ನಾವು ಬದುಕಿ ಮಣ್ಣಾಗುವ ಈ ನಾಲ್ಕಾರು ವರ್ಷಗಳ ಜೀವನದಲ್ಲಿ ಯಾವುದು ಮುಖ್ಯ? ಇದಲ್ಲ, ಇದಲ್ಲ ಎಂದು ಹಣ, ಆಸ್ತಿ-ಪಾಸ್ತಿಗಳನ್ನು ಅಂತಸ್ತು ಅಧಿಕಾರಗಳನ್ನು ಹೊಡೆದು ಪಟ್ಟಿಯಿಂದ ತೆಗೆದು ಬಿಡಬಹುದು. ಹಾಗಾದರೆ ಕಡೆಯಲ್ಲಿ ಉಳಿಯುವುದಾದರೂ ಯಾವುದು? ಈ ಹುಡುಗಿ ಹೇಳಿದಳು ‘ಮನುಷ್ಯ ಸಂಬಂಧಗಳು’ ಈಕೆ ಹೀಗೆ ಹೇಳಲು ಕಾರಣವಿತ್ತು.

ಮೂವತ್ತು ವರ್ಷಗಳ ಹಿಂದೆ ತನ್ನ ಹೆತ್ತವರ ಹೆಸರನ್ನೂ ಸಹ ನೆನಪಿಟ್ಟುಕೊಳ್ಳಲಾರದಷ್ಟು ಚಿಕ್ಕವಳಾಗಿದ್ದಾಗ ನಿಂತಿದ್ದ ರೈಲನ್ನು ಹತ್ತಿದಳು. ರೈಲು ಹೊರಟೇ ಬಿಟ್ಟಿತು, ದೂರದ ಊರು ಸೇರಿತು. ಆನಂತರ ಅನಾಥಾಶ್ರಮಗಳ ವಾಸ, ಬುದ್ಧಿ ತಿಳಿದಾಗ ಮನುಷ್ಯ ಸಂಬಂಧಗಳ ಹುಡುಕಾಟ. ಹೀಗೆ ಬದುಕು ಸಾಗಿತು. ತನ್ನ ಜೊತೆ ಬೆಳೆದ ಸ್ನೇಹಿತರು ಅಕಸ್ಮಾತ್ತಾಗಿ ಸಿಕ್ಕಿದರಂತೂ ಈಕೆಯ ಮನಸ್ಸಿನಲ್ಲಿ ಭಾವದ ಹೊಳೆಯೇ ಹರಿದುಬಿಡುತ್ತಿತ್ತು. ಹಳೆಯ ದುಗುಡ ದುಮ್ಮಾನಗಳ ನಡುವೆ ಒಂದೋ ಎರಡೋ ಮಧುರ ನೆನಪುಗಳಿಗೆ ಸಾಕ್ಷಿಯಾಗಿ ಎದುರಾಗುತ್ತಿದ್ದರು ಈ ಸ್ನೇಹಿತರು. ಒಟ್ಟಿನಲ್ಲಿ ಒಬ್ಬರು ಮತ್ತೊಬ್ಬರಿಗೆ ಆಸರೆಯಾಗಿ ನಿಂತದ್ದು ಅಥವಾ ಸಂತೋಷದಲ್ಲಿ ಭಾಗಿಯಾಗಿದ್ದು - ಈ ನೆನಪುಗಳನ್ನು ಬಿಟ್ಟರೆ ಇನ್ನೇನು ತಾನೆ ಉಳಿದೀತು? ಇದೇ ಮುಖ್ಯವಲ್ಲ ಎಂದು ಹೊಡೆದುಹಾಕಲು ಸಾಧ್ಯವೇ? ಹಾಗಾಗಿ ಅವಳು ಸರಿಯಾಗಿಯೇ ಗುರುತಿಸಿದ್ದಳು ‘ಬದುಕಿನಲ್ಲಿ ಬಹುಮುಖ್ಯವಾದದ್ದು ಸಂಬಂಧಗಳು’.

ಈ ಪ್ರಶ್ನೆ ಹುಟ್ಟಿದ ಹಿನ್ನೆಲೆ ಹೀಗಿದೆ: ನಮ್ಮ ಆಶ್ರಮದ ಐದು ವರ್ಷದ ಬಾಲಕನಿಗೆ ಮೆದುಳಿನ ಕ್ಯಾನ್ಸರ್ ತಗುಲಿದೆ. ವೈದ್ಯಕೀಯವಾಗಿ ಅವನನ್ನು ಉಳಿಸಿಕೊಳ್ಳಬಹುದಾದ ಯಾವ ಸಾಧ್ಯತೆಯೂ ಇಲ್ಲ. ಕೆಲವು ತಿಂಗಳ ಹಿಂದೆ ಇಂಗ್ಲೆಂಡ್ ದೇಶದ ಹುಡುಗಿಯೊಬ್ಬಳು ಸ್ವಯಂ ಸೇವಕಿಯಾಗಿ ಬಂದು ನಮ್ಮ ಆಶ್ರಮದಲ್ಲಿ ಮೂರು ತಿಂಗಳು ಕೆಲಸ ಮಾಡಿದಳು. ಅವಳಿಗೆ ಚಿಕ್ಕಮಕ್ಕಳೆಂದರೆ ಇಷ್ಟ. ಅದರಲ್ಲೂ ಈ ಐದು ವರ್ಷದ ಬಾಲಕನನ್ನು ಬಹಳವಾಗಿ ಹಚ್ಚಿಕೊಂಡಿದ್ದಳು. ಪ್ರತಿ ತಿಂಗಳು ಅವನ ಫೋಟೋಗಳನ್ನು ಕಳುಹಿಸಿ ಎಂದು ಕೋರುತ್ತಿದ್ದಳು. ಆದರೆ ಇದೇ ಬಾಲಕನಿಗೆ ಕ್ಯಾನ್ಸರ್ ಬಂದಿದೆ ಎಂಬ ವಿಷಯವನ್ನು ನಾನು ತಿಳಿಸಲೇ ಬೇಕಾಯಿತು. ‘ಪ್ರಕೃತಿ ಎಂತಹ ಕ್ರೂರಿ’ ಎಂದು ಪ್ರತಿಕ್ರಿಯಿಸಿದಳು. ಆನಂತರ ಅವನು ಬದುಕಬಹುದಾದದ್ದು ಇನ್ನು ಕೆಲವೇ ದಿನಗಳು ಎಂದು ತಿಳಿದಾಗ ರಜಾ ಹಾಕಿ ಬರುವುದಾಗಿ ಇ ಮೇಲ್ ಕಳುಹಿಸಿದಳು. ಆದರೆ ‘ನಾನು ಬರುವವರೆಗೆ ಇರುತ್ತಾನೆಯೇ’ ಎಂಬ ಪ್ರಶ್ನೆ ಅವಳನ್ನು ಕಾಡುತಿತ್ತು. ‘ಯಾವ ಭರವಸೆಯನ್ನು ಕೊಡಲಾರೆ’ ಎಂದು ನಾನು ತಿಳಿಸಿದೆ. ಆದರೂ ಆಕೆಗೆ ಮನಸ್ಸು ತಡೆಯಲಿಲ್ಲ. ಬಂದೇ ಬಿಟ್ಟಳು. ಇಲ್ಲಿ ಇದ್ದದ್ದು ನಾಲ್ಕೇ ದಿನ, ಅದು ಹೆಚ್ಚು ಕಡಿಮೆ ಆ ಬಾಲಕ ಇದ್ದ ಕೋಣೆಯಲ್ಲೇ. ಅವನ ನೋವನ್ನು ಕಡಿಮೆ ಮಾಡುವ ತವಕ ಅವಳಿಗೆ ಎಷ್ಟು ಇತ್ತೆಂದರೆ ಪ್ರತಿದಿನ ಅವನನ್ನು ಸಹಜವಾಗಿ ನೋಡಿಕೊಳ್ಳುತ್ತಿದ್ದ ಗೃಹಮಾತೆಯರಿಗೆ ಸ್ವಲ್ಪ ಮುಜುಗರವೇ ಆಯಿತು.

ಮೆದುಳಿನೊಳಗೆ ಹರಡುತ್ತಿದ್ದ ಕ್ಯಾನ್ಸರ್‌ನಿಂದಾಗಿ ಬಾಲಕನ ಒಂದು ಕಣ್ಣು ಕಾಣುತ್ತಿರಲಿಲ್ಲ. ಮತ್ತೊಂದು ಸ್ವಲ್ಪ ಮಾತ್ರ ಕಾಣುತ್ತಿತ್ತು. ಕಾಲುಗಳು ಸದಾ ಮಡಚಿಕೊಳ್ಳುತ್ತಿದ್ದವು. ತಿಂದದ್ದೆಲ್ಲಾ ಹೊರಗೆ ಬಂದುಬಿಡುತ್ತಿತ್ತು. ಇಷ್ಟಾದರೂ ಈ ಪುಟ್ಟ ಬಾಲಕನ ಆಲೋಚನಾ ಶಕ್ತಿ ಕುಂದಿರಲಿಲ್ಲ. ಆದರೆ ಮಾತನಾಡುವ ಶಕ್ತಿ ಉಡುಗಿಹೋಗಿತ್ತು. ಸಂಜ್ಞೆಗಳಲ್ಲಿ ತನ್ನ ಬೇಕು ಬೇಡ - ಸಂತೋಷಗಳನ್ನು ವ್ಯಕ್ತಪಡಿಸುತ್ತ ಮಲಗಿಯೇ ದಿನ ಕಳೆಯುತ್ತಿದ್ದ. ಈ ಹುಡುಗಿಯ ಹೆಸರನ್ನು ಹೇಳಿದ ಕೂಡಲೇ ಕಣ್ಣು ಬಿಟ್ಟು ನೆನಪಿರುವುದನ್ನು ಸೂಚಿಸಿದ. ಈಕೆಗೆ ಆದ ಆನಂದವಂತೂ ಅವರ್ಣನೀಯ. ತಾನು ಇಂಗ್ಲೆಂಡಿನಿಂದ ತಂದ ಬಣ್ಣ ಬಣ್ಣದ ಬಲೂನುಗಳಿಗೆ ಗಾಳಿ ತುಂಬಿಸಿ ಕೋಣೆಯ ತುಂಬಾ ಕಟ್ಟಿದಳು. ಬಾಲಕನಿಗೆ ಇದರಿಂದ ಬಹಳ ಸಂತೋಷವಾಯಿತು. ಅವನ ಪಕ್ಕವೇ ಸದಾ ಕುಳಿತು ಸಾಧ್ಯವಾದ ಎಲ್ಲಾ ಸೇವೆಯನ್ನು ಮಾಡಿದಳು. ಹೇಗಾದರೂ ಮಾಡಿ ಅವನ ನೋವನ್ನು ಕಡಿಮೆ ಮಾಡುವುದು, ಅವನಿಗೆ ಸಂತೋಷ ಉಂಟು ಮಾಡುವುದು, ಅವನು ಸಂತೋಷ ಪಟ್ಟಾಗಲೆಲ್ಲಾ ತಾನು ಬಂದದ್ದು ಸಾರ್ಥಕವಾಯಿತೆಂದು ಉದ್ಗರಿಸುವುದು ಅವಳ ದಿನನಿತ್ಯದ ದಿನಚರಿಯಾಯಿತು.

ಅಷ್ಟು ದೂರದಿಂದ ಈಕೆಯನ್ನು ಎಳೆದು ತಂದು ಸೇವಾ ಕೈಂಕರ್ಯವನ್ನು ಕೈಗೊಳ್ಳುವಂತೆ ಮಾಡಿದ ಈ ಭಾವನೆಗಳ ಶಕ್ತಿ ಆಶ್ಚರ್ಯ ಉಂಟು ಮಾಡುತ್ತದೆ. ಬಾಲಕನ ಕಾಯಿಲೆಯ ವಿಷಯ ಅಮೆರಿಕಾ, ಜರ್ಮನಿ, ಸ್ವೀಡನ್ ಹೀಗೆ ಅನೇಕ ದೇಶಗಳಲ್ಲಿರುವ ನಮ್ಮ ದಾನಿಗಳಿಗೆ, ಸ್ನೇಹಿತರಿಗೆ ತಿಳಿಯಿತು. ಸರಿ, ಇ-ಮೇಲ್‌ಗಳ ಮಹಾಪೂರವೇ ಬರತೊಡಗಿತು. ಹಣ ಬೇಕೆ? ಅಥವಾ ಮತ್ಯಾವುದಾದರೂ ನೆರವು ಬೇಕೆ? ಹೀಗೆ ಮುಕ್ತವಾದ ಸಹಾಯ ಹಸ್ತಗಳು ನಮ್ಮತ್ತ ಚಾಚಿದವು. ಬಾಲಕನನ್ನು ಉಳಿಸಿಕೊಳ್ಳುವ ಸಾಧ್ಯತೆ ಇಲ್ಲದ್ದರಿಂದ ನಾನು ‘ಇದಾವುದೂ ಬೇಡ’ ಎಂದು ತಿಳಿಸಿದೆ. ಆದರೂ ಕೆಲವರು ಹಣ ಕಳುಹಿಸಿದರು. ‘ಬಾಲಕನ ನೋವನ್ನು ಕಡಿಮೆ ಮಾಡಲು ಇದನ್ನು ಬಳಸಿ’ ಎಂದು ಸಲಹೆ ನೀಡಿದರು. ನಮ್ಮ ಆಶ್ರಮದಲ್ಲೇ ಇರುವ ಸುಮಾರು 20 ವರ್ಷದ ಜರ್ಮನ್ ಯುವತಿ ಬಹಳಷ್ಟು ಕಾಲ ಬಾಲಕನ ಪಕ್ಕದಲ್ಲಿಯೇ ಕುಳಿತು ಸಮಯ ಕಳೆಯುತ್ತಿದ್ದಳು, ಸೇವೆ ಮಾಡುತ್ತಿದ್ದಳು.

ಈ ವಿಷಯಗಳನ್ನು ತಿಳಿದ ಅಮೆರಿಕಾದ ಒಬ್ಬ ಧೀಮಂತ ಮಹಿಳೆ ನನಗೆ ಹೀಗೆ ಇ-ಮೇಲ್ ಕಳುಹಿಸಿದಳು: ‘ನೋಡು, ಈ ಘಟನೆಯಿಂದ ನಾವು ತಿಳಿಯಬೇಕಾದದ್ದು ಏನೆಂದರೆ, ಮನುಷ್ಯರೆಲ್ಲರೂ ಒಂದೇ. ನಾವು ಈ ಭೂಮಿಯಲ್ಲಿರುವುದು ಪ್ರೀತಿಸಲು, ಸೇವೆ ಮಾಡಲು ಮತ್ತು ನೊಂದವರಿಗೆ ಸಾಂತ್ವನ ಹೇಳಲು. ಬೇರೆ ಯಾವ ಅರ್ಥವನ್ನು ತಾನೆ ನಾವು ಈ ಜೀವನದಲ್ಲಿ ಹುಡುಕಲು ಸಾಧ್ಯ’.

ಈ ಸಂದರ್ಭದಲ್ಲಿ ನನಗೆ ಮತ್ತೊಂದು ಘಟನೆ ನೆನಪಾಗುತ್ತಿದೆ. ಒಂದು ದಿನ ಸ್ಪೇನ್ ದೇಶದ ಇಬ್ಬರು ಹುಡುಗಿಯರು ನನ್ನನ್ನು ಹುಡುಕಿಕೊಂಡು ಬಂದರು. ಅವರು ಹಂಪಿಯಲ್ಲಿ ಪ್ರವಾಸ ಮಾಡುವಾಗ ಏಳು ವರ್ಷದ ಅನಾಥ ಬಾಲಕಿಯೊಬ್ಬಳು ಅವರಿಗೆ ಸಿಕ್ಕಿದಳು. ಆ ಹುಡುಗಿ ಹಂಪಿಯ ಪಾಳು ದೇಗುಲಗಳಲ್ಲಿ ಮಲಗಿ ಕಾಲ ಕಳೆಯುತ್ತಿದ್ದದನ್ನು ನೋಡಿ ಅವರಿಗೆ ಸಂಕಟವಾಯಿತು. ತಾವು ಹಂಪಿಯಲ್ಲಿದ್ದಷ್ಟು ಕಾಲ ಆಕೆಯನ್ನು ತಮ್ಮ ಜೊತೆಯಲ್ಲೇ ಇಟ್ಟುಕೊಂಡಿದ್ದರು. ಕೆಲವು ದಿನಗಳಲ್ಲಿ ಈ ಮುಗ್ಧ ಬಾಲಕಿ ಅವರ ಮನಸ್ಸನ್ನು ಆಕ್ರಮಿಸಿಬಿಟ್ಟಿದ್ದಳು. ಆಕೆಯನ್ನು ಹಾಗೆಯೇ ನಡುರಸ್ತೆಯಲ್ಲಿ ಬಿಟ್ಟು ತಮ್ಮ ಪ್ರವಾಸ ಮುಂದುವರೆಸಲು ಅವರಿಗೆ ಮನಸ್ಸಾಗಲಿಲ್ಲ.

ಆಕೆಯ ಕುಡುಕ ತಂದೆಯನ್ನು ಪತ್ತೆ ಹಚ್ಚಿ ಮಗಳನ್ನು ಏಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಇತ್ಯಾದಿಯಾಗಿ ವಿಚಾರಿಸಿದರು. ಆ ಕುಡುಕ ‘ನೀವೇ ಬೇಕಾದರೆ ಕರೆದುಕೊಂಡು ಹೋಗಿ’ ಎಂದು ಅಮಲಿನಲ್ಲಿ ಉತ್ತರಿಸಿದ. ದಾರಿ ಕಾಣದೆ ಈ ಹುಡುಗಿಯರು ಅಂತರ್ಜಾಲದಲ್ಲಿ ಅಡ್ರೆಸ್ ಹುಡುಕಿ ನಮ್ಮ ಆಶ್ರಮಕ್ಕೆ ಬಂದರು. ನಾನು ಕೂಡ ಈ ಬಾಲಕಿಗೆ ಆಶ್ರಯ ಕೊಡಲು ನಿರಾಕರಿಸಬಹುದೋ ಏನೋ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಆ ಇಬ್ಬರಲ್ಲಿ ಒಬ್ಬಳ ಹೆಸರು ದಯಾ. ಆಕೆ ನಿಜವಾಗಿಯೂ ದಯಾಮಯಿ. ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುತ್ತ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾ ಬಾಲಕಿಯ ಕಥೆಯನ್ನು ವಿವರವಾಗಿ ಹೇಳಿದಳು. ‘ಈ ಬಾಲಕಿಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ, ಬೇಕಾದರೆ ನಮ್ಮ ಮುಂದಿನ ಪ್ರವಾಸವನ್ನೂ ರದ್ದು ಮಾಡುತ್ತೇವೆ’ ಎಂದು ಹೇಳಿದಳು. ಆಕೆಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಆದರೂ ಆಕೆ ಹೇಳುತ್ತಿದ್ದುದೆಲ್ಲಾ ಅರ್ಥವಾಯಿತು. ‘ಮಗು ಎಲ್ಲಿದೆ?’ ಎಂದು ಕೇಳಿದೆ.

ಹಂಪಿಯಲ್ಲಿ ಸ್ನೇಹಿತರೊಡನೆ ಇರುವುದಾಗಿ ತಿಳಿಸಿದಳು. ನಾನು ಒಪ್ಪಿದ್ದೇ ತಡ, ಸಂಭ್ರಮದಿಂದ ಬಾಲಕಿಯನ್ನು ಕರೆತರುವುದಾಗಿ ಹೇಳಿ ಹೊರಟರು. ‘ರಾತ್ರಿಯೆಲ್ಲಾ ಪ್ರಯಾಣ ಮಾಡಿದ್ದೀರಿ, ಇಂದು ನಮ್ಮಲ್ಲೆ ಉಳಿದು ನಾಳೆ ಹೋಗಿ’ ಎಂದೆ. ಅವರಿಗೆ ಯಾವ ವಿರಾಮವೂ ಬೇಕಾಗಿರಲಿಲ್ಲ. ಮೊದಲು ಆತಂಕ ತುಂಬಿದ್ದ ಅವರ ಮುಖದಲ್ಲಿ ಈಗ ಉಲ್ಲಾಸ ಎದ್ದು ಕಾಣುತ್ತಿತ್ತು. ತಕ್ಷಣ ಹಂಪಿಗೆ ಹೊರಟರು. ಮರುದಿನ ಸಂಜೆಯ ವೇಳೆಗೆ ಬಾಲಕಿಯನ್ನು ಕರೆದು ತಂದೇ ಬಿಟ್ಟರು. ಈ ಬಾಲಕಿಗೆ ಬಸ್ ಪ್ರಯಾಣ ಅಭ್ಯಾಸವಿರಲಿಲ್ಲ. ದಾರಿಯುದ್ದಕ್ಕೂ ವಾಂತಿ ಮಾಡಿಕೊಂಡು ಬಂದಳು. ಆದರೆ ಆಕೆಯನ್ನು ಸ್ವಚ್ಛವಾಗಿ ತೊಳೆದು ಶುಭ್ರವಾಗಿ ಕರೆತಂದಿದ್ದರು.

ಕಳೆದ ಕೆಲವು ವರ್ಷಗಳು ಈ ಬಾಲಕಿ ಏಕಾಂಗಿಯಾಗಿ ಹೋರಾಟದ ಬದುಕು ಸಾಗಿಸಿದ್ದಳು. ಆಕೆಯ ನಂಬಿಕೆಯನ್ನು ಸಂಪಾದಿಸುವುದೇ ನಮಗೆ ದೊಡ್ಡ ಸವಾಲು ಎನಿಸಿತು. ಈ ಸ್ಪ್ಯಾನಿಷ್ ಹುಡುಗಿಯರನ್ನು ಬಿಟ್ಟರೆ ಈ ಬಾಲಕಿಗೆ ಮತ್ತಾರಲ್ಲೂ ನಂಬಿಕೆಯೇ ಇಲ್ಲ. ನಮ್ಮ ಸಂಪರ್ಕದಲ್ಲಿದ್ದ ಮಾನಸಿಕ ತಜ್ಞರು ಒಂದು ಉಪಾಯ ಹೇಳಿಕೊಟ್ಟರು. ಅದೇನೆಂದರೆ, ಈ ಸ್ಪೇನ್ ದೇಶದ ದಯಾ ಮತ್ತು ಆಕೆಯ ಗೆಳತಿಯರು ಬಾಲಕಿಯನ್ನು ಬಲವಂತವಾಗಿ ಬಿಟ್ಟು ಹೋಗುವುದು. ಆನಂತರ ಹದಿನೈದು ದಿನ ಬಿಟ್ಟು ಬರುವುದಾಗಿ ಭರವಸೆ ನೀಡುವುದು ಮತ್ತು ಆ ಮಾತಿಗೆ ತಕ್ಕಂತೆ ಹದಿನೈದು ದಿನದ ನಂತರ ಹಿಂತಿರುಗುವುದು. ಈ ನಡುವೆ ನಾವು ಈ ಬಾಲಕಿಗೆ ಕ್ಯಾಲೆಂಡರ್ ಒಂದನ್ನು ಮುಂದೆ ಹಿಡಿದು ದಿನ ಕಳೆದಂತೆ ದಯಾ ಮತ್ತು ಗೆಳತಿಯರು ಹಿಂತಿರುಗಲು ಉಳಿದ ದಿನಗಳು ಎಷ್ಟು ಎಂದು ಲೆಕ್ಕ ಹಾಕುತ್ತಾ ಕಡೆಗೆ ಅವರ ಆಗಮನದ ದಿನವನ್ನು ಸಂಭ್ರಮಿಸಿ ಹೇಳುವುದು.

ಅದಕ್ಕೆ ತಕ್ಕಂತೆ ಅವರು ಹಿಂತಿರುಗುವುದು. ಇದೇ ರೀತಿ ದಯಾ ಮತ್ತು ಗೆಳತಿಯರು ನಾಲ್ಕು ದಿನ ಹೊರಗೆ ಹೋಗಿ ಮಾತು ಕೊಟ್ಟಂತೆ ಪುನಃ ಹಿಂತಿರುಗಿದರು. ಆನಂತರ ತಾವು ಸ್ಪೇನ್ ದೇಶಕ್ಕೆ ಹಿಂತಿರುಗಿ ನಂತರ ಒಂದು ವರ್ಷ ಬಿಟ್ಟು ಬರುವುದಾಗಿ ತಿಳಿಸಿದರು. ಈ ಎಲ್ಲಾ ಮಾತನ್ನು ಅವರು ಚಾಚೂ ತಪ್ಪದೇ ಉಳಿಸಿಕೊಂಡದ್ದರಿಂದ ಈ ಬಾಲಕಿಯ ನಂಬಿಕೆಯನ್ನು ನಾವು ಸಂಪಾದಿಸಲು ಸಾಧ್ಯವಾಯಿತು.

ಈ ಬಾಲಕಿ ನಮ್ಮಲ್ಲಿಗೆ ಬಂದು ಆರು ವರ್ಷಗಳೇ ಕಳೆದವು. ಹಂಪಿಯನ್ನು ಪುನಃ ನೋಡುವ ಆಕೆಯ ಕನವರಿಕೆಯನ್ನು ಇತ್ತೀಚೆಗೆ ಪೂರೈಸಿದೆವು. ಹಂಪಿಗೆ ಕಾಲಿಟ್ಟಿದ್ದೇ ತಡ, ತನ್ನ ಹಳೆಯ ಸ್ನೇಹಿತರನ್ನೆಲ್ಲ ಕಂಡು ಹರ್ಷೋದ್ಗಾರದಲ್ಲಿ ಮಾತನಾಡಿದಳು. ಆಕೆಯ ಭಾವಪರವಶತೆಯನ್ನು ಕಂಡಾಗ ಮನುಷ್ಯ ಸಂಬಂಧಗಳಿಗೆ ಮಿಗಿಲಾದದ್ದು ಮತ್ತಾವುದೂ ಇಲ್ಲ ಎಂಬ ಮಾತು ನಿಜ ಎನಿಸಿತು.

ಬದುಕನ್ನು ಕಟ್ಟಿಕೊಡಬಲ್ಲ ಮನುಷ್ಯ ಸಂಬಂಧಗಳಿಗೆ ದೇಶ ಜನಾಂಗಗಳ ಗಡಿರೇಖೆಗಳಿಲ್ಲ. ಕಲಿಯದೆ ಪಡೆಯಬಹುದಾದ ಈ ಕಲೆಗೆ ಕಲಿಕೆಯೇ ಮಾರಕ. ಉಳ್ಳವರಾದ ನಾವು, ಯಾವ ಮನುಷ್ಯ ಸಂಬಂಧಗಳಿಗಾಗಿ ಹಣ, ಅಂತಸ್ತು, ಆಸ್ತಿ-ಪಾಸ್ತಿಗಳನ್ನು ಸಂಪಾದಿಸುತ್ತೇವೆಯೋ ಕಡೆಗೆ ಆ ಸಂಬಂಧಗಳ ವಿಷಯವನ್ನೇ ಮರೆತು ಕ್ಷುಲ್ಲಕವಾದ ವಸ್ತು ಸಂಬಂಧ ವಿಷಯಗಳಲ್ಲೇ ವ್ಯಸ್ತರಾಗಿ ಬದುಕುತ್ತೇವೆ. ಮನುಷ್ಯ ಸಂಬಂಧಗಳು ನೀಡಬಹುದಾದ ಸಂತೋಷವನ್ನು ಕಡೆಗಣಿಸಿ ಅಮೂಲ್ಯವಾದದ್ದನ್ನು ಕಳೆದುಕೊಂಡಿದ್ದೇವೆ ಎಂಬ ಎಚ್ಚರವೂ ಇಲ್ಲದಂತೆ ಬದುಕು ಸಾಗಿಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.