‘ಕಾನೂನು ಎನ್ನುವುದು ಎಲ್ಲರಿಗೂ ಸಮಾನ, ಆದರೆ ಸಲ್ಮಾನನಿಗೆ ಮಾತ್ರ ವಿಶೇಷ ಸ್ಥಾನಮಾನ’ ಎಂದೋ ‘ಕಾನೂನು ಹೇಳುವ ಅಪರಾಧ ಯಾವುದಾದರೂ ಆಗಿರಲಿ, ಜಯಲಲಿತಾಗೇ ಜಯ’ ಎಂದೋ ದೇಶದಾದ್ಯಂತ ಸಿನಿಕರು ಏನಾದರೂ ಸೀನಿಕೊಳ್ಳಲಿ ಬಿಡಿ; ಏಕೆಂದರೆ ‘ಕಾನೂನು ಒಂದು ಕತ್ತೆ’ ಎಂದು ತಿಳಿದವರು ಎಂದೋ ಹೇಳಿಬಿಟ್ಟಿದ್ದಾರೆ. ಕಾನೂನು ಅನ್ವಯಕ್ಕೂ ಯಾರು, ಯಾವಾಗ, ಎಲ್ಲಿ, ಏನು, ಮತ್ತು ಹೇಗೆ ಎಂಬ ‘ಪಂಚಾಂಗದ ಪ್ರಭಾವ’ ಇದ್ದೇ ಇರುತ್ತದೆ ಎನ್ನುವುದಕ್ಕೆ ನೂರೆಂಟು ಉದಾಹರಣೆಗಳಿವೆ. ಹಾಗೇ ಕಾನೂನು ವಿಚಾರಗಳನ್ನು, ಪ್ರಭಾವಿಗಳಲ್ಲಿ ಯಾರು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಬಳಸಬಹುದು ಎಂಬುದೂ ನಮಗೆ ಅನೇಕ ಸಂದರ್ಭಗಳಲ್ಲಿ ಗೊತ್ತಾಗಿದೆ. ಪ್ರಜಾಪ್ರಭುತ್ವದಲ್ಲಿ ಯಾರೂ ಕಾನೂನಿಗೆ ಅತೀತರಲ್ಲ, ಅಂತೆಯೇ ಕಾನೂನೂ ಯಾರ ವಿಮರ್ಶೆಗೂ ಅತೀತವಲ್ಲ. ಆದರೆ ತಕರಾರು ಇರುವುದು ಕಾನೂನಿನ ವಿಚಿತ್ರ ವ್ಯಾಖ್ಯಾನದ ಬಗ್ಗೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಧ್ಯಮದ ವಿರುದ್ಧ ಹೊರಡಿಸಿರುವ ಒಂದು ಸುತ್ತೋಲೆ ಅದಕ್ಕೆ ಹೊಸ ಉದಾಹರಣೆ.

ನಮ್ಮ ದೇಶದ ಎಲ್ಲ ಭಾಷೆಗಳ ಚಾನೆಲ್‌ಗಳೂ ಬೆಳಗಾದೊಡನೆ ಜ್ಯೋತಿಷ, ವಾಸ್ತು, ಕವಡೆ ಶಾಸ್ತ್ರ, ಗಿಣಿ ಶಾಸ್ತ್ರ, ಮಣಿ ಶಾಸ್ತ್ರ ಇತ್ಯಾದಿಯ ಮೂಲಕ ಇಡೀ 120 ಕೋಟಿ ಪ್ರಜಾಸಮೂಹದ ಭವಿಷ್ಯ ಹೇಳುತ್ತವೆ. ಆದರೆ ಏಕೋ ಏನೋ ಮಾಧ್ಯಮಕ್ಕೇ ಇತ್ತೀಚೆಗೆ ಗ್ರಹಚಾರ ನೆಟ್ಟಗಿಲ್ಲ. ಗುರುಬಲ ಹೆಚ್ಚಾಗುವ ಬದಲು ಬರೀ ಶನಿಕಾಟವೇ ಹೆಚ್ಚಾಗುತ್ತಿದೆ. ಅನ್ನಬಾರದವರಿಂದೆಲ್ಲಾ ಅನ್ನಿಸಿಕೊಳ್ಳುವಂತಾಗಿದೆ. ಅಧಿಕಾರ ಹಿಡಿಯುವ ಮುನ್ನ ಮಾಧ್ಯಮವನ್ನು ತನುಮನಧನ ಓಲೈಸುವ ರಾಜಕಾರಣಿಗಳು, ಅಧಿಕಾರ ಹಿಡಿದ ನಂತರ ಗುರಾಯಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೋಡಿದರೆ ಮಡದಿಯ ಹಾಗೆ ಮಾಧ್ಯಮವನ್ನೂ ಬಹಳ ದೂರ ಇಟ್ಟಿದ್ದಾರೆ. ಹಣ ಪಡೆದು ಯಾರಿಗೆ ಬೇಕಾದರೂ ಸೇವೆ ಸಲ್ಲಿಸುವ ನೀವೆಲ್ಲ ‘ಪ್ರೆಸ್ಟಿಟ್ಯೂಟ್’ ಗಳು ಎಂದು ಕೇಂದ್ರ ಸಚಿವರೊಬ್ಬರು ಪತ್ರಕರ್ತರಿಗೆ ಬೈದು, ನಿಘಂಟಿಗೆ ಹೊಸಪದ ಸೇರಿಸಿದ್ದಾರೆ. ‘ಖಡ್ಗಕ್ಕಿಂತ ಪೆನ್ನು ಶಕ್ತಿಶಾಲಿ’ ಎನ್ನುವುದು ಎಂದೋ ಸಾಬೀತಾಗಿತ್ತು, ಈಗ ಅದರ ಜೊತೆ ‘ಚಾಕುಚೂರಿಗಿಂತ ಚಾನೆಲ್ ಶಕ್ತಿಶಾಲಿ’ ಎಂದು ಕೆಲವರು ಹೊಸಮಂತ್ರ ಜಪಿಸುತ್ತಿದ್ದಾರೆ. ತಾವು ಮಾತ್ರ ಆರಕ್ಕೇರಿ ಸುದ್ದಿಯನ್ನು ಮೂರಕ್ಕಿಳಿಸಿ ವ್ಯಾಪಾರ ವ್ಯವಹಾರ ಹೆಚ್ಚಿಸಿದವರಿಗೆ ‘ನ್ಯೂಸ್ ಟ್ರೇಡರ್ಸ್’ ಎಂಬ ಸುಂದರ ನಾಮಕರಣ ಬೇರೆ ಆಗಿದೆ. ಮೀಡಿಯಾದಲ್ಲಿ ರಾಡಿಯಾಟೇಪುಗಳ ನೀರಾ ರಾಡಿ ಹರಡುತ್ತಿದೆ. ಭೂಗತ ಲೋಕಕ್ಕೆ ಕೆಲವರು ಸ್ಪರ್ಧೆ ಒಡ್ಡಿದ್ದರಿಂದ ‘ಸುಪಾರಿ ಜರ್ನಲಿಸಂ’ ಎಂಬ ಪರಿಭಾಷೆಯ ಸುಖಸ್ಪರ್ಶವೂ ಸಿಕ್ಕಿದೆ. ಜಗತ್ತಿನ ಎಲ್ಲ ಪತ್ರಿಕಾಲಯ, ದರ್ಶನಾಲಯಗಳ ಸ್ಟೈಲ್‌ಬುಕ್‌ಗಳಿಗೆ ಹೊಚ್ಚಹೊಸ ಪದಗಳು ದಾಳಿ ಇಡುತ್ತಿವೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಹೋದ ವಾರ ಬಂದಿದ್ದ ‘ನಾರದ ಜಯಂತಿ’ ಸಂದರ್ಭದಲ್ಲಿ, ತ್ರಿಲೋಕ ಸಂಚಾರಿಯಾದ ನಾರದನೇ ‘ಜಗತ್ತಿನ ಮೊದಲ ವರದಿಗಾರ’, ಆದ್ದರಿಂದ ಅಂದೇ ‘ಪತ್ರಿಕೋದ್ಯಮ ದಿವಸ’ ಆಚರಣೆ ಆಗಬೇಕು ಎಂದು ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ಆಗ್ರಹಿಸಿದೆ. ಹೀಗೆ ಮಾಧ್ಯಮದ ಮೇಲೆ ಎಲ್ಲರೂ ಅವರವರಿಗೆ ಒಪ್ಪುವ ಸೈಜುಗಲ್ಲು ಎಸೆಯುತ್ತಿರುವ ಕೆಟ್ಟಕಾಲದಲ್ಲಿ ಈ ಕೇಜ್ರಿವಾಲ್ ಬಂಡೆ ಎತ್ತುವುದೇ? ಪತ್ರಕರ್ತರಿಗೆ ಅಯ್ಯೋ ಅಂದರೆ ಆರು ತಿಂಗಳು ಪಾಪ ಸುತ್ತಿಕೊಳ್ಳುತ್ತದೆ ಎಂದು ಸುತ್ತೋಲೆ ಹೊರಡಿಸುವುದೇ? ಸತ್ಯವಂತರಿಗಿರಲಿ, ಅಸತ್ಯವಂತರಿಗೂ ಇದು ಕಾಲವಲ್ಲ ಎಂದು ಅವರು ಹೂಂಕರಿಸುವುದೇ? ದೊಡ್ಡ ಬಂಡೆ ಎತ್ತಿದರೆ ಅದು ಮೊದಲು ಯಾರ ಮೇಲೆ ಬೀಳುತ್ತದೆ ಎನ್ನುವುದು ಸಣಕಲರಿಗೆ ಗೊತ್ತಿರಬೇಕು!

ನಮ್ಮ ದೇಶದ ರಾಜಕೀಯ ಅಂಗಳದಲ್ಲಿ ಆಮ್ ಆದ್ಮಿ ಪಕ್ಷ ಎನ್ನುವ ಕೂಸು ಹುಟ್ಟಿದಾಗ ಅದನ್ನು ಎತ್ತಿ ಮುದ್ದಾಡಿದ್ದು, ಅದು ಬಿದ್ದಾಗ ಎತ್ತಿ ನಿಲ್ಲಿಸಿದ್ದು, ಬೆನ್ನ ಮೇಲೆ ಏರಿಸಿಕೊಂಡು ಕೂಸುಮರಿ ಆಡಿಸಿದ್ದು ಮಾಧ್ಯಮಗಳೇ. ಈ ಋಣದ ಕಾರಣಕ್ಕೆ ಎಎಪಿ ಮಾಧ್ಯಮವನ್ನು ಟೀಕಿಸಲೇ ಬಾರದು ಎಂದು ಯಾರೂ ಹೇಳುವುದಿಲ್ಲ, ಹೇಳುವುದು ಖಂಡಿತಾ ಸರಿಯಲ್ಲ. ಆದರೆ ಆಮ್ ಆದ್ಮಿ ಪಕ್ಷ ಮತ್ತು ಅದರ ಸರ್ಕಾರದ ನಡೆನುಡಿಗಳನ್ನು ಕುರಿತು ಮಾಧ್ಯಮ ಚಕಾರ ಎತ್ತಬಾರದು ಎಂದು ಹೇಳುವುದು ಎಷ್ಟು ಸರಿ?

‘ಆಮ್ ಆದ್ಮಿ ಸರ್ಕಾರ, ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳ ಹೆಸರಿಗೆ ಮಸಿ ಬಳಿಯುವಂತಹ ಸುದ್ದಿ ಪ್ರಕಟಣೆಗಳು ಮತ್ತು ದೃಶ್ಯ ಪ್ರಸಾರಗಳು ಮಾಧ್ಯಮಗಳಲ್ಲಿ ಕಂಡುಬಂದರೆ, ಕೂಡಲೇ ಗೃಹ ಖಾತೆಯ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿ. ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಅಧಿಕಾರಿಗಳಿಗೆ ದೆಹಲಿ ಸರ್ಕಾರದ ವಾರ್ತಾ ಇಲಾಖೆಯಿಂದ ಸುತ್ತೋಲೆ ಬಂದಿದೆ. ಪ್ರಕಟವಾದ, ಪ್ರಸಾರವಾದ ಸುದ್ದಿ ವಿವರಗಳಲ್ಲಿ ಸರ್ಕಾರದ ಮಾನ ಹಾನಿ ಮಾಡುವಂಥ ಅಂಶಗಳಿದ್ದರೆ, ಸುದ್ದಿಯಲ್ಲಿ ತಪ್ಪುಗಳಿದ್ದರೆ, ಯಾರ ಬಗ್ಗೆ ಸುದ್ದಿ ಪ್ರಸಾರವಾಯಿತೋ ಅವರ ಮರ್ಯಾದೆಗೆ ಧಕ್ಕೆ ಆಗಿದ್ದರೆ, ಆರೋಪ ಆಪಾದನೆಗಳನ್ನು ಮಾಡಿದ್ದರೆ– ಇಂಥ ಎಲ್ಲ ವಿವರಗಳನ್ನೂ ಒಳಗೊಂಡಂತೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಉನ್ನತಾಧಿಕಾರಿಯ ಸಲಹೆ ಪಡೆಯುತ್ತಾರೆ. ‘ಮಾನಹಾನಿ’ ಆಗಿದೆ ಎಂದಾದರೆ, ಕಾನೂನು ಇಲಾಖೆಯ ಅನುಮತಿ ಪಡೆದು ಗೃಹ ಇಲಾಖೆ ದೂರು ದಾಖಲಿಸಲು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ತಲುಪಿಸುತ್ತದೆ ಎಂದು ಸುತ್ತೋಲೆ ವಿವರಿಸಿದೆ.

ಈ ಸುತ್ತೋಲೆಗೆ ಕೆಲವೇ ದಿನಗಳ ಮೊದಲು ಎಲ್ಲ ಸುದ್ದಿ ವಾಹಿನಿಗಳ ಮೇಲೆ ನಿಗಾ ಇಡುವಂತೆ ದೆಹಲಿ ಸರ್ಕಾರ ಆದೇಶಿಸಿತ್ತು. ವಿಪರ್ಯಾಸವೆಂದರೆ, ಬೇರೆ ರಾಜಕಾರಣಿಗಳ ಮೇಲೇ ‘ಬಾಯಿಗೆ ಬಂದಂತೆ’ ಆರೋಪ ಮಾಡಿ ಮಾಧ್ಯಮಗಳ ಮುಂದೆ ಮಾತನಾಡಿದ್ದಕ್ಕಾಗಿಯೇ ತಮ್ಮ ಮೇಲೆ ಹೇರಲಾದ ಎರಡು ‘ಮಾನ ಹಾನಿ’ ಪ್ರಕರಣಗಳಲ್ಲಿ, ಕೇಜ್ರಿವಾಲ್ ಅವರೇ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡುತ್ತಿದ್ದಾರೆ. ಈಗ ಯಾರಾದರೂ ನಮ್ಮ ವಿರುದ್ಧ ಬಾಯಿ ತೆರೆದರೆ ‘ಮಾನ ಹಾನಿ’ ದಾವೆ ಹಾಕುತ್ತೇನೆ ಎಂದು ಮಾಧ್ಯಮಗಳಿಗೆ ಅವರೇ ಬೆದರಿಸುತ್ತಿದ್ದಾರೆ. ಆದರೆ ವಿಕ್ರಮ ರಾಜ, ಸಿಂಹಾಸನದ ಮೇಲೆ ಕುಳಿತ ಮತ್ತು ಇಳಿದ ಸಂದರ್ಭಕ್ಕೆ ತಕ್ಕಂತೆ ‘ಮಾನ ಹಾನಿ’ ಯ ವ್ಯಾಖ್ಯಾನ ಬದಲಾಗಬಾರದು.

‘ಜನ ನಮ್ಮನ್ನು ಇಷ್ಟ ಪಡುತ್ತಿದ್ದಾರೆ, ಆದರೆ ನಮ್ಮನ್ನು ಮುಗಿಸಲು ಮಾಧ್ಯಮಗಳು ಕಾಂಟ್ರಾಕ್ಟ್ ಪಡೆದಿವೆ’, ‘ನಮ್ಮ ಪಕ್ಷವನ್ನು ನಾಶ ಮಾಡಲು ಏನೇನು ಬೇಕೋ ಅದನ್ನೆಲ್ಲಾ ಮಾಧ್ಯಮಗಳು ಮಾಡುತ್ತಿವೆ. ಆದರೆ ಜನಕ್ಕೆ ಬುದ್ಧಿ ಇದೆ. ಮಾಧ್ಯಮಗಳು ಎಷ್ಟೆಷ್ಟು ಕೆಟ್ಟದಾಗಿ ನಮ್ಮನ್ನು ಬಿಂಬಿಸುತ್ತವೆಯೋ ಅಷ್ಟಷ್ಟು ಹೆಚ್ಚು ಜನಬೆಂಬಲ ನಮಗೆ ಸಿಗುತ್ತದೆ. ಈ ಬಾರಿ ನಾವು 67 ಸ್ಥಾನಗಳನ್ನು ಗೆದ್ದಿದ್ದೇವೆ. ಮುಂದಿನ ಬಾರಿ 70 ಗೆಲ್ಲುತ್ತೇವೆ’, ‘ಮಾಧ್ಯಮಗಳು ವಿರೋಧ ಪಕ್ಷಗಳ ಜೊತೆಗಿವೆ, ಆದರೆ ಜನ ನಮ್ಮ ಜೊತೆಗಿದ್ದಾರೆ. ನಾವು ಇತರ ರಾಜಕೀಯ ಪಕ್ಷಗಳನ್ನು ಬಯಲಿಗೆಳೆದಂತೆ, ಮಾಧ್ಯಮಗಳನ್ನೂ ಬಯಲಿಗೆಳೆಯುತ್ತೇವೆ’– ಇದು ದೆಹಲಿಯ ಮುಖ್ಯಮಂತ್ರಿಗಳಿಗೂ ಮಾಧ್ಯಮಗಳಿಗೂ ಇರುವ ಬಾಂಧವ್ಯ. ಅವರ ಕೆಲವು ಆಣಿಮುತ್ತುಗಳು ಸರ್ವಾಧಿಕಾರದ ಕಪ್ಪೆಚಿಪ್ಪಿನಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ.

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಎರಡೂ ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಎಂದು ಗಮನಿಸುವುದು ಮಾಧ್ಯಮರಂಗದ ಮೂಲಕೆಲಸ. ಈ ಮೂವರಲ್ಲಿ ಯಾರು ಅಡ್ಡದಾರಿ ಹಿಡಿದರೂ ಶಿಕ್ಷಿಸುವುದು ನ್ಯಾಯಾಂಗದ ಜವಾಬ್ದಾರಿ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮರಂಗ– ಈ ನಾಲ್ಕೂ ರಾಜ್ಯಾಂಗದ ಅನುಸಾರವೇ ಕೆಲಸ ಮಾಡಬೇಕು. ಆದರೆ ಶಾಸಕಾಂಗ, ಕಾರ್ಯಾಂಗಗಳಿಗೆ ಸದಾ ಮಾಧ್ಯಮರಂಗದ ಬಗ್ಗೆ ಅಸಹನೆ ಮತ್ತು ಸಿಟ್ಟು. ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ಪ್ರತಿನಿಧಿಗಳೂ ಇಷ್ಟಪಡುವುದಿಲ್ಲ, ಸರ್ವಾಧಿಕಾರಿಗಳಂತೂ ಇಷ್ಟಪಡುವುದೇ ಇಲ್ಲ. ಯಾವ ಪಕ್ಷವಾದರೂ ಆಡಳಿತ ನಡೆಸಲಿ, ಮಾಧ್ಯಮ ರಂಗ ಆ ಆಡಳಿತಕ್ಕೆ ‘ಶಾಶ್ವತ ವಿರೋಧ ಪಕ್ಷ’ ದಂತೆ ಇರುವುದೇ ಹೆಚ್ಚು. ಆದ್ದರಿಂದಲೇ ಪತ್ರಿಕೆಗಳಿಗೆ ‘ಸರಿಯಾದ ಪಾಠ’ ಕಲಿಸಬೇಕೆಂದು ಹಲ್ಲು ಕಡಿಯದ ರಾಜಕಾರಣಿ ಈ ಜಗತ್ತಿನಲ್ಲಿ ಇಲ್ಲ.

ಯಾವ ದೇಶದ ಪತ್ರಿಕಾರಂಗದ ಇತಿಹಾಸ ನೋಡಿದರೂ ಆಳುವವರೊಂದಿಗೆ ಅದರ ಸಂಘರ್ಷ ತಪ್ಪಿದ್ದಲ್ಲ. ಬ್ರಿಟಿಷರು ನಮ್ಮ ದೇಶಕ್ಕೆ ಬರುವಾಗ ಪತ್ರಿಕೆಗಳನ್ನು ಹದ್ದುಬಸ್ತಿನಲ್ಲಿಡುವ ಕರಾಳ ಕಾಯಿದೆಗಳನ್ನೂ ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದರು. ರಾಷ್ಟ್ರೀಯ ಚಳವಳಿಯುದ್ದಕ್ಕೂ ಬ್ರಿಟಿಷರನ್ನು ವಿರೋಧಿಸಿದ ಪತ್ರಿಕೆಗಳು ಮತ್ತು ಅವುಗಳ ಸಂಪಾದಕರು ಅನುಭವಿಸಿದ ಕಷ್ಟನಷ್ಟಗಳು ಅಷ್ಟಿಷ್ಟಲ್ಲ. ಬ್ರಿಟಿಷ್ ಆಡಳಿತಗಾರರು ಅದೆಷ್ಟೇ ದಮನ ಮಾಡಿದರೂ ಗಾಂಧೀಜಿ ಸೇರಿದಂತೆ ರಾಷ್ಟ್ರೀಯ ಚಳವಳಿಯ ಎಲ್ಲಾ ನಾಯಕರೂ ಜನರಿಗೆ ತಿಳಿಸಿ ಹೇಳಬೇಕಾದುದನ್ನು ಪತ್ರಿಕೆಗಳ ಮೂಲಕವೂ ಹೇಳಿದರು. ಹಾಗೆ ನೋಡಿದರೆ ಭಾರತದ ಎಲ್ಲ ಭಾಷೆಗಳಲ್ಲಿ ಪತ್ರಿಕೋದ್ಯಮ ಭರದಿಂದ ಬೆಳೆದದ್ದು ಬ್ರಿಟಿಷರನ್ನು ವಿರೋಧಿಸಿದ ರಾಷ್ಟ್ರೀಯ ಚಳವಳಿಯ ಕೆಂಡದ ಮಡಿಲೊಳಗೆ. ಹಾಗಿರುವಾಗ ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಸರ್ಕಾರದ ಆಡಳಿತ ನಡೆಸುವ ರಾಜಕಾರಣಿಗಳ ಮೇಲೆ ಪತ್ರಿಕೆಗಳು, ಸುದ್ದಿ ವಾಹಿನಿಗಳು ಟೀಕೆ ಮಾಡಬಾರದೆಂದರೆ ಹೇಗೆ?

ಶಾಸಕರು, ಸಂಸತ್ ಸದಸ್ಯರು ತಾವು ಮಾತ್ರ ಜನಪ್ರತಿನಿಧಿಗಳು ಎಂದು ಭಾವಿಸಬಾರದು; ಪತ್ರಕರ್ತರೂ ನಿಜವಾಗಿ ಜನಪ್ರತಿನಿಧಿಗಳೇ. ಆದರೆ ಯಾವ ರಾಜಕಾರಣಿಯೂ ಇದನ್ನು ಒಪ್ಪುವುದಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದೊಡನೆ ಇಂದಿರಾ ಗಾಂಧಿ ಮೊದಲು ಪತ್ರಿಕೆಗಳಿಗೆ ಸೆನ್ಸಾರ್‌ಶಿಪ್ ಹೇರಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಆರ್. ಗುಂಡೂರಾವ್ ಪತ್ರಕರ್ತರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕೆಂದು ಹೇಳಿದ್ದರು. ಜಯಲಲಿತಾ ಒತ್ತಾಯದ ಮೇರೆಗೆ ತಮಿಳುನಾಡಿನ ವಿಧಾನಸಭೆ ಪತ್ರಿಕೆಗಳ ಸಂಪಾದಕರನ್ನು ಸೆರೆಮನೆಗೆ ಅಟ್ಟಬೇಕೆಂದು ನಿರ್ಧರಿಸಿತ್ತು. ಆಂಧ್ರ ಪ್ರದೇಶದಲ್ಲಿ ಪತ್ರಿಕೆ ಮತ್ತು ಸುದ್ದಿವಾಹಿನಿಯ ಮಾಲೀಕರು ಸರ್ಕಾರದ ಕಿರುಕುಳಕ್ಕೆ ಒಳಗಾಗಿದ್ದರು. ನವಮಾಧ್ಯಮದಲ್ಲಿ ಟೀಕೆ ಮಾಡಿದ ಯುವತಿಯರ ಮೇಲೆ ಮಹಾರಾಷ್ಟ್ರ ಸರ್ಕಾರ ಕೆಂಗಣ್ಣು ಬೀರಿತ್ತು. ಸ್ವತಂತ್ರ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಹಿಂದಿನ ಕಥೆಗಳು ಬಿಡಿ, ‘ನಾವು ರಾಜಕಾರಣಿಗಳು ನಮ್ಮಿಷ್ಟದಂತೆ ಕಚ್ಚಾಡೋಣ, ನಮ್ಮಿಂದ ಸುದ್ದಿ ವಾಹಿನಿಗಳ ಟಿಆರ್‌ಪಿ ಹೆಚ್ಚಲಿ’ ಎಂದು ಒಬ್ಬ ರಾಜಕಾರಣಿ ತಮಾಷೆ ಮಾಡಿದ್ದರು. ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನರೇಂದ್ರ ಮೋದಿ ಅವರೇ ‘ಖರೀದಿ’ ಎಂದು ದೂಷಿಸಿದ್ದರು.

ಪತ್ರಿಕೆಗಳನ್ನು ಗೇಲಿ ಮಾಡುವುದು ಒಂದು ಅರ್ಥದಲ್ಲಿ ಪ್ರಜೆಗಳನ್ನು ಮತ್ತು ಪ್ರಜಾಪ್ರಭುತ್ವವನ್ನು ಗೇಲಿ ಮಾಡಿದಂತೆ ಎನ್ನುವುದು ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಮಾಧ್ಯಮದ ಟೀಕೆ ಮಾಡುವುದು ಬೇರೆ, ಅದಕ್ಕೆ ಬೆದರಿಕೆ ಹಾಕುವುದು ಬೇರೆ. ಮಾಧ್ಯಮದ ಮೇಲೆ ಹಿಡಿತ ಸಾಧಿಸುವ ಬಯಕೆ, ನಿರಂಕುಶ ಪ್ರವೃತ್ತಿ ಮತ್ತು ಸರ್ವಾಧಿಕಾರಿ ಮನೋಭಾವದ ಮುಖ್ಯ ಲಕ್ಷಣ. ಇದಕ್ಕೆ ಜಗತ್ತಿನಲ್ಲಿ ಎಲ್ಲಿ ಉದಾಹರಣೆ ಸಿಗುತ್ತಿಲ್ಲ? ಜಗತ್ತಿನ ಎಲ್ಲ ದೇಶಗಳಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಕಾಯುತ್ತಿರುವ ‘ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್’ ಎಂಬ ಜಾಗತಿಕ ಸಂಘಟನೆ ಇತ್ತೀಚೆಗೆ ಪ್ರಕಟಿಸಿರುವ ‘2015 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಿ’ ಇದನ್ನೇ ಎತ್ತಿ ಹೇಳುತ್ತಿದೆ. ಮಾಧ್ಯಮದ ಬಹುತ್ವ ಮತ್ತು ಸ್ವಾತಂತ್ರ್ಯ, ಪತ್ರಕರ್ತರ ಸುರಕ್ಷತೆ, ಮಾಧ್ಯಮದ ಕಾರ್ಯನಿರ್ವಹಣೆಗೆ ಅಗತ್ಯವಾದ ಶಾಸನಿಕ, ಸಾಂಸ್ಥಿಕ ಬೆಂಬಲ ಇವುಗಳನ್ನು ಕುರಿತು ಅದು ನಿಖರವಾಗಿ ಅಧ್ಯಯನ ಮಾಡುತ್ತದೆ. 2014 ರಲ್ಲಿ ಸುದ್ದಿ ಸಂಗ್ರಹ ಸ್ವಾತಂತ್ರ್ಯಕ್ಕೆ ವಿಪರೀತ ಧಕ್ಕೆ ಒದಗಿದೆ, ಇದು ಆತಂಕ ಪಡಬೇಕಾದ ವಿಷಯ ಎಂದು ಅದು ಹೇಳಿದೆ. ಪರಸ್ಪರ ಕಾದಾಡುವ ದೇಶಗಳು ಮಾಧ್ಯಮ ದಮನದಲ್ಲಿ ಒಂದಾಗುತ್ತವೆ. ಏಕೆಂದರೆ ಸುದ್ದಿ ನಿಗ್ರಹವೇ ಯುದ್ಧದಲ್ಲಿ ಒಂದು ಪ್ರಮುಖ ಅಸ್ತ್ರ ಎಂದು ಅವು ನಂಬುತ್ತವೆ. ಪ್ರಜಾಪ್ರಭುತ್ವಕ್ಕೆ ಬೇಡವಾದ ಸುದ್ದಿ ಸ್ವಾತಂತ್ರ್ಯ ಇನ್ನು ಮೂಲಭೂತವಾದಕ್ಕೆ ಬೇಕಾಗುವುದೇ ಇಲ್ಲ. ಒಬ್ಬರು ಬಾಯಿ ಮುಚ್ಚಿಸಿದರೆ, ಇನ್ನೊಬ್ಬರು ತಲೆ ತೆಗೆಯುತ್ತಾರೆ.

ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಹಾಕಿರುವ ಬೆದರಿಕೆಯನ್ನು ಹಗುರವಾಗಿ ನೋಡಬಾರದು. ಇಂದು ಮಾಧ್ಯಮಗಳು ಪರಮ ಪವಿತ್ರವಾಗಿ ಉಳಿದಿಲ್ಲ ಎನ್ನುವುದು ನೂರಕ್ಕೆ ನೂರು ಸತ್ಯ. ಆದರೆ ‘ಕಾಸಿಗಾಗಿ ಸುದ್ದಿ ಪ್ರಕಟಿಸುವುದಿಲ್ಲ’ ಎಂದು ಘೋಷಿಸುವ ಧೈರ್ಯ ಮತ್ತು ಬಾಯಿ ಮುಚ್ಚಿದರೆ ಮೂಗಿನಲ್ಲಿ ಮಾತನಾಡುವ ಬದ್ಧತೆ ಇನ್ನೂ ಅಲ್ಲಿ ಉಳಿದಿವೆ ಎನ್ನುವುದನ್ನು ಮರೆಯಬಾರದು.
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.