ಭಾರತದ ಯಾವ ಪ್ರಧಾನಮಂತ್ರಿಗೂ ಇದನ್ನು ಸಾಧಿಸಲು ಆಗಿರಲಿಲ್ಲ. ಕಾಲದ ಓಟದ ಜೊತೆ ಹೀಗೆ ದಾಪುಗಾಲು ಹಾಕಲು ಯಾರಿಗೂ ಸಾಧ್ಯವಾಗಿರಲಿಲ್ಲ. ನಿಜಕ್ಕೂ ನರೇಂದ್ರ ಮೋದಿ ಅವರ ಬೆರಳ ತುದಿಯಲ್ಲಿ ಭೂಮಂಡಲವಿದೆ. ಏಕೆಂದರೆ ಅವರ ಬೆರಳು ಮೊಬೈಲ್ ಫೋನ್ ಮೇಲೆ ಸದಾ ಏನನ್ನಾದರೂ ಒತ್ತುತ್ತಿರುತ್ತದೆ. ಎಲ್ಲಿ ಏನು ನಡೆದರೂ ಅದಕ್ಕೆ ಮೋದಿ ಏನು ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ತಿಳಿಯಲು ಈಗ ಜನರಿಗೆ ತುಂಬಾ ಕುತೂಹಲ. ಟ್ವಿಟರ್ನಲ್ಲಿ ಅವರ ಚಿಲಿಪಿಲಿ ನಿರಂತರವಾಗಿ ಇರುತ್ತದೆ. ಫೇಸ್ಬುಕ್ನಲ್ಲಿ ಒಂದು ವರ್ಷದಲ್ಲಿ ಒಂದು ಸಾವಿರಕ್ಕೆ ಹತ್ತಿರ ಪೋಸ್ಟ್ಗಳನ್ನು ಅವರು ಹಾಕಿದ್ದಾರೆ.

ಅದರಲ್ಲಿ ಅವರಿಗೆ ಒಂದೂಕಾಲು ಕೋಟಿ ಅಭಿಮಾನಿಗಳಿದ್ದಾರೆ. ಪತ್ರಿಕೆಗಳು ಪತ್ತೆ ಮಾಡಿರುವಂತೆ ಯೂಟ್ಯೂಬ್, ಫ್ಲಿಕರ್, ಇನ್ಸ್ಟಾಗ್ರಾಂ, ಲಿಂಕ್ಡ್ಇನ್ ಇತ್ಯಾದಿ ಏನೇನು ಸಂಪರ್ಕ ನೆಲೆಗಳು ಇವೆಯೋ ಅವುಗಳಲ್ಲೆಲ್ಲಾ ಅವರಿದ್ದಾರೆ, ಅವರ ವೆಬ್ಸೈಟ್ಗಳು ತುಂಬಿ ತುಳುಕುತ್ತಿವೆ.

ಭೂಮಿ ಸಾಲದೆಂಬಂತೆ ವ್ಯೋಮ ಮಂಡಲದಲ್ಲೂ ಅಂದರೆ, ಸೌಂಡ್ಕ್ಲೌಡ್ನಲ್ಲೂ ಅವರ ಮಾತು ತುಂಬಿಕೊಂಡಿದೆ. ಒಟ್ಟಿನಲ್ಲಿ ಯಾವ್ಯಾವ ಪರದೆಗಳಿವೆಯೋ ಅದರ ಮೇಲೆಲ್ಲಾ ಅವರಿದ್ದಾರೆ ಅಥವಾ ಅವರು ಇರುವಂತೆ ಅವರ ಆಪ್ತ ಕಚೇರಿಯಲ್ಲಿ ಪರದೆ ಹಿಂದಿರುವ ಅವರ ‘ಟಿಟಿ’– ಟೆಕ್ನಿಕಲ್ ಟೀಮ್ ನೋಡಿಕೊಳ್ಳುತ್ತದೆ.

ನಾನು ಪ್ರಧಾನಮಂತ್ರಿಗೇ ಈ ವಿಚಾರ ಹೇಳಬೇಕು ಎಂದು ದೇಶದ ಪ್ರಜೆಗಳಿಗೆ ಅನ್ನಿಸಿದರೆ ಈಗ ಹೇಳುವುದು ಸುಲಭ. ಪ್ರಜೆಗಳಿಗೆ ಹೇಳುವುದೂ ಪ್ರಧಾನಮಂತ್ರಿಗೆ ಸುಲಭ. ಗ್ಯಾಜೆಟ್, ಕಂಪ್ಯೂಟರ್, ಇಂಟರ್ನೆಟ್ ಇಲ್ಲದವರು, ಓದುಬರಹವಿಲ್ಲದ ಅನಕ್ಷರಸ್ಥರು ಕೂಡ ರೇಡಿಯೋದಲ್ಲಿ ಅವರ ‘ಮನ್ ಕೀ ಬಾತ್’ ಕೇಳಬಹುದು. ಸಂಪರ್ಕ ಕ್ರಾಂತಿಯನ್ನು ಸಂಪೂರ್ಣವಾಗಿ ಅಪ್ಪಿಕೊಂಡಿರುವ ಸಾಮಾಜಿಕ ತಾಣಗಳ ಜಾಣ ನರೇಂದ್ರ ಮೋದಿ, ಬಡಬಡಿಸುವ ವಾಹಿನಿಗಳು, ಹಳಹಳಿಸುವ ಪತ್ರಿಕೆಗಳನ್ನು ಮುಲಾಜಿಲ್ಲದೆ ಕಸದ ಬುಟ್ಟಿಗೆ ಎಸೆದಿದ್ದಾರೆ. ಸಮೂಹ ಮಾಧ್ಯಮದಲ್ಲಿ ಯಾರ ಕೈಗೂ ಸಿಗದ ಅವರು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಬೆರಳಿಗೂ ಸಿಗುತ್ತಾರೆ!

ಹಿಂದಿನ ಪ್ರಧಾನಮಂತ್ರಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ತಮ್ಮನ್ನು ನೋಡಬಂದ ಜನರತ್ತ ಎಡೆಬಿಡದೆ ಕೈಬೀಸುತ್ತಿದ್ದರು. ನೆರೆದ ಜನರ ನೆನಪಿನ ಕೋಶಕ್ಕೆ ಅದು ಸೇರುತ್ತಿತ್ತು. ಆದರೆ ನರೇಂದ್ರ ಮೋದಿ ಅವರ ಕೈಗಳು ಅತ್ಯಾಧುನಿಕ ಮೊಬೈಲ್ ಫೋನ್ಗಳನ್ನು ಹಿಡಿದು ‘ಸೆಲ್ಫಿ’ ತೆಗೆಯುತ್ತವೆ. ಈ ‘ಸೆಲ್ಫಿ’ಗೆ ಜಗತ್ತಿನ ನಾಳೆಯ ಕೋಶಕ್ಕೆ ಸೇರುವ ಆಸೆ ಮಾತ್ರ ಇದೆ.

ದೇಶದಲ್ಲಿ ಯಾವ ರಾಜ್ಯದಲ್ಲಿ ವೇದಿಕೆ ಮೇಲಿರಲಿ, ವಿದೇಶದಲ್ಲಿ ಯಾವ ನಗರದಲ್ಲಿರಲಿ ನರೇಂದ್ರ ಮೋದಿ ಸದಾ ಆನ್ಲೈನ್ ಇರುತ್ತಾರೆ. ‘ಸಾಮಾಜಿಕ ಮಾಧ್ಯಮ ರಾಜಕಾರಣಿ’, ‘ನಿರಂತರ ಆನ್ಲೈನ್ ಪ್ರಧಾನಿ’ ಎಂದೆಲ್ಲಾ ಅವರು ಪ್ರಶಂಸೆ ಪಡೆಯುತ್ತಿದ್ದಾರೆ. ಈಗ ಆನ್ಲೈನ್ ಇದ್ದು ಕೋಟಿ ಕೋಟಿ ಜನರೊಂದಿಗೆ ಅವರು ಸುಲಭವಾಗಿ ‘ಕನೆಕ್ಟ್’ ಆಗುತ್ತಾರೆ, ಆದರೆ ಅವರೊಂದಿಗೆ ‘ಕನೆಕ್ಟ್’ ಆಗಲಾರದ ಜನಕೋಟಿಯೇ ಅಪಾರವಾಗಿದೆ. ಅವರನ್ನು ಮುಟ್ಟುವ, ಅವರನ್ನು ತಲುಪುವ ಸೇತುವೆ ಕಟ್ಟುವ ಕೆಲಸ ಇನ್ನೂ ಆರಂಭವಾಗಬೇಕಾಗಿದೆ.

ನರೇಂದ್ರ ಮೋದಿ ಸದಾ ‘ಆನ್ಲೈನ್’ ಇರುತ್ತಾರೆ ಅನ್ನುವುದೇ ಅವರನ್ನು ಕುರಿತ ಒಂದು ಅರ್ಥಗರ್ಭಿತ ಸಂದೇಶ. ಅದು ಸಂಪರ್ಕಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅವರ ಬದುಕಿನ ಅನೇಕ ಸಂಗತಿಗಳಿಗೆ ಅದು ಅನ್ವಯಿಸುತ್ತದೆ. ವಿದೇಶಿ ಉಡುಪಿಗೆ ಮಾರುಹೋಗಿರುವ ಹೊಸಕಾಲದ ಯುವಕರು ‘ಭಾರತೀಯತೆ’ ಬಗ್ಗೆ ಎಚ್ಚೆತ್ತುಕೊಳ್ಳುವ ಹಾಗೆ ಅವರು ವೇಷಭೂಷಣದಲ್ಲೂ ಸಮಕಾಲೀನ ಸ್ಪಂದನೆಯಲ್ಲಿ ಸದಾ ಆನ್ಲೈನ್ ಇರುತ್ತಾರೆ.

ನೆಹರೂ ಮನೆತನದ ಫ್ಯಾಷನ್ಪ್ರೇಮವನ್ನು ನಾಚಿಸುವ ಹಾಗೆ ಹಲವು ಬಣ್ಣ, ಹಲವು ವಿನ್ಯಾಸಗಳ ಉಡುಪು ತೊಡುವ ಸೊಗಸುಗಾರ ಪ್ರಧಾನಿಯಾಗಿ ಅವರು ಕಂಗೊಳಿಸಿದರು. ಆದರೆ ಅದೆಷ್ಟು ಅತಿರೇಕ ಆಯಿತೆಂದರೆ ಅವರು ‘ನಾಮ್ ಧಾರಿ’ ಆಗಲು ತೊಟ್ಟುಕೊಂಡ ‘ನಾಮ್ ಕ ವಸ್ತ್ರ’ ವೇ ದೆಹಲಿ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಯನ್ನು ಬೆತ್ತಲೆ ನಿಲ್ಲಿಸಿತು ಎಂಬ ಆರೋಪವನ್ನೂ ತೊಟ್ಟುಕೊಳ್ಳಬೇಕಾಯಿತು.

2014 ರ ಚುನಾವಣೆಯ ಪ್ರಚಾರ ಮತ್ತು ದಿಗ್ವಿಜಯ ಭಾರತೀಯ ಜನತಾ ಪಕ್ಷದ್ದೋ ನರೇಂದ್ರ ಮೋದಿ ಅವರದೋ? ಈಗ ಸರ್ಕಾರ ಅವರದೋ ಪಕ್ಷದ್ದೋ? ಹಿಂದೆ ‘ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ’ ಎಂದು ಡಿ.ಕೆ. ಬರುವ ಎಂಬ ಭಟ್ಟಂಗಿ ಕೊಟ್ಟಿದ್ದ ಕುಖ್ಯಾತ ಘೋಷಣೆ ಈಗ ಮತ್ತೆ ಕೇಳಿ ಬರುವ ಸೂಚನೆ ಇದೆಯಲ್ಲ? ಮೋದಿ ಅವರೇನೋ ಸಾರ್ವಜನಿಕವಾಗಿ ಸದಾ ಕಾಣುತ್ತ ಗೋಚರತೆಯಲ್ಲೂ ಸದಾ ಆನ್ಲೈನ್ ಇರುತ್ತಾರೆ.

ಆದರೆ ಅಮಿತ್ ಷಾ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಮನೋಹರ ಪರಿಕ್ಕರ್ ಮಾತ್ರ ಎಲ್ಲೋ ಅಲ್ಲಲ್ಲಿ ಕೊಂಚ ಕಾಣುವುದು ಬಿಟ್ಟರೆ, ಸಂಪುಟದ ಮಿಕ್ಕೆಲ್ಲರೂ ಎಲ್ಲೂ ಕಾಣಿಸದೆ ಸದಾ ‘ಆಫ್ಲೈನ್’ ಇರುತ್ತಾರೆ ಎಂಬ ದೂರು ಅವರಿಗೆ ತಲುಪಿಸುವುದು ಹೇಗೆ? ಮಾಹಿತಿ ಕ್ರಾಂತಿಯ ಈ ದಿನಗಳಲ್ಲೂ ಮಂತ್ರಿಗಳಲ್ಲಿ ಕೆಲವರ ಹೆಸರೇ ಯಾರಿಗೂ ಗೊತ್ತಿಲ್ಲ ಎಂದರೆ ಹೇಗೆ? ಸಚಿವ ಸಂಪುಟದ ಸದಸ್ಯರ ಪಟ್ಟಿಯನ್ನು ಬರೀ ನೆಟ್ನಲ್ಲಿ ನೋಡಬಹುದು ಎಂದರೆ ಹೇಗೆ? ಪ್ರಧಾನಮಂತ್ರಿಗಳ ಕಾರ್ಯಾಲಯ ಮಾತ್ರ ಸರ್ವಶಕ್ತವಾಗಿ ಸರ್ವವ್ಯಾಪಿಯಾಗಿ ‘ಆನ್ಲೈನ್’ ಇದ್ದರೆ ಸಾಕೇ?

ಕೈಯಲ್ಲಿ ಮೊಬೈಲ್ ಹಿಡಿದಿರುವ ನರೇಂದ್ರ ಮೋದಿ ಇಡೀ ಭೂಮಂಡಲವನ್ನೇ ಕರಸ್ಥಲ ಲಿಂಗವನ್ನಾಗಿ ಮಾಡಿಕೊಂಡಿದ್ದಾರೆ; ಆದರೂ ಅಧಿಕಾರ ಹಿಡಿದ ಹನ್ನೆರಡು ತಿಂಗಳಲ್ಲಿ ಹದಿನೆಂಟು ದೇಶಗಳ ಪ್ರವಾಸ ಮಾಡಿದ್ದಾರೆ. ಮೋದಿ ವಿಶ್ವ ಸಂಚಾರದಲ್ಲೂ ಸದಾ ‘ಆನ್ಲೈನ್’ ಇರುತ್ತಾರೆ, ವಿಶ್ವದ ನಾಯಕರನ್ನು ಓಲೈಸುವುದರಲ್ಲಿ ನಿರತರಾಗಿರುವ ಮತ್ತು ಅನಿವಾಸಿ ಭಾರತೀಯರನ್ನು ಮೆಚ್ಚಿಸುತ್ತಿರುವ ಅವರೊಬ್ಬ ಅನಿವಾಸಿ ಪ್ರಧಾನಿ ಎಂದು ಟೀಕೆ ಮಾಡಬಹುದು. ವಿದೇಶ ಪ್ರವಾಸಗಳ ನಡುವೆ ಅವರು ಭಾರತಕ್ಕೂ ಅಲ್ಪಕಾಲದ ಭೇಟಿಗೆ ಬರುತ್ತಾರೆ ಎಂದು ತಮಾಷೆ ಮಾಡಬಹುದು. ವಿದೇಶಗಳಲ್ಲಿ ಪ್ರಚಾರ, ಪ್ರವಾಸಗಳು ಸಾಕು ಸ್ವಾಮಿ, ನಿಮ್ಮ ‘ಘರ್ವಾಪಸಿ’ ಆಗಲಿ ಎಂದು ಲೇವಡಿ ಮಾಡಬಹುದು. ಆದರೆ ಇಂಥ ಮಾತುಗಳು ಯಾರಿಗೂ ಶೋಭೆ ತರುವುದಿಲ್ಲ.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರೇ ಹೋಂಮೇಕರ್ ತರಹ ಮನೆಯಲ್ಲಿ ಕೂತಿರಲಿಲ್ಲ. ಇನ್ನು ಪ್ರಧಾನಮಂತ್ರಿಗಳು ಅಂದ ಮೇಲೆ ವಿಶ್ವ ಸಂಚಾರ ಮಾಡಲೇಬೇಕು. ಅವರು ಬರೀ ಲೋಕಲ್ ಅಲ್ಲ, ಗ್ಲೋಕಲ್ ಆಗಿಯೂ ಇರಬೇಕಾಗುತ್ತದೆ. ಆದರೆ ವಿದೇಶ ಪ್ರವಾಸ ಮಾಡುವಾಗ ನಾಲ್ಕು ದೇಶಗಳಲ್ಲಿ ನಮ್ಮ ಭಾರತದ ಹಿಂದಿನ ಸರ್ಕಾರಗಳನ್ನು ಹೀಗಳೆಯುವಾಗ, ‘ನಮಗೆ ಭಾರತದಲ್ಲಿ ಹುಟ್ಟಿದ್ದೇವೆ ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆ ಆಗುತ್ತಿತ್ತು’ ಎಂದು ಹೀನೈಸುವಾಗ, ಮೋದಿ ಅವರ ಚುರುಕು ಬುದ್ಧಿ ಮತ್ತು ದೇಶಪ್ರೇಮ ಅದೇಕೆ ‘ಆಫ್ಲೈನ್’ ಆಗಿತ್ತೋ ತಿಳಿಯದು.

ಅಭಿವೃದ್ಧಿಯನ್ನೇ ಮುಂದಿಟ್ಟು ಹಿಂದುತ್ವವನ್ನು ಹಿಂದಿಟ್ಟ ಪಕ್ಷದ ಪ್ರಚಾರ ಮತ್ತು ಅದು ತಂದ ಬಹುಮತದ ಸರ್ಕಾರ, ಆ ದಿಸೆಯಲ್ಲಿ ಸದಾ ‘ಆನ್ಲೈನ್’ ಇರುತ್ತವೆ ಎಂದು ಅನೇಕರು ಭಾವಿಸಿದ್ದರು. ಆದರೆ ನಿರೀಕ್ಷೆಗಳಿರುವುದೇ ಕರಗಿ ನಿರಾಶೆಗಳಾಗುವುದಕ್ಕೆ. ಹಿಂದುತ್ವದ ಕೇಸರಿ ಕಾರ್ಪೆಟ್ ಮೇಲೆ ಅಭಿವೃದ್ಧಿ ಎಂಬ ಸುಂದರಿಯನ್ನು ಕರೆತರುತ್ತೇವೆ ಎಂಬ ಸಂದೇಶ ಆ ಅನೇಕರ ನಿರೀಕ್ಷೆಗಳನ್ನು ‘ಆಫ್ಲೈನ್’ ಮಾಡಿರಲು ಸಾಕು. ಅದಿರಲಿ ಪ್ರಧಾನಮಂತ್ರಿ ದೇಶದ ಪ್ರಗತಿ ಕುರಿತು ಮಾತನಾಡುತ್ತಿರುವಾಗ ಅವರ ಸುತ್ತ ಇರುವ ಸಂಘ ಪರಿವಾರದ ಮಡಿ ಪುಡಿ ಪುಢಾರಿಗಳು ಎಂಥೆಂಥ ಮಾತುಗಳನ್ನು ಆಡಿದರೆಂದರೆ ಜನ ಬೆಚ್ಚಿಬಿದ್ದರು.

ಕೊನೆಗೆ ಪ್ರಧಾನಮಂತ್ರಿ, ಪಕ್ಷದ ಅಧ್ಯಕ್ಷ ಎಲ್ಲರೂ ಛೀಮಾರಿ ಹಾಕಿ ಬಾಯಿ ಮುಚ್ಚಿಸಿ ಅವರನ್ನು ಸದ್ಯಕ್ಕೆ ‘ಮ್ಯೂಟ್’ ಮಾಡಿ ಇಡಬೇಕಾಯಿತು.

ಆದರೂ ಈಗ ಯಾವ ಹಿಡನ್ ಅಜೆಂಡಾ ನಿಜವಾಗಿ ಪಕ್ಷದಲ್ಲಿ ‘ಆನ್ಲೈನ್’ ಜೀವಂತವಾಗಿದೆ ಎನ್ನುವುದು ದೇಶಕ್ಕೆ ಗೊತ್ತಾಗಿ ಹೋಯಿತು. ಏಕೆಂದರೆ ಆರಂಭದಲ್ಲಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮಂತ್ರ ಕೂಡ ದೇಶಕ್ಕೆ ‘ಆನ್ಲೈನ್’ ಕಾಣಿಸಿತ್ತಲ್ಲ?

ಇದೊಂದು ಜನಪರ ಕ್ರಮ ಎಂದು ಹೇಳುತ್ತ ಎನ್.ಡಿ.ಎ. ಸರ್ಕಾರ, ದೇಶದ ಅಭಿವೃದ್ಧಿಗಾಗಿ, ರೈತರ ಅಭಿವೃದ್ಧಿಗಾಗಿ ಭೂ ಮಸೂದೆಯನ್ನು ಕೈಗೆತ್ತಿಕೊಂಡು ಅದಕ್ಕೆ ಹೊಸ ಅಂಶಗಳನ್ನು ತುಂಬಿ ಸಂಸದೀಯ ಚರ್ಚೆಗೆ ಕಳಿಸಿ ‘ಆನ್ಲೈನ್’ ಮಾಡಿತು. ಆದರೆ ಭಾರೀ ಉದ್ಯಮಗಳಿಗೆ ನೆರವಾಗುವ ಅದರ ಹಿಂದಿನ ಆಶಯವೂ ಅಲ್ಲಿ ಗೋಚರಿಸಿಬಿಟ್ಟಿತು.

ಇಷ್ಟಾಗಿಯೂ ಅದರ ಸಾಧಕಬಾಧಕಗಳ ಚರ್ಚೆ ನಡೆಯುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ಹೀಗೇ ಲೋಕಪಾಲ್ ಮಸೂದೆ, ಮಹಿಳಾ ಮೀಸಲಾತಿ ಮಸೂದೆ ಇತ್ಯಾದಿ ಇನ್ನೂ ಅನೇಕ ಜನಪರ ಮಸೂದೆಗಳು ಮಾತ್ರ ಏಕೆ ಮರುಜೀವ, ಮರುಮಂಡನೆ ಕಾಣದೆ ಎಷ್ಟು ಕಾಲ ‘ಆಫ್ಲೈನ್’ ಆಗಿರಬೇಕು ಎನ್ನುವ ಆತಂಕ ಹಲವರಲ್ಲಿ ಮೂಡಿತು. ಹಾಗೇ ಮಾಹಿತಿಹಕ್ಕು ಆಯೋಗ ಇತ್ಯಾದಿ ಹಲವು ಜನಹಿತ ಕೇಂದ್ರಗಳು ನಾಯಕರಿಲ್ಲದೆ ಖಾಲಿ ಕುರ್ಚಿಯಲ್ಲಿ ಅದೆಷ್ಟು ಕಾಲ ‘ಆಫ್ಲೈನ್’ ಆಗಿರಬೇಕು ಎನ್ನುವುದೂ ಹಲವರ ಪ್ರಶ್ನೆ.

‘ನಾವು ಅಧಿಕಾರಕ್ಕೆ ಬಂದೊಡನೆ ವಿದೇಶಗಳಲ್ಲಿರುವ ಬ್ಯಾಂಕುಗಳಲ್ಲಿ ಭದ್ರವಾಗಿರುವ ರಾಜಕಾರಣಿಗಳು, ಉದ್ಯಮಿಗಳ ಕಪ್ಪು ಹಣವನ್ನು ಭಾರತಕ್ಕೆ ಬಗೆದುಬಾಚಿ ತಂದು ಬಿಡುತ್ತೇವೆ’ ಎಂದು ಚುನಾವಣೆ ಪ್ರಚಾರ ಕಾಲದಲ್ಲಿ ಪ್ರಮಾಣ ಮಾಡಿದ್ದು, ಪ್ರಮಾಣ ವಚನ ಸ್ವೀಕರಿಸಿ ಸರ್ಕಾರ ರಚಿಸಿದೊಡನೆ ಅದೇಕೋ ‘ಆಫ್ಲೈನ್’ ಆಗಿಹೋಯಿತು.

ನಮಗೆಲ್ಲಾ ಅದರಲ್ಲಿ ಪಾಲು ಸಿಗುತ್ತದೆ ಎಂದು ಬಡಜನರೂ ಕನಸು ಕಂಡಿದ್ದಾಯಿತು. ಪ್ರಧಾನಮಂತ್ರಿಗಳ ಮಾತು ಕೇಳಿ ಜನರು ತಮ್ಮ ಹತ್ತಿರ ಇದ್ದಬದ್ದ ಬಿಳಿ ಧನವನ್ನೇ ಕೊಟ್ಟು ಬ್ಯಾಂಕುಗಳಲ್ಲಿ ಅಕೌಂಟು ತೆರೆದಿದ್ದಾರೆ. ಕಪ್ಪು ಹಣ ಯಾವಾಗ ಬರುತ್ತದೋ ಅದು ಈ ಅಕೌಂಟುಗಳಿಗೇ ‘ಆನ್ಲೈನ್’ ಜಮಾ ಆಗುತ್ತದೋ ಕಾದು ನೋಡಬೇಕು. ಸ್ವಚ್ಛ ಭಾರತ ಅಭಿಯಾನದ ಚಿತ್ರಗಳು ಮಾತ್ರ ‘ಆನ್ಲೈನ್’ ನಲ್ಲಿ ಕ್ಷೇಮವಾಗಿ ಉಳಿದಿವೆ.

ಇಷ್ಟೆಲ್ಲಾ ಹೇಳುತ್ತಿರುವಾಗ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಪರಿಸ್ಥಿತಿಯನ್ನು ಮರೆಯಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆ ಹಿಂದೆಂದಿಗಿಂತಲೂ ಆತಂಕಕ್ಕೆ ಒಳಗಾಗಿರುವುದನ್ನು ಮುಚ್ಚಿಡಲು ಆಗುವುದಿಲ್ಲ. ಆರೋಗ್ಯ ವಿಚಾರಕ್ಕೆ ಹಣ ಕಡಿಮೆ ಕೊಡುವ ಅನಾರೋಗ್ಯಕರ ಬೆಳವಣಿಗೆಗೆ ಕಣ್ಣುಮುಚ್ಚಲು ಸಾಧ್ಯವಿಲ್ಲ. ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ತುತ್ತು ಕಡಿಮೆ ಮಾಡುವುದನ್ನು ಯೋಚಿಸಲೂ ಸಾಧ್ಯವಿಲ್ಲ.

ಅನೇಕ ಜನಪರ ಯೋಜನೆಗಳಿಗೆ ಧಾರಾಳ ಅನುದಾನ ಕೊಡುತ್ತಿದ್ದ ಕೇಂದ್ರ ಸರ್ಕಾರ ಈಗ ಅದರ ಹೆಚ್ಚಿನ ಹೊರೆಯನ್ನು ರಾಜ್ಯಗಳ ತಲೆಗೆ ಕಟ್ಟುತ್ತಿರುವುದನ್ನು, ಅದರಿಂದ ತೊಂದರೆ ಹೆಚ್ಚಿದ ರಾಜ್ಯಗಳು ಹಾಹಾಕಾರ ಮಾಡುತ್ತಿರುವುದಕ್ಕೆ ಕಿವಿ ಮುಚ್ಚಲು ಮನಸ್ಸು ಬರುವುದಿಲ್ಲ. ಆರೋಗ್ಯ, ಶಿಕ್ಷಣ ಮುಂತಾದ ಪ್ರಮುಖ ವಿಷಯಗಳಿಗೆ ಅನುದಾನ ನಿಲ್ಲಿಸುವುದೇ ಅಭಿವೃದ್ಧಿ ಎಂದು ಯಾವ ಅದೃಶ್ಯ ‘ಆನ್ಲೈನ್’ ಪಾಠಶಾಲೆ ಕೇಂದ್ರ ಸರ್ಕಾರಕ್ಕೆ ಬೋಧಿಸುತ್ತಿದೆಯೋ ಗೊತ್ತಿಲ್ಲ.

ಪ್ರಚಾರದಲ್ಲಿ ಆನ್ಲೈನ್ ಇದ್ದು ಆಡಳಿತದಲ್ಲಿ ಆಫ್ಲೈನ್ ಇರಲು ಸಾಧ್ಯವಿಲ್ಲ. ನಮ್ಮ ‘ಸದಾ ಆನ್ಲೈನ್’ ಮತ್ತು ಮೊಬೈಲ್ ಮೋಹಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಇಂಥ ಮತ್ತು ಇನ್ನೂ ಅನೇಕ ಆಂತರಿಕ ಸಮಸ್ಯೆಗಳ ‘ಸೆಲ್ಫಿ’ ಚಿತ್ರಗಳನ್ನು ತೆಗೆದು ತಮ್ಮ ಸರ್ಕಾರದಿಂದ ಪರಿಹಾರಗಳನ್ನು ರೂಪಿಸಿದರೆ ಎಷ್ಟು ಚೆನ್ನ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.