ಕರೆದು ತಾನೇ ಒಂದು ಪ್ರಕಾಶನ ಮಾಡುವುದಾಗಿಯೂ, ಮಾರಾಟಕ್ಕೂ ಪತ್ರಿಕೆಯ ಜಾಲ ಸಹಾಯ ಮಾಡುವುದಾಗಿಯೂ ಹೇಳಿ ಅನೇಕ ಗೆಳೆಯರ ಕೃತಿಗಳನ್ನು ಪ್ರಕಾಶಿಸಲು ಪ್ರಾರಂಭಿಸಿದರು. ಲಂಕೇಶರಿಗೂ ಸಹ ಪತ್ರಿಕೆ ಮತ್ತು ಪ್ರಕಾಶನ ಎರಡೂ ಕಡೆ ಗಮನ ಕೊಡಲು ಕಷ್ಟವಾಯ್ತು. ಅವರು ಹೊರತರುತ್ತಿದ್ದ ಪುಸ್ತಕಗಳಿಂದ ಈ ಪರಿಸ್ಥಿತಿ ನಮಗೆ ಮನವರಿಕೆಯಾಯ್ತು.

ಆ ಸಮಯದಲ್ಲಿ ನಾವು ಗೆಳೆಯರೆಲ್ಲ ಸೇರಿ ಅವರು ಅದುವರೆಗೆ ಮುದ್ರಿಸಿದ್ದ ಪುಸ್ತಕಗಳ ಬಗ್ಗೆ ಚರ್ಚಿಸಿದೆವು. ಗುಣಮಟ್ಟಕ್ಕಿಂತ ಹೆಚ್ಚಾಗಿ ಮುದ್ರಣ, ಉಪಯೋಗಿಸಿರುವ ಕಾಗದ ಹಾಗೂ ಮುಖಪುಟ ಇತ್ಯಾದಿಗಳನ್ನು ಕಟುವಾಗಿ ವಿಮರ್ಶಿಸಿ ಚುಡಾಯಿಸಿದೆವು.

ಮುಂದೆ ಎರಡೇ ವಾರಗಳಲ್ಲಿ ಲಂಕೇಶ್ ಸಿಟ್ಟಿಗೆದ್ದವರಂತೆ ಒಂದು ಅದ್ಭುತ ಕಥಾಸಂಗ್ರಹವನ್ನು ಹೊರತಂದರು. ಈ ಸಂಗ್ರಹವನ್ನು ಕಾಗದ, ಮುದ್ರಣ, ಮುಖಪುಟ ವಿನ್ಯಾಸ ಎಲ್ಲವೂ ಕನ್ನಡದಲ್ಲಿ ಪ್ರಥಮ ಎನ್ನುವಂತೆ ಪ್ರಕಟಿಸಿದರು. ನಮ್ಮೆಲ್ಲರನ್ನು ಚಹಾಕೂಟ ಒಂದಕ್ಕೆ ಆಹ್ವಾನಿಸಿ ಈ ಕೃತಿಯನ್ನು ನಮ್ಮ ಕೈಗಿಟ್ಟರು. ಅದೇ ಅವರ ಕಥಾಸಂಗ್ರಹ ‘ಕಲ್ಲು ಕರಗುವ ಸಮಯ’.

ಈ ಪುಸ್ತಕವನ್ನು ನೋಡಿದ ಕೂಡಲೇ ನನಗೂ, ತೇಜಸ್ವಿಗೂ ಮತ್ತೆಲ್ಲ ಗೆಳೆಯರಿಗೂ ರೋಮಾಂಚನವಾಯ್ತು. ತೇಜಸ್ವಿ, ನಾನು ಹಾಗೂ ಕೆಲವು ಗೆಳೆಯರು ಪುಸ್ತಕ ಪ್ರಕಾಶನವನ್ನು ಪ್ರಾರಂಭಿಸಲು ಇದೇ ಸ್ಪೂರ್ತಿ.

ಪುಸ್ತಕಗಳಿಗೆ ಉಪಯೋಗಿಸುವ ಕಾಗದ, ಮುದ್ರಣ, ಮುಖಪುಟವಿನ್ಯಾಸ, ವಸ್ತು ವಿಶಿಷ್ಟತೆ ಇವುಗಳೆಲ್ಲದರಲ್ಲಿಯೂ ಅಂತರರಾಷ್ಟ್ರೀಯ ಪ್ರಕಾಶಕರನ್ನು ಮೀರಿಸದಿದ್ದರೂ ಅದೇ ರೀತಿಯಲ್ಲಿ ಹೊರತರಬೇಕೆಂಬ ಧ್ಯೇಯದಿಂದ ತೇಜಸ್ವಿಯವರ ‘ಪರಿಸರದ ಕಥೆ’ಯನ್ನು ಪ್ರಕಾಶನದ ಮೊದಲ ಕೃತಿಯಾಗಿ ಹೊರತಂದೆವು. ಪ್ರಕಟಣೆಗೆ ಪುಸ್ತಕಗಳನ್ನು ಆಯ್ಕೆ ಮಾಡುವಲ್ಲಿ ಓದುಗರನ್ನೇ ಮನಸ್ಸಿನಲ್ಲಿಟ್ಟುಕೊಂಡಿರುತ್ತಿದ್ದೆವು.

ಒಳ್ಳೆಯ ಮುದ್ರಣಕಾರರೊಬ್ಬರು ಸಿಕ್ಕಿದರೆ ಪ್ರಕಾಶಕರಿಗೆ ಹೆಚ್ಚು ತಲೆನೋವು ಇರುವುದಿಲ್ಲ. ಡಿ.ಟಿ.ಪಿ ಮಾಡುವವರು, ಮುಖಪುಟ ತಯಾರಿಸುವವರು, ಪುಸ್ತಕಕ್ಕೆ ಬೇಕಾದ ರೇಖಾ ಚಿತ್ರಗಳನ್ನು ಚಿತ್ರಿಸಿ ಕೊಡುವವರು ವಿವಿಧ ಹಂತಗಳಲ್ಲಿ ನಿಧಾನ ಮಾಡಿ ಪುಸ್ತಕವು ಸರಿಯಾದ ಸಮಯಕ್ಕೆ ಮುದ್ರಣಗೊಳ್ಳುವುದು ವಿಳಂಬವಾಗುತ್ತದೆ.

ಇವರೆಲ್ಲ ಒಂದು ರೀತಿ ಕಾಲೆಳೆಯುವವರೇ ಆಗಿರುವಂತೆ ಕಾಣುತ್ತಾರೆ. ಆದುದರಿಂದ ಈ ಎಲ್ಲ ಹಂತಗಳ ಕೆಲಸಗಳನ್ನು ನಾವೇ ಮಾಡುತ್ತಿದ್ದೆವು. ಇದರಲ್ಲಿ ಪ್ರಮುಖ ಪಾತ್ರ ತೇಜಸ್ವಿಯವರದೇ ಆಗಿರುತ್ತಿತ್ತು. ತೇಜಸ್ವಿಯವರಿಗೆ ಸಹಾಯಕರಾಗಿ ರಾಘವೇಂದ್ರ ಇರುತ್ತಿದ್ದರು. ತೇಜಸ್ವಿಯವರ ನಂತರ ರಾಜೇಶ್ವರಿಯವರು ಈ ಕಾರ್ಯಗಳ ಭಾರವನ್ನು ಹೊತ್ತಿದ್ದಾರೆ.

ಸಾಮಾನ್ಯವಾಗಿ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಇರುವವರೆಲ್ಲರೂ ಸಂಭಾವಿತರೇ. ಮೋಸಮಾಡುವವರು ಅತಿ ವಿರಳ. ಮನುಷ್ಯ ಮೂಲಭೂತವಾಗಿಯೇ ದುರುಳನಾಗಿರುವವನು, ಇಲ್ಲಿಯೂ ದುರುಳನಾಗಿರುತ್ತಾನೆ. ಇಂತಹವರು ಆಗೊಮ್ಮೆ ಈಗೊಮ್ಮೆ ಗೋಚರಿಸಿದರೂ ಬಹುಪಾಲು ಮಾರಾಟಗಾರರು ಸಂಭಾವಿತರೂ, ಪ್ರಾಮಾಣಿಕರೂ ಆಗಿದ್ದಾರೆ.

ನಮ್ಮ ಪ್ರಕಾಶನದ ಮೂಲ ಗುರಿ ಯುವಜನತೆಯೇ ಆಗಿತ್ತು. ಪೂರ್ಣಚಂದ್ರ ತೇಜಸ್ವಿಯವರಿಗೆ ಕನ್ನಡ ಯುವ ಜನತೆಯ ಬಗ್ಗೆ ಅಪಾರ ಪ್ರೀತಿ ಮತ್ತು ವಿಶ್ವಾಸವಿತ್ತು. ಈ ಯುವ ಜನತೆ ಅಂದಿನಿಂದ ಇಂದಿನವರೆಗೆ ನಮ್ಮ ಪ್ರಕಾಶನದ ಪುಸ್ತಕಗಳಿಗೆ ಸ್ಫೂರ್ತಿದಾಯಕವಾಗಿಯೇ ಸ್ಪಂದಿಸಿದ್ದಾರೆ. ಓದುಗರು, ಎಲ್ಲಿಯೇ ಇರಲಿ, ಒಂದೇ ಒಂದು ಪುಸ್ತಕ ಕೇಳಲಿ, ಉತ್ತರಿಸಿ ಕಳಿಸುವ ಏರ್ಪಾಟನ್ನು ‘ಪುಸ್ತಕ ಪ್ರಕಾಶನ’ ದ ಪೋಸ್ಟಲ್ ಸರ್ವೀಸ್ನಡಿ, ಪ್ರಾರಂಭಿಸಿದೆವು.

ಎಲ್ಲರ ವಿಳಾಸವನ್ನು ಇಟ್ಟುಕೊಂಡು ಪ್ರತಿ ಹೊಸ ಪುಸ್ತಕ ಹೊರಬಂದಾಗ ಬರೆಯುತ್ತೇವೆ. ಎಲ್ಲರೂ ಸ್ಪಂದಿಸಿ ಪುಸ್ತಕಗಳಿಗೆ ಮನವಿ ಮಾಡುತ್ತಾರೆ. ಇದು ನಮ್ಮ ಪ್ರಕಾಶನದ ವಿನೂತನ ಮಾರ್ಕೆಟಿಂಗ್ ವಿಧಾನವಾಗಿದೆ. ಈ ಎಲ್ಲ ಜವಾಬ್ದಾರಿಯನ್ನು ರಾಘವೇಂದ್ರ ಸಮರ್ಥವಾಗಿ, ರಾಜೇಶ್ವರಿಯವರೊಂದಿಗೆ ನಿಭಾಯಿಸುತ್ತಿದ್ದಾರೆ.

ಸರ್ಕಾರವು ಪುಸ್ತಕ ಪ್ರಕಾಶನೋದ್ಯಮಕ್ಕೆ ಸಹಾಯ ನೀಡುವ ಘನ ಉದ್ದೇಶದಿಂದ ಪುಸ್ತಕ ಖರೀದಿಯನ್ನು ಮಾಡುತ್ತದೆ. ಈ ಘನ ಉದ್ದೇಶನವನ್ನು ಚಿಂದಿ ಮಾಡಿ ದಾರಿ ತಪ್ಪಿಸುವುದರಲ್ಲಿ ಲೆಟರ್ ಹೆಡ್ ಪ್ರಕಾಶಕರ ಹಾವಳಿಯೇ ಜಾಸ್ತಿಯಾಗಿದೆ.

ಸರ್ಕಾರ ರೂಪಿಸುವ ಅನೇಕ ಜನಪರ ಯೋಜನೆಗಳ ರೀತಿಯೇ ನಮ್ಮ ಪುಸ್ತಕ ಖರೀದಿ ಯೋಜನೆಯೂ ದಾರಿ ತಪ್ಪಿರುವುದು ನಮ್ಮೆಲ್ಲರ ದುರದೃಷ್ಟ. ಇಂತಹ ಯೋಜನೆಗಳು ಹಾಳಾಗುವುದನ್ನು ನಮ್ಮಂತಹವರು ದೂರ ನಿಂತು ವಿಷಾದದಿಂದ ನೋಡುವಂತಾಗಿದೆ. ನಮ್ಮ ದುಷ್ಟತನದಿಂದ ಪ್ರಗತಿಪರ ಯೋಜನೆಯೊಂದು ಹಾಳಾಗುತ್ತಿದೆ.

ನಾವು ಪ್ರಕಾಶನವನ್ನು ಪ್ರಾರಂಭಿಸಿದಾಗ ತೇಜಸ್ವಿಯವರು ನಮ್ಮ ಪುಸ್ತಕಗಳನ್ನು ಓದುಗರೇ ಕೊಂಡು ಓದಬೇಕು, ಸರ್ಕಾರದ ಯಾವ ಸ್ಕೀಮುಗಳಿಗೂ ಪ್ರವೇಶ ಮಾಡಬಾರದೆಂದು ನನಗೊಂದು ಕಟ್ಟುಪಾಡು ವಿಧಿಸಿದ್ದರು. ನಾನೂ ಅವರಿಗೆ ಓದುಗರು ಬರೆದ ಎಲ್ಲ ಪತ್ರಗಳಿಗೆ ಉತ್ತರಿಸುವಂತೆಯೂ, ಸಂಕೋಚದಿಂದ ಸುಮ್ಮನಿರದಂತೆಯೂ ಒತ್ತಾಯಿಸಿದೆ. ಈ ಒತ್ತಾಯವನ್ನು ಅವರು ತಮ್ಮ ಅಂತಿಮದಿನದವರೆಗೂ ನಡೆಸಿಕೊಂಡು ಬಂದರು. ಇಂದಿಗೂ ನಾವು ಅದನ್ನೇ ಮುಂದುವರಿಸುತ್ತಿದ್ದೇವೆ.

ಇಲ್ಲಿಯವರೆಗೂ ಸುಮಾರು ಎಂಬತ್ತು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಈ ಎಲ್ಲ ಲೇಖಕರ ಮತ್ತು ನಮ್ಮ ಸಂಬಂಧ ಚೆನ್ನಾಗಿಯೇ ಇದೆ. ಯಾವುದೇ ಲೇಖಕರ ಪುಸ್ತಕ ಪ್ರಕಟವಾದ ಕೂಡಲೆ ಅವರಿಗೆ ಸಲ್ಲಬೇಕಾದ ರಾಯಧನವನ್ನು ತಲುಪಿಸಿ ಅವರು ಸಂತೋಷದಿಂದಿರುವಂತೆ ನೋಡಿಕೊಂಡಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.