ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಿ.ಎಸ್.ರಂಗಾ (1917-2010) ಅವರ ಹೆಸರು ಅಳಿಸಲಾಗದ ದಾಖಲೆ. ಕನ್ನಡ ಚಲನಚಿತ್ರರಂಗದ 77 ವರ್ಷಗಳ ನಡೆಯಲ್ಲಿ ಬಿಂಡಿಗನವಿಲೆ ಶ್ರೀನಿವಾಸ ಅಯ್ಯಂಗಾರ್ ರಂಗ ಅವರು ಸ್ಥಾಪಿಸಿದ ಇತಿಹಾಸ ಒಂದೆರಡಲ್ಲ. ಚಲನಚಿತ್ರ ಆರಂಭದ ದಿನಗಳಲ್ಲಿ ಕನ್ನಡ ಚಿತ್ರ ನಿರ್ಮಾಣವೇ ಕಷ್ಟ ಎನ್ನುವಂತಿದ್ದ ದಿನಗಳಲ್ಲಿ ಪೌರಾಣಿಕ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದರು. ಕನ್ನಡ ನಿರ್ಮಾಪಕರಿಗೆ ಸ್ಟುಡಿಯೋ ಸಿಗುವುದು ತಾಪತ್ರಯ ಎಂದು ಎಲ್ಲರೂ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾಗ ಸ್ಟುಡಿಯೋ ಸ್ಥಾಪಿಸಿದರು. ಬೆಂಗಳೂರಿಗೆ ಚಿತ್ರೋದ್ಯಮ ವಾಪಸು ತರಬೇಕೆಂಬ ದೃಷ್ಟಿಯಿಂದ ಬೆಂಗಳೂರಿನಲ್ಲಿ ಚಲನಚಿತ್ರ ಲ್ಯಾಬ್ ಸ್ಥಾಪಿಸಿದರು. ದಕ್ಷಿಣ ಭಾರತಕ್ಕೆ ಅತ್ಯಾಧುನಿಕ ಅನಿಮೇಷನ್ ಸೌಲಭ್ಯ ತಂದರು. ಈಸ್ಟ್‌ಮನ್ ಕಲರ್ ಚಿತ್ರಗಳು ನಮ್ಮಿಂದ ಎಲ್ಲಿ ಸಾಧ್ಯ ಎಂದು ಕೇಳುತ್ತಿದ್ದಾಗ ಕನ್ನಡದಲ್ಲಿ ಬಣ್ಣದ ಚಿತ್ರಗಳ ಶಕೆ ಆರಂಭಿಸಿದರು.
ಹೀಗೆ ಕನ್ನಡ ಚಿತ್ರರಂಗಕ್ಕೆ ಆರಂಭದ ಕಾಲದಲ್ಲಿ ಆತ್ಮವಿಶ್ವಾಸ ತುಂಬಿ ಸಾಲು ಸಾಲು ಸಾಧನೆಗಳನ್ನು ಮಾಡಿ ತೋರಿಸಿದ ಬಿ.ಎಸ್.ರಂಗಾ ಡಿಸೆಂಬರ್ 12ರಂದು ಚೆನ್ನೈನ ಮೈಲಾಪುರದಲ್ಲಿ ಸದ್ದಿಲ್ಲದೆ ಅಸ್ತಂಗತರಾದರು.

ಚಿತ್ರರಂಗಕ್ಕೆ ಏನು ಬೇಕು? ಸಿನಿಮಾ ಉದ್ಯಮವನ್ನು ಹೇಗೆ ಮುನ್ನಡೆಸಬೇಕು ಎಂಬ ಮುನ್ನೋಟವನ್ನು ಮಹತ್ವಾಕಾಂಕ್ಷಿಯಾಗಿದ್ದ ರಂಗಾ ಕಂಡುಕೊಂಡಿದ್ದರು. ರಂಗಾ ಅವರ ಹೆಸರು ಬಂದ ಕೂಡಲೇ ಎಲ್ಲರೂ ಮೊದಲ ಬಣ್ಣದ ಚಿತ್ರವನ್ನು ನಿರ್ಮಿಸಿದವರು ಎಂದೇ ಹೇಳುತ್ತಾರೆ. ಅದನ್ನೂ ಮೀರಿ ಅವರಲ್ಲಿ ದಕ್ಷಿಣಭಾರತದ ಚಿತ್ರರಂಗದಲ್ಲಿ ಕನ್ನಡವನ್ನು ಮೆರೆಸಬೇಕು ಎನ್ನುವ ಆಕಾಂಕ್ಷೆಯಿತ್ತು. ಆದುದರಿಂದಲೇ ಅವರು ಎಲ್ಲ ಚಿತ್ರಗಳನ್ನೂ ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರಿಸುತ್ತಿದ್ದರು.

1964ರಲ್ಲಿ ‘ಅಮರ ಶಿಲ್ಪಿ ಜಕಣಾಚಾರಿ’ ಚಿತ್ರವನ್ನು ಬಣ್ಣದಲ್ಲಿ ತಯಾರಿಸುವ ಕೆಲಸ ಆರಂಭವಾಯಿತು. ನಿಮಾಯ್ ಘೋಷ್ ಛಾಯಾಗ್ರಾಹಕರಾಗಿ ಆಯ್ಕೆಯಾದರು. ಕಲ್ಯಾಣ್‌ಕುಮಾರ್, ಬಿ. ಸರೋಜಾದೇವಿ ನಾಯಕ ನಾಯಕಿ. ರಾಜೇಶ್ವರರಾವ್ ಸಂಗೀತ. ಬೇಲೂರಿನ ಶಿಲ್ಪ ಕಲೆಗಳ ನಡುವೆ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಡಲಿಲ್ಲ. ಹೀಗಾಗಿ ವಿಕ್ರಂ ಸ್ಟುಡಿಯೋದಲ್ಲೇ ದೇವಸ್ಥಾನದ ಭವ್ಯ ಸೆಟ್ ಹಾಕಿಸಿ ಚಿತ್ರೀಕರಣ ನಡೆಸಲಾಯಿತು.
ತೆಲುಗಿನಲ್ಲೂ ಏಕಕಾಲದಲ್ಲಿ ‘ಅಮರ ಶಿಲ್ಪಿ ಜಕ್ಕನ್ನ’ ತಯಾರಾಯಿತು. ಮಧುರವಾದ ಹಾಡು, ಅತ್ಯುತ್ತಮ ಛಾಯಾಗ್ರಹಣ ಚಿ. ಸದಾಶಿವಯ್ಯನವರ ಸಾಹಿತ್ಯ ಎಲ್ಲವೂ ಇದರ ಯಶಸ್ಸಿಗೆ ಕಾರಣವಾದವು. ಕನ್ನಡದಲ್ಲಿ ತಯಾರಾದ 153ನೇ ಚಿತ್ರದಲ್ಲಿ ಮೊದಲ ಬಾರಿಗೆ ಸಂಪೂರ್ಣ ಬಣ್ಣದ ಬೆರಗು ಅರಳಿತ್ತು.

ಕನ್ನಡದಲ್ಲಿ ಮೊಟ್ಟ ಮೊದಲಿಗೆ ತಯಾರಾದ ಭಾಗಶಃ ವರ್ಣ ಚಿತ್ರ ‘ಸ್ತ್ರೀ ರತ್ನ’(1955). ನಂತರ 1956ರಲ್ಲಿ ಗುಬ್ಬಿ ವೀರಣ್ಣನವರು ‘ಸದಾರಮೆ’ ಚಿತ್ರದ ಒಂದು ರೀಲನ್ನು ಬಣ್ಣದಲ್ಲಿ ಚಿತ್ರಿಸಿದ್ದರು. 1957ರಲ್ಲಿ ಶಂಕರ್ ಸಿಂಗ್ ಅವರು ‘ಪ್ರಭುಲಿಂಗಲೀಲೆ’ ಚಿತ್ರದ ಒಂದು ದೃಶ್ಯವನ್ನು ಬಣ್ಣದಲ್ಲಿ ಚಿತ್ರಿಸಿದ್ದರು. 1963ರಲ್ಲಿ ರಾಜ್‌ಕುಮಾರ್ ಅಭಿನಯದ ‘ವೀರ ಕೇಸರಿ’ ಭಾಗಶಃ ವರ್ಣದಲ್ಲಿ ಬಂದಿತು. 1964ರಲ್ಲಿ ರಂಗಾ ಅವರ ಅಮರ ಶಿಲ್ಪಿ ಜಕಣಾಚಾರಿ ಬರುವ ವೇಳೆಗೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಬಣ್ಣದ ಚಿತ್ರಗಳು ಬಂದು ಹಳತಾಗಿದ್ದವು. ರಂಗಾ ಕನ್ನಡ ಪ್ರೇಕ್ಷಕರಿಗೆ ಬಣ್ಣದ ಚಿತ್ರದ ರುಚಿ ತೋರಿಸಿದರು. ಪ್ರೇಕ್ಷಕರೂ ಅದಕ್ಕೆ ಸ್ಪಂದಿಸಿದ್ದರು. ಆದರೆ ಇತರ ನಿರ್ಮಾಪಕರು ಅದಕ್ಕೆ ಮನ ಕೊಡಲಿಲ್ಲ. ಅಮರ ಶಿಲ್ಪಿ ಜಕಣಾಚಾರಿಗೆ ಅಂದಿನ ದಿನದಲ್ಲಿ 11 ಲಕ್ಷ ರೂ. ವೆಚ್ಚವಾಗಿತ್ತು. ಇದು ದುಬಾರಿ ಎಂಬ ಕಾರಣದಿಂದ ನಿರ್ಮಾಪಕರು ಹಿಂದೇಟು ಹಾಕಿದರು.

1969ರಲ್ಲಿ ಮತ್ತೆ ರಂಗಾ ಅವರೇ ‘ಭಲೇ ಬಸವ’ ಎಂಬ ವರ್ಣಚಿತ್ರ ನಿರ್ಮಿಸಿದರು. ಹೀಗಾಗಿ ಕನ್ನಡ ಚಿತ್ರರಂಗದ ಮೊದಲ ವರ್ಣ ಚಿತ್ರದ ನಿರ್ಮಾಪಕರೂ, ಎರಡನೇ ವರ್ಣ ಚಿತ್ರ ನಿರ್ಮಿಸಿದವರೂ ಅವರೇ ಎಂಬ ದಾಖಲೆಗೆ ರಂಗಾ ಪಾತ್ರರಾಗುತ್ತಾರೆ. ಆಶ್ಚರ್ಯವೆಂದರೆ ಜಕಣಾಚಾರಿ ಚಿತ್ರಕ್ಕೆ ಯಾವ ಪ್ರಶಸ್ತಿಗಳೂ ಬರಲಿಲ್ಲ!

ಬೆಂಗಳೂರಿನಲ್ಲಿ ಕಾಲೇಜು ಓದುವಾಗಲೇ ಅವರಿಗೆ ಕಲೆಯ ಬಗ್ಗೆ ಆಸಕ್ತಿ. ಛಾಯಾಗ್ರಹಣ ಹವ್ಯಾಸ, 1937ರಲ್ಲಿ ಕಾಲೇಜಿಗೆ ನಮಸ್ಕಾರ ಹೇಳಿ ತಂದೆಯ ಜತೆ ಮುದ್ರಣ ಕಾರ್ಯದಲ್ಲಿ ಸಹಕಾರಿ ಆದರು. ಅವರ ತಂದೆ ಬಿ. ಶ್ರೀನಿವಾಸ ಅಯ್ಯಂಗಾರ್ ಬೆಳೆಸಿದ ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್‌ನಲ್ಲಿ ಸಕ್ರಿಯರಾದರು. ಆ ಕಾಲದಲ್ಲೇ ಲಂಡನ್ನಿನ ರಾಯಲ್ ಸಲೂನಿಗೆ ಛಾಯಾಚಿತ್ರಗಳನ್ನು ಕಳುಹಿಸಿ ರಾಯಲ್ ಫೋಟೋಗ್ರಫಿ ಸೊಸೈಟಿಯ ಗೌರವ ಫೆಲೋಶಿಪ್ ಪಡೆದರು. ಛಾಯಾಗ್ರಾಹಕರಾಗಿ ಅವರು ಬೆಳೆದದ್ದು ಹೀಗೆ. ಅಷ್ಟರಲ್ಲಿ ಚಲನ ಚಿತ್ರರಂಗದಲ್ಲಿ ವಾಕ್ಚಿತ್ರಗಳ ಭರಾಟೆ ಆರಂಭವಾಗಿತ್ತು. ಚಲನಚಿತ್ರ ಛಾಯಾಗ್ರಾಹಕರಾಗಬೇಕು ಎಂಬ ಹಂಬಲದಿಂದ ಮುಂಬೈಗೆ ಬಂದು, ಕೃಷ್ಣಗೋಪಾಲ್ ಬಳಿ ಸಹಾಯಕರಾಗಿ ಸೇರಿಕೊಂಡರು. ಕೃಷ್ಣಪ್ರಸಾದ್ ಭಾರತದ ಮೊಟ್ಟ ಮೊದಲ ಆಟೋಮ್ಯಾಟಿಕ್ ಪ್ರೋಸೆಸಿಂಗ್ ಲ್ಯಾಬೊರೇಟರಿಯ ಸಂಸ್ಥಾಪಕರು.

ಇಲ್ಲಿ ಅವರು 17 ಹಿಂದಿ ಚಿತ್ರಗಳ ನಿರ್ಮಾಣ ಕಾರ್ಯದಲ್ಲಿ ದುಡಿದು ಅನುಭವಗಳಿಸಿದರು. ನಂತರ ಮದರಾಸಿನ ಜೆಮಿನಿ ಸ್ಟುಡಿಯೋದಲ್ಲಿ ಸ್ವತಂತ್ರ ಛಾಯಾಗ್ರಾಹಕರಾಗಿ ಸೇರಿದರು. ಅವರು ಛಾಯಾಗ್ರಹಣ ಮಾಡಿದ ಮೊದಲ ಚಿತ್ರ ‘ಭಕ್ತ ನಾರದರ್’ (ತಮಿಳು). ಜೆಮಿನಿ ಸಂಸ್ಥೆಯ ಹಲವಾರು ಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಹೆಸರು ಪಡೆದ ರಂಗಾ, ಸ್ವಂತ ನಿರ್ಮಾಪಕರಾಗುವ ಬಯಕೆಯಿಂದ 1946ರಲ್ಲಿ ಸಂಸ್ಥೆಗೆ ರಾಜೀನಾಮೆ ನೀಡಿ ಹೊರಬಂದು ‘ವಿಕ್ರಂ ಪ್ರೊಡಕ್ಷನ್ಸ್’ ಸ್ಥಾಪಿಸುತ್ತಾರೆ. ಈ ಸಂಸ್ಥೆಯ ಮೂಲಕ ಅವರು ನಿರ್ಮಿಸಿ, ನಿರ್ದೇಶಿಸಿದ ಮೊದಲ ಚಿತ್ರ ತಮಿಳು ಭಾಷೆಯ ‘ತುಲಸೀದಾಸ್’. ಕನ್ನಡ ಚಿತ್ರರಂಗಕ್ಕೆ ಲ್ಯಾಬೋರೇಟರಿ ಇಲ್ಲದ್ದನ್ನು ಕಂಡು ಕೊಂಡ ಅವರು, 1950ರಲ್ಲಿ ಬೆಂಗಳೂರಿನ ನಾಯಂಡಹಳ್ಳಿ ಬಳಿ ವಿಕ್ರಂ ಸ್ಟುಡಿಯೋಸ್ ಅಂಡ್ ಲ್ಯಾಬ್ ಸ್ಥಾಪಿಸಿದರು. ಈ ಕಾರ್ಯಕ್ಕೆ ಪ್ರಭಾತ್ ಚಿತ್ರ ಮಂದಿರದ ಮಾಲೀಕ ಜಯಂತಿಲಾಲ್ ಠಾಕೂರ್, ವಿತರಕ ಜಿ.ಎಸ್. ತಲ್ಲಂ, ಕೆ.ಸಿ. ದೇಸಾಯಿ, ಗೋವಿಂದ ಶೆಟ್ಟಿ ನೆರವಾದರು. ಆ ಸಮಯದಲ್ಲಿ ಮದರಾಸಿನಲ್ಲಿ ಉತ್ತಮ ಲ್ಯಾಬ್‌ಗಳಿರಲಿಲ್ಲ. ರಂಗಾ ಅವರ ಲ್ಯಾಬ್‌ಗೆ ಮದರಾಸಿನಿಂದಲೇ ಸಿನಿಮಾಗಳು ಬರುತ್ತಿದ್ದವೇ ಹೊರತು ಸ್ಥಳೀಯವಾಗಿ ಚಿತ್ರಗಳಿರಲಿಲ್ಲ. ಎಲ್ಲವೂ ಮದ್ರಾಸ್ ಕೇಂದ್ರೀಕೃತವಾಗಿದ್ದುದರಿಂದ ಬೆಂಗಳೂರು ಲ್ಯಾಬ್ ಮುಚ್ಚಿ ಮತ್ತೆ ಮದರಾಸಿಗೆ ತೆರಳಲು ನಿರ್ಧರಿಸಿದ ರಂಗಾ, ತಮ್ಮ ಕಾರ್ಯಕ್ಷೇತ್ರಗಳನ್ನು ಚೆನ್ನೈಗೆ ವರ್ಗಾಯಿಸಿಕೊಂಡರು.

1956ರಲ್ಲಿ ಮದರಾಸಿನಲ್ಲಿ ‘ವಿಕ್ರಂ ಸ್ಟುಡಿಯೋಸ್’ ಆರಂಭಿಸಿದ ರಂಗಾ, ಹೊರ ರಾಜ್ಯದಲ್ಲಿ ಸ್ಟುಡಿಯೋ ಆರಂಭಿಸಿದ ಮೊದಲ ಕನ್ನಡಿಗ.ಅಂದಿನ ದಿನಗಳಲ್ಲಿ ಕಚ್ಚಾಫಿಲಂ ದೊರಕುತ್ತಿದ್ದುದು ಕೇವಲ ಸ್ಟುಡಿಯೋ ಮಾಲೀಕರಿಗೆ ಮಾತ್ರ. ರಂಗಾ ಸ್ಟುಡಿಯೋ ಸ್ಥಾಪಿಸಿ ಈ ಸ್ಟುಡಿಯೋದಲ್ಲಿ ತಯಾರಿಸಿದ ಪ್ರಥಮ ಚಿತ್ರ ‘ಭಕ್ತ ಮಾರ್ಕಂಡೇಯ’ (1957) ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿದೆ. ಬೆಂಗಳೂರು ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್ ‘ಭಕ್ತ ಮಾರ್ಕಂಡೇಯ’ ನಾಟಕ ಆಡುತ್ತಿತ್ತು. ಅದನ್ನೇ ರಂಗಾ ಚಲನಚಿತ್ರ ಮಾಡಿದರು. ವಿ.ನಾಗಯ್ಯ, ಪುಷ್ಪವಲ್ಲಿ, ನರಸಿಂಹರಾಜು, ಚಿ.ಸದಾಶಿವಯ್ಯ, ಆರ್.ನಾಗೇಂದ್ರರಾವ್, ಕಾಂತಾರಾವ್, ಸೂರ್ಯಕಲಾ, ರಮಾದೇವಿ ನಟಿಸಿದ್ದರು. ಆ ದಿನಗಳಲ್ಲಿ ಗುಬ್ಬಿ ಫಿಲಂಸ್, ಮಹಾತ್ಮ ಪಿಕ್ಚರ್ಸ್, ಆರ್.ಎನ್.ಆರ್. ಪಿಕ್ಚರ್ಸ್, ಪದ್ಮಿನಿ ಪಿಕ್ಚರ್ಸ್, ಶೈಲಶ್ರೀ ಪ್ರೊಡಕ್ಷನ್ಸ್‌ಗಳು ಸತತ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ಸಂಸ್ಥೆಗಳು. ವಿಕ್ರಂ ಪ್ರೊಡಕ್ಷನ್ಸ್ ಕೂಡಾ ತಯಾರಿಕಾ ಸಂಸ್ಥೆಯಾಗಿ ಉದಯಿಸಿತು.

1959ರಲ್ಲಿ ‘ಮಹಿಷಾಸುರ ಮರ್ದಿನಿ’ ಚಿತ್ರವನ್ನು ಅದ್ದೂರಿ ಸೆಟ್‌ನೊಂದಿಗೆ ರಂಗಾ ನಿರ್ಮಿಸಿದರು. ರಾಜ್‌ಕುಮಾರ್, ಉದಯಕುಮಾರ್, ವಿ.ನಾಗಯ್ಯ, ಸಾಹುಕಾರ್ ಜಾನಕಿ, ನರಸಿಂಹರಾಜು, ರಮಾದೇವಿ ಮೊದಲಾದವರ ತಾರಾಗಣವಿದ್ದ ಈ ಚಿತ್ರದಲ್ಲಿ ಮೊದಲ ಬಾರಿಗೆ ರಾಜ್‌ಕುಮಾರ್- ಎಸ್.ಜಾನಕಿ ‘ತುಂಬಿತು ಮನವ... ತಂದಿತು ಸುಖವ’ ಎಂಬ ಹಾಡು ಹಾಡಿದ್ದಾರೆ. ಈ ಚಿತ್ರದ ‘ಜಯ ಜಗದೀಶ್ವರಿ’ ಇಂದಿಗೂ ಕೇಳಬಹುದಾದ ಮಧುರಗಾನವಾಗಿದೆ. ಈ ಚಿತ್ರ ಶತದಿನ ಪ್ರದರ್ಶನ ಕಾಣುವ ಮೂಲಕ ಬಿ.ಎಸ್.ರಂಗಾ ಅವರ ಪ್ರಯೋಗಶೀಲತೆಗೆ ಬೆಂಬಲವಾಗಿ ನಿಂತಿತು.

1960ರಲ್ಲಿ ರಂಗಾ ನಿರ್ಮಿಸಿ, ಜಿ.ವಿ.ಅಯ್ಯರ್ ನಿರ್ದೇಶಿಸಿದ ‘ದಶಾವತಾರ’ ಪ್ರಯೋಗದ ದೃಷ್ಟಿಯಿಂದ ಗಮನಾರ್ಹವಾದುದು.ಈ ಚಿತ್ರದ ಬಹುತೇಕ ಕಲಾವಿದರು ಬಹುಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸತೊಂದು ಪ್ರಯೋಗ ಇಲ್ಲಿ ನಡೆದಿದೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ಹಿರಣ್ಯ ಕಶಿಪು, ರಾವಣ ಹಾಗೂ ಶಿಶುಪಾಲನಾಗಿ ಅಭಿನಯಿಸಿದ್ದಾರೆ. ಉದಯಕುಮಾರ್ ಸೋಮಕಾಸುರ, ಹನುಮಂತ, ಕಂಸನಾಗಿ, ರಾಜಾಶಂಕರ್ ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧನಾಗಿ ಐದು ಪಾತ್ರಗಳಲ್ಲಿ, ಆದವಾನಿ ಲಕ್ಷ್ಮೀದೇವಿ ಲಕ್ಷ್ಮಿ, ಸೀತೆ, ರುಕ್ಮಿಣಿಯಾಗಿ, ಲೀಲಾವತಿ ಕಯಾದು, ಮಂಡೋದರಿ, ದ್ರೌಪದಿಯಾಗಿ, ರಾಜಶ್ರೀ ಮೋಹಿನಿ ಮತ್ತು ರಾಧೆಯಾಗಿ, ನರಸಿಂಹರಾಜು ರಾಹು, ಮಕರಂದ ಹೀಗೆ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬನೇ ಕಲಾವಿದನಿಂದ ಹಲವು ಪಾತ್ರಗಳ ಪ್ರವೇಶ ಮಾಡಿಸಿರುವ ತಂತ್ರವನ್ನು ಈ ಚಿತ್ರದಲ್ಲಿ ಸೃಷ್ಟಿಸಲಾಗಿದೆ.ಐದು ದಶಕಗಳ ಕಾಲ ಚಲನಚಿತ್ರ ಕ್ಷೇತ್ರದಲ್ಲಿ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕ, ಲ್ಯಾಬ್ ಸ್ಥಾಪಕ, ಸ್ಟುಡಿಯೋ ಸ್ಥಾಪಕ, ವಿತರಕ,ಚಿತ್ರಕತೆಗಾರ, ಕಿರುತೆರೆ ಧಾರಾವಾಹಿಗಳ ನಿರ್ಮಾಪಕ ಹೀಗೆ ಎಲ್ಲ ವಿಭಾಗಗಳಲ್ಲೂ ಕ್ರಿಯಾಶೀಲತೆ ತೋರಿದ್ದ ರಂಗಾ ಅವರಿಗೆ 1988-89ರಲ್ಲಿ ರಾಜ್ಯ ಸರ್ಕಾರ ‘ಪುಟ್ಟಣ್ಣ ಪ್ರಶಸ್ತಿ’ ನೀಡಿರುವುದು ನಿಜವಾದ ಗೌರವ.

ಪ್ರತಿಜ್ಞೆ (1964), ಮಹಾಸತಿ ಅನಸೂಯ (1965), ಪಾರ್ವತಿ ಕಲ್ಯಾಣ (1967), ಒಡಹುಟ್ಟಿದವರು (1969), ಮಿಸ್ಟರ್ ರಾಜ್‌ಕುಮಾರ್ (1970), ಸಿಡಿಲ ಮರಿ (1971), ಮಣ್ಣಿನ ಮಗಳು (1974), ಸುಳಿ (1978), ಹಾಸ್ಯರತ್ನ ರಾಮಕೃಷ್ಣ (1982) ವಿಕ್ರಂ ಪ್ರೊಡಕ್ಷನ್ಸ್ ಸಂಸ್ಥೆಯ ಪ್ರಮುಖ ಚಿತ್ರಗಳು. ಇದಲ್ಲದೆ ವಸಂತ್ ಪಿಕ್ಚರ್ಸ್ ಮೂಲಕವೂ ‘ಕಿಲಾಡಿ ರಂಗ’, ‘ಸತಿ ಸಾವಿತ್ರಿ’, ‘ರಾಜಶೇಖರ’ ಸೇರಿದಂತೆ ಹಲವಾರು ಚಿತ್ರಗಳನ್ನು, ‘ಮದರ್ ಇಂಡಿಯಾ’ ಸ್ಫೂರ್ತಿಯಿಂದ ‘ಮಣ್ಣಿನ ಮಗಳು’ ಚಿತ್ರವನ್ನು ನಿರ್ಮಿಸಿದರು. ಬಿ.ಎಸ್.ರಂಗಾ ಬೆಂಗಳೂರಿನ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿ ವಸಂತ್ ಕಲರ್ ಲ್ಯಾಬ್ ಸಂಸ್ಕರಣ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಚಿತ್ರರಂಗದ ಆರಂಭದ ಕಾಲದಲ್ಲಿ ಕನ್ನಡ ಚಿತ್ರರಂಗದ ಉಳಿವಿಗೆ ಭದ್ರ ಬುನಾದಿ ಹಾಕಿದವರಲ್ಲಿ ಬಿ.ಎಸ್.ರಂಗಾ ಅವರ ಹೆಸರು, ಸಾಧನೆ ಎಂದೆಂದೂ ಇತಿಹಾಸದಲ್ಲಿ ಉಳಿದಿರುತ್ತದೆ. ಇಂದು ‘ನಾನು ಸೂಪರ್ರು ರಂಗಾ...’ ಎಂದು ಹಾಡುತ್ತಾ ಮೆರೆಯುತ್ತಿರುವವರೆಲ್ಲಾ ಇಂತಹ ಮಹನೀಯರ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.