ಕೆಲ ವರ್ಷಗಳ ಹಿಂದೆ ವಿದೇಶದಲ್ಲಿದ್ದಾಗ ನಡೆದ ಘಟನೆ ನನಗೆ ಮೇಲಿಂದ ಮೇಲೆ ನೆನಪಾಗುತ್ತದೆ, ಮನಸ್ಸಿಗೆ ಸಂತೋಷವನ್ನು, ತಿಳಿವಳಿಕೆಯನ್ನು ಕೊಡುತ್ತದೆ.

ನನಗೆ ಇರಲು ಕೊಟ್ಟ ವಸತಿಗೃಹದ ಸುತ್ತಲೆಲ್ಲ ದಟ್ಟವಾದ ಕಾಡು. ಉದ್ದುದ್ದವಾದ ಮರಗಳು ಆಕಾಶವನ್ನು ತಲುಪಲು ಹಾತೊರೆಯುತ್ತಿದ್ದಂತೆ ತೋರುತ್ತಿತ್ತು. ಸಂಜೆ ತಿರುಗಾಡಲು ಹೋದಾಗ ದೊರೆತ ಪ್ರಶಾಂತತೆಯನ್ನು ಮರೆಯಲಾರೆ. ನನಗೆ ಇನ್ನೊಂದು ಬಹಳ ಇಷ್ಟವಾದದ್ದೆಂದರೆ ಸಂಜೆಯಾಗುತ್ತಿದ್ದಂತೆ ಸಹಸ್ರಾರು ಪಕ್ಷಿಗಳು ತಮ್ಮ ಮರದ ಗೂಡಿಗೆ ಮರಳುವ ದೃಶ್ಯ. ಅವುಗಳ ಕಲಕಲ ಧ್ವನಿಯನ್ನು ಕೇಳುತ್ತ, ಹಾರಾಟವನ್ನು ನೋಡುತ್ತ ಕುಳಿತುಬಿಡುತ್ತಿದ್ದೆ.

ಆ ಪಕ್ಷಿಗಳಲ್ಲಿ ವಿಶೇಷವಾದದ್ದು ಕೂಕಾಬುರ‌್ರಾ ಎಂಬ ಪಕ್ಷಿಗಳು. ಅವುಗಳಿಗೆ ನಗುವ ಕೂಕಾಬುರ‌್ರಾ ಪಕ್ಷಿಗಳು ಎಂದೇ ಕರೆಯುತ್ತಾರೆ. ನೋಡುವುದಕ್ಕೆ ಅವು ಈ ಕಿಂಗ್‌ಫಿಶರ್ ಪಕ್ಷಿಗಳ ಹಾಗೆಯೇ ಇರುತ್ತವೆ, ಆದರೆ ಗಾತ್ರದಲ್ಲಿ ದೊಡ್ಡವು. ಪಕ್ಷಿಗಳ ತಲೆ ಮತ್ತು ಎದೆ ಬಿಳಿಬಣ್ಣದ್ದಾಗಿದ್ದು ಅದರ ಬೆನ್ನು ಮತ್ತು ಮತ್ತು ರೆಕ್ಕೆಗಳಿಗೆ ತುಕ್ಕು ಹಿಡಿದ ಕಬ್ಬಿಣದ ಬಣ್ಣವಿದೆ. ರೆಕ್ಕೆಗಳ ತುದಿಗಳಿಗೆ ದಟ್ಟ ನೀಲೀ ಬಣ್ಣದ ಪಟ್ಟಿಗಳಿವೆ. ಈ ಪಕ್ಷಿ ಕಿಂಗ್‌ಫಿಶರ್ ಪಕ್ಷಿಯ ಹಾಗೆ ಸಣ್ಣ ಸಣ್ಣ ಹುಳುಗಳನ್ನು ಹಿಡಿಯುವುದಿಲ್ಲ. ಹಾವುಗಳನ್ನೂ, ಹಲ್ಲಿಗಳನ್ನು ಬೇಟೆಯಾಡುತ್ತದೆ. ಅದು ಬೇಗನೇ ಸ್ನೇಹಮಾಡಿಕೊಳ್ಳುವ ಪಕ್ಷಿ. ಮೊದಮೊದಲು ತಟ್ಟೆಯಲ್ಲಿಟ್ಟು ಕೊಟ್ಟಾಗ ಆಹಾರವನ್ನು ತಿನ್ನುತ್ತಿದ್ದ ಪಕ್ಷಿಗಳು ನಂತರ ನನ್ನ ಕೈಯಿಂದಲೇ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದವು.

ನನಗೆ ಅವುಗಳ ನಗು ತುಂಬ ಇಷ್ಟ. ಅವು ನಗುತ್ತವೋ ಇಲ್ಲವೋ ತಿಳಿಯದು. ಆದರೆ ಅವುಗಳ ಕೂಗು ಮಾತ್ರ ಕೇಕೆ ಹಾಕಿ ನಕ್ಕಂತೆಯೇ ಕೇಳಿಸುತ್ತದೆ. ಸಾಯಂಕಾಲ ತಮ್ಮ ಗೂಡಿಗೆ ಮರಳುವ ಸಾವಿರಾರು ಕೂಕಾಬುರ‌್ರಾ ಹಕ್ಕಿಗಳು ಜೋರಾಗಿ ಕೂಗುವಾಗ ಸಾವಿರಾರು ಜನ ಸಂತೋಷವಾಗಿ ಕಲೆತು ಸಂಭ್ರಮದಿಂದ ಕೇಕೆ ಹಾಕಿ ನಗುತ್ತಿದ್ದಂತೆ ಕೇಳಿಸುತ್ತದೆ. ಅವು ಮಲಗುವವರೆಗೂ ನಗುತ್ತಲೇ ಇರುತ್ತವೆ. ದಿನನಿತ್ಯದ ಕಾರ್ಪಣ್ಯದಿಂದ ಸುಸ್ತಾಗಿ ಮನೆಗೆ ಬಂದು ಮಲಗುವಾಗ, ನಮಗೂ ಆ ಪಕ್ಷಿಗಳ ಹಾಗೆ ನಗುನಗುತ್ತಾ ಮಲಗುವುದು ಸಾಧ್ಯವೇ ಎಂದು ಚಿಂತಿಸಿದ್ದೇನೆ.

ಒಂದು ದಿನ ಸಂಜೆ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ. ಹಿಂದಿನ ಕಿಟಕಿಯಲ್ಲಿ ಜೋರಾಗಿ ಠಪ್ ಎಂದು ಸದ್ದಾಯಿತು. ತಕ್ಷಣ ಎದ್ದು ಆ ಕಡೆಗೆ ಓಡಿಹೋಗಿ ಕಿಟಕಿಯಲ್ಲಿ ನೋಡಿದೆ. ಕಿಟಕಿಯ ಹೊರಗಿದ್ದ ಕಟ್ಟೆಯ ಮೇಲೊಂದು ಕೂಕಾಬುರ‌್ರಾ ಪಕ್ಷಿ ಬಿದ್ದುಕೊಂಡಿದೆ. ನನಗೆ ಅರ್ಥವಾಯಿತು, ಈ ಪಕ್ಷಿ ಭರದಿಂದ ಹಾರುತ್ತ ಬಂದಿದೆ. ಸ್ವಚ್ಛವಾದ ಕಿಟಕಿಯ ಗಾಜು ಅದಕ್ಕೆ ಕಂಡಿಲ್ಲ. ಅದು ತೆರೆದ ಪ್ರದೇಶವೆಂದೇ ನುಗ್ಗಿದಾಗ ಗಾಜಿಗೆ ಬಡಿದು ನೆಲಕ್ಕೆ ಬಿದ್ದಿದೆ. ಅದಕ್ಕೆ ಎಷ್ಟು ಪೆಟ್ಟಾಗಿತ್ತೋ ತಿಳಿಯದು. ಅದಕ್ಕಷ್ಟು ನೀರು ತಂದು ಹಾಕಲೇ ಎಂದು ಯೋಚಿಸುತ್ತಿರುವಾಗ ಅದು ಅಲುಗಾಡತೊಡಗಿತು. ಅದಕ್ಕೆ ಹೆಚ್ಚು ಪೆಟ್ಟೇನೋ ಆಗಿಲ್ಲ. ಆದರೆ ಏಕಾಏಕಿ ತನ್ನ ವೇಗಕ್ಕೆ ತಕ್ಷಣ ತಡೆ ತಂದ ಈ ಪೆಟ್ಟಿಗೆ ಆಘಾತವಾಗಿದೆ. ಮುಂದೆ ನಡೆದದ್ದು ಅದ್ಭುತ. ಅದು ಎದ್ದು ನಿಂತಿತು, ತನ್ನ ತಲೆಯನ್ನು ಕೊಡವಿಕೊಂಡು ಕಿಟಕಿಯ ಗಾಜನ್ನು, ಅದರ ಮೂಲಕ ಹಿಂದೆ ನಿಂತಿದ್ದ ನನ್ನನ್ನು ನೋಡಿ, ರೆಕ್ಕೆ ಬಡಿದು ನಾಲ್ಕಾರು ಸಲ ಕೇಕೆ ಹಾಕಿ ಜೋರಾಗಿ ನಕ್ಕು ಹಾರಿಹೋಯಿತು. ಅದರ ನಗುವಿನ ವೈಖರಿ ಇನ್ನೂ ನನ್ನ ಕಿವಿಯಲ್ಲಿ ಗುನುಗುನಿಸುತ್ತಿದೆ!

ನಮಗೆ ಒಂದು ಸಣ್ಣ ತೊಂದರೆಯಾದರೆ, ಯಾವುದಾದರೂ ಆಪತ್ತು ಒದಗಿದರೆ, ನಮ್ಮ ನಡೆ ಕುಂಠಿತವಾದರೆ ದಿನಗಟ್ಟಲೇ ಮುಖಗಂಟಕ್ಕಿಕೊಂಡು, ಜಗತ್ತೆಲ್ಲ ತಲೆಯ ಮೇಲೆ ಬಿದ್ದಂತೆ ಗೋಳಾಡುತ್ತೇವಲ್ಲವೇ? ಆದ ಆಘಾತವನ್ನು ಕ್ಷಣದಲ್ಲೆೀ ನಿವಾರಿಸಿಕೊಂಡು ಅದನ್ನು ಜಾಡಿಸಿಬಿಡುವಂತೆ ಮೈಮರೆತು ಕೇಕೆ ಹಾಕಿ ನಕ್ಕ ಕೂಕಾಬುರ‌್ರಾ ಪಕ್ಷಿ ನಮಗೆ ಮಾದರಿಯಾಗಬಾರದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.