ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ರಾಜಕೀಯ ಪಕ್ಷವೂ ಚುನಾವಣಾ ಫಲಿತಾಂಶವನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ. `ಈ ಫಲಿತಾಂಶ ಸದ್ಯದಲ್ಲೇ ಆಗಲಿರುವ ಬದಲಾವಣೆಯ ದಿಕ್ಸೂಚಿ' ಎಂದು ಒಂದು ಪ್ರಮುಖ ಪಕ್ಷ ಭವಿಷ್ಯ ನುಡಿದಿದ್ದರೆ, `ಇದು ಸಿದ್ಧತೆಯ ಕೊರತೆಯಿಂದ ಆಗಿರುವ ಸಣ್ಣ ಹಿನ್ನಡೆ' ಎಂದು ಮತ್ತೊಂದು ಪಕ್ಷ ಹೇಳಿಕೊಂಡಿದೆ. `ಬೃಹತ್ ಸಂಖ್ಯೆಯ ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುವುದರಿಂದ, ಮತ್ತೊಂದು ಪಕ್ಷದ ಸೋಲನ್ನು ವ್ಯಾಖ್ಯಾನಿಸುವುದಕ್ಕೆ ಇದು ತಕ್ಕ ಸಂದರ್ಭ' ಎಂದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಪಕ್ಷವೊಂದು ಅಭಿಪ್ರಾಯಪಟ್ಟಿದೆ. ಈ ಎಲ್ಲ ಗೌಜು ಗದ್ದಲ ಮತ್ತು ಗೊಂದಲಗಳ ನಡುವೆ, ಹಲವಾರು ಸ್ಥಳಗಳಲ್ಲಿ ಪ್ರಜಾಪ್ರಭುತ್ವ ದುರ್ಬಲವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದ್ದನ್ನು ಕೆಲವು ಮಂದಿಯಷ್ಟೇ ಗುರುತಿಸಿದ್ದಾರೆ.

ನಾನು ವಾಸಿಸುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಚುನಾವಣೆಯೂ ಇತರೆಡೆಯಂತೆ ಕೆಲವು ತಮಾಷೆಗಳಿಂದ ಹೊರತಾಗಿರಲಿಲ್ಲ. ಹೆಚ್ಚು ಗದ್ದಲ ಮತ್ತು ಫ್ಲೆಕ್ಸ್ ಬ್ಯಾನರ್‌ಗಳ ಅಬ್ಬರ ಇಲ್ಲದಿದ್ದರೂ ಬಹುತೇಕ ಕಡೆ ಮನೆ- ಮನೆ ಪ್ರಚಾರ ಕಾರ್ಯವೇ ಹೆಚ್ಚಾಗಿ ನಡೆಯಿತು. ತಮ್ಮ ಅಭ್ಯರ್ಥಿಗಳ ಪರವಾಗಿ ದೊಡ್ಡ ದೊಡ್ಡ ಗುಂಪುಗಳಲ್ಲಿ ತೆರಳಿ ಜನ ಮತ ಯಾಚಿಸಿದರು. ಅಂತಹ ಗುಂಪಿನಲ್ಲಿದ್ದ ಒಬ್ಬ ಮಹಿಳೆಯನ್ನು ನಾನು ಮಾತಿಗೆ ಎಳೆದೆ. ಅವಳಿಗೆ ಅಭ್ಯರ್ಥಿಯ ಹೆಸರು ತಿಳಿದಿತ್ತು. ಆದರೆ ಪಕ್ಷ ಯಾವುದೆಂಬುದೇ ತಿಳಿದಿರಲಿಲ್ಲ. ಇದನ್ನು ಕಂಡು ಅಚ್ಚರಿಗೊಳಗಾದ ನಾನು, ಅವಳಿಂದ ಮತ್ತಷ್ಟು ಮಾಹಿತಿ ಕಲೆಹಾಕಿದೆ.

ಆ ಗುಂಪಿನಲ್ಲಿದ್ದ ಬಹುತೇಕರನ್ನು ದಿನಗೂಲಿಯ ಆಧಾರದ ಮೇಲೆ ಪ್ರಚಾರಕ್ಕೆಂದು ಕರೆತರಲಾಗಿತ್ತು. ಆ ಮಹಿಳೆ ಮನೆಗೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದವಳು. ಕಳೆದ ಒಂದು ವಾರ ಅವಳಿಗೆ ಅಧಿಕ ಲಾಭ ತಂದುಕೊಟ್ಟಿತ್ತು. ಇಲ್ಲಿಗೆ ಬಂದರೆ ದಿನಕ್ಕೆ 1000 ರೂಪಾಯಿ ಮತ್ತು ಮೂರು ಹೊತ್ತು ಊಟ (ಬಹುಶಃ ಮಾಂಸಾಹಾರ) ಅವಳಿಗೆ ಸಿಗುತ್ತಿತ್ತು. ಅದಕ್ಕಾಗಿ ಅವಳು ಮಾಡಬೇಕಾಗಿದ್ದುದು ಇಷ್ಟೆ- ಗುಂಪಿನಲ್ಲಿ ಒಬ್ಬಳಾಗಿ ಇದ್ದುಕೊಂಡು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೂ ಇಡೀ ದಿನ ಅವರ ಜೊತೆಯಲ್ಲೇ ಸುತ್ತಾಡಬೇಕಾಗಿತ್ತು.

ಅವಳಿಗೆ ಚುನಾವಣೆ ಎಂದರೆ ಒಂದಷ್ಟು ಹಣ ಮಾಡಿಕೊಳ್ಳುವ ಸಮಯ ಎಂದೆನಿಸಿತ್ತು. ಹೀಗಾಗಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದನ್ನು ಕೇಳಿ ಅವಳು ಸಾಕಷ್ಟು ಖುಷಿಯಿಂದ ಇದ್ದಳು. ತನ್ನಂತೆಯೇ ಗುಂಪಿನೊಡನೆ ಬರುತ್ತಿದ್ದ ಗಂಡಸರಿಗೆ ಮಾತ್ರ ದಿನಕ್ಕೆ 1500 ರೂಪಾಯಿ ಯಾಕೆ ಕೊಡಬೇಕು ಎಂಬುದೊಂದೇ ಅವಳ ದೂರಾಗಿತ್ತು. ಈ ಅಭ್ಯರ್ಥಿಯ ಫಲಿತಾಂಶ ಏನಾಗುತ್ತದೆ ಎಂದು ನಾನು ಕಾಯ್ದು ನೋಡಿದೆ. ಅವರು ಜಯ ಗಳಿಸಿದ್ದರು. ಗೆದ್ದ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ತಮ್ಮ ವಾರ್ಡ್‌ನ ಎಲ್ಲ ಕುಟುಂಬಗಳಿಗೂ `ಸೆಟ್ ಟಾಪ್' ಬಾಕ್ಸ್‌ಗಳನ್ನು ವಿತರಿಸಿದ್ದರು.

ಹೀಗಾಗಿ, ಚುನಾವಣೆ ತಮ್ಮ ಕ್ಷೇತ್ರಕ್ಕೆ ಲಾಭ ತರಲಿಲ್ಲ ಎಂದು ಈಗ ಅಲ್ಲಿನ ಯಾರೊಬ್ಬರೂ ಹೇಳುವಂತೆಯೇ ಇರಲಿಲ್ಲ. ಈ ವಾರ್ಡ್‌ನ ಕೆಲ ಕುಟುಂಬಗಳೊಂದಿಗೆ ನಾನು ಮಾತನಾಡಿದಾಗ, ಚುನಾವಣೆಯ ದಿನ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಲು ಬಹುತೇಕರಿಗೆ ಕನಿಷ್ಠ 500 ರೂಪಾಯಿಯನ್ನಾದರೂ ನೀಡಿದ್ದ ಸಂಗತಿ ತಿಳಿಯಿತು. ಸೋತವರೂ ಸೇರಿದಂತೆ ಬಹುತೇಕ ಎಲ್ಲ ಅಭ್ಯರ್ಥಿಗಳೂ ಮತಕ್ಕಾಗಿ ಹಣ ನೀಡಿದ್ದರಿಂದ ಮತದಾರರು ನಿಜಕ್ಕೂ ಖುಷಿಯಾಗಿದ್ದರು. ವಿಚಿತ್ರವಾದ ಸಂಗತಿಯೆಂದರೆ, ಹೀಗೆ ತಮ್ಮ ಮತಗಳನ್ನು ಮಾರಾಟಕ್ಕೆ ಇಟ್ಟಿದ್ದರ ನಡುವೆಯೂ ಕೆಲವರು ತಮ್ಮಿಷ್ಟದ ಅಭ್ಯರ್ಥಿಗಳ ಪರವಾಗೇ ಹಕ್ಕು ಚಲಾಯಿಸಿದ್ದರು! ಇಂತಹ ದುರ್ಮಾರ್ಗದಲ್ಲೂ ಕೆಲ ಮಟ್ಟಿನ ಪ್ರಜಾಪ್ರಭುತ್ವ ಇಲ್ಲಿ ಕೆಲಸ ಮಾಡಿತ್ತು.

ಅಭ್ಯರ್ಥಿಯೊಬ್ಬರನ್ನು ಮಾತನಾಡಿಸಿದಾಗ, ಅವರು ತಮ್ಮದೇ ಆದ ಒಂದಷ್ಟು ವಿಷಯಗಳನ್ನು ಹೊರಗೆಡವಿದರು. ಮತದಾರರಿಗೆ ಲಂಚ ಕೊಡುವ ರಾಜಕಾರಣಿಗಳನ್ನು ದೂರುವುದು ಸುಲಭ, ಆದರೆ ಭ್ರಷ್ಟ ಮತದಾರರ ಬಗ್ಗೆ ಮಾತ್ರ ಯಾಕೆ ಯಾರೂ ಚಕಾರ ಎತ್ತುವುದಿಲ್ಲ ಎಂದು ಪ್ರಶ್ನಿಸಿದರು. ಅವರ ಪ್ರಕಾರ, ಮತದಾರರಿಗೆ ಹಣ ಹಂಚುವುದರಿಂದ ಅವರಿಗೆ ಗೆಲ್ಲುವ ಗ್ಯಾರಂಟಿಯೇನೂ ಸಿಗದು, ಆದರೆ ಹಾಗೇನಾದರೂ ಮಾಡದಿದ್ದರೆ ಸೋಲು ಮಾತ್ರ ಕಟ್ಟಿಟ್ಟ ಬುತ್ತಿ. ಅದಕ್ಕಾಗೇ ಅವರಂತಹ ಅಭ್ಯರ್ಥಿಗಳು ಅಂತಹ ಕೆಲಸ ಮಾಡಿ, ಸಿಗಬಹುದಾದ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ.

ಹೀಗಾಗಿ ಹಣ ಹಂಚುವ ಮೂಲಕ, ಸ್ಪರ್ಧಾ ಕಣದಲ್ಲಿ ಉಳಿಸಬಲ್ಲ ಗೆಲ್ಲುವ ಗಾಡಿ ಹತ್ತಲು ಮುಂದಾಗುತ್ತಾರೆ. ಆದರೆ ಹಣ ಕೊಟ್ಟು ಕೊಳ್ಳಲಾಗದ ಸಾಕಷ್ಟು ವಸ್ತುಗಳೂ ಈ ಪ್ರಪಂಚದಲ್ಲಿ ಇವೆ ಮತ್ತು ಕೆಲವು ವಸ್ತುಗಳನ್ನು ಹಣ ಕೊಟ್ಟು ಕೊಳ್ಳಲು ತಾನು ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನು ಸಮಾಜ ನೀಡಬೇಕು. ನಾಗರಿಕರಾಗಿ ನಮ್ಮ ಹಕ್ಕುಗಳು ಮತ್ತು ಆ ಹಕ್ಕುಗಳ ಒಡಗೂಡಿಯೇ ಬರುವ ಹೊಣೆಗಾರಿಕೆ ಖಂಡಿತವಾಗಿಯೂ ಮಾರಾಟಕ್ಕೆ ಇಡುವ ಸಂಗತಿಗಳಲ್ಲ. ಹಾಗೇನಾದರೂ ಮಾಡಿದ್ದೇ ಆದರೆ ಅದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಅದರ ಬೆನ್ನಿಗೇ ಉತ್ತಮ ಆಡಳಿತವು ಬಲಿಪಶುವಾಗುತ್ತದೆ.

ಯಾವ ಪಕ್ಷ ಏನೇ ವಿಶ್ಲೇಷಣೆ ಮಾಡಿಕೊಳ್ಳಲಿ ಮತ್ತು ಯಾವುದೇ ಸಮರ್ಥನೆ ಕೊಟ್ಟುಕೊಳ್ಳಲಿ ಮತ ಚಲಾಯಿಸುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಮಾತ್ರ ನಿಜ. ಬಹುತೇಕ ಅಭ್ಯರ್ಥಿಗಳು ತಾವು ಅತ್ಯಂತ ಜನಪ್ರಿಯರು ಎಂದೋ ಅಥವಾ ತಮ್ಮ ಕ್ಷೇತ್ರದ ಅತಿ ಹೆಚ್ಚು ಜನರನ್ನು ಪ್ರತಿನಿಧಿಸುವ ಕಾರಣಕ್ಕೋ ಗೆದ್ದಿಲ್ಲ. ಬದಲಿಗೆ, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ ಹೆಚ್ಚು ಮತಗಳನ್ನು ಪಡೆದಿರುವ ಕಾರಣಕ್ಕಷ್ಟೇ ಗೆದ್ದಿದ್ದಾರೆ. ವಾಸ್ತವದಲ್ಲಿ, ಅವರಲ್ಲಿ ಬಹುತೇಕರು ಹೆಚ್ಚಿನವರ ಅಭಿಪ್ರಾಯವನ್ನು ಸಹ ಪ್ರತಿನಿಧಿಸುವುದಿಲ್ಲ. ಉದ್ದೇಶಿತ `ಹುದ್ದೆ'ಯನ್ನು ಹಿಡಿಯಲು ಹೊರಟವರಲ್ಲಿ ಮೊದಲಿಗರಾದ ಅದೃಷ್ಟವಂತರು ಅವರಾಗಿದ್ದಾರೆ ಅಷ್ಟೆ.

ಇಂತಹ ಪರಿಸ್ಥಿತಿಯಲ್ಲಿ `ಭಾರತದಲ್ಲಿ ಪ್ರಜಾಪ್ರಭುತ್ವ ಗೆಲ್ಲುತ್ತದೆ' ಎಂದು ಪ್ರತಿಪಾದಿಸುವುದು ಸಹ ಕಷ್ಟ. ಪ್ರಜಾಪ್ರಭುತ್ವ ಮತ್ತು ಅದರ ಗುಣಲಕ್ಷಣಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಒಬ್ಬ ನಾಗರಿಕರಾಗಿ ನಮ್ಮೆಲ್ಲರ ಪ್ರಾಥಮಿಕ ಕರ್ತವ್ಯ. ಪ್ರಜಾಪ್ರಭುತ್ವ ಎಂಬುದು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ಎಲ್ಲ ನಿರ್ಧಾರಗಳ ಬಗ್ಗೆಯೂ ಸಮಾನವಾಗಿ ಅಭಿಪ್ರಾಯ ಮಂಡಿಸಲು ಸಾಧ್ಯವಾಗುವ ಸರ್ಕಾರದ ಒಂದು ಭಾಗ. ಪ್ರಸ್ತಾವ ಮಂಡನೆ, ಅಭಿವೃದ್ಧಿ ಮತ್ತು ಕಾನೂನು ರಚನೆಯಲ್ಲಿ ನೇರವಾಗಿ ಅಥವಾ ಚುನಾಯಿತ ಪ್ರತಿನಿಧಿಗಳ ಮೂಲಕ ಭಾಗವಹಿಸಲು ಅರ್ಹ ನಾಗರಿಕರೆಲ್ಲರಿಗೂ ಅದು ಅವಕಾಶ ಮಾಡಿಕೊಡುತ್ತದೆ. ಇಂತಹ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರಿಂದ ಸರ್ಕಾರ ಮತ್ತು ಆಡಳಿತದಲ್ಲಿ ಈಗ ನಾವು ಕಾಣುತ್ತಿರುವ ಶಿಥಿಲಾವಸ್ಥೆ ಹಾಗೂ ಅವನತಿಗೆ ನಾವೇ ಹೊಣೆಯಾದಂತೆ ಆಗುತ್ತದೆ. ಆಗ ಕುಂಠಿತ ಪ್ರಗತಿ ಮತ್ತು ಅಭಿವೃದ್ಧಿ ಹಿನ್ನಡೆಗೆ ನಾವು ಬರೀ ರಾಜಕಾರಣಿಗಳು, ಅಧಿಕಾರಶಾಹಿಯನ್ನಷ್ಟೇ ದೂರಲು ಸಾಧ್ಯವಾಗುವುದಿಲ್ಲ.

ಕೇವಲ `ಪ್ರತಿನಿಧಿ ಪ್ರಜಾಪ್ರಭುತ್ವ' ನಮ್ಮದಾದರೆ, ರಾಜಕೀಯ ಅಧಿಕಾರವನ್ನು ಜನಪ್ರತಿನಿಧಿಗಳ ಮೂಲಕವಷ್ಟೇ ನಾವು ಪ್ರತಿನಿಧಿಸಬಹುದು. ಇದರಿಂದ ಸ್ವತಃ ಪಾಲ್ಗೊಳ್ಳುವಿಕೆ ಇಲ್ಲದೆ, ತಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ರೀತಿ ಶಿಥಿಲಗೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾಗರಿಕರಿಗೆ ಸಾಧ್ಯವಾಗದು. ಸಾಮಾನ್ಯ ನಾಗರಿಕರಾದ ನಾವು ಇದಕ್ಕಿಂತಲೂ ಮುಂದೆ ಹೋಗಿ, ಖುದ್ದು ಭಾಗವಹಿಸುವ ಮೂಲಕ `ಸಹಭಾಗಿ ಪ್ರಜಾಪ್ರಭುತ್ವ' ವ್ಯವಸ್ಥೆ ಜಾರಿಗೆ ಪ್ರಯತ್ನಿಸಬೇಕು. ಚುನಾವಣೆ ನಮ್ಮ ಹೊಣೆಗಾರಿಕೆಯ ಒಂದು ಮುಖ ಮಾತ್ರ; ಅದರ ನಂತರವೂ ನಾವು ಆರಿಸಿ ಕಳುಹಿಸಿದ ವ್ಯಕ್ತಿಗಳ ಕಾರ್ಯದಲ್ಲಿ ನಾವು ಭಾಗಿಗಳಾಗಲೇಬೇಕು. ಆ ಮೂಲಕ ನಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಗತ್ಯವಾಗಿರುವ ಪುನಃಶ್ಚೇತನವನ್ನು ನೀಡಲು ಸಾಧ್ಯ.

ಭಾರತಕ್ಕೆ ಹೊರತಾದ ಪ್ರಜಾಪ್ರಭುತ್ವದ ಈ ಪರಿಕಲ್ಪನೆ ನಮ್ಮ ಸಂಸ್ಕೃತಿಯ ಭಾಗವಲ್ಲ ಎಂದು ಕೆಲವರು ವಾದಿಸುತ್ತಾರೆ. ಕ್ರಿ.ಪೂ 508ರಲ್ಲಿ ಅಥೆನ್ಸ್ ನಗರದಲ್ಲಿ ಹುಟ್ಟಿದ ಈ ಪರಿಕಲ್ಪನೆಯ ಬೇರುಗಳು ಭಾರತೀಯ ರಾಜಕೀಯ ಚಿಂತನೆಯಲ್ಲಿ ಇಲ್ಲ ಎಂದು ಅವರು ತಿಳಿದಿದ್ದಾರೆ. ಅಲ್ಲಿಂದ ಮುಂದೆ ಹಲವು ಶತಮಾನಗಳ ಕಾಲ ಪ್ರಜಾಪ್ರಭುತ್ವವನ್ನು ಬಲಗೊಳಿಸಿದ ಹೆಗ್ಗಳಿಕೆ ರೋಮನ್ನರಿಗೆ ಸಲ್ಲುತ್ತದಾದರೂ, ಅವರ ವ್ಯವಸ್ಥೆಯನ್ನು ಅತ್ಯಂತ ಹತ್ತಿರದಿಂದ ನೋಡಿದಾಗ ಅದರಲ್ಲೂ ಸಾಕಷ್ಟು ನ್ಯೂನತೆಗಳು ಇದ್ದುದು ನಮಗೆ ಗೋಚರಿಸುತ್ತದೆ. ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸುವ ಮೂಲಕ, ಪ್ರಬಲರ ಮತಗಳಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿತ್ತು.

ಇದರಿಂದ ಸೆನೆಟ್ ಸದಸ್ಯರು ಸೇರಿದಂತೆ ಬಹುತೇಕ ಉನ್ನತ ಅಧಿಕಾರಿಗಳು ಕೆಲವೇ ಶ್ರೀಮಂತ ಹಾಗೂ ಗಣ್ಯ ಕುಟುಂಬಗಳಿಂದ ಬಂದವರೇ ಆಗಿರುತ್ತಿದ್ದರು. ನಮ್ಮ ದೇಶದಲ್ಲಿ ಈಗಿರುವ ಸ್ಥಿತಿಯನ್ನು ಒಪ್ಪಿಕೊಳ್ಳಲು ಇವೆಲ್ಲ ನಮಗೆ ಸೂಕ್ತ ಕಾರಣಗಳಾಗಲಾರವು. ಇಡೀ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಪ್ರತಿ ಭಾರತೀಯನಿಗೂ ಅವಕಾಶ ಸಿಗಬೇಕು. ಸಾರ್ವತ್ರಿಕ ಮತದಾನದ ಹಕ್ಕು ಸಿಗುವುದಷ್ಟೇ ಅಲ್ಲ, ನಮ್ಮ ಮತಗಳು ಅಮೂಲ್ಯವಾಗುವಂತೆ ಸಹ ನೋಡಿಕೊಳ್ಳಬೇಕು. ನಾಗರಿಕತ್ವ ಎಂಬುದು ಎಂದಿಗೂ ಬೆಲೆ ಕಟ್ಟಿ ಮಾರಾಟಕ್ಕೆ ಇಡುವ ವಸ್ತುವಲ್ಲ. ಹಾಗೊಂದು ವೇಳೆ ಅದನ್ನು ಮಾರಾಟಕ್ಕೆ ಇಟ್ಟಿದ್ದೇ ಆದಲ್ಲಿ, ಕೇವಲ ಧನಿಕರು ಮತ್ತು ಬಲಶಾಲಿಗಳಷ್ಟೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂಬ ವಾದಕ್ಕೆ ಬಲ ತುಂಬಿದಂತೆ ಆಗುತ್ತದೆ ಅಷ್ಟೆ.

ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಕೆಲಸ ಮಾಡಬೇಕೆಂದರೆ, ಎಲ್ಲ ಬಗೆಯ ಸಾಮಾಜಿಕ ಮತ್ತು ಆರ್ಥಿಕ ವರ್ಗದ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೂ ಮುಕ್ತವಾದ ಅವಕಾಶಗಳು ಸೃಷ್ಟಿಯಾಗಬೇಕು. `ಪ್ರಜಾಪ್ರಭುತ್ವ ಸೂಚ್ಯಂಕ 2011'ರ ಪ್ರಕಾರ ನಮ್ಮದು `ದೋಷಪೂರಿತ ಪ್ರಜಾಪ್ರಭುತ್ವ'. ಅದನ್ನು `ಸಂಪೂರ್ಣ ಪ್ರಜಾಪ್ರಭುತ್ವ'ದತ್ತ ಕೊಂಡೊಯ್ಯುವ ಮುನ್ನ, ಅದಕ್ಕೆ ಪೂರಕವಾಗಿ ನಾವು ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ. ವಿಶ್ವದಲ್ಲೇ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು ಎಂದು ಹೇಳಿಕೊಳ್ಳುವಷ್ಟಕ್ಕೇ ನಮ್ಮ ಸಮಾಧಾನ ಸೀಮಿತ ಆಗಬಾರದು. ಹಕ್ಕುಗಳ ಬಗ್ಗೆ ಅರಿವು ಹೊಂದಿರುವುದರ ಜೊತೆಗೆ, ಪ್ರಜ್ಞಾಪೂರ್ವಕವಾಗಿ ಕರ್ತವ್ಯಗಳನ್ನು ಪಾಲಿಸುವಂತಹ ಸಂಪೂರ್ಣ ಕಾರ್ಯಸಾಧುವಾದ, ಆರೋಗ್ಯದಾಯಕ ವ್ಯವಸ್ಥೆ ನಮ್ಮದಾಗಬೇಕು.

ಧರ್ಮ, ಜಾತಿ, ಜನಸಂಖ್ಯೆ, ಅಪರಾಧ ಪ್ರವೃತ್ತಿ, ಸ್ವಜನ ಪಕ್ಷಪಾತ, ಬಡತನ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಬಲ್ಲವು. ಇದಕ್ಕೆಲ್ಲ ಇರುವ ಏಕೈಕ ಪರಿಹಾರವೆಂದರೆ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಕಾರ್ಯ ಮಾತ್ರ. ಒಬ್ಬ ನಾಗರಿಕರಾಗಿ ನಮ್ಮ ಎಲ್ಲ ವ್ಯವಹಾರಗಳಲ್ಲೂ ಪಾರದರ್ಶಕತೆ ಕಾಯ್ದುಕೊಂಡು, ಉನ್ನತ ಜವಾಬ್ದಾರಿ ಹೊರಲು ಸಿದ್ಧರಿರಬೇಕು, ನಮಗೆ ಮತ್ತು ನಮ್ಮ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿ ವಿಷಯದಲ್ಲೂ ಯಾವ ಹಿಂಜರಿಕೆಯೂ ಇಲ್ಲದೆ ನಾವು ಪಾಲ್ಗೊಳ್ಳಬೇಕು.

ಈ ಕೆಲಸ ಮಾಡಿದಾಗಷ್ಟೇ, ನಮ್ಮ ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸುವ ಮತ್ತು ಅವರನ್ನು ಹೊಣೆ ಮಾಡುವ ನೈತಿಕ ಹಕ್ಕು ನಮಗೆ ಲಭಿಸುತ್ತದೆ. ನಾಗರಿಕತ್ವವು ಬೇಡುವ ಇಂತಹ ಬೆಲೆಯನ್ನು ಇಚ್ಛಾಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿ ನಾವು ತೆರಲು ಸಿದ್ಧರಾಗದೇ ಹೋದರೆ, ದೇಶ ಈಗ ಏನಾಗಲು ಬಿಟ್ಟಿದ್ದೇವೆಯೋ ಅದರಲ್ಲಿ ಬದಲಾವಣೆ ತರುವ ಭರವಸೆ ನಮಗೆ ಕಾಣಿಸದು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.